Skanda Ashok: ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಸ್ಕಂದ ಅಶೋಕ್.. ಅಭಿಮನ್ಯು ಆಗಿ ಕಿರುತೆರೆಗೆ ಎಂಟ್ರಿ
ವಿನೂತನ ಧಾರಾವಾಹಿಗಳ ಜೊತೆಗೆ ವಿಭಿನ್ನ ರೀತಿಯ ರಿಯಾಲಿಟಿ ಶೋಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಿರುವ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ ಶುರುವಾಗಲಿದೆ. ಹೌದು, 'ಅವನು ಮತ್ತು ಶ್ರಾವಣಿ' ಎನ್ನುವ ಹೆಸರಿನ ಹೊಸ ಧಾರಾವಾಹಿಯೊಂದು ಶೀಘ್ರದಲ್ಲಿ ಶುರುವಾಗಲಿದ್ದು ಧಾರಾವಾಹಿಯ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದೆ.
ಧಾರಾವಾಹಿಯಲ್ಲಿ ನಾಯಕ ಅಭಿಮನ್ಯು ಆಗಿ ನಟಿಸುವ ಮೂಲಕ ಮತ್ತೊಮ್ಮೆ ಕಿರುತೆರೆಯಲ್ಲಿ ಬಣ್ಣ ಹಚ್ಚುತ್ತಿದ್ದಾರೆ ನಟ ಸ್ಕಂದ ಅಶೋಕ್. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರಸು' ಧಾರಾವಾಹಿಯಲ್ಲಿ ನಾಯಕ ಅರವಿಂದ ಆಗಿ ನಟಿಸುವ ಮೂಲಕ ಕೊನೆಯ ಬಾರಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಸ್ಕಂದ ಅಶೋಕ್ ಈಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ ಎಂದರೆ ತಪ್ಪಾಗಲಾರದು.

ರಾಧಾ ಮಿಸ್ ಗಂಡನಾಗಿ ಕಿರುತೆರೆಗೆ ಎಂಟ್ರಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕ ರಮಣನಾಗಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ಪಡೆದ ಚಿಕ್ಕಮಗಳೂರಿನ ನಟ ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಅದರಲ್ಲೂ ಹೆಣ್ ಮಕ್ಕಳ ಹೃದಯ ಕದ್ದು ಬಿಟ್ಟರು. ಮನೋಜ್ಞ ನಟನೆಯ ಮೂಲಕ ರಾಧಾ ಮಿಸ್ ಮಾತ್ರವಲ್ಲದೇ ಸೀರಿಯಲ್ ಪ್ರಿಯರ ಮನ ಗೆದ್ದ ಸ್ಕಂದ ಅಶೋಕ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧೆ ಶ್ಯಾಮ್'ನಲ್ಲಿ ಅತಿಥಿ ಪಾತ್ರದ ಮೂಲಕ ಗುರುತಿಸಿಕೊಂಡಿದ್ದರು.
ಹಿರಿತೆರೆ ಮೂಲಕ ನಟನಾ ಲೋಕಕ್ಕೆ ಪಾದಾರ್ಪಣೆ
ಅಭಿಮನ್ಯು ಆಗಿ ಮತ್ತೆ ವೀಕ್ಷಕರನ್ನು ರಂಜಿಸಲು ತಯಾರಾಗಿರುವ ಸ್ಕಂದ ಅಶೋಕ್‌ಗೂ ನಟನೆಗೂ ನಂಟು ಬೆಳೆದುಕೊಂಡಿದ್ದು ಹಿರಿತೆರೆ ಮೂಲಕ. ಮಲಯಾಳಂನ 'ನೋಟ್ ಬುಕ್' ಸಿನಿಮಾದಲ್ಲಿ ಅಭಿನಯಿಸುವ ಮೂಲಕ ನಟನೆಗೆ ಕಾಲಿಟ್ಟ ಸ್ಕಂದ ಮೊದಲ ಸಿನಿಮಾಕ್ಕೆ ಏಷಿಯನೆಟ್ ಫಿಲಂ ನೀಡುವ ಹೊಸ ಮುಖ ಪ್ರಶಸ್ತಿ ಪಡೆದಿದ್ದರು. ಮಲಯಾಳಂನ 'ಪಾಸಿಟಿವ್', ತೆಲುಗಿನ 'ಮಲ್ಲಿ ಮಲ್ಲಿ', ಮಲಯಾಳಂನ 'ಎಲೆಕ್ಟ್ರಾ', ತಮಿಳಿನ 'ಅಂಗುಸಂ' ಹಾಗೂ 'ಮುಪ್ಪರಿಮಾನಂ' ಸಿನಿಮಾಗಳಲ್ಲಿ ನಟಿಸಿ ವೀಕ್ಷಕರ ಮನ ಸೆಳೆದ ಸ್ಕಂದ 'ಚಾರುಲತಾ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು.

ಸಾಲು ಸಾಲು ಸಿನಿಮಾಗಳಲ್ಲಿ ಮೋಡಿ
'ಚಾರುಲತಾ' ಸಿನಿಮಾದ ನಂತರ 'ಯೂ ಟರ್ನ್' ಸಿನಿಮಾದಲ್ಲಿ ಪುಟ್ಟ ಪಾತ್ರವೊಂದರಲ್ಲಿ ನಟಿಸಿದ ಇವರು ತದ ನಂತರ 'ಕಾನೂರಾಯಣ', 'ಜಿಗ್ರಿ ದೋಸ್ತ್', 'ದೇವಯಾನಿ', 'ಭೈರಾದೇವಿ' ಹಾಗೂ 'ರಣಾಂಗಣ' 'ಫ್ಲಾಟ್ ನಂ 9', 'ಬರ್ಬರಿಕಾ' ಸಿನಿಮಾದಲ್ಲಿ ಸ್ಕಂದ ಬಣ್ಣ ಹಚ್ಚಿದ್ದಾರೆ. ಈಗ ಸಣ್ಣ ಗ್ಯಾಪ್ ನ ನಂತರ ಮತ್ತೆ ಸ್ಕಂದ ಅಶೋಕ್ ಅವರು ಕಿರುತೆರೆಗೆ ಮರಳಿದ್ದು ತಮ್ಮ ನೆಚ್ಚಿನ ನಟನನ್ನು ಮತ್ತೊಮ್ಮೆ ಕಣ್ತುಂಬಿಸಿಕೊಳ್ಳಲು ಸೀರಿಯಲ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











