ಬೆಟ್ಟದ ಹೂ: ರಾಹುಲ್ ಮೇಲೆ ಅನುಮಾನ: ಮನೆಕೆಲಸದವನಿಗೆ ಹೂವಿ ಗಂಟು ಹಾಕಲು ಹೊರಟ ಮಾಲಿನಿ!
ಹೂವಿಗೆ ಪೂರ್ತಿಯಾಗಿ ನ್ಯಾಯ ಸಿಗದೆ ಹೋದರು ಇತ್ತೀಚೆಗೆ ಸ್ವಲ್ಪ, ಸ್ವಲ್ಪವೇ ನ್ಯಾಯ ಸಿಗುತ್ತಿದೆ. ರಾಹುಲ್ ಹೆಂಡತಿಯಾಗಿ ನೋಡಿಕೊಳ್ಳಲು ಆಗದೆ ಇದ್ದರೂ, ಒಬ್ಬ ಒಳ್ಳೆ ಸ್ನೇಹಿತನಾಗಿ ಹೂವಿಯ ಬೆಂಗಾವಲಾಗಿ ನಿಂತಿದ್ದಾನೆ. ಅದೇ ಕಾರಣಕ್ಕಾಗಿಯೇ ಇದೀಗ ಹೂವಿಗೆ ಕಂಪ್ಲೀಟ್ ರೈಟ್ಸ್ ಕೊಟ್ಟಿದ್ದಾನೆ. ರಾಹುಲ್ ನೀಡುವ ಸಣ್ಣ ಸಣ್ಣ ಸಪ್ರೈಸ್, ಸ್ವಲ್ಪೇ ಸ್ವಲ್ಪ ಪ್ರೀತಿಯ ಮಾತುಗಳಿಗೂ ಹೂವಿ ಕರಗಿ ನೀರಾಗುತ್ತಿದ್ದಾಳೆ. ಆದರೆ ಇದು ಮಾಲಿನಿಯ ಯೋಚನೆಗೆ ವಿರುದ್ಧವಾಗಿದೆ.
ಹೂವಿಯನ್ನು ಚನ್ನವಲ್ಸೆಯಿಂದ ಕರೆದುಕೊಂಡು ಬಂದಾಗಲೇ ಚಕ್ರವರ್ತಿ ಫ್ಯಾಮಿಲಿ ತಮ್ಮ ಮನೆಯಲ್ಲಿ ಒಬ್ಬಳು ಎಂದುಕೊಂಡರು. ಅದೇ ಪ್ರೀತಿಯನ್ನು ತೋರಿಸುವುದಕ್ಕೆ ಆರಂಭಿಸಿದರು. ಹೂವಿಗೆ ಅಂತಾನೆ ಕೋಣೆಯನ್ನು ಕೊಟ್ಟರು, ಹಬ್ಬ ಹರಿದಿನಗಳಲ್ಲಿ ಆಕೆಗೆಂದೆ ಹೊಸ ಬಟ್ಟೆ ಕೊಡಿಸುತ್ತಿದ್ದರು. ತಮ್ಮಮನೆಯವರೆಲ್ಲಾ ಹೇಗೆ ಇರುತ್ತಿದ್ದರೋ ಅದೇ ರೀತಿಯಲ್ಲಿಯೇ ಹೂವಿಯನ್ನು ನೋಡಿಕೊಂಡರು. ಆದರೆ ರಾಹುಲ್ ಮಾತ್ರ ವಿರುದ್ಧ ದಿಕ್ಕಿನಲ್ಲಿದ್ದ. ಈಗ ಎಲ್ಲವೂ ಸರಿಯಾಗಿದೆ.

