ಬೆಟ್ಟದ ಹೂ: ಗಂಡನ ಪ್ರಾಣ ಕಾಪಾಡಲು ಹೋಗಿ ಪ್ರಾಣ ಬಿಟ್ಟಳಾ ಹೂವಿ?
'ಬೆಟ್ಟದ ಹೂ' ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ರೋಚಕ ದೃಶ್ಯಗಳು ಕಾಣಿಸುತ್ತಿವೆ. ರಾಹುಲ್ ತನ್ನ ಪ್ರಾಜೆಕ್ಟ್‌ಗಾಗಿ ಚನವಲ್ಸೆಗೆ ಮೊದಲ ಹೆಂಡತಿ ಹೂವಿ ಜೊತೆ ಬಂದಿದ್ದಾನೆ. ಆದರೆ ಆ ಪ್ರಾಜೆಕ್ಟ್ ಎಷ್ಟು ಕಷ್ಟದ್ದಾಗಿರುತ್ತೆ ಎಂದು ವೀಕ್ಷಕರಿಗೂ ಗೊತ್ತಾಗಿದೆ. ಈ ಪ್ರಾಜೆಕ್ಟ್ ಮುಗಿಯುವುದರೊಳಗೆ ರಾಹುಲ್ ಪ್ರಾಣಕ್ಕೂ ಕುತ್ತು ಬರುವ ಸಾಧ್ಯತೆ ಇದೆ ಎಂಬಂತೆ ಕಾಣುತ್ತಿದೆ. ಆದರೆ ಗಂಡನ ಪ್ರಾಣ ಕಾಪಾಡೋದಕ್ಕೆ ಹೂವಿ ಸದಾ ಜೊತೆಯಾಗಿಯೇ ನಿಲ್ಲುತ್ತಾಳೆ. ಆದರೆ ಇದೇ ಅವಳ ಪ್ರಾಣಕ್ಕೆ ಕುತ್ತು ತಂದಿದೆ.
ರಾಹುಲ್ ಪ್ರಾಜೆಕ್ಟ್ ಶೂಟ್ ಮಾಡಲು ಹೋದ ಜಾಗದಲ್ಲಿ ತುಂಬಾನೇ ರಿಸ್ಕ್ ಇದೆ. ಎಲ್ಲೆಂದರಲ್ಲಿ ಬಾಂಬ್ ಬ್ಲಾಸ್ಟ್ ಆಗುತ್ತೆ, ಲಾಂಗು ಮಚ್ಚು ಝಳಪಿಸುತ್ತಿದೆ. ಇಷ್ಟು ದೊಡ್ಡ ಯುದ್ಧ ಭೂಮಿಯಿಂದ ರಾಹುಲ್ ತಪ್ಪಿಸಿಕೊಂಡು ಬರಬೇಕಿದೆ. ಇನ್ನೇನು ಪ್ರಾಣ ಹೋಗಿಯೇ ಬಿಡುತ್ತಿತ್ತು. ಆಗ ಬಂದು ಕಾಪಾಡಿದ್ದು ಇದೇ ಹೂವಿ.

ಕಾಳವ್ವನ ಹಠ.. ಹೂವಿ ಪ್ರಾಣ ತೆಗೀತಾ?
