ಸ್ಮೈಲ್ ಗುರು ರಕ್ಷಿತ್ ಅಂತಲೇ ಕಿರುತೆರೆಯಲ್ಲಿ ಫೇಮಸ್ ಆಗಿರೋ ಈ ನಟನ ಹಿನ್ನೆಲೆ ಏನು?
ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸದ್ದು ಮಾಡಿರುವ ಸ್ಮೈಲ್ ಗುರು ರಕ್ಷಿತ್ ಇದೀಗ ತಮ್ಮ ಮೊದಲ ಸಿನಿಮಾ ತಯಾರಿಯಲ್ಲಿದ್ದಾರೆ. ಹೌದು, ಸ್ಮೈಲ್ ಗುರು ಎಂಬ ಶಾರ್ಟ್ ಮೂವಿ ಮೂಲಕ ಬಹಳಷ್ಟು ಸದ್ದು ಮಾಡಿದ್ದ ನಟ ರಕ್ಷಿತ್, ಇದೀಗ ಹೊಸದೊಂದು ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ. ಇದು ಅವರ ಮೊದಲ ಸಿನಿಮಾವಾಗಿದ್ದು, ಇದಕ್ಕೆ ಅವರೇ ಕಥೆ ಬರೆದು ರಚಿಸಿದ್ದಾರಂತೆ.
"ನನಗೆ ಸಿನಿಮಾದಲ್ಲಿ ನಟಿಸಬೇಕೆಂಬುದು ಬಹಳ ದೊಡ್ಡ ಆಸೆ. ಆದರೆ, ಬೆಳ್ಳಿತೆರೆಗೆ ಕಾಲಿಡುವುದು ಸುಲಭದ ಮಾತಲ್ಲ. ಎಷ್ಟೋ ಸಾರಿ ನಾವು ಅಂದುಕೊಂಡಷ್ಟು ಐಡೆಂಟಿಟಿಯನ್ನು ಸೃಷ್ಟಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಹಾಗಾಗಿ ನಾನು ಬೆಳ್ಳಿತೆರೆಗೆ ಕಾಲಿಡುವ ಮೊದಲು ಯಾವುದಾದರೂ ಒಂದು ರೀತಿಯಲ್ಲಿ ಜನರಿಗೆ ತಲುಪಬೇಕೆಂಬ ಗುರಿಯನ್ನು ಇಟ್ಟುಕೊಂಡಿದ್ದೆ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ರಕ್ಷಿತ್.

"ನಾನು ನಟಿಸಿರುವ ಸ್ಮೈಲ್ ಗುರು ಎಂಬ ಶಾರ್ಟ್ ಸಿನಿಮಾದ ಮೂಲಕ ನಾನು ಬಹಳಷ್ಟು ಖ್ಯಾತಿಯನ್ನು ಪಡೆದೆ. ಈಗಾಗಲೇ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನನಗೆ ಸಿನಿಮಾದಲ್ಲಿ ನಟಿಸುವ ಬಯಕೆಯಿತ್ತು. ಬೆಳ್ಳಿತೆರೆಗೆ ಕಾಲಿಡಲು ಇದೇ ಸರಿಯಾದ ಸಮಯ ಎಂದು ನನಗೆ ಈಗ ಅನಿಸುತ್ತಿದೆ" ಎಂದು ರಕ್ಷಿತ್ ಹಂಚಿಕೊಂಡಿದ್ದರು.
"ಚಿಕ್ಕಂದಿನಿಂದಲೂ ನನಗೆ ಡಾನ್ಸ್ ಅಂದರೆ ಇಷ್ಟ. ನಾನು ಆದಷ್ಟು ರಿಯಾಲಿಟಿ ಶೋ ಗಳಲ್ಲಿ ಡ್ಯಾನ್ಸರ್ ಆಗಿ ಭಾಗವಹಿಸಿದ್ದೇನೆ. ಆದರೆ, ಪ್ರೇಕ್ಷಕರ ಮುಂದೆ ಡ್ಯಾನ್ಸ್ ಮಾಡುವಾಗೆಲ್ಲ ನಮ್ಮನ್ನು ಬ್ಯಾಕ್‌ಗ್ರೌಂಡ್ ಡ್ಯಾನ್ಸರ್ಸ್ ಆಗಿಯೇ ಉಳಿಸಿಬಿಟ್ಟರು. ಹಾಗಾಗಿ ನನಗೆ ಡ್ಯಾನ್ಸಿಂಗ್ ವಿಚಾರದಲ್ಲಿ ಸರಿಯಾದ ವೇದಿಕೆ ಸಿಗಲಿಲ್ಲ" ಎಂದು ಮಾತನಾಡುವಾಗ ಹೇಳಿಕೊಂಡಿದ್ದಾರೆ ರಕ್ಷಿತ್.

