ದೀಪಿಕಾ ನಾಟಕ..ಸಂಧ್ಯಾ ಹೊಸ ವ್ಯಾಪಾರ ; ಶ್ರೀರಸ್ತು ಶುಭಮಸ್ತುದಲ್ಲಿ ದ್ವೇಷದ ಹಗ್ಗ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ,ಜನಾರ್ಧನ್ ಮಾತು ಕೇಳಿ ಮನೆ ಬಿಟ್ಟು ಹೋಗಲು ಮಾಡಿದ ತೀರ್ಮಾನ ಮನೆಯವರಿಗೆಲ್ಲಾ ಬೇಸರವನ್ನು ತಂದಿತ್ತು. ಆದರೆ, ಅವಿನಾಶ್, ಸಮರ್ಥ ಹಾಗೂ ಮಾಧವ್ ಮೂವರು ಸೇರಿಕೊಂಡು ತುಳಸಿಗೆ ಎದುರಾಗಿದ್ದ ಕಂಟಕದಿಂದ ಪಾರು ಮಾಡಿಕೊಂಡು ಮನೆಗೆ ವಾಪಸ್ ಕರೆದುಕೊಂಡು ಬಂದಿದ್ದಾರೆ. ತುಳಸಿಯನ್ನು ವಾಪಸ್ ಕರೆತಂದಿದ್ದಕ್ಕೆ ಎಲ್ಲರಿಗೂ ಖುಷಿಯಾಗಿದೆ. ಆದರೆ, ಕೂದಲೆಳೆ ಅಂತರದಲ್ಲಿ ಜನಾರ್ಧನ್ ಮತ್ತು ಶಾರ್ವರಿ ಎಸ್ಕೇಪ್ ಆಗಿದ್ದಾರೆ.
ತುಳಸಿಯನ್ನೇ ಗಾಳವನ್ನಾಗಿಸಿಕೊಂಡ ಸೊಸೆ
ದೀಪಿಕಾ ತುಳಸಿ ಬಳಿ ಒಳ್ಳೆಯ ಹೆಸರು ಪಡೆಯಲು ಯತ್ನಿಸಿದ್ದಾಳೆ. ಮದುವೆಯಾದ ದಿನವೇ ತುಳಸಿ ಮನೆಗೆ ಬರಲೇಬೇಕು ಎಂದು ಹಠ ಮಾಡಿದ್ದಳು. ಜನಾರ್ಧನ್ ದೀಪಿಕಾ ಬಳಿ ನೀನು ಹೇಳಿದ್ದೇನು ಮಾಡುತ್ತಿರುವುದೇನು ಎಂದು ಪ್ರಶ್ನೆ ಮಾಡುತ್ತಾನೆ. ಆಗ ದೀಪಿಕಾ ತುಳಸಿ ಮನೆಯಲ್ಲಿ ಇಲ್ಲ ಅಂದರೆ ನನ್ನ ಕೆಲಸ ಕಷ್ಟವಾಗುತ್ತದೆ. ನನ್ನ ಆಟಕ್ಕೆ ತುಳಸಿಯೇ ಪಾನ್ ಎಂದು ಹೇಳುತ್ತಾಳೆ. ದೀಪಿಕಾ ಬಹಳ ದೊಡ್ಡ ಲೆಕ್ಕಾಚಾರ ಇಟ್ಟುಕೊಂಡು ಮನೆಗೆ ಬಂದಿದ್ದಾಳೆ. ಆದರೆ, ಇದು ಯಾರಿಗೂ ಅರ್ಥವಾಗುತ್ತಿಲ್ಲ. ಮನೆಯವರ ಮುಂದೆ ಎಲ್ಲಾ ತಾನು ಬಹಳಷ್ಟು ಬದಲಾಗಿರುವಂತೆ ನಟಿಸುತ್ತಿದ್ದಾಳೆ. ಆದರೆ, ಒಳಗೊಳಗೆ ತನ್ನ ದ್ವೇಷದ ಬೆಂಕಿ ಕಿಡಿಯನ್ನು ಹಾರಿಸಲು ಮುಂದಾಗಿದ್ದಾನೆ.

