'ಸಿಲ್ಲಿ ಲಲ್ಲಿ' ನಟಿ ಕಥಾ ಲೇಖಕಿ ರೂಪಾ ಪ್ರಭಾಕರ್ ಯಾರು ಗೊತ್ತೇ?
'ಸಿಲ್ಲಿ ಲಲ್ಲಿ' ಧಾರಾವಾಹಿ ಯಾರಿಗೆ ಗೊತ್ತಿಲ್ಲ ಹೇಳಿ. ಧಾರಾವಾಹಿಯ ಹೆಸರು ಕೇಳಿದರೆ ಸಾಕು ಈಗಲೂ ಪ್ರೇಕ್ಷಕರ ಮಖದಲ್ಲಿ ಮಂದಹಾಸ ಮೂಡುತ್ತದೆ. ಈಗಲೂ ಯೂಟ್ಯೂಬ್ ನಲ್ಲಿ ಇರುವ ಧಾರಾವಾಹಿಯ ಸಣ್ಣ ಪುಟ್ಟ ಸೀನ್ ಗಳನ್ನು ಜನ ನೋಡುತ್ತಿರುತ್ತಾರೆ.
'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಮೂಡಿ ಬಂದ ಎಲ್ಲಾ ಪಾತ್ರಗಳು ಕೂಡ ಅದ್ಭುತವಾಗಿ ಎನಿಸಿಕೊಂಡಿವೆ. ಎಲ್ಲರನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ದಿನ 'ಸಿಲ್ಲಿ ಲಲ್ಲಿ' ನೋಡಲು ಮಕ್ಕಳು ಶಾಲೆಯಿಂದ ಓಡಿ ಬರುತ್ತಿದ್ದರು. ಮನೆಯಲ್ಲಿರುವವರು ಬಿಡುವು ಮಾಡಿಕೊಳ್ಳುತ್ತಿದ್ದರು.
ಸಿಲ್ಲಿ ಲಲ್ಲಿ ಸೀರಿಯಲ್‌ಗೆ ಹೆಚ್ಚಿನ ಬೇಡಿಕೆ ಇತ್ತು. ಹೆಚ್ಚು ಜನರು ಈ ಸೀರಿಯಲ್ ನೋಡುತ್ತಿದ್ದ ಕಾರಣ ಮತ್ತೇ ಈ ಧಾರವಾಹಿಯನ್ನು ರೀ ಟೆಲಿಕಾಸ್ಟ್ ಮಾಡಲಾಯಿತು. ಇನ್ನು ಈಗ ಈ ಸೀರಿಯಲ್ ಬಗ್ಗೆ ಮಾತನಾಡಲು ಕಾರಣ ರೂಪಾ ಪ್ರಭಾಕರ್.
ಸಿಲ್ಲಿ ಲಲ್ಲಿ ಖ್ಯಾತಿಯ ರೂಪಾ!
ದಶಕದ ಹಿಂದೆ ಪ್ರಸಾರವಾಗುತ್ತಿದ್ದ 'ಸಿಲ್ಲಿ ಲಲ್ಲಿ' ಧಾರಾವಾಹಿ ಇಂದಿಗೂ ತನ್ನ ಜನಪ್ರಿಯತೆಯನ್ನು ಹಾಗೇ ಉಳಿಸಿಕೊಂಡು ಬಂದಿದೆ. ಧಾರಾವಾಹಿ ಮುಗಿದು ದಶಕವಾದರೂ, ಪಾತ್ರಧಾರಿಗಳನ್ನು ಜನ ಮರೆತಿಲ್ಲ. ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಮರುಪ್ರಸಾರ ಮಾಡಲಾಗಿತ್ತು. ಇನ್ನು ಈ ಧಾರಾವಾಹಿಯಲ್ಲಿ ಕಥಾ ಲೇಖಕಿ ಶ್ರೀಲತಾ ಪಾತ್ರಧಾರಿ ರೂಪಾ ಪ್ರಭಾಕರ್ ಕೂಡ ನಿಮಗೆಲ್ಲಾ ನೆನಪಿರಬೇಕು. ಶ್ರೀಲತಾ ಪಾತ್ರದಲ್ಲಿ ಸದಾ ಕಥೆ ಬರೆಯುವುದು, ಓದಿ ಅದನ್ನು ಇನ್ನೊಬ್ಬರಿಗೆ ಹೇಳುವುದನ್ನು ಮಾಡುತ್ತಿದ್ದರು. ಪೆದ್ದು ಪೆದ್ದಾಗಿ ನಟಿಸಿ ಜನ ಮನ ಗೆದ್ದಿದ್ದರು. ಕಥೆಯಲ್ಲಿ ಬರುವ ವ್ಯಾಕರಣ ಚಿಹ್ನೆಗಳನ್ನು ಸಹ ಹಾಗೆಯೇ ಓದುವುದು ಅವರ ಅಭ್ಯಾಸ.
ಬಾಲ್ಯದಲ್ಲೇ ಬಣ್ಣ ಹಚ್ಚಿದ ನಟಿ!