"ನನ್ನ ಮನೆಯಲ್ಲೆಲ್ಲರೂ ವೃತ್ತಿಪರ ವೈದ್ಯರು. ನನ್ನ ತಂದೆ-ತಾಯಿ ಅಕ್ಕ ಹೀಗೆ ಎಲ್ಲರೂ ವೈದ್ಯಕೀಯ ಕ್ಷೇತ್ರದಲ್ಲಿ ಇರುವುದರಿಂದ ನಾನು ಕೂಡ ಇದೇ ಕ್ಷೇತ್ರಕ್ಕೆ ಕಾಲಿಡುತ್ತೇನೆ ಎಂದು ನಂಬಿದ್ದರು. ಆದರೆ, ನಾನು ಸ್ಕೂಲಿನಲ್ಲಿರುವಾಗ ನನ್ನ ಕನ್ನಡ ಟೀಚರ್ ಅವರ ಸ್ಪೂರ್ತಿಯಿಂದ ಡಾನ್ಸ್ ಒಂದರಲ್ಲಿ ಭಾಗವಹಿಸಿದೆ. ಆಗಿನಿಂದ ನನಗೆ ಡಾನ್ಸ್ ಹಾಗೂ ನಟನೆಯಲ್ಲಿ ಬಹಳಷ್ಟು ಆಸಕ್ತಿ ಮೂಡಿದೆ. ನನ್ನ ಮೊದಲ ಸಿನಿಮಾ ಚೆನ್ನಾಗಿ ಮೂಡ ಮೂಡಿ ಬರಬೇಕು. ಅದರಲ್ಲೂ ಇಂದಿನ ಯುವಕರಿಗೆ ಅದರ ಮೆಸೇಜ್ ತಲುಪಬೇಕು ಎಂಬುದು ನನ್ನ ಆಶಯ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುವಾಗ ಹೇಳಿಕೊಂಡಿದ್ದರು ರಕ್ಷಿತ್.
"ತಮಿಳು ಚಿತ್ರರಂಗದ ಲವ್ ಟುಡೇ ಸಿನಿಮಾ ನನ್ನನ್ನು ಬಹಳಷ್ಟು ಮೋಟಿವೇಟ್ ಮಾಡಿತು. ಈ ರೀತಿಯಲ್ಲಿ ನಾವು ಸಿನಿಮಾಗಳಲ್ಲಿಯೂ ಪ್ರಸ್ತುತ ಟ್ರೆಂಡ್ ಹಾಗೂ ಜೀವನದ ಬಗ್ಗೆ ಯುವಕರಿಗೆ ಹೇಳಬೇಕು. ಇಂದು ನಮ್ಮ ಕನ್ನಡ ಇಂಡಸ್ಟ್ರಿಗೂ ಬಹಳಷ್ಟು ಹೊಸ ಮುಖಗಳ ಅವಶ್ಯಕತೆ ಇದೆ. ಹೊಸ ಕಥೆಗಳು ಹೊಸ ಕಲಾವಿದರಿಂದ ನಾವು ಹೊಸ ದಿಕ್ಕಿನೆಡೆಗೆ ಹೋಗುವ ಸಮಯ ಇದಾಗಿದೆ. ನನ್ನ ಸಿನಿಮಾದಲ್ಲಿ ಪ್ರೀತಿಯ ಹೊಸ ಡೆಫಿನೇಶನ್ನೇ ಮುಖ್ಯವಸ್ತು. ಇಂದಿನ ಪ್ರೇಮಿಗಳಿಗಷ್ಟೇ ಅಲ್ಲದೆ ತಂದೆ ತಾಯಿಗೂ ಅವರ ಮಕ್ಕಳನ್ನು ಅರ್ಥಮಾಡಿಕೊಳ್ಳುವಲ್ಲಿ ಈ ಸಿನಿಮಾ ಕಥೆ ಸಹಾಯಕವಾಗಲಿದೆ ಎಂದು ನಂಬಿದ್ದೇನೆ " ಎಂದು ತಮ್ಮ ಮೊದಲ ಸಿನಿಮಾ ಬಗ್ಗೆ ಬಹಳಷ್ಟು ಆತ್ಮವಿಶ್ವಾಸದಿಂದ ಮಾಹಿತಿ ಹಂಚಿಕೊಂಡಿದ್ದಾರೆ ನಟ ಸ್ಮೈಲ್ ಗುರು ರಕ್ಷಿತ್.


Click it and Unblock the Notifications











