ಬೆಟ್ಟದ ಹೂ: ರಾಹುಲ್‌ಗೆ ಹಿಡಿ ಶಾಪ, ಮಾಲಿನಿ ಮೇಲೆ ಫುಲ್ ಸಿಂಪತಿ: ಏನಾಗ್ತಿದೆ ಹೂವಿ ಜೀವನದಲ್ಲಿ?
ನೋಡ ನೋಡುತ್ತಿದ್ದಂತೆ 'ಬೆಟ್ಟದ ಹೂ' ಧಾರಾವಾಹಿಯಲ್ಲಿ ಒಂದಷ್ಟು ಬದಲಾವಣೆಗಳು ನಡಿತೀದೆ. ಹೂವಿಗೆ ಇನ್ಯಾವತ್ತೂ ಗಂಡನ ಸ್ಥಾನ, ಗಂಡನ ಪ್ರೀತಿ ಸಿಗುವುದೇ ಇಲ್ಲ ಎಂದುಕೊಂಡಿದ್ದಾಗಲೇ, ಎಲ್ಲವೂ ಉಲ್ಟಾ ಆಗಿದೆ. ರಾಹುಲ್ ಸಂಪೂರ್ಣ ಬದಲಾಗಿದ್ದಾನೆ. ಹೂವಿಯ ಜೊತೆಗೆ ಊರಿಗೆ ಬಂದಿದ್ದಾನೆ. ಹೆಂಡತಿಗಾಗಿ ಏನೆಲ್ಲಾಮಾಡಬೇಕೋ ಅದೆಲ್ಲವನ್ನೂ ಚಾಚು ತಪ್ಪದೆ, ಜವಾಬ್ದಾರಿಯಿಂದ ಮಾಡುತ್ತಿದ್ದಾನೆ. ಆದರೆ ಅಲ್ಲಿ ಮಾಲಿನಿ ನೋವಿನಲ್ಲಿ ಕಾಲ ಕಳೆಯುತ್ತಿದ್ದಾಳೆ.
ರಾಹುಲ್ ದಿಢೀರನೇ ಇಷ್ಟೊಂದು ಬದಲಾಗುವುದಕ್ಕೆ ಹೇಗೆ ಸಾಧ್ಯ ಎಂಬುದೇ ಹೂವಿಗೆ ತಿಳಿಯುತ್ತಿಲ್ಲ. ಆದರೆ ಅಮ್ಮುಗೆ ಒಂದಷ್ಟು ಧೈರ್ಯ ಬಂದಂತಾಗಿದೆ. ಅಳಿಯ ಹೀಗಿದ್ದರೇನೆ ಚೆಂದ ಎಂದು ಇಷ್ಟವಾಗಿದ್ದೆಲ್ಲವನ್ನು ಬಡಿಸಿ, ಗೌರ ಖುಷಿ ಪಡುತ್ತಿದ್ದಾಳೆ. ಅಳಿಯ ಮತ್ತು ಮಗಳ ಸಂಸಾರದ ಬಗ್ಗೆ ಇದ್ದ ಗೊಂದಲ ಗೌರನಿಗೆ ಇದೀಗ ದೂರು ಆಗಿದೆ. ಆದರೆ ಒಬ್ಬರ ಸಂತಸ ಮತ್ತೊಬ್ಬರಿಗೆ ನೋವು ಕೊಡುತ್ತಿದೆ.

ರಾಹುಲ್‌ಗೆ ಮಾಲಿನಿ ನೆನಪೇ ಇಲ್ಲವಾ?
