Bharati Hegde: ಶಿರಸಿ ಮೂಲದ ಈ ನಟಿಗೆ ಒಂದೇ ಪಾತ್ರಕ್ಕೆ ಬ್ರ್ಯಾಂಡ್ ಆಗೋಕೆ ಮನಸಿಲ್ಲ ಯಾಕೆ?
ಬಾಲ್ಯದಿಂದಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬಹಳ ಆಸಕ್ತಿ ಇದ್ದ ನಟಿ ಭಾರತಿ ಹೆಗಡೆ ಚಿಕ್ಕಂದಿನಿಂದಲೂ ಬಹಳಷ್ಟು ವೇದಿಕೆಗಳಲ್ಲಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ್ದಾರೆ. ಪ್ರಸ್ತುತ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಯನಾತಾರ' ಧಾರಾವಾಹಿಯಲ್ಲಿ ಅಮ್ಮ ಭಾಗವತಿ ಆಗಿ ಅಭಿನಯಿಸುತ್ತಿರುವ ಭಾರತಿ ಹೆಗಡೆ ಹಾರರ್ ಸುಂದರಿಯಾಗಿ ಕಿರುತೆರೆ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಬೆಡಗಿ.
ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ಯಾರೇ ನೀ ಮೋಹಿನಿ' ಧಾರಾವಾಹಿಯಲ್ಲಿ ಹೀರೊಯಿನ್ ಚಿತ್ರಾ ಆಗಿ ನಟಿಸುವ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಭಾರತಿ ಹೆಗಡೆ ಮುಂದೆ ಧಾರಾವಾಹಿ ಉದ್ದಕ್ಕೂ ಹಾರರ್ ಸುಂದರಿಯಾಗಿ ಮೋಡಿ ಮಾಡಿದ ಬೆಡಗಿ.

ಎಂಎಸ್ ಡಬ್ಲ್ಯೂ ಪದವೀಧರೆ!
ಮೂಲತಃ ಶಿರಸಿಯ ಸಿದ್ದಾಪುರದವರಾದ ಈ ಚೆಲುವೆ ತಮ್ಮ ಪ್ರಾಥಮಿಕ ಶಿಕ್ಷಣ ಮತ್ತು ಪಿಯುಸಿ ಅನ್ನು ಸಿದ್ದಾಪುರದಲ್ಲಿ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ರಾಜಧಾನಿ ಬೆಂಗಳೂರಿಗೆ ಹೋದರು. ಬೆಂಗಳೂರಿನ ಅಮಣ್ಣಿ ಮತ್ತು ಕ್ರೈಸ್ಟ್ ಕಾಲೇಜಿನಲ್ಲಿ ಎಂ ಎಸ್ ಡಬ್ಲ್ಯೂ ಮಾಡಿದ ಭಾರತಿ ಕಾರ್ಮಿಕ ಇಲಾಖೆಯಲ್ಲಿ ಕೆಲ ಕಾಲ ಕೆಲಸ ಮಾಡುತ್ತಿದ್ದರು.
ಮೊದಲಿನಿಂದಲೂ ಏನಾದರೂ ಹೊಸತನ್ನ ಮಾಡಬೇಕೆಂಬ ಹಂಬಲವಿದ್ದ ನಟಿ ಭಾರತಿಗೆ ನಟನಾ ಲೋಕ ಕೈಬೀಸಿ ಕರೆಯಿತು. ಹೇಳಿ ಕೇಳಿ ನೃತ್ಯದಲ್ಲಿ ಸೈ ಎನಿಸಿಕೊಂಡಿದ್ದ ಭಾರತಿ ಹೆಗಡೆ ಮುಂದೆ ನಟನೆಯಲ್ಲಿ ಮುಂದುವರಿಯುವ ನಿರ್ಧಾರ ಮಾಡಿದರು. ಬಣ್ಣದ ಜಗತ್ತಿನಲ್ಲಿ ಬದುಕು ರೂಪಿಸಿಕೊಳ್ಳುವ ಸಲುವಾಗಿ ಸಿನಿಮಾ ಮತ್ತು ಧಾರಾವಾಹಿಗಳ ಆಡಿಶನ್‌ಗೆ ಹೋಗಲು ಪ್ರಾರಂಭಿಸಿದರು.
ಹಾರರ್ ಸುಂದರಿಯಾಗಿ ಕಿರುತೆರೆಯಲ್ಲಿ ಮೋಡಿ
'ಶಾಂತಂಪಾಪಂ' ಧಾರಾವಾಹಿಯ ಆಡಿಶನ್‌ನಲ್ಲಿ ಆಯ್ಕೆಯಾದ ಭಾರತಿ ಹೆಗಡೆ ಅದರ ಮೂಲಕ ತಮ್ಮ ನಟನಾ ಪಯಣ ಶುರು ಮಾಡಿದರು. ತದ ನಂತರ ನಟಿ ಹಾಗೂ ನಿರ್ದೇಶಕಿ ಶ್ರುತಿ ನಾಯ್ಡು ಇವರ ಬಗೆಗೆ ಆಸಕ್ತಿ ತೋರಿಸಿ ಕನ್ನಡ ಧಾರಾವಾಹಿಯಲ್ಲಿ ಕೊಟ್ಟಿದ್ದ ಅವಕಾಶವೇ 'ಯಾರೆ ನೀ ಮೋಹಿನಿ'.

