ಗೋಕರ್ಣ ಕಡೆ ಹೊರಟ ಸ್ಪಂದನಾ: ವಿಕ್ರಾಂತ್ ಮೇಲೆ ಮರಳಿ ಮನಸ್ಸಾಗುವುದಾದರೂ ಹೇಗೆ?
ತಾಳ್ಮೆ ಎಂಬುದು ಎಲ್ಲರಿಗೂ ತುಂಬಾ ಮುಖ್ಯ. ಅದರಲ್ಲೂ ಸಂಸಾರದಲ್ಲಿ ಗಂಡ-ಹೆಂಡತಿ ಇಬ್ಬರಿಗೂ ತಾಳ್ಮೆ ಎಂಬುದು ಇರಲೇಬೇಕಾಗುತ್ತದೆ. ಯಾರಾದರೂ ಒಬ್ಬರು ಕೋಪಗೊಂಡರು ಇನ್ನೊಬ್ಬರ ತಾಳ್ಮೆ ಅಲ್ಲಿ ಸಂಸಾರ ಉಳಿಯುವಿಕೆಗೆ ತುಂಬಾ ಮುಖ್ಯವಾಗುತ್ತದೆ. ಆದರೆ ತಾಳ್ಮೆಯ ಕಟ್ಟೆ ಒಡೆದಾಗ ಮತ್ತೆ ಸರಿ ಮಾಡಿಕೊಳ್ಳುವುದು ಬಹಳ ಕಷ್ಟಕರವಾಗಿಯೇ ಇರುತ್ತದೆ. ಇದೆಲ್ಲಾ ಹೇಳುವುದಕ್ಕೆ ಕಾರಣ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಮರಳಿ ಮನಸ್ಸಾಗಿದೆ' ಧಾರಾವಾಹಿಯಲ್ಲಿ ನಡೆಯುತ್ತಿರುವ ಸಾಂಸಾರಿಕ ವಿಚಾರ.
ಸದ್ಯದ ಸ್ಥಿತಿಯಲ್ಲಿ ಸ್ಪಂದನಾ ಮತ್ತು ವಿಕ್ರಾಂತ್ ದೂರ ದೂರ ಆಗಿದ್ದಾರೆ. ಅದಕ್ಕೊಂದು ಬಲವಾದ ಕಾರಣವೇ ಇದೆ. ಹೀಗಾಗಿ ಅವರು ದೂರವಾಗಿದ್ದಾರೆ. ಆದರೆ ವಿಕ್ರಾಂತ್ ಮತ್ತೆ ಸ್ಪಂದನಾಳನ್ನು ವಾಪಾಸ್ ಕರೆದುಕೊಂಡು ಹೋಗಲು ಬಂದಿದ್ದಾನೆ. ಸ್ಪಂದನಾಗೆ ಮರಳಿ ಮನಸ್ಸಾಗುವುದು ಅನುಮಾನವಿದೆ. ಗಂಡ ಹೆಂಡತಿ ಒಂದಾಗಲಿ ಎಂದು ಬಯಸುವವರು ಕೂಡ ಸ್ಪಂದನಾಳ ನಿರ್ಧಾರಕ್ಕೆ ತಲೆ ಬಾಗಿದ್ದಾರೆ. ಅದಕ್ಕೆ ದೃಢವಾದ ಕಾರಣವೂ ಇದೆ.

