ಅವತ್ತು ಲಗೇಜ್ ಇಲ್ದೆ ಬರಿಗೈಲಿ ಮನೆ ಬಿಟ್ಟು ಬಂದೆ.. ಅಪ್ಪನೇ ನನ್ನ ಬಿಟ್ಟು ಹೋಗಿದ್ರು; ಪೃಥ್ವಿ ಭಟ್
ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ವರ್ಷದ ಹಿಂದೆ ಪೋಷಕರ ವಿರೋಧದ ನಡುವೆ ಪ್ರೀತಿಸಿದ ಹುಡುಗನನ್ನು ಮದುವೆ ಆಗಿದ್ದರು. ಜೀ ಕನ್ನಡ ವಾಹಿನಿಯಲ್ಲೇ ಕೆಲಸ ಮಾಡಿಕೊಂಡಿದ್ದ ಅಭಿಷೇಕ್ ಎಂಬುವರ ಜೊತೆ ದೇವಸ್ಥಾನದಲ್ಲಿ ಮದುವೆ ಆಗಿದ್ದರು. ನನ್ನ ಮಗಳ ಮೇಲೆ ವಶೀಕರಣ ಮಾಡಿ ಅಭಿ ಮದುವೆ ಮಾಡಿಕೊಂಡಿದ್ದಾನೆ ಎಂದು ತಂದೆ ಶಿವಪ್ರಸಾದ್ ಆರೋಪಿಸಿದ್ದರು.
ಅಭಿ ಯಾರು ಎನ್ನುವುದು ಗೊತ್ತಿಲ್ಲ. ಆತನನ್ನು ಮದುವೆ ಆಗಲ್ಲ ಎಂದು ಮಗಳು ದೇವರ ಮುಂದೆ ಆಣೆ ಮಾಡಿದ್ದಳು. ಆದರೆ ಇದ್ದಕ್ಕಿದಂತೆ ಮನೆ ಬಿಟ್ಟು ಓಡಿ ಹೋಗಿದ್ದಳು. ಸರಿಗಮಪ ಶೋ ಜ್ಯೂರಿ ನರಹರಿ ದೀಕ್ಷಿತ್ ತನ್ನ ಲಾಭಕ್ಕಾಗಿ ಇವರಿಬ್ಬರ ಮದುವೆ ಮಾಡಿಸಿದ್ದಾನೆ. ಕೆಲ ದಿನಗಳಿಂದ ಮಗಳು ವಶೀಕರಣಕ್ಕೆ ಒಳಗಾದಂತೆ ವರ್ತಿಸುತ್ತಿದ್ದಾಳೆ ಎಂದು ಪೃಥ್ವಿ ಭಟ್ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು.

ಕೆಲವೇ ಆಪ್ತರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಸರಳವಾಗಿ ಮದುವೆ ಆಗಿದ್ದ ಅಭಿ ಹಾಗೂ ಗಾಯಕಿ ಪೃಥ್ವಿ ಭಟ್ ಜೋಡಿ ಬಳಿಕ ಆರತಕ್ಷತೆ ಏರ್ಪಡಿಸಿದ್ದರು. ಸಾಕಷ್ಟು ಜನ ಭಾಗಿ ಆಗಿ ಜೋಡಿಗೆ ಶುಭ ಹಾರೈಸಿದ್ದರು. ಇವತ್ತಿಗೂ ಹೇಳ್ತೀನಿ, ನನ್ನ ನಿರ್ಧಾರ ಸರಿಯಾಗಿದೆ. ಆದಷ್ಟು ಬೇಗ ತಂದೆ- ತಾಯಿ ನಮ್ಮಿಬ್ಬರನ್ನು ಒಪ್ಪಿಕೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ ಎಂದು ಪೃಥ್ವಿ ಭಟ್ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ. ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಅವತ್ತು ಅಭಿಯನ್ನು ಕಳೆದುಕೊಂಡಿದ್ರೆ ನನಗೆ ಅಭಿ ಸಿಕ್ತಿರಲಿಲ್ಲ. ಆದರೆ ಅಭಿ ಅವರನ್ನು ಮದುವೆ ಆಗಿದ್ದರೂ ತಂದೆ-ತಾಯಿ ಸಿಕ್ತಾರೆ ಎನ್ನುವ ವಿಶ್ವಾಸವಿದೆ ಎಂದು ಪೃಥ್ವಿ ಭಟ್ ಹೇಳಿದ್ದಾರೆ. ಅವತ್ತು ಹೇಳದೇ ಕೇಳದೆ ನಾನು ಮನೆ ಬಿಟ್ಟು ಬಂದೆ. ಬೇರೆ ಮದುವೆ ಮಾಡಲು ಮನೆಯಲ್ಲಿ ಹುಡುಗನನ್ನು ಹುಡುಕುತ್ತಿದ್ದರು. ಬೇರೆ ದಾರಿ ಇಲ್ಲದೇ ಆ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಇವತ್ತಿಗೂ ನಾನು ಮಾಡಿದ್ದು ತಪ್ಪು ಎಂದು ತಂದೆ-ತಾಯಿಯನ್ನು ನೆನೆದು ಆಗಾಗ್ಗೆ ಅಳುತ್ತೇನೆ ಎಂದು ಪೃಥ್ವಿ ಭಟ್ ತಿಳಿಸಿದ್ದಾರೆ.

