Srirastu Shubhamastu ; ದೊಡ್ಡದಾಯ್ತು ಮಾಧವ ಕುಟುಂಬ : ಉಲ್ಟಾ ಹೊಡೆದಿದ್ದೇಕೆ ಸಂಧ್ಯಾ ..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಮನೆಗೆ ಹೋಗಿ ಸಮರ್ಥ್ ಹಾಗೂ ಸಂಧ್ಯಾಳಿಗೆ ಯಾವುದೇ ಕಾರಣಕ್ಕೂ ಮಾಧವ ಕುಟುಂಬಕ್ಕೆ ನೀವಿಬ್ಬರು ಸೇರ್ಪಡೆ ಆಗಬೇಡಿ ಎಂದು ಹೇಳಿ ಬಂದಿದ್ದಾಳೆ. ಸಮರ್ಥ್ ಅಂತೂ ಮಾಧವ ವಂಶವೃಕ್ಷದಲ್ಲಿ ಯಾವ ಕಾರಣಕ್ಕೂ ತಾವು ಸೇರ್ಪಡೆ ಆಗಲು ಇಷ್ಟವಿಲ್ಲ ಎಂದು ಹೇಳಿದ್ದಾನೆ. ಅಲ್ಲದೇ ಸಂಧ್ಯಾ ಕೂಡ ಎಲ್ಲರ ಮುಂದೆಯೂ ಹೇಳಿಕೊಂಡಿದ್ದಾಳೆ. ಇತ್ತ ಶಾರ್ವರಿ, ದೀಪಿಕಾ ಎಲ್ಲರೂ ಸೇರಿ ತುಳಸಿ ಮಕ್ಕಳ ಹೆಸರು ತಮ್ಮ ಕುಟುಂಬದ ವಂಶವೃಕ್ಷದಲ್ಲಿ ಸೇರ್ಪಡೆ ಆಗಬಾರದು ಎಂದು ಮಾತನಾಡಿಕೊಂಡಿದ್ದಾರೆ.
ಉಲ್ಟಾ ಹೊಡೆದ ಸಂಧ್ಯಾ
ಅಭಿ ಯಾವುದಕ್ಕೂ ಇರಲಿ ಎಂದು ಸಂಧ್ಯಾಳಿಗೆ ಫೋನ್ ಮಾಡಿ ವಂಶ ವೃಕ್ಷದಲ್ಲಿ ನಿನ್ನ ಹೆಸರು ಸೇರಿಸದಿದ್ದರೆ ನಿನಗೆ ಎರಡು ಕೋಟಿ ರೂಪಾಯಿ ಕೊಡುವುದಾಗಿ ಹೇಳುತ್ತಾನೆ. ಸಂಧ್ಯಾ ಫೋನ್ ನಲ್ಲಿ ಡೀಲ್ ಗೆ ಒಪ್ಪಿಕೊಳ್ಳುತ್ತಾಳೆ. ಆದರೆ, ಮನೆಗೆ ಬಂದಾಗ ಎಲ್ಲರ ಮುಂದೆಯೂ ತನ್ನ ಹೆಸರು ಮಾಧವ ಅವರ ಕುಟುಂಬದಲ್ಲಿ ಸೇರಬೇಕು ಎಂದು ತನ್ನ ಇಚ್ಛೆಯನ್ನು ಹೇಳಿಕೊಳ್ಳುತ್ತಾಳೆ. ಸಮರ್ಥ್ ಈ ಮಾತನ್ನು ಕೇಳಿ ಶಾಕ್ ಆಗುತ್ತಾನೆ. ಮಾಧವ ಮನೆಯವರು ಕೂಡ ಸಂಧ್ಯಾ ಯಾಕೆ ಹೀಗೆ ಮಾಡಿ ತಮ್ಮ ಪ್ಲಾನ್ ನ ಉಲ್ಟಾ ಮಾಡಿದಳು ಎಂದು ಬೇಸರ ಮಾಡಿಕೊಳ್ಳುತ್ತಾರೆ. ಸಂಧ್ಯಾ ಸಮರ್ಥ್ ಗೆ ವಂಶವೃಕ್ಷದಲ್ಲಿ ಹೆಸರು ಸೇರಿಸಲು ಒಪ್ಪದಿದ್ದರೆ ತನ್ನ ಮಗುವಿನ ಮೇಲೆ ಆಣೆ ಎಂದು ಹೇಳಿ ಕಟ್ಟಿ ಹಾಕುತ್ತಾಳೆ.

