ಕಿರುತೆರೆ ನಟ ಚೇತನ, ಗಾಯಕ ವೆಂಕಟಾದ್ರಿ ವಿಧಿವಶ
ಕನ್ನಡ ಕಿರುತೆರೆಯಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿ ವೆಂಕಟಾದ್ರಿ ಎಂದೇ ಆತ್ಮೀಯರಾಗಿದ್ದ ವೆಂಕಟಾದ್ರಿ ಮೈಸೂರು ಸುಬ್ಬಾರಾವ್ (57) ಇನ್ನು ನೆನಪು ಮಾತ್ರ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ (ಜನವರಿ 31) ಮಧ್ಯಾಹ್ನ 2.15ಕ್ಕೆ ವಿಧಿವಶರಾಗಿದ್ದಾರೆ.
ಕಳೆದ 10 ದಿನಗಳಿಂದ ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ 4 ದಿನಗಳಿಂದ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮೃತರ ಅಂತ್ಯಕ್ರಿಯೆಗಳು ಭಾನುವಾರ (ಫೆಬ್ರವರಿ 1) ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಬಾಗಲಕುಂಟೆಯ ಅವರ ಸ್ವಗೃಹದಲ್ಲಿ ನೆರವೇರಲಿವೆ. ಅವರ ಸ್ವಗೃಹದ ವಿಳಾಸ ಹೀಗಿದೆ - #567, ಹಂಸಧ್ವನಿ, 23ನೇ ಕ್ರಾಸ್, ಬಾಗಲಕುಂಟೆ, ಹೆಸರಘಟ್ಟ ರಸ್ತೆ, ಬೆಂಗಳೂರು- 560073.
ವೆಂಕಟಾದ್ರಿ ಅವರು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರ ಫೇಸ್ ಬುಕ್ ನಲ್ಲಿ ಶೀಘ್ರ ಗುಣಮುಖರಾಗಲಿ ಎಂಬ ಸಂದೇಶಗಳ ಮಹಾಪೂರವೇ ಹರಿದು ಬರುತ್ತಿತ್ತು. ಇದೀಗ ಅವರ ಹಠಾತ್ ಕಣ್ಮರೆಯಿಂದ ಅವರ ಫೇಸ್ ಬುಕ್ ಪುಟಗಳ ತುಂಬ ಸಂತಾಪ ಮಡುಗಟ್ಟಿದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











