Sparsha Rekha: ದೇವಯಾನಿಗೆ ಪಾತ್ರಕ್ಕೆ ವಿದಾಯ ಹೇಳಿದ ಸ್ಪರ್ಶ ರೇಖಾ.. ಆ ಪಾತ್ರಕ್ಕೆ ಬರೋದ್ಯಾರು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ತ್ರಿಪುರ ಸುಂದರಿ' ಧಾರಾವಾಹಿಯ ತಂಡದಿಂದ ಇತ್ತೀಚೆಗಷ್ಟೇ ಸಿಹಿ ಸುದ್ದಿಯೊಂದು ಹೊರಬಿದ್ದಿತ್ತು. ವಿಭಿನ್ನ ಕಥಾ ಹಂದರದ ಮೂಲಕ ವೀಕ್ಷಕರನ್ನು ಸೆಳೆಯುತ್ತಿದ್ದ 'ತ್ರಿಪುರ ಸುಂದರಿ' ಧಾರಾವಾಹಿಯು ಬೆಂಗಾಳಿಗೆ ಡಬ್ ಆಗಿದ್ದು ಈಗಾಗಲೇ ಪ್ರಸಾರ ಶುರುವಾಗಿದೆ. ಇದರ ಜೊತೆಗೆ ಧಾರಾವಾಹಿಯು ದಿನದಿಂದ ದಿನಕ್ಕೆ ರೋಚಕವಾಗಿರುವಂತಹ ಕಥೆಗಳನ್ನು ಪ್ರಸಾರ ಮಾಡುತ್ತಿದ್ದು ಗಂಧರ್ವ ಲೋಕದ ರಾಜಕುಮಾರ ಯಾರು ಎಂದು ತಿಳಿಯುವ ದಿನವೂ ಹತ್ತಿರದಲ್ಲಿ ಬರುತ್ತಿದೆ.
ಈ ಸಿಹಿ ಸುದ್ದಿ ವೀಕ್ಷಕರ ಮನದಲ್ಲಿ ಇನ್ನು ಹಸಿರಾಗಿರುವಾಗಲೇ ಧಾರಾವಾಹಿಯ ತಂಡದಿಂದ ಶಾಕಿಂಗ್ ಸುದ್ದಿಯೊಂದು ಹೊರಬಂದಿದೆ. 'ತ್ರಿಪುರ ಸುಂದರಿ' ಧಾರಾವಾಹಿಯಲ್ಲಿ ನಾಯಕ ಪ್ರದ್ಯುಮ್ನನ ಅಮ್ಮ ದೇವಯಾನಿಯಾಗಿ ಅಭಿನಯಿಸುತ್ತಿರುವ ಸ್ಪರ್ಶ ರೇಖಾ ಅವರು ಧಾರಾವಾಹಿಯಿಂದ ಹೊರಬರುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ದೇವಯಾನಿಯಾಗಿ ಮೋಡಿ ಮಾಡಿದ್ದ ರೇಖಾ
ಸ್ಪರ್ಶ ಸಿನಿಮಾದ ಸುಮಾ ಆಗಿ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದ್ದ ರೇಖಾ ಇಂದಿಗೂ ಸ್ಪರ್ಶ ರೇಖಾ ಎಂದೇ ಫೇಮಸ್ಸು. ಸಿನಿಮಾ ತೆರೆ ಕಂಡು ವರ್ಷ ಹದಿಮೂರು ಆದರೂ ಇಂದಿಗೂ ಆಕೆ ಆ ಪಾತ್ರದ ಮೂಲಕ ಗುರುತಿಸಿಕೊಳ್ಳುತ್ತಾರೆ. ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಸ್ಪರ್ಶ ರೇಖಾ 'ತ್ರಿಪುರ ಸುಂದರಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು.
ಕಿರುತೆರೆ ಹೊಸದೇನಲ್ಲ!
ಅಂದ ಹಾಗೇ ಸ್ಪರ್ಶ ರೇಖಾಗೆ ಧಾರಾವಾಹಿ ಹೊಸತು ಹೊರತು ಕಿರುತೆರೆಯಲ್ಲ. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 4ರ ಸ್ಪರ್ಧಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆ ಅಂಗಳಕ್ಕೆ ಕಾಲಿಟ್ಟಿದ್ದರು ಸ್ಯಾಂಡಲ್‌ವುಡ್ ಚೆಲುವೆ. ಮಾತ್ರವಲ್ಲದೆ 'ನಗಿಸೋ ಚಾಲೆಂಜ್'ನಲ್ಲಿ ಆಕೆ ಅತಿಥಿಯಾಗಿ ಕಾಣಿಸಿಕೊಂಡಿದ್ದರು.

ದೇವಯಾನಿಯಾಗಿ ಬರ್ತಾರಾ ಸಂಗೀತಾ ಅನಿಲ್?
ಸ್ಪರ್ಶ ರೇಖಾ ದೇವಯಾನಿಯ ಪಾತ್ರಕ್ಕೆ ವಿದಾಯ ಹೇಳಿದ ನಂತರ ಆ ಜಾಗಕ್ಕೆ ಮತ್ತೋರ್ವ ನಟಿಯ ಆಗಮನವಾಗಬೇಕಿದೆ. ಬಂದಿರುವ ಸುದ್ದಿಯ ಪ್ರಕಾರ ಕಿರುತೆರೆ ನಟಿ ಸಂಗೀತಾ ಅನಿಲ್ ಇನ್ನು ಮುಂದೆ ದೇವಯಾನಿಯಾಗಿ ವೀಕ್ಷಕರನ್ನು ರಂಜಿಸಲಿದ್ದಾರೆ. ಪೋಷಕ ಪಾತ್ರಗಳ ಮೂಲಕ ಸದ್ದು ಮಾಡುತ್ತಿರುವ ಸಂಗೀತಾ ಅನಿಲ್ ಸದ್ಯ ಉದಯ ವಾಹಿನಿಯ 'ಸೇವಂತಿ', 'ಸ್ಟಾರ್ ಸುವರ್ಣ ವಾಹಿನಿಯ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಧಾರಾವಾಹಿಯಲ್ಲಾದ ಈ ಬದಲಾವಣೆಗೆ ವೀಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೋ ಕಾದು ನೋಡಬೇಕಿದೆ.


Click it and Unblock the Notifications











