ಬಿಗ್ ಬಾಸ್ ಮನೆಯಲ್ಲಿ ಇಲಿ,ಜಿರಳೆ -ಚರ್ಮರೋಗದಿಂದ ಮಾಜಿ ಸ್ಫರ್ಧಿ ನರಳಾಟ ;ಪರಿಹಾರ ಕೋರಿ ನೊಟೀಸ್ ಕಳಿಸಿದ ಚೆಲುವೆ
''ಬಿಗ್ ಬ್ರದರ್'' ಎಂಬ ವಿದೇಶಿ ಮೂಲದ ಶೋದ ಯಥಾವತ್ತು ನಕಲು ''ಬಿಗ್ ಬಾಸ್''. ಒಂದರ್ಧ ಡಜನ್ ವ್ಯಕ್ತಿಗಳನ್ನು ಮನೆಯಲ್ಲಿ ಗುಡ್ಡೆ ಹಾಕಿ ವಾರಪೂರ್ತಿ ಅವರ ನಡುವೆ ದ್ವೇಷ- ಅಸೂಯೆಯ ಕಿಚ್ಚು ಹತ್ತಿಸುವ ಈ ಕಾರ್ಯಕ್ರಮ 2006ರಲ್ಲಿ ಭಾರತದಲ್ಲಿ ಮೊದಲ ಬಾರಿ ಪ್ರಸಾರವಾಗಿತ್ತು. ''ಸೋನಿ'' ಟಿವಿಯಲ್ಲಿ ಪ್ರಸಾರವಾದ ಮೊದಲ ''ಬಿಗ್ ಬಾಸ್'' ಸೀಸನ್ ಸುಮಾರು 86 ದಿನಗಳ ಕಾಲ ನಡೆದಿತ್ತು. ಮೊದಲ ಪ್ರಯತ್ನದಲ್ಲಿಯೇ ಅಪಾರವಾದ ಯಶಸ್ಸನ್ನು ಕೂಡ ಈ ಕಾರ್ಯಕ್ರಮ ಪಡೆಯಿತು.
ಅಲ್ಲಿಂದ ಇಲ್ಲಿಯವರೆಗೆ ಈ ''ಬಿಗ್ ಬಾಸ್'' ಲಂಗು ಲಗಾಮು ಇಲ್ಲದೇ ಸಾಗುತ್ತಲೇ ಇದೆ. ಕೇವಲ ಹಿಂದಿಯಲ್ಲಿ ಮಾತ್ರವಲ್ಲ.. ಕನ್ನಡದಲ್ಲಿ ಮಾತ್ರವಲ್ಲ.. ಬದಲಿಗೆ ತೆಲುಗು, ತಮಿಳು, ಮಲಯಾಳಂ ಮತ್ತು ಮರಾಠಿಯಲ್ಲಿ ಪ್ರತಿ ವರ್ಷ ಕಾರ್ಯಕ್ರಮ ಪ್ರಸಾರವಾಗುತ್ತೆ. ಹಿಂದಿಯಲ್ಲಿ ಈ ಕಾರ್ಯಕ್ರಮದ 19 ಸೀಸನ್‌ಗಳು ಪೂರ್ಣಗೊಂಡರೆ, ಕನ್ನಡದಲ್ಲಿ 12 ಸೀಸನ್ ಯಶಸ್ವಿಯಾಗಿ ನಡೆದಿವೆ. ತೆಲುಗು ಮತ್ತು ತಮಿಳಿನಲ್ಲಿ 9 ಸೀಸನ್ ಪೂರ್ಣಗೊಂಡಿದ್ದರೆ ಮಲಯಾಳಂನಲ್ಲಿ 8 ಸೀಸನ್‌ಗಳು ಮುಕ್ತಾಯಗೊಂಡಿವೆ. ಮರಾಠಿಯಲ್ಲಿ ಇಲ್ಲಿಯವರೆಗೆ 5 ಸೀಸನ್‌ಗಳಾಗಿವೆ.

ಇಂಥಾ ''ಬಿಗ್ ಬಾಸ್'' ಕಾರ್ಯಕ್ರಮ ಈ ವರ್ಷದ ಆರಂಭದಲ್ಲಿ ಎಲ್ಲಾ ಭಾಷೆಯಲ್ಲಿ ಮುಕ್ತಾಯಗೊಂಡಿತ್ತು. ಆದರೆ.. ಮರಾಠಿಯಲ್ಲಿ 6ನೇ ಸೀಸನ್‌ಗೆ ಹೊಸ ವರ್ಷದ ಆರಂಭದಲ್ಲಿ ರಿತೇಶ್ ದೇಶಮುಖ್ ಅವರ ನೇತೃತ್ವದಲ್ಲಿ ಚಾಲನೆ ಸಿಕ್ಕಿತ್ತು. ಮರಾಠಿಯಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮ ಇನ್ನೂ ನಡೆಯುತ್ತಿದೆ. ಇನ್ನೇನೂ ನಾಳೆ (ಏಪ್ರಿಲ್ 19 ) ಫಿನಾಲೆ ಕೂಡ ನಡೆಯಲಿದೆ. ಇಂತಹ ಸಮಯದಲ್ಲಿ ಪರಿಹಾರ ಕೋರಿ ಸ್ಫರ್ಧಿಯೊಬ್ಬರು ಮರಾಠಿ ''ಬಿಗ್ ಬಾಸ್''ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಆ ಸ್ಫರ್ಧಿಯ ಹೆಸರೇ ಸೋನಾಲಿ ರಾವುತ್.
