'ಮತ್ತೆ ಬಂದ ಯುಗಳಗೀತೆ' ಸೀರಿಯಲ್ ನಟಿ ಸಿರಿ ಪ್ರಹ್ಲಾದ್; ಅದು ಯಾವ ಧಾರಾವಾಹಿ?
ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ವಾಹಿನಿಗಳ ಪೈಕಿ ಜೀ ಕನ್ನಡವೂ ಒಂದು. ಇಂತಿಪ್ಪ ಜೀ ಕನ್ನಡದಲ್ಲಿ ಇದೀಗ ಹೊಚ್ಚ ಹೊಸ ಧಾರಾವಾಹಿಯೊಂದು ಶುರುವಾಗಲಿದೆ. ಹೌದು, 'ಶ್ರೀರಾಘವೇಂದ್ರ ಮಹಾತ್ಮೆ' ಎನ್ನುವ ಧಾರಾವಾಹಿಯು ಅತೀ ಶೀಘ್ರದಲ್ಲಿ ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಅಂದ ಹಾಗೇ 'ಶ್ರೀರಾಘವೇಂದ್ರ ಮಹಾತ್ಮೆ' ಧಾರಾವಾಹಿಯ ಮೊದಲ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದೆ. ಮನುಕುಲದ ಕಷ್ಟ ಕಳೆಯಲು ವಿಷ್ಣುವಿನ ಅಂಶವಾಗಿ ಕಲಿಯುಗದ ಕಲ್ಪವೃಕ್ಷವಾಗಿ ಅವತರಿಸಿದ ಗುರುಸಾರ್ವಭೌಮ ಎಂದು ಆರಂಭವಾಗುವ ಈ ಪ್ರೋಮೋವನ್ನು ಕಿರುತೆರೆ ವೀಕ್ಷಕರು ಮೆಚ್ಚಿಕೊಂಡಿದ್ದಾರೆ.

ಇನ್ನು ಜೀ ವಾಹಿನಿಯು ಬಿಡುಗಡೆ ಮಾಡಿರುವ ಈ ಪ್ರೋಮೋದಲ್ಲಿ ಲಕ್ಷ್ಮಿದೇವಿಯಾಗಿ ನಟಿಸುತ್ತಿದ್ದಾರೆ ಸಿರಿ ಪ್ರಹ್ಲಾದ್. ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸಿರಿ ಪ್ರಹ್ಲಾದ್ ನೃತ್ಯದ ಮೂಲಕವೂ ಗಮನ ಸೆಳೆದಿರುವ ಬೆಡಗಿ. ಭರತನಾಟ್ಯದ ಜೊತೆಗೆ ವೆಸ್ಟರ್ನ್, ಕಂಟೆಪರರಿ ಹಾಗೂ ಕಥಕ್ ನೃತ್ಯವನ್ನು ಸಿರಿ ಕಲಿತಿದ್ದಾರೆ. ಬಾಲ್ಯದಿಂದಲೂ ನಟಿಯಾಗಬೇಕು ಎಂಬ ಬಯಕೆ ಈಕೆಗಿತ್ತು. ಪದವಿ ಓದುತ್ತಿರುವಾಗಲೇ ಒಂದಷ್ಟು ಅವಕಾಶಗಳು ಈಕೆಯನ್ನು ಅರಸಿ ಬಂದಿತ್ತು.
ಎಂಟು ವರ್ಷಗಳ ಹಿಂದೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯುಗಳಗೀತೆ' ಧಾರಾವಾಹಿಯಲ್ಲಿ ನಾಯಕಿ ಪಂಚಮಿ ಆಗಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು ಸಿರಿ ಪ್ರಹ್ಲಾದ್. 'ಯುಗಳಗೀತೆ' ಧಾರಾವಾಹಿಯ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿರದ ಸಿರಿ ಪ್ರಹ್ಲಾದ್ ನಂತರ ಹಾರಿದ್ದು ಹಿರಿತೆರೆಗೆ.
ಸಚಿನ್ ಕುಮಾರ್ ನಿರ್ದೇಶನದ 'ಒಂದು ಶಿಕಾರಿ ಕಥೆ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಈಕೆ ಪ್ರಮೋದ್ ಶೆಟ್ಟಿ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ತದ ನಂತರ ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಪ್ರೊಡಕ್ಷನ್ ನಡಿಯಲ್ಲಿ, ರಘು ಸಮರ್ಥ್ ನಿರ್ದೇಶನದಡಿಯಲ್ಲಿ ತೆರೆ ಕಂಡ 'ಲಾ' ಸಿನಿಮಾದಲ್ಲಿ ಈಕೆ ಎರಡನೇ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ತಮ್ಮ ನಟನೆಯ ಮೂಲಕ ಕಿರುತೆರೆ, ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ಈಕೆ ಮುಂದೆ ಕಾಣಿಸಿಕೊಂಡಿದ್ದು ತಮಿಳು ಸಿನಿಮಾದಲ್ಲಿ.

ತಮಿಳಿನ 'ಪೆಂಗ್ವಿನ್' ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಸಿರಿ ಪ್ರಹ್ಲಾದ್ ನಂತರ ನಟಿಸಿದ್ದು 'ವಿಜಯಾನಂದ' ಸಿನಿಮಾದಲ್ಲಿ. ಆನಂದ್ ಸಂಕೇಶ್ವರ ನಿರ್ಮಾಣದ, ರಿಷಿಕಾ ಶರ್ಮ ನಿರ್ದೇಶನದ 'ವಿಜಯಾನಂದ' ಸಿನಿಮಾದಲ್ಲಿ ವಿಜಯ್ ಸಂಕೇಶ್ವರ ಅವರ ಪತ್ನಿ ಲಲಿತಾ ಸಂಕೇಶ್ವರ ಪಾತ್ರದಲ್ಲಿ ಸಿರಿ ಅಭಿನಯಿಸಿದ್ದರು.
ನಂತರ ಕಿರಣ್ ರಾಜ್ ನಟನೆಯ 'ಬಡ್ಡೀಸ್' ಸಿನಿಮಾದಲ್ಲಿ ಈಕೆ ನಾಯಕಿಯಾಗಿ ನಟಿಸಿದ್ದರು. ಇದೀಗ ವರ್ಷಗಳ ನಂತರ ಮತ್ತೆ ಲಕ್ಷ್ಮಿ ದೇವಿಯಾಗಿ ಕಿರುತೆರೆಗೆ ಕಂ ಬ್ಯಾಕ್ ಆಗಲಿದ್ದಾರೆ ಸಿರಿ ಪ್ರಹ್ಲಾದ್. ಪೌರಾಣಿಕ ಪಾತ್ರಗಳಲ್ಲಿ ನಟಿಸುವುದು ಇಷ್ಟ ಎಂದು ಈ ಹಿಂದೆ ಹೇಳಿಕೊಂಡಿದ್ದ ಆಕೆ ಲಕ್ಷ್ಮಿದೇವಿಯಾಗಿ ನಟಿಸುವ ಮೂಲಕ ತಮ್ಮ ಇಷ್ಟವನ್ನು ಈಡೇರಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











