ನನಗೆ ತೆಲುಗಿನಲ್ಲಿ ಸಿಕ್ಕ ಗೌರವ ಕನ್ನಡದಲ್ಲಿ ಸಿಗಲಿಲ್ಲ ಎಂದು 'ಒಂದು ಪಾಯಸ ಕಥೆ' ಹೇಳಿದ ಕನ್ನಡ ಕಿರುತೆರೆ ನಟಿ..!
ಪ್ರತಿಭಾ ಪಲಾಯನ ಅನ್ನುವುದು ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದ್ಲೂ ಪ್ರತಿಭೆ ಇದ್ದೋರು ಒಂದ್ಕಡೆಯಿಂದ ಮತ್ತೊಂದ್ಕಡೆ ಹೋಗೋದು ನಡೀತಾನೆ ಇದೆ. ಅದರಲ್ಲಿಯೂ ಕನ್ನಡದ ಕಿರುತೆರೆಯಿಂದ ಲಾಟ್ ಗಟ್ಟಲೆ ತಾರೆಯರು ಅಕ್ಕ-ಪಕ್ಕದ ರಾಜ್ಯಕ್ಕೆ ತೆರಳಿದ್ದಾರೆ. ಕೆಲವರು ಖಾಯಂ ಆಗಿ ಅಲ್ಲಿಯೇ ಠಿಕಾಣಿಯನ್ನೂ ಹೂಡಿದ್ದಾರೆ. ಆ ಪೈಕಿ ಸೌಮ್ಯ ರಾವ್ ಕೂಡ ಒಬ್ಬರು.
ಹೌದು, ಸೌಮ್ಯ ರಾವ್.. ಒಂದ್ಕಾಲದಲ್ಲಿ ಸಮಯ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಲೇ, ಕನ್ನಡದ ಕಿರುತೆರೆಯತ್ತ ಮುಖ ಮಾಡಿದವರು. ಆರಂಭದಲ್ಲಿ ಚಿಕ್ಕ-ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಸೌಮ್ಯಾ ಸದ್ಯಕ್ಕೆ ಕನ್ನಡದ ಕಿರುತೆರೆಯಿಂದ ಕಾಣೆಯಾಗಿದ್ದಾರೆ. ಪಕ್ಕದ ಆಂಧ್ರ ಮತ್ತು ಚೆನ್ನೈಗೆ ವಲಸೆ ಹೋಗಿ ಅಲ್ಲಿ ಬದುಕು ಕಟ್ಟಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ತಮ್ಮ ಈ ಪ್ರಯತ್ನದಲ್ಲಿ ಬಹುತೇಕ ಯಶಸ್ವಿಯೂ ಆಗಿರುವ ಸೌಮ್ಯ, ಇಲ್ಲಿಯವರೆಗೆ ತಮಿಳಿನಲ್ಲಿ ರೋಜಾ ಸೇರಿ ಮೂರ್ನಾಲ್ಕು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಶ್ರೀಮಂತಡು ಎಂಬ ಧಾರಾವಾಹಿಯಲ್ಲಿ ಅಭಿನಯಿಸುವುದಲ್ಲದೇ ಅಲ್ಲಿನ ಜಬರದಸ್ತ್ ಎಂಬ ಖ್ಯಾತ ಕಾರ್ಯಕ್ರಮದ ನಿರೂಪಣೆಯನ್ನು ಒಂದು ವರ್ಷಗಳ ಕಾಲ ಮಾಡಿ ಸೈ ಅನಿಸಿಕೊಂಡಿದ್ದಾರೆ.

