ಸಿಲ್ಲಿ ಲಲ್ಲಿ NML ಪಾತ್ರ ಖ್ಯಾತಿಯ ನಮಿತಾ ರಾವ್ ಈಗ ಸಿನಿಮಾದಲ್ಲಿ!
'ಸಿಲ್ಲಿ ಲಲ್ಲಿ' ಧಾರಾವಾಹಿ ಇಡೀ ಕರ್ನಾಟಕ ಪ್ರೇಕ್ಷಕರ ಅಚ್ಚುಮೆಚ್ಚಿನ ಕಾಮಿಡಿ ಧಾರಾವಾಹಿ. ಇದರಲ್ಲಿ ಬರುತ್ತಿದ್ದ ಪಾತ್ರಗಳನ್ನು ಇಂದಿಗೂ ಯಾರೂ ಮರೆತಿಲ್ಲ. ಡಾಕ್ಟ್ರು, ಸೂಜಿ, ಲಲ್ಲಿ, ಸಿಲ್ಲಿ, ಎನ್ಎಂಎಲ್ ಎಲ್ಲಾ ಪಾತ್ರಗಳೂ ಅದ್ಭುತವಾಗಿ ಮೂಡಿ ಬಂದಿದ್ದವು. ಇದರಲ್ಲಿ ಸದಾ ಡಾಕ್ಟ್ರೆ.. ಡಾಕ್ಟ್ರೆ ಅಂತ ಜಪ ಮಾಡುತ್ತಿದ್ದ ಎನ್ಎಂಎಲ್ ಪಾತ್ರ ಮಾಡಿದ್ದ ನಮಿತಾ ರಾವ್ ಈಗ ಚೌಕಾಬಾರ ಆಡುತ್ತಿದ್ದಾರೆ.
ಹೌದು.. ಕಿರುತೆರೆಯಲ್ಲಿ ಮಿಂಚಿ ಮರೆಯಾದ ನಮಿತಾ ರಾವ್ ಈಗ ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೂಲತಃ ರಂಗಭೂಮಿ ಕಲಾವಿದೆಯಾಗಿರುವ ನಮಿತಾ ರಾವ್ ಅವರು ತಮ್ಮ ಪತಿಯ ನಿರ್ದೇಶನದ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅದು ಯಾವ ಸಿನಿಮಾ ಎಂದು ನೋಡೋಣ ಬನ್ನಿ..
ಎನ್ಎಂಎಲ್ ಪಾತ್ರದ ನಮಿತಾ ರಾವ್ ಅವರದ್ದು ಸಿನಿಮಾ ಕುಟುಂಬ ಅಲ್ಲ. ಹೀಗೆ ಒಮ್ಮೆ ರಂಗಭೂಮಿಯಲ್ಲಿದ್ದ ಸ್ನೇಹಿತರೊಬ್ಬರ ಮೂಲಕ ಬಣ್ಣದ ಲೋಕಕ್ಕೆ ನಮಿತಾ ಎಂಟ್ರಿ ಕೊಟ್ಟರು. ಬಾಲ್ಯದಿಂದಲೇ ನಮಿತಾ ರಾವ್ ಅವರು ಹಾಡುವುದು, ಡಾನ್ಸ್, ಶಾಲೆಯಲ್ಲಿ ಅದ್ಭುತವಾಗಿ ನಾಟಕಗಳ ಅಭಿನಯಿಸುತ್ತಿದ್ದರು.

