ಅವಮಾನ-ಸನ್ಮಾನ ; ತಾಯಿಯ ಪೊರಕೆ ಏಟು -ಬಿಗ್ ಬಾಸ್ ಮನೆಗೆ ಹೋಗಿದ್ದೇಕೆ ಸೋನು ಶ್ರೀನಿವಾಸ್ ಗೌಡ ?
ಒಂದು ಕಾಲದಲ್ಲಿ ಸಂಚಲನ ಸೃಷ್ಟಿಸಿ, ಕಿರುತೆರೆಯಲ್ಲಿ ಹೊಸದೊಂದು ಅಲೆಯನ್ನು ಎಬ್ಬಿಸಿದ ಕಾರ್ಯಕ್ರಮ ''ಬಿಗ್ ಬಾಸ್''. ಕೇವಲ ಹಿಂದಿಯಲ್ಲಿ ಮಾತ್ರ ಅಲ್ಲ ಆರು ಭಾಷೆಗಳಲ್ಲಿ ಈ ಕಾರ್ಯಕ್ರಮದ್ದೇ ಹವಾ ಇತ್ತು. ಆದರೆ ಕಾಲ ಕ್ರಮೇಣ ಈ ಕಾರ್ಯಕ್ರಮ ಹಳಿ ತಪ್ಪಿತು. ''ಬಿಗ್ ಬಾಸ್'' ವಿವಾದಾತ್ಮಕ ವ್ಯಕ್ತಿಗಳಿಗಷ್ಟೇ ಲಾಯಕ್ಕು ಎನ್ನುವ ಅಭಿಪ್ರಾಯ ವ್ಯಕ್ತವಾಗಲು ಶುರುವಾಯ್ತು. ಹಾಗಂಥ .. ಈ ಕಾರ್ಯಕ್ರಮದ ಜನಪ್ರಿಯತೆ ಕಡಿಮೆ ಆಗಲಿಲ್ಲ.
ಯಾಕೆಂದರೆ.. ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ''ಬಿಗ್ ಬಾಸ್'' ಕಾರ್ಯಕ್ರಮವನ್ನ ಜನ ಈಗಲೂ ಕೂಡ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ. ಇಂಥಾ ''ಬಿಗ್ ಬಾಸ್'' ಕಾರ್ಯಕ್ರಮ ಹಲವರ ಕನಸು. ಬಣ್ಣದ ಸೆಳೆತಕ್ಕೆ ಸಿಲುಕಿದವರಲ್ಲಿಯೇ ಹಲವಾರು ಜನ ''ಬಿಗ್ ಬಾಸ್''ನಲ್ಲಿ ಭಾಗವಹಿಸಬೇಕೆಂದು ಕನಸು ಕಾಣುತ್ತಾರೆ.

ಇನ್ನೂ ''ಬಿಗ್ ಬಾಸ್'' ಮನೆಗೆ ಹೋಗಲೇಂದೇ.. ''ಬಿಗ್ ಬಾಸ್''ನ ಗಮನ ಸೆಳೆಯಲೆಂದೇ.. ನಾನಾ ಸರ್ಕಸ್‌ಗಳನ್ನು ಮಾಡುವವರು ಕೂಡ ಇದ್ದಾರೆ. ''ಬಿಗ್ ಬಾಸ್'' ಮನೆಗೆ ಹೋಗಿ ಬಂದರೆ ತಮ್ಮ ಜನ್ಮ ಸಾರ್ಥಕ ಎಂದುಕೊಂಡವರು ಕೂಡ ಇದ್ದಾರೆ. ಆದರೆ, ಇನ್ನೂ ಕೆಲ ಒಮ್ಮೆ ಕೆಲವರಿಗೆ ಅನಿರೀಕ್ಷಿತವಾಗಿ ಭಾಗ್ಯದ ಬಾಗಿಲು ತೆರೆಯುತ್ತೆ. ''ಬಿಗ್ ಬಾಸ್'' ಮನೆ ಪ್ರವೇಶಿಸುವ ಸುವರ್ಣ ಅವಕಾಶವೂ ಸಿಗುತ್ತೆ.
ಹೀಗೆ ಸಿಕ್ಕ ಈ ಅವಕಾಶವನ್ನು ಇವರು ಎಷ್ಟರ ಮಟ್ಟಿಗೆ ಸದುಪಯೋಗ ಮಾಡಿಕೊಂಡರು ಎನ್ನುವುದು ಬೇರೆ ವಿಚಾರವಾದರೂ ಸದ್ಯ ''ಬಿಗ್ ಬಾಸ್'' ಮನೆಗೆ ಹೋಗಿದ್ದೇಕೆ..? ಎಂಬ ಹಲವರ ಪ್ರಶ್ನೆಗೆ ಸೋನು ಗೌಡ ಉತ್ತರ ನೀಡಿದ್ದಾರೆ.