ಬರ್ತ್ ಡೇ ಆಚರಿಸಿ ಸಂಭ್ರಮಿಸಿದ ಹೂವಿ
ಅಂದು ಹೂವಿಯ ಹುಟ್ಟುಹಬ್ಬ. ಹೂವಿ ತವರಿನಲ್ಲಿದ್ದಾಗ ಅವರ ಅಮ್ಮು ದೇವರಿಗೆ ಪೂಜೆ ಮಾಡಿ, ಒಂದು ಸಿಹಿ ತಿನಿಸು ಮಾಡಿ, ನಾಲ್ಕು ಜನರ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಳು. ಆದರೆ ಈಗ ಮದುವೆಯಾಗಿ ಗಂಡನ ಮನೆಗೆ ಬಂದಿದ್ದಾಳೆ. ಎಲ್ಲರಿಗೂ ಹುಟ್ಟುಹಬ್ಬ ಅಂತ ಹೇಳುವ ಉಸಾಬರಿಗೆ ಹೋಗಲಿಲ್ಲ. ಮನೆಯವರು ಕೂಡ ನಮಗೇನು ಗೊತ್ತೆ ಇಲ್ಲವೇನೋ ಎಂಬಂತೆ ಸುಮ್ಮನಿದ್ದರು. ಆದರೆ ಒಳಗೊಳಗೆ ಎಲ್ಲವೂ ಫ್ಯ್ಲಾನ್ ಮಾಡಲಾಗಿತ್ತು. ಎಲ್ಲಾ ರೆಡಿಯಾದ ಮೇಲೆ ಹೂವಿಗೆ ಕೊಟ್ಟ ಸಪ್ರೈಸ್ ನೋಡಿ ಆಕೆಯೇ ಶಾಕ್ ಆಗಿದ್ದಳು. ಜೊತೆಗೆ ಒಂದಷ್ಟು ಭಾವನಾತ್ಮಕತೆಯ ಮಾತುಗಳನ್ನು ಆಡಿದ್ದಳು. ಅಪ್ಪನ ಪ್ರೀತಿಯ ಮಾತುಗಳನ್ನು ಕೇಳುವಾಗ ಗೌತಮ್ ಅಕ್ಷರಶಃ ನೊಂದು ಹೋಗಿದ್ದರು. ಆದರೆ ಈ ಹುಟ್ಟುಹಬ್ಬದಲ್ಲಿ ಹೂವಿ ಹಾಕಿದ್ದ ಡ್ರೆಸ್ ಮೇಲೆ ಎಲ್ಲರ ಕಣ್ಣು ಇತ್ತು. ಆದರೆ ಡ್ರೆಸ್ ಕೊಟ್ಟವರ ಹೆಸರು ರಿವೀಲ್ ಆಗಲೇ ಇಲ್ಲ.

ಹೂವಿಗೆ ಮದುವೆ ಮಾಡಲು ಹೊರಟ ಮಾಲಿನಿ
ರಾಹುಲ್ ಮನೆಯಲ್ಲಿ ಎಲ್ಲರಿಗೂ ಗೊತ್ತಿರುವಂತೆ ಹೂವಿ ಮತ್ತು ಸಕಲಕಲಾವಲ್ಲಭ ಪ್ರದೀಪ್ ಇಬ್ಬರು ಮನೆಕೆಲಸಕ್ಕಿದ್ದಾರೆ. ಪ್ರದೀಪ್ ಹೆಚ್ಚು ಮಾತನಾಡಲ್ಲ. ಹೂವಿ ಸುಮ್ಮನೆ ಇರುವವಳೇ ಅಲ್ಲ. ಹೂವಿ, ಪ್ಯಾಟಿ ಪೆಂಗಾ ಎಂದೇ ಕರೆಯುತ್ತಾಳೆ. ಆದರೆ ಪ್ಯಾಟಿಪೆಂಗ ಹೂವಿ ಬಗ್ಗೆ ಹೇಳಿದ ಆ ಒಂದು ಸುಳ್ಳು ಮಾಲಿನಿಯ ನಿರ್ಧಾರವನ್ನೇ ಬದಲಾಯಿಸಿದೆ. ಹೂವಿ ಮೇಲೆ ಪ್ರದೀಪನಿಗೆ ಪ್ರೀತಿಯಾಗಿದೆ ಎಂದು ತಿಳಿದಿದ್ದಾಳೆ. ಅದನ್ನು ಹೂವಿಯ ಬಳಿಯೂ ಹೇಳಲು ಪ್ರಯತ್ನಿಸುತ್ತಿದ್ದಾಳೆ. ಆತನ ಮನಸ್ಸಲ್ಲಿ ಏನೋ ಇದೆ ಅರ್ಥ ಮಾಡಿಕೋ ಎಂಬಂತೆ ಮಾಲಿನಿ ಒತ್ತಾಯಿಸುತ್ತಿದ್ದಾಳೆ.

ಮಾಲಿನಿ ನಿರ್ಧಾರವನ್ನು ಮನೆಯವರು ಒಪ್ಪುತ್ತಾರಾ?