ದೊಡ್ಡದಾಯ್ತು ಮಾಧವ ಕುಟುಂಬ
ಆಗ ಬೇರೆ ಮಾತನಾಡಲಾಗದ ಸಮರ್ಥ್ ತನಗೆ ಇಷ್ಟವಿಲ್ಲದಿದ್ದರೂ ಕೂಡ ತಾನು ವಂಶವೃಕ್ಷದ ಪತ್ರಕ್ಕೆ ಸಹಿ ಹಾಕುತ್ತಾನೆ. ಈಗ ಮಾಧವ ಆಸೆಯಂತೆಯೇ ತುಳಸಿ ಮಕ್ಕಳು ಕೂಡ ತನ್ನ ವಂಶವೃಕ್ಷದಲ್ಲಿ ಸೇರ್ಪಡೆಯಾಗಿದ್ದಾರೆ. ಮಾಧವ ಕುಟುಂಬ ದೊಡ್ಡದಾಗಿದೆ. ಆದರೆ, ಇದು ತುಳಸಿಗೆ ಕೊಂಚವೂ ಇಷ್ಟವಾಗಿಲ್ಲ. ಬೇರೆ ಏನು ಮಾಡುವುದು ಎಂಬುದು ಕೂಡ ಗೊತ್ತಾಗದೆಯೇ ಸುಮ್ಮನಿದ್ದಾಳೆ. ಸಮರ್ಥ್ ಗಂತೂ ದಿಕ್ಕೇ ತೋಚದಂತಾಗಿದೆ. ಸಂಧ್ಯಾ ಮಾಡಿರುವ ಈ ಖತರ್ನಾಕ್ ಕೆಲಸದಿಂದ ತನ್ನ ಮರ್ಯಾದೆ ಹೋಯ್ತು ಎಂದು ಬೇಸರ ಮಾಡಿಕೊಂಡಿದ್ದಾನೆ.

ಮಾಧವ ಆಸ್ತಿ ಮೇಲೆ ಸಂಧ್ಯಾ ಕಣ್ಣು
ಸಂಧ್ಯಾಳಿಗೆ ಅಭಿ ಕೊಡುವ ಎರಡು ಕೋಟಿ ರೂಪಾಯಿಗಿಂತಲೂ ಮಾಧವ ಬಳಿ ಇರುವ ನೂರಾರು ರೂಪಾಯಿ ಆಸ್ತಿಯ ಮೇಲೆ ಕಣ್ಣು ಬಿದ್ದಿದೆ. ಹಾಗಾಗಿ ಅಭಿ ಬಳಿ ತಕರಾರು ಮಾಡಿಕೊಳ್ಳದೇ, ಸೈಲೆಂಟ್ ಆಗಿ ಹೋಗಿ ಎಲ್ಲರ ಮುಂದೆ ತನ್ನ ಅಭಿಲಾಷೆಯನ್ನು ತೋರ್ಪಡಿಸಿದ್ದಾಳೆ. ತನ್ನ ಕೆಲಸವನ್ನು ಸುಲಭವಾಗಿ ಸಾಧಿಸಿಕೊಂಡಿದ್ದಾಳೆ. ದತ್ತ ತಾತ ಸಂಧ್ಯಾ ಮಾಡಿದ ಕೆಲಸಕ್ಕೆ ಬೈಯುತ್ತಾರೆ. ಆದರೂ ಸಂಧ್ಯಾಳಿಗೆ ಏನೂ ಅನಿಸುವುದಿಲ್ಲ. ಮಾಧವ ಅವರ ಆಸ್ತಿ ಪಾಲಾದರೆ, ನನಗೆ ಕಡಿಮೆ ಎಂದರೂ 25ಕೋಟಿ ಗ್ಯಾರೆಂಟಿ ಬರುತ್ತೆ ಎಂದು ಆಸೆಯಿಂದ ಇದ್ದಾಳೆ.

ಸೀಮಂತ ಮಾಡಿಸಿಕೊಳ್ಳಲು ಸಂಧ್ಯಾ ಹಠ
ವಂಶವೃಕ್ಷದಲ್ಲೇನೋ ಸಮರ್ಥ್ ಮತ್ತು ಸಂಧ್ಯಾ ಹೆಸರು ಸೇರಿಕೊಂಡಿದೆ. ಆದರೆ, ಅವರಿಗೆ ನಮ್ಮ ಆಸ್ತಿಯಲ್ಲಿ ಒಂದು ಸಣ್ಣ ಪಾಲು ಕೊಡಬಾರದು ಎಂದು ಅಭಿ ಲೆಕ್ಕಾಚಾರ ಹಾಕುತ್ತಿದ್ದಾನೆ. ಆದರೆ, ಇತ್ತ ಸಂಧ್ಯಾ ಈಗ ಹೇಗಿದ್ದರೂ ಮಾಧವ ಕುಟುಂಬಕ್ಕೆ ಸೇರಿದ್ದಾಯ್ತು. ಅವಳ ಮನೆಯಲ್ಲೇ ಸೆಟಲ್ ಆಗಬೇಕು. ಸೀಮಂತ ಕೂಡ ಅದ್ಧೂರಿಯಾಗಿ ಮಾಡಿಸಿಕೊಳ್ಳಬೇಕು ಎಂದು ಸ್ಕೆಚ್ ಹಾಕುತ್ತಿದ್ದಾಳೆ. ತನ್ನ ಆಸೆಯ ದೊಡ್ಡ ಲಿಸ್ಟ್ ತಯಾರಿಸಿದ್ದಾಳೆ. ಆದರೆ, ಹೊಟ್ಟೆಯಲ್ಲಿ ಮಗುವೇ ಇಲ್ಲದ ಸಂಧ್ಯಾ ಪಾಡು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











