Srirasthu Shubhamasthu ; ಮಗಳು ಸಂಧ್ಯಾ ಮುಚ್ಚಿಟ್ಟಿದ್ದ ಸತ್ಯ ತುಳಸಿ ಬಾಳಿಗೆ ಮುಳುವಾಗುತ್ತಾ..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಮನೆಯವರೆಲ್ಲರೂ ಚೆನ್ನಾಗಿರಲಿ ಎಂದು ಏನೇ ಮಾಡಿದರೂ ಕೊನೆಗೆ ಅವಳಿಗೆ ಕಷ್ಟಗಳ ಸರಮಾಲೆ ಎದುರಾಗುತ್ತಿದೆ. ತುಳಸಿ ಮಾಧವನನ್ನು ಮದುವೆಯಾಗಿದ್ದೇ ತಪ್ಪು ಎಂಬಂತೆ ಸಮರ್ಥ್ ಪದೇ ಪದೇ ಹೀಯಾಳಿಸುತ್ತಿರುತ್ತಾನೆ. ಇತ್ತ ಅಭಿ ಕೂಡ ತುಳಸಿಗೆ ನೋವು ಕೊಡುತ್ತಿರುತ್ತಾನೆ. ಇಷ್ಟೇ ಅಲ್ಲ ಅಭಿ ಬೇಕೆಂದೇ ಸಮರ್ಥ್ ನ ಕೂಡ ಅವಮಾನ ಮಾಡುತ್ತಿರುತ್ತಾನೆ. ಇದೆಲ್ಲವನ್ನೂ ನೋಡಿಕೊಂಡು ತುಳಸಿ ಒಳಗೊಳಗೇ ನೋವು ನುಂಗುತ್ತಿದ್ದಾಳೆ.
ಅಭಿಯನ್ನು ಸುಲಭವಾಗಿ ಆಡಿಸುತ್ತಿರುವ ದೀಪಿಕಾ
ಇನ್ನು ಅಭಿ ನ ಪ್ರೀತಿಸಿ ಮದುವೆಯಾದ ದೀಪಿಕಾ ಯಾವ ವಿಚಾರಕ್ಕೆ ಹಠ ಮಾಡಿದರೂ ಮಾತು ಕೇಳುತ್ತಿರಲಿಲ್ಲ. ಆದರೆ, ಈಗ ಯಾವುದಾದರೂ ವಿಚಾರಕ್ಕೆ ಆಗಲೀ ಅಭಿ ತನ್ನ ಕೆಲಸವನ್ನು ಮಾಡುವಂತೆ ಮಾಡಿಕೊಂಡಿದ್ದಾಳೆ. ಇದಕ್ಕೆ ಶಾರ್ವರಿ ಅಭಿ ಯಾರ ಮಾತನ್ನು ಹೇಗೆ ಕೇಳುತ್ತಾನೆ ಎಂಬ ಟ್ರಿಕ್ ಹೇಳಿಕೊಟ್ಟಿದ್ದಾಳೆ.

ಅಭಿಗೆ ಹೀಗೆ ಮಾಡು ಎಂದರೆ ಯಾವತ್ತೂ ಕೇಳುವುದಿಲ್ಲ. ಆದರೆ, ಮುಂದೆ ಹೀಗಾಗಬಹುದು, ತುಳಸಿ ಮಕ್ಕಳೇ ನಮಗೆ ಮುಳುವಾಗಬಹುದೇನೋ ಆದರೂ ಪರವಾಗಿಲ್ಲ ಎಂಬಂತೆ ಅಪಾಯದ ಮುನ್ಸೂಚನೆ ನೀಡಿದರೆ ಮಾತ್ರವೇ ಅಭಿ ಅವರ ವಿರುದ್ಧ ಮಾತನಾಡುತ್ತಾನೆ. ದೀಪಿಕಾ ಈಗ ಅದೇ ತಂತ್ರ ಬಳಸಿಕೊಂಡು ಸಮರ್ಥ್ ಮೇಲೆ ದ್ವೇಷ ತೀರಿಸಿಕೊಳ್ಳುತ್ತಿದ್ದಾಳೆ.
ಕೊನೆಗೂ ಕೆಲಸ ಸಾಧಿಸಿಕೊಂಡ ಸಂಧ್ಯಾ
ಸಂಧ್ಯಾ ಅಂತೂ ವಂಶವೃಕ್ಷದಲ್ಲಿ ಹೆಸರು ಸೇರಿಕೊಂಡ ದಿನದಿಂದಲೂ ನಿತ್ಯ ತನ್ನ ಸೀಮಂತ ಮಾಧವ ಮನೆಯಲ್ಲೇ ಆಗಬೇಕು ಎಂದು ಹಠ ಹಿಡಿದಿದ್ದಾಳೆ. ಮನೆಯಲ್ಲಿ ಪ್ರತಿಯೊಬ್ಬರೂ ಬುದ್ಧಿ ಹೇಳಿದರೂ ಕೇಳಿಲ್ಲ. ಅಷ್ಟೇ ಅಲ್ಲದೇ, ಅಭಿ ಹಾಗೂ ಸಮರ್ಥ್ ಈ ವಿಚಾರಕ್ಕೆ ಜಗಳ ಮಾಡಿದರೂ ಕೂಡ ಸುಮ್ಮನಾಗದ ಸಂಧ್ಯಾ, ಸೀಮಂತ ಮಾಡಲೇಬೇಕು ಎಂದು ಹಠ ಮಾಡುತ್ತಿದ್ದಾಳೆ. ಮಾಧವ ಗೆ ಸಂಧ್ಯಾ ಬುದ್ಧಿ ಗೊತ್ತಿಲ್ಲವಾದರೂ, ಅವಳ ಆಸೆಗೆ ಸ್ಪಂದಿಸಿ ತನ್ನ ಮನೆಯಲ್ಲೇ ಸೀಮಂತ ಮಾಡಲು ಮುಂದಾಗಿದ್ದಾನೆ. ಇದಕ್ಕೋಸ್ಕರ ದತ್ತ ತಾತನ ಮನೆಗೆ ಹೋಗಿ ಎಲ್ಲರನ್ನೂ ಒಪ್ಪಿಸಿದ್ದಾನೆ.