16 ನೇ ವಯಸ್ಸಿನಲ್ಲೇ ನಮಿತಾ ರಾವ್ ಅವರು ಸಿಟಿ ಕೇಬಲ್ ಎಂಬ ಚಾನೆಲ್ ಒಂದರಲ್ಲಿ ನಿರೂಪಕಿಯಾಗಿ ಪಾದಾರ್ಪಣೆ ಮಾಡಿದರು. ಇದರ ಜೊತೆಗೆ ರಂಗಭೂಮಿಯಲ್ಲೂ ನಮಿತಾ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇನ್ನು ಡ್ಯಾನ್ಸ್ ಕ್ಲಾಸ್ ಗಳಿಗೆ ಸೇರಿ ಬ್ಯಾಲೆ ಡ್ಯಾನ್ಸ್ ಅನ್ನು ಕೂಡ ಕಲಿತರು. ಅಗ್ನಿವರಣ ಎಂಬ ನಾಟಕದಲ್ಲಿ ಮೊದಲ ಬಾರಿ ನಟಿಸಿದ ನಮಿತಾ ಅವರನ್ನು ಅಭಿನಯವನ್ನು ಜನ ಮೆಚ್ಚಿಕೊಂಡರು. ಇದರ ಜೊತೆಗೆ ಕೆಲವು ಕಡೆ ನಿರೂಪಣೆಯನ್ನು ಕೂಡ ಮಾಡುತ್ತಿದ್ದರು. ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತಿದ್ದರು.
ಇವೆಲ್ಲದರ ಜೊತೆ ಜೊತೆಗೆ ಅಲ್ಲಲ್ಲಿ ಆಡಿಷನ್ ಗಳನ್ನು ನೀಡುತ್ತಿದ್ದ ನಮಿತಾ ರಾವ್ ಅವರು ಈಟಿವಿ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಸಿಲ್ಲಿಲಲ್ಲಿ ಧಾರಾವಾಹಿಗೆ ಎಂಟ್ರಿ ಕೊಟ್ಟರು. ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಮೊದಲು ಎನ್ಎಂಎಲ್ ಪಾತ್ರದಲ್ಲಿ ನಟಿಸುತ್ತಿದ್ದವರು ಕಾರಣಾಂತರಗಳಿದ ಧಾರಾವಾಹಿಯಿಂದ ಹೊರ ಬಂದರು. ಆಗ ಆಡಿಷನ್ ನಡೆಸಿದಾಗ ನಮಿತಾ ರಾವ್ ಅವರು ಆಯ್ಕೆಯಾದರು. ಬಳಿಕ ಸುಮಾರು ಮೂರು ವರ್ಷಗಳ ಕಾಲ ಎನ್ಎಂಎಲ್ ಪಾತ್ರದಲ್ಲಿ ಮಿಂಚಿದರು. ಎನ್ಎಂಎಲ್ ಪಾತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡರೂ. ಈಗಲೂ ನಮಿತಾ ರಾವ್ ಅವರನ್ನು ಎನ್ಎಂಎಲ್ ಎಂದೇ ಗುರುತಿಸುತ್ತಾರೆ. ಬಳಿಕ ಬಿದಿಗೆ ಚಂದ್ರಮ, ಪಾಪ ಪಾಂಡು, ಗೋಧೂಳಿ, ಹೋಗ್ಲಿ ಬಿಡಿ ಸಾರ್ ಎಂಬ ಧಾರಾವಾಹಿಗಳಲ್ಲಿ ನಟಿಸಿದರು.

ಸಿಲ್ಲಿ ಲಲ್ಲಿ ಬಳಿಕ ಕೆಲ ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಮಾಡಿದ ನಮಿತಾ ರಾವ್ ಅವರು ಕೆಲ ಕಾಲ ಬ್ರೇಕ್ ಪಡೆದರು. ಮಾಯಾಮೃಗ, ಪಾಪ ಪಾಂಡು ಧಾರಾವಾಹಿಯ ನಟ ವಿಕ್ರಮ್ ಸೂರಿ ಎಂಬುವರನ್ನು ಮದುವೆಯಾದರು. ನಂತರ ಮನೆ, ಸಂಸಾರ ಎಂದು ಬ್ಯುಸಿಯಾದ ನಮಿತಾ ರಾವ್ ಅವರು ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಬಳಿಕ ನವಿ ನಿರ್ಮಿತಿ ಎಂಬ ಸಂಸ್ಥೆಯನ್ನು ಕಟ್ಟಿ, ಇದರ ಮೂಲಕ ಕೆಲ ಕಿರು ಚಿತ್ರಗಳನ್ನು, ಹಾಡುಗಳನ್ನು, ಡಾನ್ಸ್ ವಿಡಿಯೋಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.
ಬಳಿಕ ವೆಂಕಟಾಚಲ ಅವರ ನಿರ್ದೇಶನದ ಚಿತ್ರಮಂದಿರದಲ್ಲಿ ಎಂಬ ಪ್ರಯೋಗಾತ್ಮಕ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರ 2014ರಲ್ಲಿ ತೆರೆಕಂಡಿತ್ತು. ಇನ್ನು ನಮಿತಾ ರಾವ್ ಅವರ ಪತಿ ವಿಕ್ರಮ್ ಸೂರಿ ಅವರು ಎಳೆಯರು ಗೆಳೆಯರು ಎಂಬ ಚಿತ್ರವನ್ನು ನಿರ್ದೇಶಿಸಿ ರಾಜ್ಯ ಪ್ರಶಸ್ತಿ ಪಡೆದರು. ಇದೀಗ ತಮ್ಮ ನಿರ್ದೇಶನದ ಎರಡನೇ ಚಿತ್ರ ಚೌಕಾಬಾರ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರಕ್ಕೆ ಪತ್ನಿ ನಮಿತಾ ರಾವ್ ಅವರೇ ನಾಯಕಿಯಾಗಿ ಕಾಣಿಸಿಕೊಂಡಿರುವುದು ವಿಶೇಷ.


Click it and Unblock the Notifications