ಅವತ್ತು ಅಭಿ ಅವರನ್ನು ಮದುವೆ ಆಗುವುದು ಎಂದು ನಿರ್ಧರಿಸಿದಾಗ ಬಟ್ಟೆ, ಲಗೇಜ್ ಏನು ಇಲ್ಲದೇ ಬರಿಗೈಲಿ ಮನೆಬಿಟ್ಟು ಬಂದೆ. ಯಾವುದೋ ಸಾಂಗ್ ರೆಕಾರ್ಡಿಂಗ್ ಇತ್ತು. ಅದಕ್ಕಾಗಿ ಅಪ್ಪ ನನ್ನನ್ನು ಡ್ರಾಪ್ ಮಾಡಿದ್ದರು. ಅಲ್ಲಿಂದ ನಾನು ಅಭಿ ಜೊತೆ ಮದುವೆ ಆಗಲು ಹೋಗಿದ್ದೆ ಎಂದು ಪೃಥ್ವಿ ಭಟ್ ಹೇಳಿದ್ದಾರೆ. ಅಭಿ ಜೀ ಕನ್ನಡ ವಾಹಿನಿ ಸರಿಗಮಪ ಶೋ ತಂಡದಲ್ಲೇ ಕೆಲಸ ಮಾಡಿಕೊಂಡಿದ್ದರು. ನನ್ನ ಬಗ್ಗೆ ಬಹಳ ಕೇರ್ ಮಾಡುತ್ತಿದ್ದರು. ಅದು ನನಗೆ ಇಷ್ಟವಾಯಿತು. ಆರೇಳು ವರ್ಷ ನಮ್ಮ ಪರಿಚಯ, ಸ್ನೇಹ ಇತ್ತು. ಕಡೆಗೊಂದು ದಿನ ಮದುವೆ ಮಾಡಿಕೊಳ್ಳೋಣ ಅಂದ್ರು. ಜಾತಿ ಬೇರೆ ಬೇರೆ ಎನ್ನುವ ಕಾರಣಕ್ಕೆ ನಮ್ಮಿಬ್ಬರ ಮದುವೆಗೆ ಪೋಷಕರು ಒಪ್ಪಲಿಲ್ಲ ಎಂದು ಪೃಥ್ವಿ ಭಟ್ ವಿವರಿಸಿದ್ದಾರೆ.
ನಮ್ಮ ಪ್ರೀತಿ ವಿಚಾರ ಗೊತ್ತಾಗಿ ಮನೆಯಲ್ಲಿ ಬೈದು ಗಲಾಟೆ ಆಗಿತ್ತು. ಏನು ಮಾಡುವುದು ಎಂದು ಗೊತ್ತಿರಲಿಲ್ಲ. ಒಮ್ಮೆ ಗಣೇಶನ ದೇವಸ್ಥಾನಕ್ಕೆ ಹೋಗಿದ್ದೆ. ದೇವರ ಮುಂದೆ ನನ್ನ ಸಂದಿಗ್ಧ ಪರಿಸ್ಥಿತಿ ಬಗ್ಗೆ ಹೇಳಿಕೊಂಡೆ. "ನಾನು ಮಾಡುತ್ತಿರುವುದು ಸರೀನಾ? ಅಭಿಯನ್ನು ಮದುವೆ ಆಗಿ ಚೆನ್ನಾಗಿರ್ತೀನಾ?" ನೀನೇ ಉತ್ತರ ಕೊಡಬೇಕು ಎಂದು ಕೇಳಿ ಕಣ್ಮುಚ್ಚಿದ್ದೆ.. ಕಣ್ಣು ಬಿಟ್ಟಾಗ ದೇವರ ಮೇಲಿದ್ದ ಹೂ ಕೆಳಗೆ ಬಿತ್ತು.. ದೇವರೇ ನನ್ನ ನಿರ್ಧಾರ ಸರಿಯಿದೆ ಎಂದು ಹೇಳಿದಂತೆ ಆಯ್ತು. ಹಾಗಾಗಿ ಮನೆಬಿಟ್ಟು ಬಂದು ಅಭಿ ಜೊತೆ ಮದುವೆ ಆಗುವ ಧೈರ್ಯ ಮಾಡಿದೆ ಎಂದು ಪೃಥ್ವಿ ಭಟ್ ಅಂತರಾಳ ತೆರೆದಿಟ್ಟಿದ್ದಾರೆ.


Click it and Unblock the Notifications