ಪ್ರೇಮಿಗಳ ದಿನವನ್ನು ಮುದ್ದಾಗಿ ಮನೆಯಲ್ಲೇ ಆಚರಿಸಿದ ಮಾಧವ ಕುಟುಂಬ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ವ್ಯಾಲೆಂಟೈನ್ಸ್ ಡೇ ನ ಎಲ್ಲರೂ ಮನೆಯಲ್ಲೇ ಇದ್ದುಕೊಂಡು ವಿಶೇಷವಾಗಿ ಆಚರಿಸಿದ್ದಾರೆ. ಪೂರ್ಣಿಮಾ ಆಸೆಯಂತೆಯೇ ಗಂಡಂದಿರು ಹೆಂಡತಿಯರಿಗಾಗಿ ಉಡುಗೊರೆ ನೀಡಲು ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಹೆಂಡತಿಯರು ಕೂಡ ಶಾಪಿಂಗ್ ಹೋಗಿದ್ದಾರೆ. ಈ ಕಡೆ ಸಿರಿ ಸಮರ್ಥ್ ಗಾಗಿ ಮನೆ ಖರ್ಚಿನ ಹಣದಲ್ಲಿ ಉಡುಗೊರೆಯನ್ನು ತಂದಿದ್ದರೆ, ಅತ್ತ ಸಮರ್ಥ್ , ಹೆಂಡತಿಗಾಗಿ ಅಡ್ವಾನ್ಸ್ ಸ್ಯಾಲರಿ ಪಡೆದು ಗಿಫ್ಟ್ ತಂದಿದ್ದಾನೆ.
ಅಡುಗೆ ಮನೆ ಸೇರಿದ ಗಂಡಸರು
ಮಾಧವ ಮನೆಯಲ್ಲಿ ಮಹೇಶ, ಅಭಿ ಹಾಗೂ ಅವಿ ಎಲ್ಲರೂ ಅಡುಗೆ ಕೋಣೆಯನ್ನು ಸೇರಿಕೊಂಡಿದ್ದಾರೆ. ತಮ್ಮ ಹೆಂಡತಿಯರು ಇಷ್ಟಪಡುವ ಸಿಹಿಯನ್ನು ತಾವೇ ತಯಾರಿಸಿ ಸರ್ಪ್ರೈಸ್ ಕೊಡಬೇಕು ಎಂದು ತೀರ್ಮಾನಿಸಿದ್ದಾರೆ. ಅಭಿ ದೀಪಿಕಾಳಿಗಾಗಿ ಕಾಯಿ ಹೋಳಿಗೆ, ಮಹೇಶ್ ಶಾರ್ವರಿಗೆ ಬಾದಾಮ್ ಹಲ್ವಾ, ಅವಿ , ಪೂರ್ಣಿಗೆಂದು ಶ್ಯಾವಿಗೆ ಪಾಯಸವನ್ನು ಮಾಡಲು ಮುಂದಾಗಿದ್ದಾನೆ. ಆದರೆ, ಅಡುಗೆ ಮಾಡುವುದು ಗೊತ್ತಿಲ್ಲದ ಕಾರಣ ಮೂವರು ಮಾಧವನ ಸಹಾಯವನ್ನು ಪಡೆದಿದ್ದಾರೆ. ಮಕ್ಕಳು ತನ್ನನ್ನು ಮಾತನಾಡಿಸಿದ್ದಕ್ಕೆ ಮಾಧವಗೆ ಬಹಳ ಖುಷಿಯಾಗಿದೆ. ಮನೆಯಲ್ಲಿ ಇಷ್ಟೆಲ್ಲಾ ಒಳ್ಳೆಯದಾಗುತ್ತಿರುವುದಕ್ಕೆ ತುಳಸಿಯ ಆಗಮನವೇ ಕಾರಣ ಎಂದು ಸಂತಸ ಪಟ್ಟಿದ್ದಾನೆ. ಎಲ್ಲರೂ ಸಂಭ್ರಮದಿಂದ ಅಡುಗೆಯನ್ನು ಮಾಡಿ ಮುಗಿಸಿದ್ದಾರೆ.