ಗರ್ಭಿಣಿ ಅಲ್ಲ ಎಂಬ ಸತ್ಯ ತಿಳಿದ ತುಳಸಿ
ಸಂಧ್ಯಾ ತನ್ನ ಆಸೆಯಂತೆಯೇ ಮಾಧವ ಮನೆಯಲ್ಲಿ ಅದ್ಧೂರಿಯಾಗಿ ಸೀಮಂತ ಮಾಡಿಕೊಳ್ಳಲು ಸೀರೆಯುಟ್ಟು ಬರುತ್ತಾಳೆ. ಹೊಟ್ಟೆಯಲ್ಲಿ ಮಗುವಿಲ್ಲದ ಕಾರಣ ದಿಂಬನ್ನು ಕಟ್ಟಿಕೊಂಡಿದ್ದಾಳೆ. ದಿಂಬು ಉದುರ ಬಾರದು ಎಂದು ಟೈಟ್ ಆಗಿ ಡಾಬನ್ನು ಕಟ್ಟಿದ್ದು, ತುಳಸಿ ಸರಿ ಮಾಡಿಕೋ ಇಲ್ಲದಿದ್ದರೆ ಬೆಳೆಯುವ ಮಗುವಿಗೆ ತೊಂದರೆಯಾಗುತ್ತೆ ಎಂದು ಹೊಟ್ಟೆಯನ್ನು ಮುಟ್ಟುತ್ತಾಳೆ. ತಕ್ಷಣವೇ ಸಂಧ್ಯಾ ಅಲ್ಲಿಂದ ರೂಮಿಗೆ ಹೋಗುತ್ತಾಳೆ. ಅನುಮಾನಗೊಂಡ ತುಳಸಿ ಸಂಧ್ಯಾ ಕಟ್ಟಿಕೊಂಡ ದಿಂಬನ್ನು ತೆಗೆದು ಬೈಯುತ್ತಾಳೆ. ಗರ್ಭಿಣಿನೇ ಆಗಿಲ್ಲ. ಸುಳ್ಳು ಹೇಳಿ ಸೀಮಂತ ಮಾಡಿಕೊಳ್ಳುತ್ತಿದ್ದೀಯಾ ಎನ್ನುತ್ತಾಳೆ.
ಮಗಳ ಕುತಂತ್ರದಿಂದ ತುಳಸಿಗೆ ಕಂಟಕ
ತುಳಸಿಗೆ ಸಂಧ್ಯಾಳ ನಾಟಕ ತಿಳಿಯುವ ವೇಳೆಗೆ ಈ ಸತ್ಯ ದೀಪಿಕಾಳಿಗೂ ಗೊತ್ತಾಗಿದೆ. ಈಗಾಗಲೇ ತುಳಸಿ ವಿರುದ್ಧ ತನ್ನ ವೈರತ್ವ ಸಾಧಿಸಲು ಯತ್ನಿಸುತ್ತಿರುವ ದೀಪಿಕಾಳಿಗೆ ಈಗ ಸಂಧ್ಯಾ ಮಾಡಿರುವ ತಪ್ಪು ತುಳಸಿ ಮೇಲೆ ಗೂಬೆ ಕೂರಿಸಲು ಸಹಾಯವಾಗಿದೆ.
ಮುಂದೆ ತುಳಸಿಗೆ ದೀಪಿಕಾ ಯಾವ ರೀತಿಯಲ್ಲಿ ನೋವು ಕೊಡುತ್ತಾಳೆ. ಸಂಧ್ಯಾ ಗರ್ಭಿಣಿ ಅಲ್ಲ ಎಂಬ ವಿಚಾರ ತಿಳಿದರೆ, ಮನೆಯವರೆಲ್ಲಾ ಅವಮಾನ ಅನುಭವಿಸುವುದರ ಜೊತೆಗೆ ಇನ್ನೂ ಯಾವೆಲ್ಲ ಕಷ್ಟಕ್ಕೆ ಸಿಲುಕಿಕೊಳ್ತಾರೋ ಗೊತ್ತಿಲ್ಲ. ಆದರೆ, ಮಗಳು ಮಾಡಿದ ತಪ್ಪಿಗೆ ತುಳಸಿಗೆ ದೀಪಿಕಾ ಹಾಗೂ ಶಾರ್ವರಿ ಸೇರಿ ಶಿಕ್ಷೆ ಕೊಡುವುದಂತೂ ಪಕ್ಕಾ ಆಗಿದೆ.


Click it and Unblock the Notifications