ಹೌದು, ಸಾಮಾಜಿಕ ಜಾಲತಾಣದ ಮೂಲಕವೇ ಸಮಾಜಕ್ಕೆ ಪರಿಚಯವಾದವರು ಸೋನು ಗೌಡ. ಜನಪ್ರಿಯ ಸೂತ್ರಕ್ಕೆ ಕಟ್ಟು ಬಿದ್ದು, ಜನರ ಹೃದಯವನ್ನೂ ಗೆದ್ದು, ''ಬಿಗ್ ಬಾಸ್'' ಮನೆಗೆ ಕೂಡ ಹೋಗಿ ಬಂದ ಸೋನು ಗೌಡ ಕಳೆದ ಕೆಲ ದಿನಗಳಿಂದ ತಮ್ಮ ಬದುಕಿನ ಖಾಸಗಿ ಪುಟವನ್ನು ತಿರುವಿ ಹಾಕುತ್ತಿದ್ಧಾರೆ. ಆ ಪೈಕಿ ವೈರಲ್ ವಿಡಿಯೋದ ಅಧ್ಯಾಯ ಸದ್ಯ ಮುಕ್ತಾಯವಾಗಿದ್ದು ''ಬಿಗ್ ಬಾಸ್'' ಅಧ್ಯಾಯ ಈಗ ಶುರುವಾಗಿದೆ.
ತಮ್ಮ ''ಬಿಗ್ ಬಾಸ್'' ಪ್ರಯಾಣದ ಕುರಿತು ಈಗ ಮಾತನಾಡಲು ಶುರು ಮಾಡಿರುವ ಸೋನು ಶ್ರೀನಿವಾಸ್ ಗೌಡ, ''ಬಿಗ್ ಬಾಸ್'' ಅವಕಾಶ ಬಂದಾಗ ಆರಂಭದಲ್ಲಿ ನಿರಾಕರಿಸಿದ್ದೇ ಎಂದು ಹೇಳಿದ್ಧಾರೆ. ಆ ವಿಡಿಯೋ ಲೀಕ್ ಆದ ಮೇಲೆ 'ನನ್ನ ಅಮ್ಮ ಪೊರಕೆ ತಗೊಂಡು ತುಂಬಾ ಹೊಡೆದರು ಎಂದು ಮಾತು ಶುರು ಮಾಡಿರುವ ಸೋನು ಗೌಡ, ನಾನು ಮಾಡಿದ ತಪ್ಪಿಗೆ ಇದೇ ಪಶ್ಚಾತ್ತಾಪ ಎಂದು ಆಗ ನನಗೆ ಸಮಾಧಾನ ಆಯ್ತು ಎಂದು ಹೇಳಿದ್ಧಾರೆ.

ಊರಲ್ಲಿ ಹೇಗೆ ಮುಖ ಎತ್ತಿಕೊಂಡು ತಿರುಗಬೇಕು ಅಂತ ನನ್ನ ಅಮ್ಮ ನನ್ನನ್ನ ಬೈಯ್ಯುತ್ತಲೇ ಇದ್ದರು, ಸೋಷಿಯಲ್ ಮೀಡಿಯಾಗೆ ವಿಡಿಯೋಗಳನ್ನ ಮಾಡಬೇಡ ಅಂತ ನನ್ನಮ್ಮ ತುಂಬಾ ಬೈದರು ಎಂದು ಹೇಳಿರುವ ಸೋನು ಗೌಡ, ನನ್ನ ಅಕ್ಕ ಸುಬ್ಬು ತುಂಬಾ ಸಪೋರ್ಟ್ ಮಾಡಿದಳು, ಮನೆಗೆ ಬಂದ್ಳು, ನನ್ನ ಪರಿಸ್ಥಿತಿಯನ್ನು ನೋಡಿದ್ಳು, ಅವಳ ಮನೆಗೆ ಕರೆದುಕೊಂಡು ಹೋದಳು, ಆದರೂ ಕೂಡ ನನಗೆ ಏನೋ ಸಮಾಧಾನ ಆಗ್ತಾನೇ ಇರಲಿಲ್ಲ ಎಂದು ಹೇಳಿದ್ದಾರೆ.
ಮನೆಯಿಂದ ನಾನು ಹೊರಗಡೆ ಬರ್‍ತಾ ಇರಲಿಲ್ಲ, ಸೋಶಿಯಲ್ ಮೀಡಿಯಾದಿಂದ ಕೂಡ ದೂರ ಇದ್ದೆ, ಹೀಗೆ ಎರಡು ತಿಂಗಳು ಕಳೆದು ಹೋಯ್ತು ಎಂದು ಹೇಳಿರುವ ಸೋನು ಗೌಡ ಈ ಸಮಯದಲ್ಲಿಯೇ ನನಗೆ ''ಬಿಗ್ ಬಾಸ್'' ಆಫರ್ ಬಂತು ಎಂದಿದ್ಧಾರೆ.