ಇಂಥಾ ಸೌಮ್ಯ ರಾವ್ ಹಣ-ಹೆಸರು ಬಂದ ತಕ್ಷಣ ಈಗ ಕನ್ನಡ ಕಿರುತೆರೆಯಲ್ಲಿ ಒಬ್ಬರಿಗೊಂದು ನ್ಯಾಯ, ಮತ್ತೊಬ್ಬರಿಗೆ ಮತ್ತೊಂದು ನ್ಯಾಯ ಎಂದಿದ್ಧಾರೆ. ಈ ನೆಲದಲ್ಲಿ ಜನ್ಮವೆತ್ತಿ.. ನಮ್ಮ ಭಾಷೆಯನ್ನು ಮರೆತು.. ಮತ್ತೆಲ್ಲೋ ಕುಂತು ಕನ್ನಡದ ಕಿರುತೆರೆಯಲ್ಲಿ ತುಂಬಾನೇ ತಾರತಮ್ಯ ಇದೆ ಎಂದು ಮಾತನಾಡಿದ್ದಾರೆ. ನನಗೆ ತೆಲುಗಿನಲ್ಲಿ ತುಂಬ ಗೌರವ ಸಿಕ್ಕಿದೆ, ಇಲ್ಲಿ ಎಲ್ಲ ವರ್ಗದ ಕಲಾವಿದರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಹೇಳುತ್ತಾನೇ ಕನ್ನಡ ಕಿರುತೆರೆಯ ಪಾಯಸ ಕಥೆಯನ್ನೂ ಹಂಚಿಕೊಂಡಿದ್ಧಾರೆ.
ತೆಲುಗಿನಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡುತ್ತಾ 07 ವರ್ಷದ ಹಿಂದೆ ನಾನೊಂದು ಕನ್ನಡ ಧಾರಾವಾಹಿಯನ್ನು ಮಾಡುತ್ತಿದ್ದೆ ಎಂದಿರುವ ಸೌಮ್ಯಾ, ಆ ಧಾರಾವಾಹಿಯ ನಾಯಕಿಗೆ ಸಿಗುತ್ತಿದ್ದ ಮರ್ಯಾದೆಯೇ ಬೇರೆ ಇತ್ತು ಎಂದಿದ್ದಾರೆ. ಇದಕ್ಕೆ ಉದಾಹರಣೆಯೊಂದನ್ನು ನೀಡಿದ್ದಾರೆ. ಆ ಕಾಲದಲ್ಲಿ ನಾವು ಚಿತ್ರೀಕರಣ ಮಾಡುವಾಗ, ಒಂದು ದಿನ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ನಿರ್ಮಾಪಕರು ತಮ್ಮ ಮನೆಯಿಂದ ಪಾಯಸ ತಂದಿದ್ದರು. ಆದರೆ ಅದು ಯಾರಿಗೆ ತಂದಿದ್ದು ಎಂದು ಅರಿಯದೇ ನಾನು ತಪ್ಪಿ ಒಂದು ಚಮಚ ಪಾಯಸ ತಿಂದೆ ಎಂದಿರುವ ಸೌಮ್ಯ, ಆ ಪಾಯಸ ತಿಂದಿದ್ದನ್ನು ನೋಡಿದ ನಿರ್ಮಾಪಕರು ರಣ ರಂಪ ಮಾಡಿದರು. ನನಗೆ ದರಿದ್ರ ಎಂದೆಲ್ಲ ಬೈಯ್ದಿದ್ದರು ಎಂದಿದ್ದಾರೆ.

ಆದರೆ ಅದೇ ಆ ಧಾರಾವಾಹಿಯ ಹೀರೋಯಿನ್ ಸರಿಯಾಗಿ ಆಕ್ಟ್ ಮಾಡದೇ ಇದ್ದರೂ ನಗು ನಗುತ್ತಾ ಚಿನ್ನು-ಮುದ್ದು ನಟಿಸಮ್ಮಾ ಅಂತ ಹೇಳ್ತಿದ್ದರು ಎಂದು ಕೂಡ ಸೌಮ್ಯಾ ರಾವ್ ಹೇಳಿದ್ದಾರೆ. ಆದರೆ, ಎಲ್ಲಿಯೂ ಬಾಯ್ತಪ್ಪಿ ಆ ಧಾರಾವಾಹಿ ಯಾವುದು, ಆ ನಿರ್ಮಾಪಕ ಯಾರು, ಆ ಕಿರುತೆರೆಯ ನಾಯಕಿ ಯಾರು ಅನ್ನುವುದನ್ನು ಸೌಮ್ಯಾ ರಾವ್ ಹೇಳಿಲ್ಲ.
