ಬೆಟ್ಟದ ಹೂ: ರಿಯಲ್ ಲೈಫ್ ದಾಂಪತ್ಯಕ್ಕೆ ಮಾದರಿ ರಾಹುಲ್ & ಮಾಲಿನಿ!
'ಬೆಟ್ಟದ ಹೂ' ಧಾರಾವಾಹಿ ಕುಟುಂಬದೊಳಗೆ ನಡೆಯುವ ಸಂಬಂಧಗಳ ಸ್ಟೋರಿ. ತುಂಬು ಕುಟುಂಬದಲ್ಲಿ ಹೇಗೆಲ್ಲಾ ಇರಬೇಕು ಎಂಬುದು ಈ ಧಾರಾವಾಹಿಯಲ್ಲಿ ಅನಾವರಣವಾಗಿದೆ. ಕೆಲಸ, ವಿಭಿನ್ನ ಜೀವನ ಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಕುಟುಂಬದಲ್ಲಿ ಆರು ಜನರಿದ್ದರೆ ಹೆಚ್ಚು. ನಾವೂ ನಮಗಿಬ್ಬರು ಎಂಬುದು ಈಗ ಎಲ್ಲರನ್ನು ಆವರಿಸಿಕೊಂಡಿರುವ ವಿಚಾರ. ಇದನ್ನು ಮೀರಿ ಕೆಲವರ ಲೈಫ್‌ನಲ್ಲಿ ನಾವೂ ನಾವಿಬ್ಬರೇ ಎಂಬ ಕಾನ್ಸೆಪ್ಟ್ ಮೇಲೂ ಬದುಕು ನಡೆಸುತ್ತಿದ್ದಾರೆ.
ಆದರೆ ಸ್ಟಾರ್ ಸುವರ್ಣದ 'ಬೆಟ್ಟದ ಹೂ' ಧಾರಾವಾಹಿ ಹಾಗಲ್ಲ. ಕೂಡು ಕುಟುಂಬದ ಮೌಲ್ಯ ತಿಳಿಸುತ್ತಿದೆ. ಸಂಬಂಧಿಕರೆಂದರೆ, ವಾರಗಿತ್ತಿಯರೆಂದರೆ, ದೊಡ್ಡಮ್ಮ-ದೊಡ್ಡಪ್ಪನ ಮಕ್ಕಳೆಂದರೆ ಸ್ವಂತದವರೆಂಬಂತೆ ನಡೆದುಕೊಳ್ಳುವ ಪಾಠ ಕಲಿಸುತ್ತಿದೆ. ಮನೆಕೆಲಸದವಳಾದರೂ ಆಕೆಗೆ ಕೊಡುವ ಗೌರವ, ಮನುಷ್ಯತ್ವ, ಪ್ರೀತಿಗೆ ಬಿಟ್ಟರೆ ಚಕ್ರವರ್ತಿ ಗೂಡಿನಲ್ಲಿ ಬೇರೆ ಯಾವುದಕ್ಕೂ ಜಾಗವಿಲ್ಲ.

ಗಂಡ-ಹೆಂಡತಿಗೆ ಮಾಲಿನಿ & ರಾಹುಲ್ ಮಾದರಿ
ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿತ್ತು. ಅದು ಆ ಕಾಲಕ್ಕೆ ಸೀಮಿತ ಕೂಡ ಆಗಿತ್ತು. ಆದರೆ ಜನರೇಶನ್ ಚೇಂಜ್ ಆದಂತೆ ಗಾದೆ ಮಾತು ಸಂಪೂರ್ಣವಾಗಿ ಮಾಯವಾಗಿದೆ. ಗಂಡ ಹೆಂಡತಿ ಜಗಳ ಡಿವೋರ್ಸ್ ಕೊಡಿಸುವ ತನಕ ಎಂಬಂತಾಗಿದೆ ಕೆಲ ಕೇಸುಗಳಲ್ಲಿ. ಆದರೆ ರಾಹುಲ್ ಮತ್ತು ಮಾಲಿನಿ ಸಂಬಂಧಗಳ ವಿಚಾರವಾಗಿ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಗಂಡ ಹೆಂಡತಿ ನಡುವೆ ಎಷ್ಟೇ ಜಗಳ-ಮುನಿಸು ಇದ್ದರೂ, ಅದು ಪ್ರೀತಿಯ ಮುಂದೆ ಸೋಲಲೇಬೇಕು. ಆ ಪ್ರೀತಿ ಅನ್ನೋದೆ ಅಲ್ಲಿ ಮುಖ್ಯವಾಗಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಜಗಳ, ಮನಸ್ತಾಪವಿದ್ದರೂ, ರಾಹುಲ್ ಪ್ರೀತಿ ತೋರಿಸಿದಾಗ ಮತ್ತದೆ ಕೋಪವನ್ನು ಮುಂದುವರೆಸಲ್ಲ. ಹೀಗಾಗಿ ಇಬ್ಬರ ದಾಂಪತ್ಯ ತುಂಬಾ ಅದ್ಭುತವಾಗಿದೆ.