ಅವಕಾಶ ಬಂದಾಗ ಮೊದಲು ನಾನು ಅದನ್ನ ರಿಜೆಕ್ಟ್ ಮಾಡಿದ್ದೇ ಎಂದು ಹೇಳಿರುವ ಸೋನು ಗೌಡ ಅಮ್ಮ, ತಮ್ಮ ಮತ್ತು ಅಕ್ಕ ಒಪ್ಕೋ ಅಂತ ಹೇಳಿದರು, ನೆಗೆಟಿವ್ ಇರೋದೆಲ್ಲಾ ಪಾಸಿಟಿವ್ ಮಾಡ್ಕೋ, ನೀನೇನು ಅಂತ ಸಾಬೀತು ಮಾಡು ಅಂತ ಹೇಳಿದರು, ಅವರೆಲ್ಲಾ ಬೆನ್ನೆಲುಬಾಗಿ ನಿಂತಿದ್ದಕ್ಕೆ ಒಪ್ಪಿಕೊಂಡೆ ಎಂದು ಹೇಳಿದ್ಧಾರೆ.
ಇನ್ನೇನು ''ಬಿಗ್ ಬಾಸ್''ಗೆ ಹೋಗಬೇಕು ಅಷ್ಟರಲ್ಲಿ ರಾಜೇಶ್ ಮತ್ತೆ ಕಾಂಟ್ಯಾಕ್ಟ್‌ಗೆ ಸಿಕ್ಕರು, ನಮ್ಮ ಮನೆಗೆ ಬಂದಿದ್ದರು, ಎಂದು ಹೇಳಿರುವ ಸೋನು ಗೌಡ 'ನಮ್ಮಿಬ್ಬರ ಮಧ್ಯೆ ಬಿರುಕು ಬರಲಿಲ್ಲ ಅಂದಿದ್ದರೆ ಇಷ್ಟೆಲ್ಲಾ ಆಗ್ತಿರ್ಲಿಲ್ಲ ಎಂದು ಹೇಳಿದ್ಧಾರೆ. ನಾನು ಅವತ್ತು ಬಿಕ್ಕಿ ಬಿಕ್ಕಿ ಅತ್ತುಬಿಟ್ಟೆ ಎಂದು ಹೇಳಿ ಭಾವುಕರಾಗಿದ್ದಾರೆ.
ನೆಗೆಟಿವ್ ಇದ್ದದ್ದನ್ನೆಲ್ಲಾ ಪಾಸಿಟಿವ್ ಮಾಡಿಕೊಳ್ಳೋಣ ಅಂತ ನನ್ನ ಮನೆಯವರಿಗೋಸ್ಕರ ''ಬಿಗ್ ಬಾಸ್''ಗೆ ಹೋದೆ ಎಂದು ಹೇಳಿರುವ ಸೋನು ಗೌಡ ಅಲ್ಲಿ ಸುದೀಪ್ ಸರ್‌ನ ಮೊದಲ ಬಾರಿಗೆ ನೋಡಿದೆ. ಸಿಕ್ಕಾಪಟ್ಟೆ ಖುಷಿ ಆಯ್ತು. ಅವರನ್ನ ಹಗ್ ಮಾಡಿದ್ದು ತುಂಬಾ ಖುಷಿ ಆಯ್ತು ಎಂದು ಹೇಳಿದ್ದಾರೆ. ಮನೆಯ ಒಳಗೆ ಹೋದ ಮೇಲೆ ರಾಕೇಶ್ ಅಡಿಗ ಅಂತಹ ಒಳ್ಳೆಯ ಸ್ನೇಹಿತ ಸಿಕ್ಕರು. ರಾಜೇಶ್ ಹಾಗೂ ರಾಕೇಶ್ ಒಂದೇ ತರಹ. ರಾಕೇಶ್ ಇದ್ದದ್ದಿಕ್ಕೆ ನಾನು ಅಲ್ಲಿ ಆರಾಮಾಗಿ ಇದ್ದೆ ಎಂದು ಹೇಳಿರುವ ಸೋನು ಗೌಡ ಟಿವಿ ಸೀಸನ್‌ಗೆ ಹೋಗ್ತೀನಿ ಅಂತ ಅಂದುಕೊಂಡಿದ್ದೆ.ಆದರೆ ದುರಾದೃಷ್ಟವಶಾತ್ ನಾನು ಹೋಗಲಿಲ್ಲ ಎಂದು ತಮ್ಮ ಮನದ ಬೇಸರವನ್ನು ಹೊರ ಹಾಕಿದ್ದಾರೆ.


Click it and Unblock the Notifications