ಈ ನಟಿಯ ತಮಿಳು ಸೀರಿಯಲ್ ನೋಡಿ ಮನಸೋತಿದ್ದ ಪತಿ: ಸ್ನೇಹಾ ಈಶ್ವರ್ ವಿವಾಹ ಯಾವ ಸಿನಿಮಾಗೂ ಕಮ್ಮಿಯಿಲ್ಲ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಶ್ರಾವಣಿ ಸುಬ್ರಮಣ್ಯ'ವೂ ಒಂದು. 'ಶ್ರಾವಣಿ ಸುಬ್ರಹ್ಮಣ್ಯ'ದಲ್ಲಿ ವಿಲನ್ ವಿಜಯಾಂಬಿಕಾ ಆಗಿ ಅಭಿಯಿಸುತ್ತಿದ್ದಾರೆ ನಟಿ ಸ್ನೇಹಾ ಈಶ್ವರ್. ತಮ್ಮ ನಟನೆಯ ಮೂಲಕ ಕಿರುತೆರೆಯಲ್ಲಿ ಒಂದೊಳ್ಳೆಯ ಹೆಸರು ಮಾಡಿರುವ ನಟಿ ಸ್ನೇಹಾ ಈಶ್ವರ್
ಹಿರಿತೆರೆಯಲ್ಲಿಯೂ ಮೋಡಿ ಮಾಡಿರುವ ಪ್ರತಿಭೆ.
ಸದ್ಯಕ್ಕಂತೂ ಕಿರುತೆರೆಯಲ್ಲಿ ಬ್ಯುಸಿ ಇರುವ ನಟಿ ಸ್ನೇಹಾ ಈಶ್ವರ್, ಜೀ ಕನ್ನಡದ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿ ಅಷ್ಟೇ ಅಲ್ಲದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ 'ಆಸೆ' ಧಾರಾವಾಹಿಯಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಒಂದೇ ರೀತಿಯ ಪಾತ್ರಗಳನ್ನಲ್ಲದೆ ನಾನಾ ಭಾಷೆಗಳಲ್ಲಿ ನಟಿಸಿರುವ ನಟಿ ಸ್ನೇಹಾ ಈಶ್ವರ್ ಬಹುಭಾಷಾ ನಟಿ. ಖಳನಾಯಕಿಯಾಗಿ, ವಿದೂಷಕಿಯಾಗಿ, ನಟಿಯಾಗಿ ಹಲವು ಧಾರಾವಾಹಿಗಳನ್ನು ನಿಭಾಯಿಸಿರುವ ನಟಿ ಸ್ನೇಹಾ ಈಶ್ವರ್ ಕನ್ನಡ ಭಾಷೆ ಅಲ್ಲದೆ ತಮಿಳು, ತೆಲುಗು ಹಾಗು ಮಲಯಾಳಂ, ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ.
ಪ್ರಸ್ತುತ ಕನ್ನಡ ಕಿರುತೆರೆಯಲ್ಲಿ ಹೆಚ್ಚು ಖ್ಯಾತಿಗಳಿಸಿರುವ ಇವರು ಮೂಲತಃ ಕೇರಳದವರಂತೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿರುವ ನಟಿ ಸ್ನೇಹ ಈಶ್ವರ್ ನಾನು ಮೂಲತಃ ಕೇರಳದವಳು. ಹುಟ್ಟಿ ಬೆಳೆದದ್ದೆಲ್ಲ ಬೆಂಗಳೂರಿನಲ್ಲಿ. ಸುಮಾರು 20 ವರ್ಷಗಳ ಹಿಂದೆ 'ಅಲೆ' ಎನ್ನುವ ತಮಿಳು ಧಾರಾವಾಹಿಯಲ್ಲಿ ನಟಿಸುತ್ತಿದ್ದೆ. ಆ ಧಾರಾವಾಹಿಯನ್ನು ನನ್ನ ಅತ್ತೆ ಅವರು ಪ್ರತಿ ದಿನ ನೋಡುತ್ತಿದ್ದರು. ಅವರು ಆಗ ಅವರ ಮಗನಿಗೆ ಹೆಣ್ಣು ಹುಡುಕುತ್ತಿದ್ದರಂತೆ. ಯಾವ ಹೆಣ್ಣು ತೋರಿಸಿದರು ಬೇಡ ಎನ್ನುತ್ತಿದ್ದ ಮಗನ ಬಗ್ಗೆ ಅವರಿಗೆ ಚಿಂತೆಯಾಗಿತ್ತಂತೆ."
