Bigg Boss kannada season 10: ಚಾರ್ಲಿ ಬಳಿಕ ಸ್ನೇಕ್ ಶ್ಯಾಮ್ ಬಿಗ್‌ಬಾಸ್ ಮನೆಗೆ ಹೋಗುವುದು ಖಚಿತ
ಬಿಗ್‌ಬಾಸ್ ಕನ್ನಡ ಸೀಸನ್ 10ಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ(ಅಕ್ಟೋಬರ್ 8) ಸಂಜೆ 6ಗಂಟೆಗೆ ಗ್ರ್ಯಾಂಡ್ ಪ್ರೀಮಿಯರ್ ನಡೆಯಲಿದ್ದು ಸೋಮವಾರದಿಂದ ಪ್ರತಿದಿನ ರಾತ್ರಿ 9.30ಕ್ಕೆ ಎಪಿಸೋಸ್ ಪ್ರಸಾರವಾಗಲಿದೆ. ಈಗಾಗಲೇ ಪ್ರೀಮಿಯರ್ ಶೂಟ್ ಕೂಡ ಆರಂಭವಾಗಿದೆ.
ಈ ಬಾರಿ ಕನ್ನಡ ಬಿಗ್‌ಬಾಸ್ ಮನೆಗೆ ಯಾರೆಲ್ಲಾ ಹೋಗ್ತಾರೆ ಎನ್ನುವ ಚರ್ಚೆ ನಡೀತಿದೆ. ಚಾರ್ಲಿ ದೊಡ್ಮೆನೆಗೆ ಹೋಗುವ ವಿಚಾರವನ್ನು ಈಗಾಗಲೇ ತಂಡವೇ ಬಹಿರಂಗ ಪಡಿಸಿದೆ. ಇನ್ನುಳಿದಂತೆ ಒಂದಷ್ಟು ಸಂಭಾವ್ಯರ ಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಆದರೆ ಆ ಪಟ್ಟಿಯಲ್ಲಿ ಕೆಲವರು ನಾವು ಬಿಗ್‌ಬಾಸ್ ಮನೆಗೆ ಹೋಗಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ದೊಡ್ಮನೆ ಪ್ರವೇಶಿಸುವವರು ಯಾರ್ಯಾರು ಎನ್ನುವ ಕುತೂಹಲ ಹಾಗೆಯೇ ಉಳಿದಿದೆ.

ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಮೈಸೂರಿನ ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಈ ಬಾರಿ ಬಿಗ್‌ಬಾಸ್ ಮನೆಗೆ ಹೋಗುತ್ತಿದ್ದಾರೆ. ತಮ್ಮ ಸಾಮಾಜಿಕ ಕಳಕಳಿಯಿಂದ ಮನೆ ಮಾತಾಗಿರುವ ಸಾಧಕ ಇದೀಗ ದೊಡ್ಮನೆ ಆಟಕ್ಕೆ ಸಿದ್ಧರಾಗಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 10 ಸ್ನೇಕ್ ಶ್ಯಾಮ್ ಒಳ್ಳೆ ಆಯ್ಕೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. 15ರಿಂದ 16 ಜನರನ್ನು ಬಿಗ್‌ಬಾಸ್ ಮನೆಗೆ ಕಳುಹಿಸುತ್ತೇವೆ ಎಂದು ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ಪ್ರಶಾಂತ್ ನಾಯಕ್ ಹೇಳಿದ್ದರು.
ಚಾರ್ಲಿ ಬಳಿಕ ಸ್ನೇಕ್ ಶ್ಯಾಮ್ ಬಿಗ್‌ಬಾಸ್ ಮನೆಗೆ ಪ್ರವೇಶ ಮಾಡುತ್ತಿದ್ದಾರೆ. 86 ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದು ಶ್ಯಾಮ್ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಚಿಕ್ಕಂದಿನಿಂದಲೂ ಹಾವು ಹಿಡಿಯುವುದನ್ನು ಕರಗತ ಮಾಡಿಕೊಂಡಿರುವ ಶ್ಯಾಂ ದಶಕಗಳಿಂದ ಇದನ್ನು ಪ್ರವೃತ್ತಿಯಾಗಿಸಿಕೊಂಡಿದ್ದಾರೆ.

ಸ್ನೇಕ್ ಶ್ಯಾಂ ಅವರ ಮೂಲ ಹೆಸರು ಬಾಲಸುಬ್ರಹ್ಮಣ್ಯ. ಒಮ್ಮೆ ಚಿಕ್ಕವರಿರುವಾಗ ಮನೆಗೆ ಬಂದಿದ್ದ ಹಾವೊಂದನ್ನ ಹಿಡಿದು ರಕ್ಷಿಸಿದ್ದರು. ಹಿಂದಿನ ಕಾಲದಲ್ಲಿ ಹಾವುಗಳನ್ನು ಕಂಡರೆ ಹೊಡೆದು ಸಾಯಿಸುತ್ತಿದ್ದರು. ಇವತ್ತಿಗೂ ಅದು ಮುಂದುವರೆದಿದೆ. ಆದರೆ ಸಾಕಷ್ಟು ಕಡೆಗಳಲ್ಲಿ ಹಾವುಗಳನ್ನು ಕಂಡರೆ ಅದನ್ನು ಹಿಡಿದು ಕಾಡಿಗೆ ಬಿಡಲು ಮುಂದಾಗುತ್ತಿದ್ದಾರೆ. ಅದಕ್ಕೆ ಸ್ನೇಕ್ ಶ್ಯಾಮ್ ಕಾರಣ ಎಂದರೂ ತಪ್ಪಾಗಲ್ಲ.