ರಾಹುಲ್ ಮತ್ತು ಮಾಲಿನಿ ಹಲವು ವರ್ಷಗಳ ಪ್ರೀತಿಗೆ ಇತ್ತೀಚೆಗೆ ಮದುವೆಯೆಂಬ ಮುದ್ರೆ ಒತ್ತಿದ್ದರು. ಮನೆಯವರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಸಂಸಾರವೂ ಸುಖಸಾಗರದಲ್ಲಿಯೇ ತೇಲುತ್ತಾ ಇತ್ತು. ಮಾಲಿನಿಗೆ ಮನೆಯವರೆಲ್ಲರ ಪ್ರೀತಿ ಸಿಕ್ಕಿತ್ತು. ಶ್ರೀಮಂತಿಕೆಯಲ್ಲಿಯೇ ಬೆಳೆದ ಮಾಲಿನಿ ರಾಹುಲ್ ಮನೆಯಲ್ಲಿ ಬೇಕಾದಷ್ಟು ಸೌಕರ್ಯವಿಲ್ಲದೆ ಹೋದರು, ಇರುವುದರಲ್ಲಿಯೇ ಖುಷಿ ಪಡುತ್ತಾ ಸಂಸಾರ ನಡೆಸುತ್ತಿದ್ದಳು. ಮಾಲಿನಿಯನ್ನು ತುಂಬಾ ಪ್ರೀತಿಸುತ್ತಿದ್ದ ರಾಹುಲ್‌ಗೆ ಇದೀಗ ಮಾಲಿನಿಯ ನೆನಪು ಬಾರದಿರುವಷ್ಟು ದೂರ ನಿಂತಿದ್ದಾನೆ.

ರಾಹುಲ್ ಈ ಬದಲಾವಣೆ ಲೇಟಾಯ್ತು
ರಾಹುಲ್ ಈ ಬಗ್ಗೆ ಮುಂಚೆಯೇ ಯೋಚಿಸಬೇಕಿತ್ತು. ಮಾಲಿನಿಯನ್ನು ಪ್ರೀತಿಸುತ್ತಿರುವಾಗಲೇ ಹೂವಿಯನ್ನು ಪರಿಸ್ಥಿತಿಗೆ ಸೋತು ಮದುವೆಯಾಗಿದ್ದ. ಆಗಲೇ ಅರಿತುಕೊಂಡಿದ್ದರೆ ಮಾಲಿನಿಯ ಬದುಕು ಬೇರೆಯ ತಿರುವು ಪಡೆದುಕೊಳ್ಳುತ್ತಿತ್ತು. ಆದರೆ ಹೂವಿ ನನ್ನ ಜೀವನಕ್ಕೆ ಸರಿ ಹೊಂದುವುದೇ ಇಲ್ಲ ಎಂದುಕೊಂಡು ಮಾಲಿನಿಯನ್ನು ಮದುವೆಯಾಗಿಬಿಟ್ಟ. ಹೂವಿಯ ಮುಗ್ಧತೆಗೆ ಸೋತಿದ್ದಾನೆ. ಇದೇ ಕಾರಣಕ್ಕೇನೆ ಈಗ ಹೂವಿಯ ಮೇಲೆ ಪ್ರೀತಿ ತೋರುತ್ತಿದ್ದಾನೆ. ಅವಳಿಗೆ ಗಂಡನಾಗಿ ಬದುಕುತ್ತಿದ್ದಾನೆ. ಆದರೆ ಈ ಪಶ್ಚಾತ್ತಾಪದಿಂದಾಗಿ ಹೂವಿ ಖುಷಿಯಾಗಿದ್ದರೂ, ಮಾಲಿನಿ ನೋವು ಅನುಭವಿಸಬೇಕಾಗುತ್ತದೆ.

