Srirasthu Shubhamasthu ; ಅಮ್ಮನ ಬಗ್ಗೆ ತಲೆ ಕೆಡಿಸಿಕೊಂಡ ಸಮರ್ಥ್ : ತುಳಸಿಗಾಗಿ ಕಂಪನಿ ತೆರೆಯಲಿರುವ ಮಕ್ಕಳು..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಂಧ್ಯಾ ತನ್ನ ಕಷ್ಟಗಳಿಗೆ ತಾನೇ ಪರಿಹಾರ ಹುಡುಕಬೇಕು ಎಂದು ತೀರ್ಮಾನಿಸಿ ಕೆಲಸ ಹುಡುಕಿಕೊಂಡು ಹೊರಟಿದ್ದಾಳೆ. ವನಜಾಳಿಗೆ ಕೊನೆಗೂ ತನ್ನ ಮಗಳು ಯಾರು ಎಂಬ ಸತ್ಯ ಗೊತ್ತಾಗಿದೆ. ಈ ಸತ್ಯ ಮತ್ಯಾರಿಗೂ ತಿಳಿಯುವುದು ಬೇಡ ಎಂದು ಕೂಡ ತುಳಸಿ ಬಳಿ ಹೇಳಿದ್ದಾಳೆ. ಮಾಧವ್ ಬಳಿ ತುಳಸಿ ಈ ಸತ್ಯವನ್ನು ಹೇಳಿದ ಕೂಡಲೇ ಮಾಧವ್ ಗೆ ಗಾಬರಿಯಾಗುತ್ತದೆ. ಆದರೆ ಬಳಿಕ ಪೂರ್ತಿ ವಿಷಯ ತಿಳಿದು ಸಮಾಧಾನಗೊಳ್ಳುತ್ತಾರೆ.
ದೀಪಿಕಾಳ ಹೊಟ್ಟೆ ಉರಿಸಿದ ದೃಶ್ಯ
ವನಜಾ ಪೂರ್ಣಿಮಾಳೇ ತನ್ನ ಮಗಳು ಎಂದು ತಿಳಿದ ಬಳಿಕ ನಿತ್ಯ ಅವಳನ್ನು ನೋಡುವ ಸಲುವಾಗಿ ಮನೆಗೆ ಬರುತ್ತಿದ್ದಾಳೆ. ಇಷ್ಟು ದಿನ ದೀಪಿಕಾ ಮನೆಯಿಂದ ಹೊರಗೆ ಇರುತ್ತಿದ್ದದ್ದೇ ಹೆಚ್ಚು. ಆದರೆ ಈಗ ದೀಪಿಕಾ ಮನೆಯಲ್ಲೇ ಇದ್ದಾಳೆ. ವನಜಾ ಪೂರ್ಣಿಮಾಳನ್ನು ಅಪ್ಪಿ ಮುದ್ದಾಡಿ, ಅವಳಿಗಾಗಿ ಮನೆಯಲ್ಲಿ ತಯಾರಿಸಿದ ತಿಂಡಿಗಳನ್ನು ನೀಡುತ್ತಾಳೆ. ದೀಪಿಕಾ ಇದನ್ನೆಲ್ಲಾ ನೋಡಿ ಕೋಪ ಮಾಡಿಕೊಳ್ಳುತ್ತಾಳೆ. ನನ್ನ ಅಮ್ಮ ನನ್ನನ್ನು ನೋಡಲು ಬಾರದೇ ಪೂರ್ಣಿಮಾಗಾಗಿ ಬಂದಿದ್ದಾರೆ ಎಂದು ಸಿಟ್ಟು ಮಾಡಿಕೊಳ್ಳುತ್ತಾಳೆ. ವನಜಾ ಪೂರ್ಣಿಮಾಳಿಗೆ ತಲೆ ಬಾಚಿ ಖುಷಿ ಪಡುತ್ತಾಳೆ.

ತುಳಸಿ ಹೆಸರಲ್ಲಿ ಹೊಸ ಕಂಪನಿ ಶುರು
ತುಳಸಿ ಮಕ್ಕಳ ಹೆಸರಲ್ಲಿ ದಾನ-ಧರ್ಮ ಮಾಡುತ್ತಿರುತ್ತಾಳೆ. ಈ ಬಾರಿ ಆಕೆ ಅಭಿ ಹೆಸರಲ್ಲಿ ಹಣ ದೇಣಿಗೆ ನೀಡಿದ್ದು, ಧನ್ಯವಾದ ತಿಳಿಸಿ ಪೋಸ್ಟ್ ಒಂದು ಬಂದಿರುತ್ತದೆ. ಇದನ್ನು ಅಭಿ ನೋಡಿ ತುಳಸಿ ಮೇಲೆ ಕೋಪ ಮಾಡಿಕೊಳ್ಳುತ್ತಾನೆ. ನನ್ನ ಹೆಸರಲ್ಲಿ ಇದೆಲ್ಲಾ ಮಾಡುವುದು ಬೇಕಿಲ್ಲ ಎನ್ನುತ್ತಾನೆ. ಆದರೆ, ಮನೆಯಲ್ಲಿ ಎಲ್ಲರೂ ತಾಯಿ ಗುಣವೇ ಹಾಗೆ ಎಂದು ಹೇಳಿ ಸಮಾಧಾನ ಮಾಡುತ್ತಾರೆ. ಇದು ಸಮರ್ಥ್ ಗೆ ಕೋಪ ಬರುವಂತೆ ಮಾಡುತ್ತದೆ. ಇನ್ನು ಅಭಿ ಮತ್ತು ಅವಿ ಸೇರಿಕೊಂಡು ತುಳಸಿ ಹೆಸರಿನಲ್ಲಿ ಕಂಪನಿಯೊಂದನ್ನು ಶುರು ಮಾಡಲು ದಾಗಿದ್ದಾರೆ. ತುಳಸಿಗೆ ಇದು ಇಷ್ಟವಿಲ್ಲದಿದ್ದರೂ ಕೂಡ, ಮಕ್ಕಳ ಖುಷಿ ಎಂದು ಸುಮ್ಮನಾಗಿದ್ದಾಳೆ. ದೀಪಿಕಾ ಮತ್ತು ಶಾರ್ವರಿ ಇದರಿಂದ ಕೆಂಡಾಮಂಡಲಗೊಂಡಿದ್ದಾರೆ.