ಹೂವಿ ಹುಟ್ಟುಹಬ್ಬಕ್ಕೆಂದು ರಾಹುಲ್ ಹೊಸ ಬಟ್ಟೆಯನ್ನೇನೋ ತಂದುಕೊಟ್ಟ. ಆದರೆ ಆ ಸತ್ಯವನ್ನು ಎಲ್ಲರ ಮುಂದೆ ಒಪ್ಪಿಕೊಳ್ಳುವುದಕ್ಕೆ ಆಗಲೇ ಇಲ್ಲ. ಹೀಗಾಗಿ ಆ ಅನುಮಾನ ಮಾಲಿನಿಯ ತಲೆ ಹೊಕ್ಕಿತ್ತು. ಜೊತೆಗೆ ಅದಕ್ಕೆ ತುಪ್ಪ ಸುರಿಯುವಂತೆ ಹೂವಿಗೆ ಬಟ್ಟೆ ತೆಗೆದುಕೊಂಡು ಬಂದ ಬಿಲ್ ಕೂಡ ರಾಹುಲ್ ಕೋಣೆಯಲ್ಲಿಯೇ ಸಿಕ್ಕಿತ್ತು. ಇದು ಗಂಡ ಹೆಂಡತಿ ನಡುವೆ ಇನ್ನೇನು ಯುದ್ಧ ಶುರುವಾಗಬೇಕು ಎನ್ನುವಷ್ಟರಲ್ಲಿಯೇ ಸಕಲಕಲಾವಲ್ಲಭ ಪ್ರದೀಪ್ ಅವರಿಬ್ಬರ ನಡುವೆ ಹೋಗಿ ಈ ಡ್ರೆಸ್ ತಂದಿದ್ದು ನಾನು ಎಂದ. ಇದು ಮಾಲಿನಿಗೆ ತುಂಬಾ ಖುಷಿ ಕೊಟ್ಟಿದೆ. ಹೀಗಾಗಿ ಅವರಿಬ್ಬರನ್ನು ಒಂದು ಮಾಡಬೇಕೆಂದು ಮನಸ್ಸು ಮಾಡಿದ್ದಾಳೆ.
ರಾಹುಲ್ ಸಲುಗೆಯಲ್ಲಿ ಎಲ್ಲವನ್ನೂ ಮರೆತ ಹೂವಿ
ರಾಹುಲ್ ಈ ಮುಂಚೆ ಹೀಗಿರಲಿಲ್ಲ. ಹೂವಿಯನ್ನು ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಾನೆ. ಕಾಳಜಿ ಮಾಡುತ್ತಾನೆ. ಆದರೆ ಅವನಲ್ಲಿ ಕ್ಲಾರಿಟಿ ಇದೆ. ಪ್ರೀತಿ ವಿಚಾರದಲ್ಲಿ ಮಾಲಿನಿ ಬಿಟ್ಟರೆ ಆ ಜಾಗದಲ್ಲಿ ಬೇರೆ ಯಾರು ಬರಲು ಸಾಧ್ಯವಿಲ್ಲ. ಹೀಗಾಗಿ ಆ ಸಲುಗೆಯಲ್ಲಿ ಸುಲಭವಾಗಿ ನಡೆದುಕೊಳ್ಳುತ್ತಾನೆ. ಆದರೆ ಆ ಸಲುಗೆಯನ್ನು ನೋಡುವ ಮಾಲಿನಿ ಮನಸ್ಸಿನಲ್ಲೇ ಕೋಪಗೊಳ್ಳುತ್ತಿದ್ದಾಳೆ. ಈಗಾಗಲೇ ಇಬ್ಬರ ವಿಚಾರದಲ್ಲಿ ಪ್ರದೀಪ್ ಕೂಡ ಸಣ್ಣ ಅನುಮಾನ ವ್ಯಕ್ತಪಡಿಸಿದ್ದಾನೆ. ಈ ಮಧ್ಯೆ ಹೂವಿ ಮತ್ತು ರಾಹುಲ್ ಸೇರಿ ಇಬ್ಬರು ಹಾಡು ಬೇರೆ ಹಾಡುತ್ತಿದ್ದಾರೆ. ಹೂವಿ, ರಾಹುಲ್ ಪ್ರೀತಿಯಲ್ಲಿ ಕರಗುತ್ತಿದ್ದಾಳೆ.


Click it and Unblock the Notifications