ಸ್ಪಂದನಾಳಿಗಾಗಿ ಗೋಕರ್ಣ ಪಯಣ
ಸ್ಪಂದನಾ ಮಾಡಿದ ತಪ್ಪು ಏನೂ ಇಲ್ಲ. ಆದರೆ ಸಾಹಿತ್ಯ ಬಗ್ಗೆ ನಿಜ ಗೊತ್ತಿಲ್ಲದವರು ಸ್ಪಂದನಾ ಮಾಡಿದ್ದು ತಪ್ಪು ಎನ್ನಬಹುದು. ಆದರೆ ಮನೆಯಲ್ಲಿಯೇ ಶತ್ರುಗಳನ್ನು ಇಟ್ಟುಕೊಂಡು ಸ್ಪಂದನಾ ಮಾಡಿರುವುದು ಎಲ್ಲಿಯೂ ತಪ್ಪು ಎನಿಸಲಿಲ್ಲ. ಆದರೆ ವಿಕ್ರಾಂತ್‌ಗೆ ಅದು ಸರಿ ಎಂದು ಎನಿಸಲೇ ಇಲ್ಲ. ನನ್ನ ಮಾತು ಮೀರಿದಳು ಎಂಬುದಷ್ಟೇ ಕಣ್ಣಿಗೆ ಬಿದ್ದಿತ್ತು. ಅದಕ್ಕೆ ಸರಿಯಾದ ಮಾರ್ಗವೂ ತಪ್ಪಾಗಿ ಕಂಡು, ಸಂಸಾರದ ನೌಕೆಯನ್ನೇ ಧಿಕ್ಕು ತಪ್ಪುವಂತೆ ಮಾಡಿಕೊಂಡಿದ್ದಾನೆ. ಈಗ ಪಶ್ಚಾತ್ತಾಪ ಪಟ್ಟು ಹೆಂಡತಿ ಬೇಕು ಎಂದು ಬಯಸಿದ್ದಾನೆ. ಅದಕ್ಕಾಗಿಯೇ ಗೋಕರ್ಣದ ಟ್ರೈನ್ ಹತ್ತಿ, ಸ್ಪಂದನಾ ಇರುವ ಕಡೆಗೆ ಬಂದಿದ್ದಾನೆ. ಆದರೆ ಸ್ಪಂದನಾಳಿಂದ ಪ್ರೀತಿ ಸಿಗುವ ಬದಲು ಅಸಹಾಯಕತೆ, ಕೋಪದ ಉಡುಗೊರೆ ಸಿಕ್ಕಿದೆ. ಬಹುಶಃ ವಿಕ್ರಾಂತ್ ಇದನ್ನು ನಿರೀಕ್ಷಿಸಿರಲಿಲ್ಲ ಎನಿಸುತ್ತದೆ.

ಸ್ಪಂದನಾಳ ಮನಸ್ಸು ಅರ್ಥವಾಗಲೇ ಇಲ್ಲ
ಸ್ಪಂದನಾ ಯಾವತ್ತಿಗೂ ತನ್ನ ಸ್ವಾರ್ಥದ ಬಗ್ಗೆ ಯೋಚನೆ ಮಾಡಲೇ ಇಲ್ಲ. ಮನೆಯಲ್ಲಿರುವ ಕೆಲವರು ಹೊಂದಾಣಿಕೆಯಾಗದೆ ಹೋದರೂ ಸ್ಪಂದನಾಳೇ ಎಲ್ಲರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗಲು ಪ್ರಯತ್ನಿಸಿದ್ಧಳು. ಆದರೂ ಎಲ್ಲವೂ ಕೈ ಮೀರಿ ಹೋಗಿತ್ತು. ಒಂದಾಣಿಕೆಯಾಗದವರ ಬಗ್ಗೆ ಗಮನ ಬಿಟ್ಟು ಮೊದಲು ಸಾಹಿತ್ಯಾಳ ಜೀವನ ಸರಿ ಮಾಡಲು ಯತ್ನಿಸಿದಳು. ತಾನೂ ನಂಬಿದ್ದ ವಿಕ್ರಾಂತ್‌ಗೆ ಕೂಡ ಆ ವಿಚಾರ ಹೇಳಿದರು. ಆಗಲೂ ಅನುಮಾನ ಹೆಚ್ಚಾಯಿತೇ ವಿನಃ ಸ್ಪಂದನಾಳ ಪರ ಹೆಚ್ಚಾಗಿ ನಿಲ್ಲಲಿಲ್ಲ. ಅಷ್ಟೇ ಅಲ್ಲ ಈ ಕಡೆ ಶತ್ರುಗಳ ಅಟ್ಟಹಾಸವೂ ಹೆಚ್ಚಾಗಿತ್ತು. ಅಜಯ್‌ನನ್ನು ಕಿಡ್ನ್ಯಾಪ್ ಮಾಡಿದವರಿಂದ ಸ್ಪಂದನಾಳನ್ನು ಕಾಪಾಡಿ, ಹೇಗೋ ಸಾಹಸ ಮಾಡಿ ಅಜಯ್ ಮತ್ತು ಸಾಹಿತ್ಯಾಳ ಮದುವೆಯನ್ನು ಮಾಡಿಸಿದಳು. ಅದು ಸಾಹಿತ್ಯ ಬದುಕಿಗೆ ಒಳ್ಳೆಯದೇ ಆಗಿದೆ. ತಾಯಿ ಮಗುವನ್ನು ಒಂದು ಮಾಡಿದ್ದಾಳೆ ಸ್ಪಂದನಾ. ಆದರೆ ವಿಕ್ರಾಂತ್‌ಗೆ ಇದ್ಯಾವುದೂ ಅರ್ಥವಾಗಲೇ ಇಲ್ಲ. ಮನೆಯವರೆಲ್ಲಾ ಸ್ಪಂದನಾ ವಿರುದ್ಧ ನಿಂತಾಗ, ವಿಕ್ರಾಂತ್ ಕೂಡ ನಿಂತು ಬಿಟ್ಟ. ಇದು ಇಬ್ಬರ ಅಂತರ ಜಾಸ್ತಿ ಮಾಡಿತ್ತು. ಅಷ್ಟೇ ಅಲ್ಲ ಮನೆಯನ್ನೇ ಬಿಟ್ಟು ಹೋಗುವುದಕ್ಕೆ ಹೇಳಿದ. ಇನ್ನೆಲ್ಲಿ ಉಳಿಯಬೇಕು ಸಾಂಸಾರಿಕ ಜೀವನ.

