ಮತ್ತೆ ಪ್ರಸಾರವಾಗುತ್ತಿದೆ ನಿಮ್ಮ ನೆಚ್ಚಿನ 'ಅಮೃತವರ್ಷಿಣಿ' ಧಾರಾವಾಹಿ
ಅದೊಂದು ಕಾಲವಿತ್ತು. ನಾಟಕ ಬಿಟ್ಟರೆ, ಸಿನಿಮಾ ಮಾತ್ರವೇ ಮನರಂಜನೆ ಸಿಗುತ್ತಿದ್ದದ್ದು. ಆದರೆ ಈಗ ಹಾಗಲ್ಲ ಸಿನಿಮಾ ಹೊರತು ಪಡಿಸಿದರೆ ಇಂದು ಜನರಿಗೆ ನೂರು ಆಯ್ಕೆಗಳಿವೆ. ಸೋಶಿಯಲ್ ಮೀಡಿಯಾ, ವೆಬ್ ಸೀರಿಸ್, ಶಾರ್ಟ್ ಮೂವಿಗಳು ಹೀಗೆ ವೀಕ್ಷಕರ ಮನರಂಜನೆಗೆ ಸಾಕಷ್ಟು ಆಯ್ಕೆಗಳಿವೆ. ಯಾವುದನ್ನು ಬೇಕಿದ್ದರೂ ಆಯ್ಕೆ ಮಾಡಿಕೊಳ್ಳಬಹುದು.
ಆದರೆ, ಯಾವ ಮನರಂಜನೆಗೂ ಕಡಿಮೆಯಲ್ಲ ಈ ಕಿರುತೆರೆ. ಏನೇ ಬಂದರೂ ಧಾರಾವಾಹಿಯ ಟ್ರೆಂಡ್ ಈಗಲೂ ಕಡಿಮೆ ಆಗಿಲ್ಲ. ಸಂಜೆ ಆದರೆ ಸಾಕು ಟಿವಿ ಮುಂದೆ ಕುಳಿತುಕೊಳ್ಳುವ ವೀಕ್ಷಕರಿಗಾಗಿ ಹೊಸ ಹೊಸ ಧಾರಾವಾಹಿಗಳು ಬರುತ್ತಲೇ ಇವೆ.
ಧಾರಾವಾಹಿಗಳ ಸ್ಪರ್ಧೆ ಎಷ್ಟೇ ಇದ್ದರೂ ಕನ್ನಡದಲ್ಲಿ ಕೆಲ ಧಾರಾವಾಹಿಗಳು ಸಾಕಷ್ಟು ವರ್ಷಗಳಿಂದ ಪ್ರಸಾರ ಆಗುತ್ತಲೇ ಇವೆ. ಇಂತಹ ಧಾರಾವಾಹಿಗಳು ತಮ್ಮ ಸಂಚಿಕೆಗಳ ಮೂಲಕ ದಾಖಲೆ ನಿರ್ಮಾಣ ಮಾಡಿವೆ. ಇನ್ನು ಕೆಲ ಧಾರಾವಾಹಿಗಳಂತೂ ಮರು ಪ್ರಸಾರವನ್ನೂ ಕಂಡಿವೆ. ಇದೀಗ ಅದೇ ಸಾಲಿಗೆ ಮತ್ತೊಂದು ಧಾರಾವಾಹಿಯೂ ಸೇರಿಕೊಳ್ಳುತ್ತಿದೆ.

ಸಿಹಿ ಸುದ್ದಿ ಕೊಟ್ಟ ಸ್ಟಾರ್ ಸುವರ್ಣ
ಟಿವಿ ಪ್ರೇಕ್ಷಕರಿಗೊಂದು ಖುಷಿಯ ಸಂಗತಿ. ಅದರಲ್ಲೂ ಸ್ಟಾರ್ ಸುವರ್ಣ ವೀಕ್ಷಕರಿಗೆ ಈ ಸುದ್ದಿ ಸಂತಹ ತರುವುದರಲ್ಲಿ ಅನುಮಾನವಿಲ್ಲ. ಸುಮಾರು 6 ವರ್ಷಗಳ ಕಾಲ ಪ್ರಸಾರವಾದ ಈ ಮಹಾ ಧಾರಾವಾಹಿ ಅಂತ್ಯಗೊಂಡಾಗಲೂ ಜನ ಬೇಸರಗೊಂಡಿದ್ದರು. ಇಂದಿನ ಧಾರಾವಾಹಿಗಳ ಸ್ಪರ್ಧೆಯಲ್ಲಿ ಕೆಲವೇ ಕೆಲವು ಧಾರಾವಾಹಿಗಳು ಜನರ ಮನ್ನಣೆ ಪಡೆದು ವರ್ಷಾನುಗಟ್ಟಲೇ ಪ್ರಸಾರವಾಗುತ್ತವೆ. ಹೀಗೆ, ವರ್ಷಗಳ ಕಾಲ ಸೂಪರ್ ಸಕ್ಸಸ್ ಕಂಡಿದ್ದ ಧಾರಾವಾಹಿಗಳಲ್ಲಿ ಒಂದು 'ಅಮೃತವರ್ಷಿಣಿ'.

