Srirastu Shubhamastu ; ತುಳಸಿಗೆ ಅಡುಗೆ ಮನೆಯಿಂದ ಗೇಟ್ ಪಾಸ್ ಕೊಟ್ಟ ದೀಪಿಕಾ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಂಧ್ಯಾಳನ್ನು ದತ್ತ ತಾತ ಮನೆಯಿಂದ ಹೊರಗೆ ಕಳಿಸಿದ್ದಾರೆ. ಸಮರ್ಥ್ ಗೆ ಈ ಪ್ರಕರಣದಿಂದಾಗಿ ಮತ್ತೆ ಮಾಧವ ಮನೆಗೆ ಕೆಲಸಕ್ಕೆ ಹೋಗಲು ಇಷ್ಟವಿಲ್ಲ. ಆದರೆ, ಕೆಲಸ ಬಿಡಲು ಕೂಡ ಸಾಧ್ಯವಾಗುತ್ತಿಲ್ಲ. ಹೀಗಾಗಿ ದತ್ತ ತಾತ ಸಮರ್ಥ್ ಗೆ ಬುದ್ಧಿ ಹೇಳಿದ್ದಾರೆ.
ಅಭಿ ಹಾಗೂ ನಿನಗೆ ಆಗುವುದಿಲ್ಲ. ಅವನು ರೇಗಿಸುತ್ತಾನೆ ಎಂದು ಕೆಲಸ ಬಿಡುವುದು ಸರಿಯಲ್ಲ ಎಂದು ಹೇಳುತ್ತಾನೆ. ಅಲ್ಲದೇ, ಅಭಿ ಇನ್ನು ಮುಂದೆ ನಿನಗೆ ಅವಮಾನವಾಗುವಂತೆ ಮಾತನಾಡಿದರೆ. ನೀನು ಅವನನ್ನೇ ರೇಗಿಸು. ಅವನ ಮಾಗತುಗಳಿಗೆ ತಲೆ ಕೆಡಿಸಿಕೊಳ್ಳಬೇಡ ಎಂದು ಹೇಳಿಕೊಡುತ್ತಾರೆ.

ಅಭಿನ ಆಟವಾಡಿಸಿದ ಸಮರ್ಥ್
ದತ್ತ ತಾತನ ಮಾತು ಕೇಳಿದ ಸಮರ್ಥ್, ಈಗ ಅಭಿಗೆ ಹೊಟ್ಟೆ ಉರಿಸಿದ್ದಾನೆ. ಅಭಿ ಮಾಮೂಲಿಯಂತೆ ಸಮರ್ಥ್ ನ ವ್ಯಂಗ್ಯವಾಗಿ ಮಾತನಾಡಿಸುತ್ತಾನೆ. ಸುಮ್ಮನಿರದ ಸಮರ್ಥ್ ಬೇಕಂತಲೇ ಹಾಗೆಲ್ಲಾ ಮಾತನಾಡಬೇಡ ತಮ್ಮ. ನನಗೀಗ ನಿನಗಿಂತಲೂ ಈ ಮನೆಯಲ್ಲಿ ಹೆಚ್ಚಿನ ಸ್ಥಾನವಿದೆ. ನನಗೂ ನಿಮ್ಮ ಆಸ್ತಿಯಲ್ಲಿ ಪಾಲಿದೆ.
ನಾನು ಸಂಧ್ಯಾ ಪಾಲನ್ನು ಕೇಳಿ ಪಡೆದುಕೊಳ್ಳುತ್ತೇವೆ ಎಂದು ರೇಗಿಸುತ್ತಿರುತ್ತಾನೆ. ಈ ವಿಚಾರವನ್ನು ಅಭಿ ಮನೆಯವರಿಗೆ ತಿಳಿಸಿದಾಗ ಸಮರ್ಥ್ ನನಗೂ ನಿಮ್ಮ ಮನೆಯ ಆಸ್ತಿಗೂ ಸಂಬಂಧವೇ ಇಲ್ಲ ಎನ್ನುತ್ತಾನೆ. ಮತ್ತೆ ಅಭಿ, ಸಮರ್ಥ್ ಜೊತೆಗೆ ಒಂಟಿಯಾಗಿದ್ದಾಗ ರೆಕಾರ್ಡ್ ಮಾಡಲು ಯತ್ನಿಸುತ್ತಾನೆ ಆದರೆ ಸಾಧ್ಯವಾಗುವುದಿಲ್ಲ.