ಹೂವಿಗಾಗಿ ರಾಹುಲ್ ಪೂಜೆ
ಚೆನ್ನೈಗೆ ಹೋಗುತ್ತೇನೆಂದು ಚನ್ನವಲ್ಸೆಗೆ ಹೋಗಿರುವ ರಾಹುಲ್, ಹೂವಿಯ ಗಂಡನಾಗಿ ಏನೆಲ್ಲಾ ಕರ್ತವ್ಯಗಳನ್ನು ನಿಭಾಯಿಸಬೇಕೋ ಅದೆಲ್ಲವನ್ನು ನಿಭಾಯಿಸುತ್ತಿದ್ದಾನೆ. ಶ್ರೇಯಸ್ಸಿಗಾಗಿ ಹೆಂಡತಿ ಜೊತೆ ಸೇರಿ ಪೂಜೆ ಕೂಡ ಸಲ್ಲಿಸುತ್ತಿದ್ದಾನೆ . ಈ ವೇಳೆ ಗಂಡ ಹೆಂಡತಿ ಹೆಸರೇಳಬೇಕಾದ ಪರಿಸ್ಥಿತಿಯಲ್ಲಿ ನನ್ನ ಹೆಸರು ರಾಹುಲ್ ಚಕ್ರವರ್ತಿ ನನ್ನ ಹೆಂಡತಿ ಹೆಸರು ಹೂವಿ ರಾಹುಲ್ ಚಕ್ರವರ್ತಿ ಎಂದು ಹೇಳಿದ್ದಾನೆ. ಇದು ಹೂವಿಯ ಮನಸ್ಸಿಗೆ ತುಂಬಾನೇ ಖುಷಿ ಕೊಟ್ಟಿದೆ. ಗೌರಗೆ ಸಮಾಧಾನವಾಗಿದೆ. ಆದರೆ ಆ ಕಡೆ ಮಾಲಿನಿ ಮನಸ್ಥಿತಿ ತುಂಬಾ ಹದಗೆಡುತ್ತಿದೆ. ಮದುವೆಯ ವಿಡಿಯೋ ನೋಡುತ್ತಿದ್ದಾಗಲೂ ರಾಹುಲ್ ಮತ್ತೆ ಸಿಗುವುದು ಅನುಮಾನ ಎಂಬ ಸೂಚನೆ ಸಿಕ್ಕಿದೆ.
ನೆಟ್ಟಿಗರೆಲ್ಲರೂ ಮಾಲಿನಿಗೆ ಸಪೋರ್ಟ್
ಮಾಲಿನಿಯ ಪರಿಸ್ಥಿತಿ ಈಗ ಸರಿ ಇಲ್ಲ. ರಾಹುಲ್ ನೆನೆಸಿಕೊಂಡು ಕೊರಗುತ್ತಿದ್ದಾಳೆ. ಆದರೆ ರಾಹುಲ್ ಮಾಲಿನಿಗಾಗಿ ಸ್ಚಲ್ಪ ಸಮಯವನ್ನು ನೀಡಿಲ್ಲ, ಆಕೆಯ ಭಾವನೆಯನ್ನು ಅರ್ಥೈಸಿಕೊಂಡಿಲ್ಲ. ಇದು ನೆಟ್ಟಿಗರಿಗೆ ಬೇಸರ ತರಿಸಿದೆ. ಪಾಪ ಮಾಲಿನಿ ಎಂದು ಮಾಲಿನಿಯ ಪರವಾಗಿ ಧ್ವನಿ ಎತ್ತಿದ್ದಾರೆ. ಮಾಲಿನಿಗೆ ಅನ್ಯಾಯವಾಗುತ್ತಿದೆ, ರಾಹುಲ್ ಈ ರೀತಿ ಮಾಡಬಾರದಿತ್ತು ಅಂತ ಬುದ್ಧಿ ಮಾತು ಹೇಳುತ್ತಿದ್ದಾರೆ. ಇನ್ನೇನಿದ್ದರೂ ಮುಂದಿನ ವಾರದಿಂದ ಎಪಿಸೋಡ್ ಸೆಂಟಿಮೆಂಟ್ ಆಗಿರುತ್ತೆ ಎಂಬ ನಿರೀಕ್ಷೆಯಲ್ಲಿ ವೀಕ್ಷಕರಿದ್ದಾರೆ.


Click it and Unblock the Notifications