ಹೌದು, ಅಸಲಿಗೆ ''ಬಿಗ್ ಬಾಸ್'' ಅಂದರೆ ಮೊದಲು ನೆನಪಾಗುವುದು ಮನೆ. ಭವ್ಯವಾದ ಈ ಮನೆಯನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಕೂಡ ಸಾಲದು. ಅಷ್ಟರ ಮಟ್ಟಿಗೆ ಈ ಮನೆಯ ವಾತಾವರಣ ಸುಂದರವಾಗಿರುತ್ತೆ.
ಆದರೆ ಈ ಬಾರಿಯ ಮರಾಠಿ ''ಬಿಗ್ ಬಾಸ್'' ಮನೆ ಇದಕ್ಕೆ ಅಪವಾದ ಎಂಬಂತೆ ಇತ್ತು. ಅಸ್ತವಸ್ತ್ಯವಾಗಿತ್ತು. ನೈರ್ಮಲ್ಯಕ್ಕೆ ಆದ್ಯತೆಯನ್ನು ನೀಡಿಲ್ಲ ಎಂದು ಕೆಲ ದಿನಗಳ ಹಿಂದೆಯಷ್ಟೇ ಎರಡೇ ವಾರಕ್ಕೆ ಮನೆಯಿಂದ ಹೊರ ಬಂದ ಸ್ಫರ್ಧಿ ಸೋನಾಲಿ ರಾವುತ್ ಹೇಳಿದ್ದರು.
ಮನೆಯಲ್ಲಿನ ಎಲ್ಲಾ ಸ್ಫರ್ಧಿಗಳದ್ದು ಬೇರೆ ಬೇರೆ ಹಿನ್ನೆಲೆ, ಎಲ್ಲರೂ ಜೊತೆಯಲ್ಲಿ ಒಂದೇ ಸೂರಿನಡಿ ವಾಸ ಮಾಡಿದಾಗ ನೈರ್ಮಲ್ಯಕ್ಕೆ ಎಲ್ಲೋ ಒಂದು ಕಡೆ ಸಿಗಬೇಕಾದ ಆದ್ಯತೆ ಸಿಗುವುದಿಲ್ಲ, ಇದರಿಂದ ನನಗೆ ಸೋಂಕು ತಗುಲಿತು ಎಂದು ಹೇಳಿದ್ದರು. ನನ್ನ ಆಟದ ಮೇಲೆ ಅದು ಪರಿಣಾಮ ಬೀರಿತು, ಇದರಿಂದ ನಾನು ಹೊರ ಬರಬೇಕಾಯ್ತು ಎಂದು ''ಇಟ್ಸ್ ಮಜ್ಜಾ''ಗೆ ನೀಡಿದ್ದ ಸಂದರ್ಶನದಲ್ಲಿ ಕೆಲವೇ ದಿನಗಳ ಹಿಂದೆ ಸೋನಾಲಿ ಬಿಕ್ಕಿದ್ದರು.

ಈಗ ಸೋನಾಲಿ ರಾವುತ್ ''ಬಿಗ್ ಬಾಸ್'' ಮನೆಯನ್ನು ಪ್ರವೇಶಿಸಿದ ತಪ್ಪಿಗೆ ತಮಗೆ 'ಸ್ಕ್ಯಾಬೀಸ್' ಎಂಬ ಚರ್ಮದ ಕಾಯಿಲೆ ಬಂದಿದೆ ಎಂದು ಹೇಳಿದ್ಧಾರೆ. ತಮ್ಮ ದೈಹಿಕ ಸ್ಥಿತಿಯನ್ನು ತೋರಿಸಲು ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. ಹಂಚಿಕೊಂಡ ಈ ವಿಡಿಯೋದಲ್ಲಿ ಸೋನಾಲಿ ಅವರ ದೇಹದ ಹಲವು ಕಡೆ ಗುಳ್ಳೆಗಳಾಗಿದ್ದನ್ನು ಕಾಣಬಹುದು.