ಹತಾಶೆಯಲ್ಲಿ ಸಮರ್ಥ್
ತುಳಸಿ ಮೇಲೆ ಅಪಾರವಾದ ಪ್ರೀತಿ ಇಟ್ಟಿರುವ ಸಮರ್ಥ್ ತೋರಿಸಿಕೊಳ್ಳುತ್ತಿಲ್ಲ. ತನಗಿಷ್ಟವಿಲ್ಲದಿದ್ದರೂ ಮಾಧವ್ ನನ್ನು ಮದುವೆಯಾಗಿ ಹೋದರು ಎಂದು ಕೋಪಿಸಿಕೊಂಡಿದ್ದಾರೆ. ಮನೆಗೆ ಬಂದವನೇ ಸಿರಿ ಹಾಗೂ ದತ್ತಾ ಬಳಿ ಈ ವಿಚಾರಕ್ಕೆ ಕೂಗಾಡಿದ್ದಾನೆ. ನನ್ನ ಅಮ್ಮನನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಅವರು ಅಲ್ಲಿಗೆ ಏಕೆ ಹೋಗಬೇಕು. ನಾನು ಹೋಗಿ ಅವರನ್ನು ವಾಪಸ್ ಕರೆದುಕೊಂಡು ಬರುತ್ತೇನೆ ಎಂದು ಕೂಗಾಡುತ್ತಾನೆ. ಸಮರ್ಥ್ ಹತಾಶೆಯಲ್ಲಿ ಇದ್ದಾನೆ.

ಅಮ್ಮ ನನ್ನ ಮನೆಯಲ್ಲೇ ಇರಬೇಕು
ನನ್ನ ತಾಯಿ ನನ್ನ ಮನೆಯಲ್ಲೇ ಇರಬೇಕು. ಅಲ್ಲಿ ಯಾಕೆ ಇರಬೇಕು ಎಂದು ಕೂಗಾಡುತ್ತಾನೆ. ಸೀದಾ ತುಳಸಿ ರೂಮಿಗೆ ಹೋಗಿ ಕೈ ಹಿಡಿದುಕೊಂಡು ಎಳೆದುಕೊಂಡು ಬರುತ್ತಾನೆ. ಆದರೆ, ಮಾಧವ್, ಅವಿ ಎಲ್ಲರೂ ತಡೆದಿದ್ದು, ತುಳಸಿ ಕೂಡ ನಾನು ಎಲ್ಲಿಗೂ ಬರುವುದಿಲ್ಲ ಎಂದು ಹೇಳುತ್ತಾಳೆ. ಸಮರ್ಥ್ ಈಗ ತಾಯಿ ಮಾತನ್ನು ಕೇಳಿ ಡಿಪ್ರೆಷನ್ ಗೆ ಹೋಗುತ್ತಾನಾ..? ತನ್ನ ಪ್ರೀತಿಯನ್ನು ತೋರಿಸಿಕೊಳ್ಳದೇ, ಸಂದರ್ಭವನ್ನು ಅರ್ಥ ಮಾಡಿಕೊಳ್ಳದೇ, ತಾಯಿ ಮದುವೆಯಾಗಿದ್ದೇ ತಪ್ಪು ಎಂಬಂತೆ ನಡೆದುಕೊಂಡಿದ್ದಾನೆ. ಆದರೆ, ಕಾಲಕ್ಕೆ ತಕ್ಕಂತೆ ಬದಲಾಗಬೇಕಿರುವ ಸಮರ್ಥ್ ಈಗ ವೈಲೆಂಟ್ ಆಗಿದ್ದಾನೆ. ಇದರಿಂದ ಎಲ್ಲರಿಗೂ ಸಮಸ್ಯೆ ಆಗುತ್ತಿದೆ. ಸಮರ್ಥ್ ನಡವಳಿಕೆಯಿಂದ ಮತ್ತೆ ಏನೆಲ್ಲಾ ಸಮಸ್ಯೆ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