ರಾಹುಲ್ & ಹೂವಿಗೆ ಮಾಲಿನಿ ಎಚ್ಚರಿಕೆ
ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಸಾವಿತ್ರಿ ವ್ರತದ ದಿನ ಮಂದ್ರಾ ಅದ್ಯಾವಾಗ ಮಾಲಿನಿ ಮನಸ್ಸಲ್ಲಿ ಅನುಮಾನದ ಬೀಜ ಬಿತ್ತಿದ್ದಳೋ ಏನೋ ಅಂದಿನಿಂದ ಇಲ್ಲಿವರೆಗೆ ಅನುಮಾನದ ಬೀಜಕ್ಕೆ ನೀರೆರೆದು ಗಿಡ ಬೆಳೆಸುತ್ತಲೆ ಇದ್ದಾಳೆ ಮಾಲಿನಿ. ಅದರ ಪರಿಣಾಮವಾಗಿ ತನ್ನ ಪ್ರಾಣವನ್ನು ಕಾಪಾಡಿದ್ದಾಳೆ ಎಂಬ ಕೃತಜ್ಞತೆಗಿಂತ ಹೆಚ್ಚಾಗಿ, ಹೂವಿ ಮತ್ತು ರಾಹುಲ್ ಬಗ್ಗೆ ಎಚ್ಚರಿಕೆ ನೀಡಿದ್ದಾಳೆ. ಮಾಲಿನಿ ಬುದ್ದಿವಂತಿಕೆಯ ಹೊಗಳಿಕೆ ಮನೆಯವರಿಗೆಲ್ಲಾ ಪಾಸಿಟಿವ್ ಆಗಿ ಕೇಳಿಸಿದರೆ ಯಾರಿಗೆ ಅರ್ಥವಾಗಬೇಕೋ ಅವರಿಗೆ ಸರಿಯಾಗಿ ಅರ್ಥವಾಗಿದೆ. ರಾಹುಲ್ ಕೊಂಚ ಗಲಿಬಿಲಿಯಾಗಿದ್ದಾನೆ.

ಮಾಲಿನಿಗೆ ಕೇಡು ಬಯಸುವುದು ಹೂವಿ ಮನಸ್ಸಲ್ಲಿಲ್ಲ
ಕಲ್ಲು ಕ್ವಾರಿಯಲ್ಲಿ ಅಪಘಾತ ನಡೆದು ಆ ಕೆಟ್ಟ ಘಟನೆಯಲ್ಲಿ ಮಾಲಿನಿ ಕೂಡ ಸಿಕ್ಕಿಬಿದ್ದಿದ್ದಳು. ಅದರಲ್ಲೂ ಮೇಲಿಂದ ಕಲ್ಲು ಬೀಳುತ್ತಿದ್ದರೂ, ಅದೃಷ್ಟವಶಾತ್ ಮಾಲಿನಿಗೆ ಏನು ಸಮಸ್ಯೆ ಆಗಿರಲಿಲ್ಲ. ಅಷ್ಟರಲ್ಲಿ ಹೂವಿ ಮಾಲಿನಿಯನ್ನು ನೋಡಿದಳು. ಮಾಲಿನಿ ಮೇಲೆ ದೊಡ್ಡ ಮರದ ದಿಣ್ಣೆಬಿದ್ದಿತ್ತು. ಮಾಲಿನಿಗೆ ತಾನೂ ಬದುಕುವುದಿಲ್ಲ ಎಂಬಂತೆ ಫೀಲ್ ಆಗಿತ್ತು. ಆದರೆ ಹೂವಿಯ ಧೈರ್ಯ, ಗಟ್ಟಿತನದಿಂದಾಗಿ ಜೀವ ಉಳಿಯಿತು. ಮಾಲಿನಿ ಮತ್ತು ರಾಹುಲ್ ನೆಮ್ಮದಿಯಾಗಿ, ಖುಷಿಯಾಗಿ ಬದುಕಬೇಕು ಎಂಬುದೇ ಹೂವಿಯ ಬಯಕೆ. ರಾಹುಲ್ ಮೇಲೆ ಹೂವಿಗೆ ಅತಿಯಾದ ಪ್ರೀತಿಯಿದ್ದರೂ, ಮಾಲಿನಿ ಜಾಗಕ್ಕೆ ಹೋಗಲು ಬಯಸುತ್ತಿಲ್ಲ. ಇದು ಹೂವಿಗಿರುವ ಗೌರವ, ತ್ಯಾಗದ ಹೃದಯ.
