ಸಿರಿ ಕನ್ನಡದಲ್ಲಿ 'ಊರ್ಮಿಳಾ', 'ಬ್ರಾಹ್ಮಿನ್ಸ್ ಕಫೆ' ಎರಡು ಮೆಗಾ ಧಾರಾವಾಹಿ: ಜೊತೆಗೆ 'ಸಖತ್ ಜೋಡಿ' ರಿಯಾಲಿಟಿ ಶೋ
ಕನ್ನಡ ಕಿರಿತೆರೆಯಲ್ಲಿ ಒಂದಕ್ಕಿಂತ ಒಂದು ಅದ್ಭುತ ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ಸೀರಿಯಲ್‌ಗಳನ್ನು ವೀಕ್ಷಣೆ ಮಾಡುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಬೆನ್ನಲ್ಲೇ ಮನರಂಜನಾ ವಾಹಿನಿಗಳು ಕೂಡ ವಿಭಿನ್ನ ಕಥೆಯುಳ್ಳ ಧಾರಾವಾಹಿಗಳನ್ನು ಪ್ರಸಾರ ಮಾಡಲು ಮುಂದಾಗಿದೆ.
ಈ ಸಾಲಿನಲ್ಲಿ 'ಸಿರಿಕನ್ನಡ' ವಾಹಿನಿ ಕೂಡ ಹೊಸ ಕಾನ್ಸೆಪ್ಟ್‌ನ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿದೆ. 'ಮತ್ತೆ ಮಾಯಾಮೃಗ'ದಂತಹ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಹಳೆ ನೆನಪುಗಳನ್ನು ಹೊಸ ಕಥೆಯೊಂದಿಗೆ ಮೆಲುಕು ಹಾಕುವಂತೆ ಮಾಡಿದೆ.

ಹೀಗೆ ಒಂದರ ಹಿಂದೊಂದು ಅತ್ಯುತ್ತಮ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿರುವ 'ಸಿರಿ ಕನ್ನಡ' ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಇದೇ ಜೂನ್ 5ರಿಂದ "ಊರ್ಮಿಳಾ" ಹಾಗೂ "ಬ್ರಾಹ್ಮಿನ್ ಕೆಫೆ"ಯಂತಹ ಎರಡು ಮೆಗಾ ಧಾರಾವಾಹಿಗಳನ್ನು ಪ್ರಸಾರ ಮಾಡುವುದಕ್ಕೆ ಮುಂದಾಗಿದೆ. ಇದರೊಂದಿಗೆ ಒಂದು ರಿಯಾಲಿಟಿ ಶೋವನ್ನು ಆರಂಭ ಮಾಡುತ್ತಿದೆ.
"ನಮ್ಮ 'ಸಿರಿಕನ್ನಡ' ವಾಹಿನಿಗೆ ಪ್ರೋತ್ಸಾಹ ನೀಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ. ಈಗಾಗಲೇ ಸಾಕಷ್ಟು ಜನಪ್ರಿಯ ಧಾರಾವಾಹಿಗಳ ಮೂಲಕ 'ಸಿರಿಕನ್ನಡ' ಕನ್ನಡಿಗರ ಮನ ಗೆದ್ದಿದೆ. ಜೂನ್ 5 ರಿಂದ 'ಊರ್ಮಿಳಾ' ಹಾಗೂ 'ಬ್ರಾಹ್ಮಿನ್ಸ್ ಕೆಫೆ' ಎಂಬ ಎರಡು ಮೆಗಾ ಧಾರಾವಾಹಿಗಳು ಹಾಗೂ 'ಸಖತ್ ಜೋಡಿ' ಎಂಬ ರಿಯಾಲಿಟಿ ಶೋ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ನಮ್ಮ ವಾಹಿನಿಯಿಂದ ಅಪಾರ ವೆಚ್ಚದಲ್ಲಿ ಈ ರಿಯಾಲಿಟಿ ಶೋ ನಿರ್ಮಾಣವಾಗುತ್ತಿದೆ." ಎಂದು ವಾಹಿನಿಯ ಮುಖ್ಯಸ್ಥರಾದ ರಾಜೇಶ್ ರಾಜಘಟ್ಟ ಹೇಳಿದ್ದಾರೆ.