"ಆ ಸಮಯದಲ್ಲಿ ಹೀಗೆ ಮಾತನಾಡುವಾಗ ನಾನು ಆಗುವುದಾದರೆ ಈ ಹುಡುಗಿಯನ್ನು ಮದುವೆಯಾಗುತ್ತೇನೆ ಎಂದು ಟಿವಿಯಲ್ಲಿ ಧಾರಾವಾಹಿ ನನ್ನನ್ನು ತೋರಿಸಿ ಹೇಳಿದರಂತೆ. ಅದನ್ನೇ ಗಟ್ಟಿ ಮಾಡಿದ ನಮ್ಮ ಅತ್ತೆಯವರು, ಪ್ರೊಡಕ್ಷನ್ ಹೌಸ್ ನಂಬರ್ ಪಡೆದುಕೊಂಡು ನಮ್ಮ ತಂದೆಯವರನ್ನು ಕಾಂಟಾಕ್ಟ್ ಮಾಡಿದರು. ಅವರು ತಮಿಳು ಬ್ರಾಹ್ಮಣರು. ನಾವು ಕೇರಳದ ನಂಬೂದರಿ ಕುಟುಂಬದವರು. ಮೊದಲಿಗೆ ನಮ್ಮ ತಂದೆಯವರಿಗೆ ಬಹಳ ಆಶ್ಚರ್ಯವಾಗಿತ್ತು. ಕ್ರಮೇಣ ಮಾತುಕತೆ ಆರಂಭವಾದಾಗ ಹುಡುಗನನ್ನು ನೋಡಿ ಸರಿಯಾದ ವರ ಎಂದು ನಮ್ಮ ತಂದೆ ನಿರ್ಧಾರ ಮಾಡಿದರು. ಇದೀಗ ನಮಗೆ ಮದುವೆಯಾಗಿ 19 ವರ್ಷಗಳಾಗಿವೆ. ಈಗ ನಾವು ಬೆಂಗಳೂರಿನಲ್ಲೇ ನೆಲೆಸಿದ್ದೇವೆ." ಎನ್ನುತ್ತಾರೆ ಸ್ನೇಹಾ ಈಶ್ವರ್.
2012ರವರೆಗೂ ನಾನಾ ಧಾರಾವಾಹಿಗಳಲ್ಲಿ, ಹೊಸ ಹೊಸ ಪ್ರಾಜೆಕ್ಟ್‌ಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೆ. ಅದಾದ ಮೇಲೆ ಗಂಡ ಮಕ್ಕಳು ಸಂಸಾರ ಎಂದು ಒಂದಷ್ಟು ನಟನೆಯಿಂದ ಹೊರಗೆ ಉಳಿದೆ. ಈಗ ಮತ್ತೆ ನಟನೆ ಅತ್ತ ಗಮನಹರಿಸಿದ್ದೇನೆ ಎಂದಿದ್ದಾರೆ ಸ್ನೇಹಾ ಈಶ್ವರ್.
ಇನ್ನು ಸಿನಿಮಾ ಹಾಗೂ ಕಿರುತೆರೆ ಬಗ್ಗೆ ಮಾತನಾಡಿದ ನಟಿ ಸ್ನೇಹಾ ಈಶ್ವರ್ ನನಗೆ ಸಿನಿಮಗಳಿಗಿಂತಲೂ ಕಿರುತೆರೆ ಹೆಚ್ಚು ಇಷ್ಟವಾಗುತ್ತದೆ. ಸಿನಿಮಾಗಳಿಗೆ ಹೋಗುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಮೊದಲು ನಾವು ಆರ್ಥಿಕವಾಗಿ ಅಷ್ಟೇನೂ ಸದೃಢವಾಗಿರಲಿಲ್ಲ, ಹಾಗಾಗಿ ಸಿನಿಮಾ ನಮಗೆ ಬಹಳ ದೂರದ ಮಾತಾಗಿತ್ತು. ಆದರೆ ಈಗ ಹಾಗಲ್ಲ. ಆದರೂ ಕಿರುತೆರೆಯಲ್ಲಿ ಪರಸ್ಪರ ಸಹನಟರನ್ನು ಅರಿಯುವ ಅವಕಾಶಗಳು ಹೆಚ್ಚು.