ಹೂವಿಗೆ ನಿಜ ಪ್ರೀತಿ ಸಿಕ್ಕಾಗ ಪರಿಸ್ಥಿತಿ ಹೇಗಿರುತ್ತೆ?
ಹೂವಿ ನಿಜಕ್ಕೂ ಎಲ್ಲವೂ ಇದ್ದು ಏನು ಇಲ್ಲದಂತಿರುವ ಹುಡುಗಿ. ಮಾಲಿನಿಗೆ ಯಾವ ರೀತಿಯ ಜೀವನ ಇದೆಯೋ ಅಷ್ಟೇ ರಾಯಲ್ ಲೈಫ್ ಮಾಡುವ ಎಲ್ಲಾ ಅಧಿಕಾರ ಇದೆ. ಆದರೆ ಆಕೆಗೆ ಆ ಅಧಿಕಾರದ ವಾರಸುದಾರನ ಪರಿಚಯವಾಗಿಲ್ಲ. ಇತ್ತ ಗಂಡ ಕಣ್ಣ ಮುಂದೆಯೇ ಇದ್ದರು ಆತನೇ ಗಂಡ ಎಂದು ಹೇಳಿಕೊಳ್ಳಲು ಆಗದೆ ಆ ಪ್ರೀತಿಯಿಂದ ವಂಚಿತಳಾಗಿದ್ದಾಳೆ. ಅತ್ತ ತಂದೆಗೆ ಮಗಳ ಮೇಲೆ ಅಪಾರ ಪ್ರೀತಿ ಇದ್ದರೂ, ಅಸಹಾಯಕತೆ ಇದೆಯಲ್ಲ ಅದು ನೀನೆ ನನ್ನ ಮಗಳು ಎಂದು ಹೇಳಲಾಗದೆ ಮುಚ್ಚಿಡುವಂತೆ ಮಾಡುತ್ತಿದೆ. ಹೀಗಾಗಿ ಹೂವಿ ಎಲ್ಲವೂ ಇದ್ದರು ಏನು ಇಲ್ಲದವಳಂತೆ ಮನೆಕೆಲಸದವಳಂತೆ ಸೇವೆ ಮಾಡಿಕೊಂಡಿದ್ದಾಳೆ. ಆದರೂ ಮನೆಯವರ ಪ್ರೀತಿ ವಾತ್ಸಲ್ಯಕ್ಕೆ ಎಲ್ಲಿಯೂ ಬ್ರೇಕ್ ಹಾಕಿಲ್ಲ. ಆದರೆ ತಂದೆಯ ಪ್ರೀತಿ ಸಿಗಬೇಕೆಂದರೆ ಮಾಲಿನಿ ಮತ್ತು ಮಂದ್ರಾಳನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ. ಗಂಡನ ಪ್ರೀತಿ ಬೇಕು ಎಂದರೆ ಮತ್ತೆ ಮಾಲಿನಿ, ಮನೆಯವರು ಎದುರಾಗುತ್ತಾರೆ. ಹೀಗಾಗಿ ಹೂವಿಯ ಪ್ರೀತಿ ಪಡೆಯುವ ಹಾದಿ ಕಠಿಣವಾಗಿದೆ.


Click it and Unblock the Notifications