ಭರತನಾಟ್ಯದಲ್ಲಿ ವಿದ್ವತ್ ಪಡೆದ ಭಾರತಿ ಸಂಗೀತದಲ್ಲೂ ಕಡಿಮೆ ಇಲ್ಲ ಎನ್ನುವಂತೆ ಹಿಂದೂಸ್ತಾನಿ ಸಂಗೀತದಲ್ಲಿ ಜೂನಿಯರ್ ಪರೀಕ್ಷೆ ಪಾಸಾಗಿದ್ದಾರೆ. ಇದರ ಜೊತೆಗೆ ಇವರು 'ಸಮಾಜ'ಎಂಬ ಕಿರು ಚಿತ್ರದಲ್ಲಿ ನಟಿಸಿರುವ ಭಾರತಿಗೆ ಬೆಸ್ಟ್ ಆಕ್ಟರ್ ಅವಾರ್ಡ್ ಕೂಡ ಬಂದಿದೆ. ಸಿನಿಮಾಗಳಲ್ಲೂ ಕಾಣಿಸಿಕೊಳ್ಳಬೇಕೆಂಬ ಹಂಬಲವಿರುವ ನಟಿ ಭಾರತಿ ಹೆಗಡೆಗೆ ಹೆಚ್ಚೆಚ್ಚು ಸಿನಿಮಾ ಆಫರ್‌ಗಳು ಬರುತ್ತಿದೆ.
ಒಂದೇ ಪಾತ್ರಕ್ಕೆ ಬ್ರಾಂಡ್ ಆಗಲು ಮನಸ್ಸಿಲ್ಲ
ಭಾರತಿ ಹೆಗಡೆ ಅವರಿಗೆ ಸಿನಿಮಾದಿಂದಲೂ ಅವಕಾಶಗಳು ಬರುತ್ತಿದ್ದು ಬಂದಿರುವಂತಹ ಹೆಚ್ಚಿನವು ಹಾರರ್ ಕಥೆಗಳಾಗಿರುವುದರಿಂದ ಆಕೆ ಹಿಂದೆ ಹಾಕಿದ್ದರು. ತಾನು ಒಂದೇ ರೀತಿಯ ನಟನೆಗೆ ಬ್ರಾಂಡ್ ಆಗಬಾರದು ಎಂಬುದು ನಟಿ ಭಾರತಿ ಹೆಗಡೆ ಅವರ ಅಭಿಪ್ರಾಯ.
ಸದ್ಯ ಭಾರತಿ ಹೆಗೆಡೆ, ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಯನತಾರ'ದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ಕಾಣಿಸಿಕೊಂಡರೆ ಆಶ್ಚರ್ಯವಿಲ್ಲ.


Click it and Unblock the Notifications