ಈ ರಿಯಾಲಿಟಿ ಶೋನಲ್ಲಿ ಭಾರಿ ಮೊತ್ತದ ಉಡುಗೊರೆ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಸಿರಿ ಕನ್ನಡ ವೀಕ್ಷಕರಿಗೆ ಪ್ರತಿ ಅರ್ಧಗಂಟೆಗೊಮ್ಮೆ ಪ್ರಶ್ನೆ ಕೇಳಿ, ಗೆದ್ದವರಿಗೆ ವಿಶೇಷ ಬಹುಮಾನ ನೀಡುವ ವಿನೂತನ ಪ್ರಯತ್ನಕ್ಕೆ ಕೈ ಹಾಕುತ್ತಿದ್ದಾರೆ.
ಇನ್ನು 'ಸಖತ್ ಜೋಡಿ' ರಿಯಾಲಿಟಿ ಶೋವನ್ನು ಹಿತೇಶ್ ಹಾಗೂ ಹೇಮಲತಾ ನಿರೂಪಣೆ ಮಾಡುತ್ತಿದ್ದಾರೆ. "ನನ್ನನ್ನು ಹಾಸ್ಯ ನಟನಾಗಿ ಗುರುತಿಸಿದ್ದೀರಿ. 'ಸಖತ್ ಜೋಡಿ' ಎಂಬ ಸಖತ್ ಕಾರ್ಯಕ್ರಮವನ್ನು ನಾನು ಹಾಗೂ ಹೇಮಲತಾ ನಿರೂಪಣೆ ಮಾಡುತ್ತಿದ್ದೇವೆ. ಈಗಾಗಲೇ ಮೂರು ಎಪಿಸೋಡ್ ಚಿತ್ರೀಕರಣವಾಗಿದೆ. ಜೂನ್ 5 ರಿಂದ ಸೋಮವಾರದಿಂದ ಶುಕ್ರವಾರದವರೆಗೂ ಸಂಜೆ 6ಗಂಟೆಗೆ 'ಸಖತ್ ಜೋಡಿ' ಪ್ರಸಾರವಾಗಲಿದೆ. ಇದಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿ ಸೆಟ್ ಹಾಕಲಾಗಿದೆ" ಎಂದು ಹಿತೇಶ್ ತಿಳಿಸಿದ್ದಾರೆ.

'ಊರ್ಮಿಳಾ' ಮೆಗಾ ಧಾರಾವಾಹಿಯಲ್ಲಿ ಕನ್ನಡದ ಜನಪ್ರಿಯ ನಿರ್ದೇಶಕ ಎಸ್ ನಾರಾಯಣ್ ಪುತ್ರ ಪಂಕಜ್ ಹಾಗೂ ರಶ್ಮಿತಾ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಧಾರಾವಾಹಿ ಇದೇ ಜೂನ್ 5 ರಿಂದ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ. "ನಾನು ಚಿಕ್ಕ ವಯಸ್ಸಿನಲ್ಲಿ ಬಾಲ ಕಲಾವಿದನಾಗಿ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದೆ. ಈಗ ಈ ಧಾರಾವಾಹಿ ಮೂಲಕ ಕಿರುತೆರೆಗೆ ಮತ್ತೆ ಬಂದಿದ್ದೇನೆ" ಎಂದು ಪಂಕಜ್ ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನು ಮತ್ತೊಂದು ಮೆಗಾ ಧಾರಾವಾಹಿ 'ಬ್ರಾಹ್ಮಿನ್ಸ್ ಕಫೆ'ಯನ್ನು ರವಿ.ಆರ್.ಗರಣಿ ಬರೆದಿದ್ದಾರೆ. ಇದೂ ಕೂಡ ಜೂನ್ 5ರಿಂದ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ. ಶಿವು ಎಂಬ ಯುವ ಪ್ರತಿಭೆ ಈ ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸುತ್ತಿದ್ದಾನೆ. ಗಾಯತ್ರಿ ಸೆಲ್ವಂ ಹಾಗೂ ಸೆಲ್ವಂ ಈ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದು, ಸಂಜೀವ್ ತಗಡೂರು ನಿರ್ದೇಶನ ಮಾಡುತ್ತಿದ್ದಾರೆ. ಧಾರಾವಾಹಿಯಲ್ಲಿ ಶ್ರೀನಾಥ್ ವಸಿಷ್ಠ, ಪ್ರಥಮ ಪ್ರಸಾದ್, ಶಿವು, ರಾಮಸ್ವಾಮಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