ಹೂವಿಯನ್ನು ಕಂಡರೆ ಇಡೀ ಊರಿಗೆ ಊರೇ ಖುಷಿ ಪಡುತ್ತೆ. ಆದರೆ ಕಾಳವ್ವನನ್ನು ಬಿಟ್ಟು. ಹೂವಿ ಕಂಡರೆ ಕಾಳವ್ವ ಯಾವಾಗಲೂ ಕೆಂಡಾಮಂಡಲವಾಗುತ್ತಾಳೆ. ಕಾಳವ್ವನಿಂದಲೇ ಇವತ್ತು ಹೂವಿಯ ಪ್ರಾಣ ಹೋಗಿದೆ. ರಾಹುಲ್‌ಗಾಗಿ ಹುಡುಕುತ್ತಿದ್ದಾಗ ಹೂವಿಯ ತಾಯಿಯನ್ನು ಕಾಳವ್ವ ಹಿಡಿದುಕೊಂಡಿದ್ದಾಳೆ. ಎಷ್ಟೇ ಮನವಿ ಮಾಡಿಕೊಂಡರು ಬಿಡಲು ಸಿದ್ಧಳಿಲ್ಲ. ಅತ್ತ ಹೂವಿಯನ್ನು ಬೆದರಿಸಲು ವ್ಯಕ್ತಿಯೊಬ್ಬ ಗನ್ ಹಿಡಿದು ನಿಂತಿದ್ದಾನೆ. ಲಾಡ್ಜ್ ಬಳಿ ಹೋದರೆ ನಿನ್ನನ್ನು ಇಲ್ಲದಂತೆ ಮಾಡುತ್ತೀನಿ ಎಂದು ಹೂವಿಗೆ ಎಚ್ಚರಿಕೆ ನೀಡುವಾಗಲೇ ಗನ್ ಫೈರ್ ಆಗಿ, ಹೂವಿಯ ಎದೆಗೆ ಹೊಕ್ಕಿದೆ.
ಮನಸ್ಸಿನ ಆಸೆಯನ್ನು ಹೇಳದೆ ಬದುಕುತ್ತಿದ್ದಾಳೆ ಹೂವಿ
ಯಾವುದೋ ಒಂದು ಅನಿವಾರ್ಯತೆಗೆ ಸಿಲುಕಿ ಹೂವಿ ಮತ್ತು ರಾಹುಲ್ ಮದುವೆಯಾಗಿದ್ದು, ಹೂವಿ ಮನಸ್ಸಲ್ಲಿ ರಾಹುಲ್ ಬಿಟ್ಟರೆ ಬೇರೆ ಯಾರು ಗಂಡನ ಸ್ಥಾನಕ್ಕೆ ಬರುವುದಕ್ಕೆ ಸಾಧ್ಯವಿಲ್ಲ. ನಂಬಿಕೆ, ಪ್ರೀತಿ ಎಲ್ಲವೂ ರಾಹುಲ್ ಆಗಿದ್ದಾನೆ. ಆದರೆ ಇದ್ಯಾವುದು ರಾಹುಲ್‌ಗೆ ಬೇಕಾಗಿಲ್ಲ. ತಾನಿಷ್ಟಪಟ್ಟ ಹುಡುಗಿಯನ್ನು ಮದುವೆಯಾಗಿ ಆಗಿದೆ. ಹೂವಿಗೆ ಏನೇ ನೋವಾದರೂ ತಾನಿಷ್ಟಪಟ್ಟ ಹುಡುಗಿಯ ಜೊತೆ ಸಂತೋಷವಾಗಿ ಕಾಲ ಕಳೆಯುವದಷ್ಟೇ ರಾಹುಲ್ ಮುಖ್ಯ. ಚನವಲ್ಸೆಯ ಸ್ನೇಹಿತೆಯರು ಹೂವಿಯ ಬದುಕನ್ನು ಕೇಳಿದಾಗ ಆಕೆ ತನ್ನ ಮನಸ್ಸೊಳಗಿರುವ ಆಸೆಯನ್ನು ಹೇಳಿಕೊಂಡಿದ್ದಾಳೆ. ಇಬ್ಬರು ಜಗಳವನ್ನೇ ಆಡುವುದಿಲ್ಲ, ನನ್ನಂತು ತುಂಬಾ ಪ್ರೀತಿ ಮಾಡುತ್ತಾರೆ. ಬಿಟ್ಟು ಇರುವುದೇ ಇಲ್ಲ. ಮಹಾರಾಣಿಯಂತೆ ನಾನು ಆ ಮನೆಯಲ್ಲಿ ಇದ್ದೀನಿ ಎಂದು ಮನಸ್ಸಿನ ಮಾತನ್ನುಹೇಳಿದಾಗ ರಾಹುಲ್ ಅದನ್ನು ಕೇಳಿಸಿಕೊಂಡರೂ, ನನಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸಿದ್ದಾನೆ.