ಇನ್ನು ಮುಂದುವರೆದು ನಾನು ಕನ್ನಡದಲ್ಲಿ ತುಂಬಾ ಕಷ್ಟ ಪಟ್ಟೆ ಆದರೆ ನನಗೆ ಅಲ್ಲಿ ಅವಕಾಶವೂ ಸಿಗಲಿಲ್ಲ, ಗೌರವವೂ ಸಿಗಲಿಲ್ಲ. ಹೀಗಾಗಿಯೇ ಈ ಕಡೆ ಬಂದೆ ಎಂದಿರುವ ಸೌಮ್ಯಾ ರಾವ್,
ಹೈದರಾಬಾದ್‌ನಲ್ಲಿ 4-5 ದಿನ ಶೂಟಿಂಗ್ ಇರುತ್ತದೆ ಉಳಿದ ದಿನ ನಾನು ಬೆಂಗಳೂರಿನಲ್ಲಿಯೇ ಇರುತ್ತೇನೆ ಎಂದಿದ್ದಾರೆ. ತೆಲುಗು ಭಾಷೆ ಕಲಿಯುವ ಉದ್ದೇಶದಿಂದ ನಾನು ನನ್ನ ಮನೆಯಲ್ಲಿ ತೆಲುಗು ಮಾತನಾಡುವ ಕೆಲಸಗಾರರನ್ನು ಇಟ್ಕೊಂಡು ಅವರ ಜೊತೆ ಮಾತನಾಡುತ್ತಾ ತೆಲುಗು ಕಲಿಯುತ್ತಿದ್ದೇನೆ ಎಂದು ಕೂಡ ಹೇಳಿದ್ದಾರೆ.

ನನಗೆ ಕನ್ನಡದ ಬಿಗ್ ಬಾಸ್ ನಿಂದ ಕರೆ ಬಂದಿತ್ತು ಆದರೆ ನನಗೆ ಈಗ ಅಲ್ಲಿನ ಕಲಾವಿದರ ಸಂಪರ್ಕ ಇಲ್ಲ ಹೀಗಾಗಿ ನಾನು ಬಂದ ಅವಕಾಶವನ್ನು ಎಡಗಾಲಿನಲ್ಲಿ ಒದ್ದೆ ಎಂದಿರುವ ಸೌಮ್ಯಾ, ತೆಲುಗು ಬಿಗ್ ಬಾಸ್ ನಲ್ಲಿ ಅವಕಾಶ ಸಿಕ್ಕರೆ ಖಂಡಿತ ಹೋಗುತ್ತೇನೆ ಎಂದಿದ್ದಾರೆ. ಅಂದ್ಹಾಗೇ ಈ ಬಾರಿಯ ತೆಲುಗು ಬಿಗ್ ಬಾಸ್ ಸೀಸನ್ 08ರಲ್ಲಿ ಸೌಮ್ಯಾ ಭಾಗಿಯಾಗಲಿದ್ದಾರೆ ಎನ್ನುವ ಸುದ್ದಿ ಹೈದ್ರಾಬಾದ್ ನಲ್ಲಿ ಹಬ್ಬಿದೆ.
ಸದ್ಯಕ್ಕೆ ಸೌಮ್ಯಾ ಅವರ ಈ ಮಾತು-ಮಂಥನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಕನ್ನಡ ಕಿರುತೆರೆಯಲ್ಲಿ ತಮಗೆ ಆದ ಅವಮಾನವನ್ನು ಹೇಳಿರುವ ಸೌಮ್ಯಾ ಆ ನಿರ್ಮಾಪಕರ ಹೆಸರನ್ನು ಹೇಳಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.


Click it and Unblock the Notifications