ನಟಿ ರೂಪಾ ಪ್ರಭಾಕರ್ ಬಾಲ್ಯದಿಂದಲೇ ಬಣ್ಣ ಹಚ್ಚಿದವರು. ಸುಮಾರು 5 ವರ್ಷದ ಪುಟ್ಟ ಹುಡುಗಿಯಾಗಿದ್ದಾಗ ಸಿನಿಮಾದಲ್ಲಿ ನಟಿಸಿದ್ದರು. ಬಾಲ ನಟಿಯಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಕಲೆಯ ಜೊತೆಗೆ ಓದಿನಲ್ಲೂ ಮುಂದಿದ್ದ ಇವರು, ಮುಂದೆ ಅಭಿನಯವನ್ನೇ ವೃತ್ತಿ ಬದುಕನ್ನಾಗಿ ಮಾರ್ಪಾಡು ಮಾಡಿಕೊಂಡರು. ಕರ್ನಾಟಕದಲ್ಲಿ ಓದಿದ ಬಳಿಕ ಇಂಗ್ಲೆಂಡ್‌ನಲ್ಲಿ ಪದವಿ ಪಡೆದರು. ಅದೂ ಕೂಡ ಅಭಿನಯದ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ರಜನಿಕಾಂತ್, ನಾಗಾರ್ಜುನ ಸೇರಿದಂತೆ ಹಲವು ಹಿರಿಯ ಕಲಾವಿದರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.
ಕಿರುತೆರೆ, ಬೆಳ್ಳಿತೆರೆಯಲ್ಲಿ ಮಿಂಚಿದ ನಟಿ!
ರೂಪಾ ಪ್ರಭಾಕರ್ ಚಿಕ್ಕ ವಯಸ್ಸಿಗೆ ಹಲವಾರು ಧಾರಾವಾಹಿ, ಸಿನಿಮಾ ಹಾಗೂ ಜಾಹೀರಾತುಗಳಲ್ಲಿ ಕಾಣಿಸಿಕೊಂಡವರು. ಕನ್ನಡ ಮಾತ್ರವಲ್ಲದೆ 5 ಬೇರೆ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟನೆಯ ಜೊತೆಗೆ ನೃತ್ಯವನ್ನು ಕರಗತ ಮಾಡಿಕೊಂಡಿರುವ ರೂಪಾ, ನೃತ್ಯ ನಿರ್ದೇಶನ ಸಹ ಮಾಡಿದ್ದಾರೆ. ಇದಿಷ್ಟಕ್ಕೆ ಸುಮ್ಮನಾಗದೇ, 'ದಿ ಮಿಸ್ಟರಿ ಆಫ್ ದಿ ಡಾರ್ಕ್ ಜಂಗಲ್' ಎಂಬ ಇಟಾಲಿಯನ್ ಸಿನಿಮಾದಲ್ಲೂ ನಟಿಸಿದ್ದಾರೆ. ಲಂಡನ್ ಹಾಗೂ ಯುರೋಪ್ ದೇಶಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹೋಸ್ಟ್ ಮಾಡಿರುವ ಕೀರ್ತಿಯೂ ಇವರಿಗೇ ಸಲ್ಲುತ್ತದೆ. ಜೊತೆಗೆ ಸಿಂಗರ್ ಆಗಿ ಲಂಡನ್‌ನಲ್ಲಿ ತಯಾರಾದ ಕನ್ನಡ ಆಲ್ಬಮ್ ಸಾಂಗ್ ಹಾಡಿದ್ದಾರೆ.
ಭರತನಾಟ್ಯ ಕಲಾವಿದೆ!
ಇಷ್ಟೆಲ್ಲಾ ಕಲೆಯ ಜೊತೆಗೆ ಭರತನಾಟ್ಯದಲ್ಲಿ ಪರಿಣಿತಿ ಹೊಂದಿದ್ದು, ಚಿನ್ನದ ಪದಕ ಗೆದ್ದಿದ್ದಾರೆ. ಇನ್ನು ಕೆಲ ವರ್ಷಗಳ ಹಿಂದೆ 'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಜೊತೆಗೆ ನಟಿಸಿದ್ದ ಪ್ರಶಾಂತ್ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಮಕ್ಕಳ ಜೊತೆಗೆ ಸುಖ ಸಂಸಾರ ನಡೆಸುತ್ತಿರುವ ಈ ಜೋಡಿ, ಸದಾ ಕಾಮಿಡಿ ಮಾಡುತ್ತಾರಂತೆ. ರೂಪಾ ಪ್ರಭಾಕರ್ ಅವರ ಯೂಟ್ಯೂಬ್ ಚಾನೆಲ್ ಇದ್ದು, ಅದರಲ್ಲಿ ಹಲವು ವಿಚಾರಗಳ ಬಗ್ಗೆ ವೀಡಿಯೋ ಮಾಡುತ್ತಿರುತ್ತಾರೆ.


Click it and Unblock the Notifications











