'ಸುವರ್ಣ ಗೃಹ ಮಂತ್ರಿ'ಯಾದ 'ಸಿಲ್ಲಿ ಲಲ್ಲಿ'ಯ ರವಿಶಂಕರ್ ಗೌಡ; ಇನ್ಮುಂದೆ ಭರ್ಜರಿ ಕಾಮಿಡಿ
ಕನ್ನಡದ ಜನಪ್ರಿಯ ಚಾನೆಲ್ ಸ್ಟಾರ್ ಸುವರ್ಣ ವಾಹಿನಿ ಹಲವಾರು ವೈವಿಧ್ಯಮಯ ಧಾರಾವಾಹಿಗಳು, ರಿಯಾಲಿಟಿ ಶೋಗಳು, ಅಡಿಗೆ ಶೋಗಳು ಮುಂತಾದ ಕಾರ್ಯಕ್ರಮಗಳನ್ನು ನೀಡುವ ಮುಖಾಂತರ ಕನ್ನಡ ಪ್ರೇಕ್ಷಕರನ್ನು ರಂಜಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಇಂತಹ ಉತ್ತಮ ಕಾರ್ಯಕ್ರಮಗಳಲ್ಲಿ 'ಸುವರ್ಣ ಗೃಹ ಮಂತ್ರಿ'ಯೂ ಒಂದು.
ವಿಷಯ ಏನಪ್ಪಾ ಅಂದ್ರೆ, ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಒಗ್ಗರಣೆ ಡಬ್ಬಿ' ಕಾರ್ಯಕ್ರಮದ ಮೂಲಕ ಜನಪ್ರಿಯರಾಗಿದ್ದ ಮುರಳಿ ಇಷ್ಟು ದಿನ ಸುವರ್ಣ ಗೃಹಮಂತ್ರಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಈಗ ಈ ಶೋಗಾಗಿ ಹೊಸ ವ್ಯಕ್ತಿಯ ಆಗಮನವಾಗಿದೆ. ಅವರು ಬೇರಾರೂ ಅಲ್ಲ, ಸಿಲ್ಲಿ ಲಲ್ಲಿ ಹಾಸ್ಯ ಧಾರಾವಾಹಿಯಿಂದ ಮನೆಮಾತಾಗಿ ನಂತರ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ರವಿಶಂಕರ್ ಗೌಡ.

ಹೌದು, ಇದೇ ಸೋಮವಾರದಿಂದ ರವಿಶಂಕರ್ ನೇತೃತ್ವದಲ್ಲಿ ಸುವರ್ಣ ಗೃಹ ಮಂತ್ರಿ ಕಾರ್ಯಕ್ರಮ ಆರಂಭವಾಗಿದೆ. ಇನ್ನು ಮುಂದೆ ಮುರಳಿಯವರಂತೆ ರವಿಶಂಕರ್ ಕಿರುತೆರೆ ಪ್ರೇಕ್ಷಕರನ್ನು ಸೆಳೆಯಲಿದ್ದಾರೆ. ಹಾಸ್ಯಭರಿತ ಮಾತಿನಿಂದ ಎಲ್ಲರನ್ನು ರಂಜಿಸುವಲ್ಲಿ ಸಫಲರಾಗಿರುವ ನಟ ಅರ್ಥಪೂರ್ಣ ಭಾವದಿಂದ ಮಾತನಾಡುವಲ್ಲೂ ಅಷ್ಟೇ ಶಕ್ತರು.
ಈ ಕಾರ್ಯಕ್ರಮವು ಗೃಹಿಣಿಯರಿಗೆ ರೇಷ್ಮೆ ಸೀರೆ, ಚಿನ್ನ ಮತ್ತು ಬೆಳ್ಳಿಯಂತಹ ಉಡುಗೊರೆಗಳನ್ನು ನೀಡುವ ಮೂಲಕ ದಿನಂಪ್ರತಿ ಮನೆಯವರಿಗಾಗಿ, ತನ್ನವರಿಗಾಗಿ ದುಡಿಯುವ ಮನೆ ಮಹಾಲಕ್ಷ್ಮಿಯನ್ನು ಗೌರವಿಸುವ ಗುರಿಯನ್ನು ಹೊಂದಿದೆ.

ಇವರೊಂದಿಗೆ ಕುಟುಂಬ ಮತ್ತು ಸ್ನೇಹಿತರನ್ನೂ ಈ ಕಾರ್ಯಕ್ರಮವು ಮನರಂಜನೆಗೊಳಿಸುತ್ತದೆ. ಮಹಿಳೆಯರ ಕೆಲಸವನ್ನು ಗೌರವಿಸುವುದರೊಂದಿಗೆ ಅವರಿಗೆ ವೇದಿಕೆ ಮತ್ತು ಮನ್ನಣೆಯನ್ನು ಒದಗಿಸುವ ಉದ್ದೇಶವನ್ನಿಟ್ಟುಕೊಂಡೇ ಸುವರ್ಣ ಗ್ರಹ ಮಂತ್ರಿಯನ್ನು ರೂಪುಗೊಳಿಸಲಾಗಿದೆ.
ಸೋಮವಾರದಿಂದ ಶನಿವಾರದವರೆಗೆ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗುತ್ತಿರುವ ಸುವರ್ಣ ಗೃಹ ಮಂತ್ರಿ ಕಾರ್ಯಕ್ರಮ ಈಗಾಗಲೇ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ಮುಂದುವರೆಯಲಿ ಎಂದು ಆಶಿಸೋಣ.


Click it and Unblock the Notifications











