Janaki Samsara:ಕಿರುತೆರೆ ವೀಕ್ಷಕರಿಗೆ ಗುಡ್ ನ್ಯೂಸ್; ಬರ್ತಿದೆ ಹೊಸ ಧಾರಾವಾಹಿ 'ಜಾನಕಿ ಸಂಸಾರ'
ವಿಭಿನ್ನ ಧಾರಾವಾಹಿಗಳ ಜೊತೆಗೆ ವಿನೂತನ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ವಾಹಿನಿಗಳ ಪೈಕಿ ಸ್ಟಾರ್ ಸುವರ್ಣ ವಾಹಿನಿಯೂ ಒಂದು. ಇತ್ತೀಚೆಗಷ್ಟೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮ ಲಚ್ಚಿ' ಧಾರಾವಾಹಿಯು ಸುಖಾಂತ್ಯ ಕಾಣುವ ಮೂಲಕ ಮುಕ್ತಾಯಗೊಂಡಿತ್ತು. ಇದರ ಬೆನ್ನಲ್ಲೇ ಹೊಸ ಧಾರಾವಾಹಿಯೊಂದು ನಿಮ್ಮನ್ನು ಮನರಂಜಿಸಲು ಬರುತ್ತಿದೆ.
ಹೌದು, 'ಜಾನಕಿ ಸಂಸಾರ' ಎನ್ನುವ ಧಾರಾವಾಹಿಯು ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಅಂದ ಹಾಗೇ 'ಜಾನಕಿ ಸಂಸಾರ' ತುಂಬು ಕುಟುಂಬದ ಕತೆ. ಮನೆಯ ಹಿರಿ ಸೊಸೆ ಜಾನಕಿ, ಇಡೀ ಸಂಸಾರದ ಹೊಣೆ ಹೊತ್ತವಳು. ಬದುಕಿನಲ್ಲಿ ಎಂತಹದ್ದೇ ಕಷ್ಟ ಬರಲಿ, ಅದನ್ನು ಧೈರ್ಯದಿಂದ ಎದುರಿಸುವ ಛಲಗಾತಿ ಆಕೆ.

ವಿದ್ಯಾವಂತೆಯಾಗಿರುವ ಜಾನಕಿ ತನ್ನ ಸಂಸಾರದ ಜೊತೆ ಉದ್ಯೋಗವನ್ನು ಕೂಡಾ ಸರಿದೂಗಿಸಿಕೊಂಡು ಸಾಗುತ್ತಿರುವಾಕೆ. ಯಾವತ್ತಿಗೂ ತನ್ನ ಮನೆಯನ್ನು, ಮನೆ ಮಂದಿಯನ್ನು ಒಗಟ್ಟಿನಲ್ಲಿ ಇರುವಂತೆ ಬಯಸುವ ಜಾನಕಿಯ ಸಂಸಾರಕ್ಕೆ ಮನೆಯೊಡೆಯುವ ವ್ಯಕ್ತಿಯ ಆಗಮನವಾದರೆ ಹೇಗಿರುತ್ತದೆ? ಆ ಮನೆಯೊಡೆಯುವ ವ್ಯಕ್ತಿಯಿಂದ ತನ್ನ ಸಂಸಾರವನ್ನು ಜಾನಕಿ ಹೇಗೆ ಕಾಪಾಡಿಕೊಳ್ಳುತ್ತಾಳೆ ಎಂಬುದೇ ಧಾರಾವಾಹಿಯ ಕಥಾಹಂದರ.
'ಕುಲವಧು', 'ಯಾರೇ ನೀ ಮೋಹಿನಿ', 'ಗೃಹಪ್ರವೇಶ' ಧಾರಾವಾಹಿಯ ಖ್ಯಾತಿಯ ಸೂರಜ್ ಹೊಳಲು ಇದೀಗ ಕಥಾನಾಯಕ ರಾಘವ್ ಆಗಿ ತೆರೆಯ ಮೇಲೆ ಬರಲಿದ್ದಾರೆ. ಇನ್ನು ನಾಯಕಿ ಜಾನಕಿಯಾಗಿ ಅಂಜನಾ ಶ್ರೀನಿವಾಸ್ ಅವರು ಬಣ್ಣ ಹಚ್ಚಲಿದ್ದಾರೆ. ದಶಕಗಳ ಹಿಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ 'ಕೃಷ್ಣ ರುಕ್ಮಿಣಿ'ಯಲ್ಲಿ ನಾಯಕಿ ರುಕ್ಮಿಣಿಯಾಗಿ ನಟಿಸಿದ್ದ ಅಂಜನಾ ಶ್ರೀನಿವಾಸ್ ಜಾನಕಿಯಾಗಿ ರಂಜಿಸಲಿದ್ದಾರೆ. ಬರೋಬ್ಬರಿ 13 ವರ್ಷಗಳ ನಂತರ ಅಂಜನಾ ಅವರು ಕನ್ನಡ ಕಿರುತೆರೆಗೆ ಮರಳುತ್ತಿದ್ದು ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯಲಿದ್ದಾರೆ.

ಇದರ ಜೊತೆಗೆ ರೇಖಾ ರಾವ್, ಮರೀನಾ ತಾರಾ, ರವಿ ಭಟ್, ಚಂದನ್ ವಿಜಯ್, ಶಿಲ್ಪಾ ಅಯ್ಯರ್, ಸಮೀಪ್ ಆಚಾರ್ಯ, ಕಾವ್ಯ ಶಾಸ್ತ್ರಿ, ಬಾಲ ನಟಿ ಶ್ರೀದಿಶಾ ಮುಂತಾದವರು ತಾರಾಗಣದಲ್ಲಿದ್ದಾರೆ. ಅಂದ ಹಾಗೇ ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಜಾನಕಿ ಸಂಸಾರ ಪ್ರಸಾರವಾಗಲಿದೆ.


Click it and Unblock the Notifications