ರಾಹುಲ್ ಪ್ರಾಜೆಕ್ಟ್ ಸಂಚಿಕೆ ಸಿನಿಮಾ ರೇಂಜಿಗಿದೆ
ಇತ್ತೀಚೆಗೆ ಧಾರಾವಾಹಿಗಳು ಕೂಡ ತುಂಬಾ ಅದ್ಧೂರಿಯಾಗಿ ಮೂಡಿ ಬರುತ್ತಿದೆ. ಪ್ರತಿಯೊಂದು ಆಚರಣೆಯನ್ನು ಸಿನಿಮಾ ರೇಂಜಿಗೆ ಚಿತ್ರೀಕರಿಸುತ್ತಿದ್ದಾರೆ. ಯಾವುದರಲ್ಲೂ ಕಾಂಪ್ರಮೈಸ್ ಆಗದೆ, ಅದ್ದೂರಿಯಾಗಿ ನೀಡುತ್ತಿದ್ದಾರೆ. ಅದರಂತೆ ಇದೀಗ ರಾಹುಲ್ ಪ್ರಾಜೆಕ್ಟ್ ದೃಶ್ಯಗಳನ್ನು ಸಿನಿಮಾದಲ್ಲಿ ತೆಗೆಯುವಷ್ಟೇ ಅಚ್ಚುಕಟ್ಟಾಗಿ ನೀಡಿದ್ದಾರೆ. ಆ ಫೈಟು, ಆ ಬ್ಲಾಸ್ಟು ಎಲ್ಲಿಯೂ ಆ ಕಡೆ ಈ ಕಡೆ ಆಗಿಲ್ಲ. ಅದ್ಭುತವಾಗಿ ಚಿತ್ರೀಕರಿಸಿದ್ದಾರೆ. ನೋಡುತ್ತಿದ್ದರೆ ಮೈ ಝುಮ್ಮೆನ್ನದೆ ಇರಲಾರದು.

ರಾಹುಲ್‌ಗೆ ಹೂವಿ ಪ್ರೀತಿ ಅರ್ಥವಾಗುತ್ತಾ?
ರಾಹುಲ್ ಮತ್ತಿನ್ಯಾವತ್ತೂ ಹೂವಿಯನ್ನು ವಾಪಾಸ್ ಕರೆದುಕೊಂಡು ಹೋಗಬಾರದು ಎಂಬ ಉದ್ದೇಶದಿಂದಲೇ ಚನವಲ್ಸೆಗೆ ಕರೆದುಕೊಂಡು ಬಂದಿದ್ದ. ಆದರೆ ಅಲ್ಲಿಗೆ ಹೋದ ಮೇಲೆ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ. ಊರಿನ ಜನ ಸೇರಿ ಮತ್ತೆ ಮದುವೆ ಮಾಡಿದ್ದಾರೆ. ಈಗ ರಾಹುಲ್ ಮತ್ತೊಮ್ಮೆ ಅಧಿಕೃತವಾಗಿ ಚನವಲ್ಸೆಯ ಅಳಿಯನಾದ. ಅದಕ್ಕಿಂತ ತುಂಬಾ ಮುಖ್ಯವಾಗಿ ರಾಹುಲ್ ಪ್ರಾಣಕ್ಕೆ ಕುತ್ತು ಬಂದಾಗ ಹೂವಿ ತನ್ನ ಪ್ರಾಣವನ್ನು ಒತ್ತೆ ಇಟ್ಟು ಕಾಪಾಡಿದ್ದಾಳೆ. ಈಗ ಅವಳ ಪ್ರಾಣವೇ ಅಪಾಯದಲ್ಲಿದೆ. ರಾಹುಲ್ ಈಗಲಾದರೂ ಹೂವಿಗೆ ಪ್ರೀತಿ ತೋರಿಸಲು ಮುಂದಾಗುತ್ತಾನಾ ಎಂಬ ಪ್ರಶ್ನೆ ಕಾಡುತ್ತಿದೆ.


Click it and Unblock the Notifications