ತಮ್ಮ ಈ ವಿಡಿಯೋದಲ್ಲಿ ''ಬಿಗ್ ಬಾಸ್'' ಮನೆಯ ವಾತಾವರಣ ಹೇಗಿತ್ತು ಎನ್ನುವುದರ ವಿವರಣೆಯನ್ನು ಕೂಡ ನೀಡಿರುವ ಸೋನಾಲಿ, ಮನೆಯಲ್ಲಿ ದೊಡ್ಡ ದೊಡ್ಡ ಇಲಿಗಳು ಓಡಾಡುತ್ತಿದ್ದವು, ಆಹಾರದಲ್ಲಿ ಜಿರಳೆಗಳು ಇರುತ್ತಿದ್ದವು ಎಂದು ಹೇಳಿದ್ಧಾರೆ. ಇದಲ್ಲದೇ 17 ಜನ ಸ್ಪರ್ಧಿಗಳಿಗೆ ಒಂದೇ ವಾಶ್‌ರೂಮ್ ಬಳಸಲು ಒತ್ತಾಯ ಮಾಡಲಾಗಿತ್ತು ಎಂದು ಹೇಳಿರುವ ಸೋನಾಲಿ ಅಲ್ಲಿಯೇ ಸ್ಫರ್ಧಿಗಳು ಸಿಗರೇಟ್ ಸೇದುತ್ತಿದ್ದರು, ಸಂಪನ್ಮೂಲಗಳ ಕೊರತೆಯಿಂದ ಟವಲ್ ಮತ್ತು ನ್ಯಾಪ್ಕಿನ್‌ಗಳನ್ನು ಕೂಡ ಹಂಚಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. ರೇಜರ್‌ಗಳಂತಹ ವೈಯಕ್ತಿಕ ವಸ್ತುಗಳನ್ನು ಕೂಡ ಪರಸ್ಪರ ಹಂಚಿಕೊಳ್ಳುವಂತೆ ಒತ್ತಾಯಿಸಲಾಗುತ್ತಿತ್ತು ಎಂದಿದ್ದಾರೆ.
ಮುಂದುವರೆದು ನಿರ್ಮಾಣ ತಂಡವು ನನ್ನ ಒಪ್ಪಂದವನ್ನು ಸಹ-ಸ್ಪರ್ಧಿಗಳೊಂದಿಗೆ ಹಂಚಿಕೊಂಡಿದ್ದು, ಇದು ಗೌಪ್ಯತೆ ಉಲ್ಲಂಘನೆಯಾಗಿದೆ ಎಂದು ಹೇಳಿರುವ ಸೋನಾಲಿ ಸ್ಪಷ್ಟವಾಗಿ ನಂಬಿಕೆಯ ಉಲ್ಲಂಘನೆಯಾಗಿದೆ. ನಾನು ವೇದಿಕೆಯನ್ನು ನಂಬಿದೆ, ಆದರೆ ನನ್ನ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಇದರಿಂದ ಧಕ್ಕೆಯಾಗಿದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದ ನಿರೂಪಕ ರಿತೇಶ್ ದೇಶಮುಖ್ ವಿರುದ್ದ ಕೂಡ ಕಿಡಿ ಕಾರಿರುವ ಸೋನಾಲಿ ತಮಗಾದ ಈ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ನಿರ್ಮಾಣ ಸಂಸ್ಥೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಲೀಗಲ್ ನೋಟಿಸ್ ಕೂಡ ಕಳುಹಿಸಿದ್ದಾರೆ.
ಅಂದ್ಹಾಗೇ ಸೋನಾಲಿ ರಾವುತ್ ಈ ಹಿಂದೆ ಹಿಂದಿಯಲ್ಲಿ ಸಲ್ಮಾನ್ ಖಾನ್ ಸಾರಥ್ಯದ ''ಬಿಗ್ ಬಾಸ್'' ಮನೆಯನ್ನು ಕೂಡ ಪ್ರವೇಶ ಮಾಡಿದ್ದರು. 2014ರಲ್ಲಿ ಹಿಂದಿ ''ಬಿಗ್ ಬಾಸ್'' ಮನೆಗೆ ಹೋಗಿದ್ದ ಸೋನಾಲಿ ಟಾಪ್ 7ರಲ್ಲಿ ಸ್ಥಾನವನ್ನು ಪಡೆದಿದ್ದರು. ಹೀಮೇಶ್ ರೇಶಮ್ಮಿಯಾ ಅವರ ''ದಿ ಎಕ್ಸ್‌ಪೋಸ್'' ಹಾಗೂ ರಿತೇಶ್ ದೇಶಮುಖ್ ಅಭಿನಯದ ''ಗ್ರೇಟ್ ಗ್ರ್ಯಾಂಡ್ ಮಸ್ತಿ'' ಸೋನಾಲಿ ರಾವುತ್ ಅವರ ಕೆಲ ಪ್ರಮುಖವಾದ ಚಿತ್ರಗಳು. ಸದ್ಯ ಸೋನಾಲಿ ಅವರ ಈ ಮಾತು ಚರ್ಚೆಗೆ ಕಾರಣವಾಗಿದ್ದು ಮರಾಠಿ ''ಬಿಗ್ ಬಾಸ್'' ಪ್ರತಿಕ್ರಿಯೆ ಹೇಗಿರುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
`


Click it and Unblock the Notifications