ಹೊಸ ಬಿಸಿನೆಸ್ ಆರಂಭಿಸಿದ ಸಂಧ್ಯಾ
ಇತ್ತ ಸಂಧ್ಯಾ ಸುಮ್ಮನಿರದೇ ಮತ್ತೊಂದು ಎಡವಟ್ಟನ್ನು ಮಾಡಿಕೊಳ್ಳಲು ಮುಂದಾಗಿದ್ದಾಳೆ. ಮನೆಯಲ್ಲೇ ಕೂತು ಸಾವಿರಾರು ರೂಪಾಯಿ ಹಣವನ್ನು ಸಂಪಾದಿಸಲು ಮುಂದಾಗಿದ್ದಾಳೆ. ದತ್ತ ತಾತ ಅದೇನು ಕಡಿದು ಕಟ್ಟೆ ಹಾಕುತ್ತೀಯೋ ನಾನೂ ನೋಡುತ್ತೀನಿ ಎಂದು ಬಂಡವಾಳಕ್ಕೆ ಹಣ ನೀಡಿದ್ದಾರೆ. ಸಂಧ್ಯಾ ಇಡ್ಲಿ ಮಾಡುವ ಪಾತ್ರೆಯನ್ನು ತಂದು, ಇಡ್ಲಿ, ಚಟ್ನಿ, ಸಾಂಬಾರ್ ನ ಸಿರಿ ಕೈಯಲ್ಲಿ ಮಾಡಿಸಿದ್ದಾಳೆ. ಇಡ್ಲಿ ಸೇಲ್ ಆಗಿ ತನ್ನ ಕೈ ತುಂಬಾ ಹಣ ಬರುತ್ತದೆ ಎಂದು ಎಲ್ಲರ ಬಳಿ ಕೊಚ್ಚಿಕೊಂಡಿದ್ದಾಳೆ. ಆದರೆ, ಸಂಧ್ಯಾಳ ಇಡ್ಲಿ ಬಿಸಿನೆಸ್ ಐಡಿಯಾ ಹೇಗೆ ವರ್ಕೌಟ್ ಆಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಮನೆಯವರ ಎದುರು ನಟಿಸುತ್ತಿರುವ ದೀಪ್ಸ್
ದೀಪಿಕಾ ಮನೆಯಲ್ಲಿ ನಟಿಸಲು ಆರಂಭಿಸಿದ್ದಾಳೆ. ತುಳಸಿಯನ್ನು ಒಲಿಸಿಕೊಳ್ಳಲು ನಾಟಕ ಮಾಡುತ್ತಿದ್ದಾಳೆ. ಎಲ್ಲರಿಗೂ ಕಾಫಿ ತಂದು ಕೊಟ್ಟು ಮನೆಯ ಕೆಲಸವನ್ನೆಲ್ಲಾ ತಾನೇ ಮಾಡುವುದಾಗಿ ಹೇಳಿದ್ದಾಳೆ. ದೀಪಿಕಾ ನಡವಳಿಕೆಯನ್ನು ಕಂಡು ಮನೆಯವರೆಲ್ಲಾ ಖುಷಿ ಪಟ್ಟಿದ್ದಾರೆ. ಒಳ್ಳೆಯ ಸೊಸೆಯೇ ನಮ್ಮ ಮನೆಗೆ ಬಂದಿದ್ದಾಳೆ ಎಂದು ಭಾವಿಸಿದ್ದಾರೆ. ಅವಿನಾಶ್ ಕೂಡ ಅಭಿ ಬಳಿ ನೀನು ಸೆಲೆಕ್ಟ್ ಮಾಡಿರುವ ಹುಡುಗಿ ಸೂಪರ್. ನಮ್ಮ ಮನೆಗೆ ತಕ್ಕಂತವಳು ಎಂದು ಹೇಳುತ್ತಾನೆ. ಸಿನಿಮಾಗೆ ಹೋಗಲೂ ಮನೆಯವರೆಲ್ಲಾ ಒಟ್ಟಿಗೆ ಹೋಗೋಣ ಎಂದಿದ್ದಾಳೆ. ಹನಿಮೂನ್ ವಿಚಾರಕ್ಕೆ ತಾನಂತೂ ಮನೆಯಿಂದ ಹೊರಗೆ ಬರೋದಿಲ್ಲ ಎಂದಿದ್ದಾಳೆ.

ಮೆಲ್ಲಗೆ ಚುಚ್ಚುತ್ತಿರುವ ದೀಪಿಕಾ
ಆದರೆ, ಮನದೊಳಗೆ ತನ್ನ ದ್ವೇಷದ ಲೆಕ್ಕಾಚಾರವನ್ನು ಮಾಡುತ್ತಿದ್ದಾಳೆ. ಕಾಫಿ ಕುಡಿಯುವಾಗ ಪೂರ್ಣಿಮಾಳಿಗೆ ಇಷ್ಟು ಲೋಕಲ್ ಕಾಫಿ ನಾನು ಕುಡಿಯುವುದಿಲ್ಲ. ನಾನು ಕಾಸ್ಟ್ಲಿ ಕಾಫಿ ಕುಡಿಯೋದು ಎಂದು ಹೇಳಿದ್ದಾಳೆ. ಅಲ್ಲದೇ, ಪೂರ್ಣಿಮಾ ಸ್ನಾಕ್ಕೆ ಬಳಸಿದ ಸೋಪ್ ಸಿಕ್ಕಾಪಟ್ಟೆ ಲೋಕಲ್, ಅದರ ವಾಸನೆ ತನಗೆ ಇರಿಟೇಟ್ ಮಾಡುತ್ತಿದೆ. ಎಂದು ಹೇಳಿದ್ದು, ಆಶ್ರಮದಲ್ಲಿದ್ದ ನಿನಗೆ ಇದೆಲ್ಲಾ ಒಗ್ಗಿ ಹೋಗಿದೆ, ಆದರೆ ನನಗೆ ಹಾಗಲ್ಲ ಎಂದು ಚುಚ್ಚಿ ಮಾತನಾಡಿದ್ದಾಳೆ. ಇದೆಲ್ಲಾ ಮಾತುಗಳು ಪೂರ್ಣಿಮಾಳ ಕಣ್ಣಲ್ಲಿ ನೀರು ತರಿಸಿದ್ದು, ಯಾರ ಬಳಿಯೂ ಹೇಳಿಕೊಳ್ಳಲಾಗದೇ ಚಿಂತಿಸುತ್ತಿದ್ದಾಳೆ. ದೀಪಿಕಾ ಹೆಣೆದಿರುವ ದ್ವೇಷದ ಹಗ್ಗ ಯಾರ ಕುತ್ತಿಗೆಗೆ ಉರುಳಾಗುತ್ತೋ ಕಾದು ನೋಡಬೇಕಿದೆ.


Click it and Unblock the Notifications











