ಜೀ ಕನ್ನಡ ದೇವಿ ಧಾರಾವಾಹಿಯಲ್ಲಿ ಕಸ್ತೂರಿ ಶಂಕರ್

ಸಂಗೀತವೇ ತುಂಬಿದ ಮನೆತನದಿಂದ ಬಂದಿರುವ ಕಸ್ತೂರಿ ಶಂಕರ್, ಕನ್ನಡದ ಭಕ್ತಿಗೀತೆಗಳಿಗೆ ಇಂಪು ತುಂಬಿದವರು. ಇವರ ತಂದೆ ಸಿ. ಶಂಕರಪ್ಪ ಕವಿಗಳಾದರೆ, ಪತಿ ಶಂಕರ್ ವಾದ್ಯ ತಯಾರಕರು, ಕಲಾವಿದರು. ಮಾವ ಅರುಣಾಚಲಪ್ಪ ಹೆಸರಾಂತ ಹಾರ್ಮೋನಿಯಂ ವಾದಕ. '
ವೆಂಕಟೇಶ್ವರ ಸುಪ್ರಭಾತ', 'ಅಷ್ಟಲಕ್ಷ್ಮಿ ಸುಪ್ರಭಾತ' ಮೊದಲಾದವು ಕರ್ನಾಟಕದ ಮನೆಮನಗಳಲ್ಲಿ ತುಂಬಿಕೊಂಡಿರುವುದು ಕಸ್ತೂರಿ ಅವರ ದನಿಯಿಂದ. ಕರ್ನಾಟಕ ನೃತ್ಯ ನಾಟಕ ಅಕಾಡೆಮಿ ಸದಸ್ಯರಾಗಿ, ಆಕಾಶವಾಣಿಯ 'ಎ' ದರ್ಜೆ ಕಲಾವಿದರಾಗಿ, ಹಲವಾರು ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಕೆಲಸ ಮಾಡಿದವರು.
'ಭಾಗ್ಯಜ್ಯೋತಿ' ಚಿತ್ರದ "ಗುಡಿಯೇರದ ಮುಡಿ ಸೇರದ ಹೂವು" ಹಾಡು ಇವರಿಗೆ ಜನಪ್ರಿಯತೆ ತಂದಿತು. 'ಬಿಳಿ ಹೆಂಡ್ತಿ' ಸಿನಿಮಾದ "ಯಾವ ತಾಯಿಯು ಹಡೆದ ಮಗನಾದರೇನು?" ಹಾಡು, ಡಾ.ರಾಜ್ ಕುಮಾರ್ ಜತೆ ಹಾಡಿದ "ಸೂರ್ಯನ ಕಾಂತಿಗೆ ಸೂರ್ಯನೆ ಸಾಟಿ" ಹಾಡು ಇವರನ್ನು ಯಶಸ್ಸಿನ ದಾರಿಯಲ್ಲಿ ಕರೆದೊಯ್ದವು.
ಇವರು 'ಜೀ ಕನ್ನಡ'ದ ಧಾರಾವಾಹಿ 'ದೇವಿ'ಗೆ ಮರುಳಾಗಿದ್ದಾರೆ! "ನಾನು ಪ್ರತಿಯೊಂದು ಎಪಿಸೋಡನ್ನೂ ಬಿಡದೆ ನೋಡುತ್ತಿದ್ದೇನೆ. ಇದರಲ್ಲಿ ಅಮ್ನೋರು ಬರುತ್ತಿರೋದನ್ನು ನೋಡಿದರೆ ನಿಜವಾಗಲೂ ನಾನು ಮೈಮರೆತುಬಿಡುತ್ತೇನೆ. ಪ್ರತಿಯೊಬ್ಬ ಪಾತ್ರಧಾರಿಗಳೂ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ.
ಈಗ ಬರುತ್ತಿರುವ ಕತೆಯಲ್ಲಿರುವ ಬಾದಾಮಿ ಬನಶಂಕರಿಯಂತೂ ನನ್ನ ಇಷ್ಟ ದೇವತೆ. ಅದಕ್ಕಾಗಿ ಧಾರಾವಾಹಿಯಲ್ಲಿ ಭಾಗವಹಿಸಿ ಅವಳನ್ನು ಹಾಡಿ ಅರ್ಚಿಸಲು ಇಷ್ಟಪಟ್ಟೆ' ಎನ್ನುತ್ತಾರೆ.
'ಜೀ ಕನ್ನಡ'ದಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ರಮೇಶ್ ಇಂದಿರಾ ನಿರ್ದೇಶನದಲ್ಲಿ ಬರುತ್ತಿರುವ 'ದೇವಿ' ಧಾರಾವಾಹಿಯ ಸಂಚಿಕೆಗಳನ್ನು ಈ ವಾರ ಮಿಸ್ ಮಾಡ್ಕೋಬೇಡಿ. ಇದೇ ಗುರುವಾರ (ನ.29) ರಾತ್ರಿ 9.30ಕ್ಕೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