ಕಂಡಿಷನ್ ಹಾಕಿದ ಸಮರ್ಥ್
ಸಮರ್ಥ್ ವರ್ತನೆ ಅಭಿಗೆ ಗಾಬರಿಯನ್ನುಂಟು ಮಾಡುತ್ತದೆ. ನಿಜವಾಗಲೂ ತಮ್ಮ ಆಸ್ತಿಯಲ್ಲಿ ಸಮರ್ಥ್ ಪಾಲು ಕೇಳಬಹುದು ಎಂದು ಹೆದರಿ, ನಿನಗೇನು ಬೇಕು ಎಂದು ಕೇಳುತ್ತಾನೆ. ಆಗ ಸಮರ್ಥ್, ತುಳಸಿ ಅವರನ್ನು ಸುಖವಾಗಿ ನೋಡಿಕೋ ಅಷ್ಟೇ ಸಾಕು. ಅವರಿಗೆ ನೋವು ಮಾಡಿದರೆ, ಆಸ್ತಿಯನ್ನು ದೋಚಿಕೊಂಡು ಹೋಗುತ್ತೇನೆ. ಆಗ ನಿನಗೆ ಸಮಸ್ಯೆ ಆಗುತ್ತೆ ಎಂದು ಕಂಡೀಷನ್ ಹಾಕುತ್ತಾನೆ. ಸಮರ್ಥ್ ಬೇಡಿಕೆಯನ್ನು ಕೇಳಿದ ಅಭಿ ಶಾಕ್ ಆಗುತ್ತಾನೆ.
ತುಳಸಿ ಅಡುಗೆಯನ್ನು ಕೆಡಿಸಿದ ದೀಪಿಕಾ
ಇತ್ತ ದೀಪಿಕಾ ತುಳಸಿಗೆ ಹಿಂಸೆ ಕೊಡಬೇಕು. ತನ್ನ ದ್ವೇಷವನ್ನು ಸಾಧಿಸಿಕೊಳ್ಳಲು ಹೊಸ ಹೊಸ ರೀತಿಯಲ್ಲಿ ಪ್ಲಾನ್ ಮಾಡುತ್ತಲೇ ಇದ್ದಾಳೆ. ಈಗ ತುಳಸಿಗೆ ಅಡುಗೆ ಮನೆಯಿಂದ ಹೊರಗಿಡಬೇಕು ಎಂದು ತೀರ್ಮಾನಿಸಿದ್ದಾಳೆ. ಹೀಗಾಗಿ ತುಳಸಿ ಮಾಡುವ ಅಡುಗೆಗೆ ಹುಳಿ, ಉಪ್ಪನ್ನು ಬೆರೆಸಿ ಅಡುಗೆ ಕೆಡಿಸಿದ್ದಾಳೆ. ತುಳಸಿ ಅಮ್ಮನಿಗೆ ವಯಸ್ಸಾಯ್ತು ಎಂಬುದನ್ನು ಬಿಂಬಿಸಿದ್ದಾಳೆ. ಇದರ ಬಗ್ಗೆ ಪೂರ್ಣಿಮಾಳಿಗೆ ಸತ್ಯ ಗೊತ್ತಿದ್ದರೂ ಏನೂ ಮಾತನಾಡಿಲ್ಲ.

ಈಗ ಮನೆಯವರೆಲ್ಲಾ ಸೇರಿ ತುಳಸಿ ಅಡುಗೆ ಮಾಡುವುದು ಬೇಡ ಎಂದು ಹೇಳಿದ್ದಾರೆ. ತುಳಸಿಗೆ ರೆಸ್ಟ್ ಕೊಡುವ ನೆಪದಲ್ಲಿ ದೀಪಿಕಾ ಅವಳ ಸ್ಥಾನವನ್ನು ಕಿತ್ತುಕೊಳ್ಳುವ ಯತ್ನ ಮಾಡಿದ್ದಾಳೆ. ಈಗ ದೀಪಿಕಾ ಫುಲ್ ಹ್ಯಾಪಿ ಆಗಿದ್ದಾಳೆ. ಪೂರ್ಣಿಮಾ ಮತ್ತು ದೀಪಿಕಾ ಸೇರಿ ಅಡುಗೆಯನ್ನು ತಯಾರಿಸಿದ್ದಾರೆ. ಆದರೆ, ಅಡುಗೆ ಹೇಗೆ ಆಗಿದೆ ಎಂಬುದು ಮಾತ್ರ ಇನ್ನೂ ಗೊತ್ತಾಗಿಲ್ಲ.
ಪ್ರಜ್ಞೆ ಕಳೆದುಕೊಂಡಿರುವ ಅಜ್ಜಿ
ಇನ್ನು ಇತ್ತ ದತ್ತ ತಾತನಿಗೆ ಅಜ್ಜಿ ಪಾರ್ವತಿಯ ಚಿಂತೆ ಶುರುವಾಗಿದೆ. ಪ್ರತಿ ದಿನವೂ ವಾಕಿಂಗ್ ನಲ್ಲಿ ಭೇಟಿಯಾಗುತ್ತಿದ್ದ ಅಜ್ಜಿ ಇತ್ತೀಚೆಗೆ ಕಾಣಿಸಿಕೊಳ್ಳದೇ ಇರುವುದಕ್ಕೆ ಆತಂಕ ಪಟ್ಟಿದ್ದಾರೆ. ಅಜ್ಜಿಯ ಮನೆ ಅಡ್ರೆಸ್ ನ ಕೇಳಿ ತಿಳಿದುಕೊಂಡ ತಾತ, ಒಬ್ಬರೇ ಅಜ್ಜಿ ಮನೆಯನ್ನು ಹುಡುಕಿಕೊಂಡು ಹೊರಟಿದ್ದಾರೆ. ಅಜ್ಜಿ ಮನೆಯಲ್ಲಿ ಒಬ್ಬರೇ ಇದ್ದು, ಪ್ರಜ್ಞೆ ಇಲ್ಲದೇ ಮಲಗಿದ್ದಾರೆ. ಅಜ್ಜಿಯ ಸ್ಥಿತಿಯನ್ನು ಕಂಡ ದತ್ತ ತಾತ ಗಾಬರಿಯಾಗಿದ್ದಾರೆ.


Click it and Unblock the Notifications