ಸ್ಪಂದನಾಗೆ ನೋವಾಗುವುದಿಲ್ಲವೇ?
ಸ್ಪಂದನಾದೂ ಒಂದು ಮೃದು ಮನಸ್ಸೇ. ಅದರಲ್ಲೂ ತಪ್ಪು ಇಲ್ಲದೆ ಯಾವುದಕ್ಕೂ ತಲೆಬಾಗದೆ, ಯಾರದ್ದೋ ಅಧಿಕಾರದ ದರ್ಪವನ್ನು ಸಹಿಸಿಕೊಳ್ಳುವ ಸ್ವಭಾವವಂತೂ ಸ್ಪಂದನಾಳದ್ದು ಅಲ್ಲ. ಆದರೆ ಅಷ್ಟೆಲ್ಲಾ ಬೇಡಿಕೊಂಡರು ಕರಗದೆ, ನಡುರಾತ್ರಿ ಎನ್ನುವುದನ್ನು ನೋಡದೆ ಮನೆಯಿಂದ ಹೊರ ಹಾಕಿದ ಗಂಡನ ಮೇಲೆ ಪ್ರೀತಿಯಾದರೂ ಉಳಿಯುವುದಾದರೂ ಹೇಗೆ? ಸ್ಪಂದನಾಳ ಬದುಕಲ್ಲಿ ಆಗಿದ್ದು ಇದೆ. ಮನೆಯಿಂದ ಹೊರ ಹಾಕಿಸಿಕೊಂಡ ಬಳಿಕ ನೇರ ಗೋಕರ್ಣಕ್ಕೆ ಬಸ್ ಹತ್ತಿದ್ದವಳಿಗೆ ಕಾಡಿದ್ದು ಅಪ್ಪನ ನೆನಪು, ಒಂಟಿತನ. ಈ ವೇಳೆ ತುಂಬಾ ಯೋಚಿಸಿ, ವಿಕ್ರಾಂತ್ ನಿಂದ ದೂರಾಗುವ ನಿರ್ಧಾರ ಮಾಡಿದ್ದಾಳೆ.

ಮಾತಿಗೆ ತಪ್ಪಿದ ವಿಕ್ರಾಂತ್
ವಿಕ್ರಾಂತ್ ಮತ್ತು ಸ್ಪಂದನಾ ಮದುವೆ ಗೌರವಕ್ಕೆ ಗಂಟು ಬಿದ್ದು ಆದ ಮದುವೆ. ತಾನಿಷ್ಟಪಡುತ್ತಿದ್ದ ಪೊಲೀಸ್ ಅಧಿಕಾರಿ ಸಾಯುವಾಗ ಕೊಟ್ಟ ಮಾತಿಗೆ ಕಟ್ಟು ಬಿದ್ದು, ಸ್ಪಂದನಾಳನ್ನು ಮದುವೆಯಾಗಿದ್ದು ವಿಕ್ರಾಂತ್. ಆದರೆ ಕೆಲವೊಂದು ಸಮಸ್ಯೆಗಳಿಂದ ವಿಕ್ರಾಂತ್‌ನಿಂದ ಸ್ಪಂದನಾ ಈ ಹಿಂದೆ ದೂರ ಆಗಿದ್ದಳು. ಆಗ ಇದೇ ವಿಕ್ರಾಂತ್ ಭರವಸೆ ನೀಡಿ, ಇನ್ಯಾವತ್ತೂ ಈ ರೀತಿ ಆಗಲ್ಲ ಎಂದು ಕರೆದುಕೊಂಡು ಬಂದನು. ಆದರೆ ಆ ದಿನಗಳು ಮತ್ತೆ ರಿಪೀಟ್ ಆಗಿದೆ. ಸ್ಪಂದನಾಗೆ ಮರಳಿ ಮನಸ್ಸಾಗುವುದು ಹೇಗೆ?


Click it and Unblock the Notifications