ಜೊತೆಗೆ ಒಂದು ಧಾರಾವಾಹಿ ಸುಮಾರು ವರ್ಷಗಳ ಕಾಲ ನಡೆಯುವುದರಿಂದ ಆರ್ಥಿಕವಾಗಿ ಬಹಳಷ್ಟು ಸಪೋರ್ಟ್ ಸಿಗುತ್ತದೆ. ಒಂದೇ ತಾರಾಗಣದ ಜೊತೆ ಕೆಲಸ ಮಾಡುವುದರಿಂದ ನಮಗೆ ಪರಸ್ಪರ ಒಳ್ಳೆಯ ಸಂಬಂಧ ಹಾಗೂ ಸ್ನೇಹ ಏರ್ಪಡಾಗುತ್ತದೆ ಇದು ಸೆಟ್‌ನಲ್ಲಿ ಒಳ್ಳೆಯ ವಾತಾವರಣವನ್ನು ಸೃಷ್ಟಿಸಿಕೊಡುತ್ತದೆ. ಅಲ್ಲದೆ ಕಿರುತೆರೆಯಲ್ಲಿ ನಟಿಸಿ ನಮ್ಮ ಪಾತ್ರ ಜನರಿಗೆ ಇಷ್ಟವಾದರೆ ಖ್ಯಾತಿಯೂ ಹೆಚ್ಚು ಜೊತೆಗೆ ಹೊಸ ಅವಕಾಶಗಳಿಗೂ ಹೆಚ್ಚಿನ ಸ್ಕೋಪ್ ಇರುತ್ತದೆ. ಹಾಗಾಗಿ ನನಗೆ ಕಿರುತೆರೆ ನಟನೆಗೆ ಬಹಳ ಇಷ್ಟ ಎಂದಿದ್ದಾರೆ.
ಕಿರುತೆರೆಯಲ್ಲಿ ಪ್ರತಿದಿನ ಒಂದಲ್ಲ ಒಂದು ರೀತಿಯ ಕೆಲಸಗಳು ಶೂಟ್‌ಗಳು ಇರುತ್ತದೆ. ಇದು ನಮ್ಮನ್ನು ಬಹಳ ಬ್ಯುಸಿಯಾಗಿ ಇಡುತ್ತದೆ. ಅದೇ ಸಿನಿಮಾ ಎಂದರೆ ಅವಕಾಶ ಬಂದಾಗ ಮಾಡಬೇಕು ಯಾವುದೇ ರೀತಿಯ ಗ್ಯಾರಂಟಿ ಇರುವುದಿಲ್ಲ. ಹಾಗಾಗಿ ಎಲ್ಲ ರೀತಿಯಲ್ಲೂ ಕಿರುತೆರೆ ನನ್ನ ವೈಯಕ್ತಿಕ ಜೀವನಕ್ಕೆ ಹಾಗೂ ನನ್ನ ಅಭಿರುಚಿಗೆ ತಕ್ಕದಾದಂತಹ ಫೀಲ್ಡ್. ಒಳ್ಳೆಯ ಸಿನಿಮಾಗಳಲ್ಲಿ ಅವಕಾಶ ಬಂದರೆ ಖಂಡಿತವಾಗಿಯೂ ಪಾತ್ರ ನಿರ್ವಹಿಸುವೆ ಎಂದಿದ್ದಾರೆ ನಟಿ ಸ್ನೇಹಾ ಈಶ್ವರ್.


Click it and Unblock the Notifications