ಪ್ರೇಕ್ಷಕರ ಮೆಚ್ಚಿನ ಸೀರಿಯಲ್
2012ರಲ್ಲಿ ಪ್ರಾರಂಭವಾಗಿದ್ದ ಈ ಧಾರಾವಾಹಿ ಪ್ರೇಕ್ಷಕರ ಅಚ್ಚುಮೆಚ್ಚಿನ ಸೀರಿಯಲ್ ಆಗಿತ್ತು. ರಾತ್ರಿ 9.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದರ ವಿಶೇಷ ಸಂಚಿಕೆಗಳ ರಸದೌತಣ ನೀಡುತ್ತಿತ್ತು. ಸುಮಾರು 1725ಕ್ಕೂ ಅಧಿಕ ಸಂಚಿಕೆಗಳಲ್ಲಿ 'ಅಮೃತವರ್ಷಿಣಿ' ಧಾರಾವಾಹಿ ಪ್ರಸಾರವಾಗಿತ್ತು. ಅತಿ ಹೆಚ್ಚು ವರ್ಷಗಳು ಪ್ರಸಾರವಾದ ಸೀರಿಯಲ್‌ಗಳ ಪೈಕಿ ಅಮೃತವರ್ಷಿಣಿಯೂ ಒಂದಾಗಿದೆ. ಆರಂಭದ ದಿನಗಳಲ್ಲೇ ವೀಕ್ಷಕರ ಮನ ಸೆಳೆದು ಕಿರುತೆರೆ ಇತಿಹಾಸದಲ್ಲಿ ಒಂದು ಹೊಸ ದಾಖಲೆ ಸೃಷ್ಠಿಸಿತ್ತು. ಅಮ್ಮನಂತ ಅತ್ತೆ, ಮಗಳಂತ ಸೊಸೆ.. ಇದೇ ಅಮೃತವರ್ಷಿಣಿಯ ಕಥೆಯಾಗಿತ್ತು.

ಬೇಸರಗೊಂಡಿದ್ದ ಪ್ರೇಕ್ಷಕರಿಗೆ ಗುಡ್ ನ್ಯೂಸ್
ಈ ಧಾರಾವಾಹಿಯನ್ನು ಯಾವುದೇ ರಾಜಿ ಮಾಡಿಕೊಳ್ಳದಂತೆ ಗುಣಾತ್ಮಕವಾಗಿ ತೆರೆಗೆ ತರಲಾಗಿತ್ತು. ಅದ್ದೂರಿಯಾಗಿ ಚಿತ್ರೀಕರಿಸಿ ನಿರ್ಮಾಪಕ ರವಿ ಗರಣಿ ಜನರನ್ನು ಸೆಳೆದಿದ್ದರು. ಕಿರುತೆರೆ ವೀಕ್ಷಕರನ್ನು ರಂಜಿಸುತ್ತಾ ಬಂದಿದ್ದ ಈ ಮೆಗಾ ಧಾರಾವಾಹಿ 2017ರಲ್ಲಿ ಅಂತ್ಯವಾಗಿತ್ತು. 'ಅಮೃತವರ್ಷಿಣಿ' ಧಾರಾವಾಹಿ ಅಂತ್ಯವಾದ ಹಿನ್ನೆಲೆ ಟಿವಿ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಒಳ್ಳೆ ಧಾರಾವಾಹಿ ಮಿಸ್ ಆಯ್ತು ಎಂದು ಕಾಮೆಂಟ್ ಮಾಡಿದ್ದರು. ಬಟ್ ಅಮೃತವರ್ಷಿಣಿ ಧಾರಾವಾಹಿ ಈಗ ಮತ್ತೆ ಪ್ರಸಾರವಾಗುತ್ತಿದೆ.

ಮತ್ತೆ ನೋಡಬಹುದು 'ಅಮೃತವರ್ಷಿಣಿ'
'ಅಮೃತವರ್ಷಿಣಿ' ಧಾರಾವಾಹಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಪ್ರೇಕ್ಷಕರಿಗೆ ಸ್ಟಾರ್ ಸುವರ್ಣವಾಹಿನಿ ಸಿಹಿ ಸುದ್ದಿ ಕೊಟ್ಟಿದೆ. ನಿನ್ನೆಯಿಂದ ಈ ಧಾರಾವಾಹಿಯೂ ಮತ್ತೆ ಪ್ರಸಾರವಾಗುತ್ತಿದೆ. ಅದೂ ಕೂಡ ವಾಹಿನಿಯ ಫೇಸ್ ಬುಕ್ ಹಾಗೂ ಯೂಟ್ಯೂಬ್ ನಲ್ಲಿ ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ಈ ಬಗ್ಗೆ ಸ್ವತಃ ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಟಿ ರಜಿನಿ ಮಾಹಿತಿ ನೀಡಿದ್ದಾರೆ. 'ಅಮೃತವರ್ಷಿಣಿ' ಧಾರಾವಾಹಿಯನ್ನು ಇಷ್ಟು ದಿನ ಮಿಸ್ ಮಾಡಿಕೊಳ್ಳುತ್ತಿದ್ದ ಪ್ರೇಕ್ಷಕರು ಈಗ ಮತ್ತೆ 'ಅಮೃತವರ್ಷಿಣಿ'ಯನ್ನು ನೋಡಬಹುದು. ಸೋ ಫ್ರೆಂಡ್ಸ್ ಮಿಸ್ ಮಾಡದೇ ಈ ಧಾರಾವಾಹಿಯನ್ನು ನೋಡಿ.


Click it and Unblock the Notifications