ಕಾಳಿಂಗ, ನಾಗರ, ಹೆಬ್ಬಾವು, ಕೇರೆ ಹಾವು ಯಾವುದೇ ಹಾವು ಇದ್ದರೂ ಸ್ನೇಕ್ ಶ್ಯಾಮ್ ಕ್ಷಣ ಮಾತ್ರದಲ್ಲಿ ಹಿಡಿದು ರಕ್ಷಿಸಬಲ್ಲರು. ಇನ್ನು ತಮ್ಮ ವಿಭಿನ್ನ ವೇಷಭೂಷಣದಿಂದಲೂ ಶ್ಯಾಮ್ ಗಮನ ಸೆಳೆಯುತ್ತಾರೆ. ಇನ್ನು ಹಾವುಗಳನ ಬಗ್ಗೆ ಸದಾ ಜಾಗೃತಿ ಮೂಡಿಸುವ ಕಾಯಕ ಮಾಡುತ್ತಿದ್ದಾರೆ. ಸ್ನೇಕ್ ಶ್ಯಾಮ್ ಪ್ರೇರಣೆಯಿಂದ ಇಂದು ಸಾಕಷ್ಟು ಜನ ಉರಗ ಸಂರಕ್ಷಕರು ಹುಟ್ಟಿಕೊಂಡಿದ್ದಾರೆ.
40 ವರ್ಷಗಳಿಂದ ಹಾವುಗಳನ್ನು ಹಿಡಿದು ಕಾಡಿಗೆ ಬಿಡುವುದನ್ನು ಸ್ನೇಕ್ ಶ್ಯಾಮ್ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. 17-05-1967 ರಂದು ಶ್ಯಾಮ್ ಮೈಸೂರಿನಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಸುಬ್ಬರಾವ್ ಪಬ್ಲಿಕ್ ಸ್ಕೂಲ್ ಟೀಚರ್ ಅಗಿದ್ದರು. ಅವರ ತಾಯಿ ನಾಗಲಕ್ಷ್ಮಿ ಕೂಡ ಶಾಲಾ ಶಿಕ್ಷಕಿ ಆಗಿದ್ದರು. ಸ್ನೇಕ್ ಶ್ಯಾಮ್ ಅವರಿಗೆ ಮೊದಲು ಶ್ಯಾಮ್ ಅಂತ ಅವರ ಅಜ್ಜಿ ಇಟ್ಟ ಹೆಸರು.
ಶ್ಯಾಮ್ ಮೈಸೂರು ನಗರಪಾಲಿಕೆ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇನ್ನು ಹಾವುಗಳ ಸಂರಕ್ಷಣೆಯಿಂದ ರಾಷ್ಟ್ರೀಯಮಟ್ಟದಲ್ಲಿ ಗುರ್ತಿಸಿಕೊಂಡಿದ್ದಾರೆ. ಸಾಕಷ್ಟು ಪ್ರಶಸ್ತಿಗಳ ಪುರಸ್ಕಾರಗಳು ಲಭಿಸಿದೆ. ದಶಕಗಳ ಹಿಂದೆ ಹಾವುಗಳನ್ನು ಕಂಡರೆ ಜನ ಸಾಯಿಸುತ್ತಿದ್ದರು. ಅದನ್ನು ನೋಡಿ ಬೇಸತ್ತು ಯಾಕೆ ಅವುಗಳನ್ನು ರಕ್ಷಿಸಿ ಕಾಡಿಗೆ ಬಿಡಬಾರದು ಎಂದುಕೊಂಡರು. ನಂತರ ಅದನ್ನು ಕಾರ್ಯರೂಪಕ್ಕೆ ತಂದರು. ಮೈಸೂರಿನ ಜನರಿಗೆ ಮನೆಗಳ ಸುತ್ತಾಮುತ್ತ ಹಾವು ನೋಡಿದ ತಕ್ಷಣ ನೆನಪಾಗುವುದು ಸ್ನೇಕ್ ಶ್ಯಾಮ್.
1981ರಿಂದಲೇ ಹಾವಗಳನ್ನು ಹಿಡಿದು ಕಾಡಿಗೆ ಬಿಡುವ ಕೆಲಸವನ್ನು ಶ್ಯಾಮ್ ಆರಂಭಿಸಿದರೂ 1997ರ ಬಳಿಕ ಅದನ್ನು ನಮೂದಿಸುವ ಕಾರ್ ಆರಂಭಿಸಿದರು. ಇನ್ನು ಹಾವುಗಳನ ಬಗೆಗಿನ ಮೂಢನಂಬಿಕೆ ಬಗ್ಗೆ ಅರಿವು ಮೂಢಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನ್ಯಾಷನಲ್ ಜಿಯೋಗ್ರಫಿ ಚಾನಲ್‌ನಲ್ಲಿ ಶ್ಯಾಮ್ ಕುರಿತು ಸಾಕ್ಷ್ಯ ಚಿತ್ರವನ್ನು ಪ್ರಸಾರವಾಗಿದೆ.
ಒಟ್ನಲ್ಲಿ ಸ್ನೇಕ್ ಶ್ಯಾಮ್ ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶ ಮಾಡುತ್ತಿರುವುದು ಕುತೂಹಲ ಮೂಡಿಸಿದೆ. ಇನ್ನು ವಿವಿಧ ಕ್ಷೇತ್ರಗಳಿಂದ 16 ಜನ ಸ್ಪರ್ಧಿಗಳನ್ನು ಬಿಗ್‌ಬಾಸ್ ಮನೆಗೆ ಕಳುಹಿಸುವುದಾಗಿ ಈಗಾಗಲೇ ಹೇಳಲಾಗಿದೆ. ಇನ್ನು ಯಾರೆಲ್ಲಾ ಹೋಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