ದೀಪಿಕಾ ಪ್ಲ್ಯಾನ್ ಹಾಳು ಮಾಡಿದ ಪೂರ್ಣಿ
ದೀಪಿಕಾಳಿಗೆ ಮದುವೆಯಾದ ಬಳಿಕ ಬಂದ ಮೊದಲ ವ್ಯಾಲೆಂಟೈನ್ಸ್ ಡೇ ನ ಅಭಿ ಜೊತೆಗೆ ಏಕಾಂತವಾಗಿ ಸೆಲಬ್ರೇಟ್ ಮಾಡಲು ಇಚ್ಛಿಸಿದ್ದಾಳೆ. ಇದಕ್ಕೆಂದು ಕ್ಲಬ್ ಬುಕ್ ಮಾಡಿ ಸಿದ್ಧಪಡಿಸಿದ್ದಾಳೆ. ಆದರೆ, ಮನೆಯವರನ್ನು ಇಂಪ್ರೆಸ್ ಮಾಡಲು ಹೋಗಿ ಈಗ ಮನೆಯಿಂದ ಹೊರಗೇ ಹೋಗದ ಪರಿಸ್ಥಿತಿಯನ್ನು ತಂದುಕೊಂಡಿದ್ದಾಳೆ. ಇನ್ನು ಸ್ನೇಹಿತೆಯ ಹೆಸರಲ್ಲಿ ಶಾರ್ವರಿ ಸಹಾಯವನ್ನು ಪಡೆದು ಮನೆಯಿಂದ ಹೊರಟಿದ್ದಾಳೆ. ತನ್ನ ಗೆಳೆತಿ ತಂದೆಗೆ ಸೀರಿಯಸ್ ಎಂದು ಹೇಳಿದ್ದಾಳೆ. ಆದರೆ, ಪೂರ್ಣಿಮಾ ನಿನ್ನ ಫ್ರೆಂಡ್ ಸಾನಿಕಾ ಮನೆಯವರಿಗೆ ಏನೂ ಆಗಿಲ್ಲ. ಶಾಪಿಂಗ್ ಗೆ ಹೋದಾಗ ಸಿಕ್ಕಿದ್ದಳು ಎಂದು ಸಿಕ್ಕಿ ಬೀಳುವಂತೆ ಮಾಡುತ್ತಾಳೆ. ಯಾವುದೋ ಫೇಕ್ ಕಾಲ್ ಬಂದಿರಬೇಕು ಎಂದು ದೀಪಿಕಾ ಕೂಡ ಯಾಮಾರಿಸಿಬಿಡುತ್ತಾಳೆ. ತನ್ನ ವ್ಯಾಲೆಂಟೈನ್ಸ್ ಡೇ ನ ಹಾಳು ಮಾಡಿದ ಪೂರ್ಣಿಮಾ ಮೇಲೆ ದೀಪಿಕಾಳಿಗೆ ಕೋಪ ಹೆಚ್ಚಾಗುತ್ತದೆ.
ಓಲೆ, ಗೆಜ್ಜೆ ಕೊಟ್ಟ ನೀಡಿ ಪ್ರೇಮಿಗಳ ದಿನಾಚರಣೆ
ಇನ್ನು ಮನೆಯಲ್ಲೇ ವಿಶೇಷವಾಗಿ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಎಲ್ಲರೂ ತಮ್ಮ ತಮ್ಮ ಹೆಂಡತಿಯರಿಗೆ ಮೊದಲು ಓಲೆಯನ್ನು ಉಡುಗೊರೆಯಾಗಿ ಕೊಟ್ಟು ಒಳ್ಳೆಯ ಮಾತುಗಳೇ ನಿಮಗೆ ಕೇಳುವಂತಾಗಲಿ ಎಂದು ಬಯಸುತ್ತಾರೆ. ಕಾಲ್ಗೆಜ್ಜೆಯನ್ನು ನೀಡಿ ನಿಮ್ಮ ಪ್ರತೀ ಹೆಜ್ಜೆಯಲ್ಲೂ ನಾವಿರುತ್ತೇವೆ ಎಂದು ಭರವಸೆಯನ್ನು ನೀಡುತ್ತಾರೆ. ಹೆಂಡತಿಯರು ಕೂಡ ತಮ್ಮ ಪ್ರೀತಿಯ ಪತಿಯಂದಿರಿಗೆ ಉಡುಗೊರೆಗಳನ್ನು ನೀಡುತ್ತಾರೆ. ಇತ್ತ ಸಿರಿಯನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಹೋಗುವ ಸಮರ್ಥ್ ಕೇಕ್ ಕಟ್ ಮಾಡಿಸಿ, ರೆಡ್ ರೋಸ್ ಕೊಟ್ಟು ಮುದ್ದಾಗಿ ತನ್ನ ಪತ್ನಿ ಜೊತೆಗೆ ಪ್ರೇಮಿಗಳ ದಿನವನ್ನು ಆಚರಿಸುತ್ತಾನೆ.

ಮಾಧವಗೆ ಸರ್ಪ್ರೈಸ್ ಕೊಟ್ಟ ಪೂರ್ಣಿ
ತುಳಸಿ ಮೊದಲಿನಿಂದಲೂ ಮಾಧವನ ಫ್ಯಾನ್ ಆಗಿದ್ದರು. ಹೀಗಾಗಿ ಮಾಧವ ಅಡುಗೆ ಮಾಡುವ ರೆಸಿಪಿ ಜೊತೆಗೆ ಅವರು ಹೇಳುತ್ತಿದ್ದ ಕಿವಿ ಮಾತುಗಳನ್ನು ಕೂಡ ಒಂದು ಪುಸ್ತಕದಲ್ಲಿ ಬರೆದು ಪಕ್ಕದ ಹಾಳೆಯಲ್ಲಿ ಮಾಧವ ಫೋಟೋವನ್ನು ಅಂಟಿಸುತ್ತಿದ್ದರು. ಈ ಪುಸ್ತಕವನ್ನು ಪೂರ್ಣಿ ಸರ್ಪ್ರೈಸ್ ಆಗಿ ನೀಡಿದ್ದಾಳೆ. ಇದನ್ನು ನೋಡಿ ಮಾಧವಗೂ ಖುಷಿಯಾಗುತ್ತದೆ. ಇನ್ನು ಮಾಧವ ತುಳಸಿ ನೀಡಿದ್ದ ಹೂವನ್ನು ಹಾಗೆ ತೆಗೆದಿಟ್ಟಿದ್ದರು ಇದನ್ನು ತುಳಸಿಗೆ ತೋರಿಸುತ್ತಾರೆ. ಪ್ರೇಮಿಗಳ ದಿನದಂದು ಇಬ್ಬರ ಮೇಲಿನ ಪ್ರೀತಿ ಹೆಚ್ಚಾಗಿದೆ. ಇವರಿಬ್ಬರ ಪ್ರೀತಿಯೇ ಮಾಧವ ಕುಟುಂಬವನ್ನು ಕಾಪಾಡುವುದರಲ್ಲಿ ಅನುಮಾನವಿಲ್ಲ.


Click it and Unblock the Notifications











