ಜೇನುಗೂಡು: ಉ.ಕರ್ನಾಟಕದಲ್ಲಿ ಚತ್ ಬಡಿಯೋ ಶಾಸ್ತ್ರ ಯಾಕೆ ಮಾಡ್ತಾರೆ ಗೊತ್ತಾ..?
ರಾಜ್ಯದ 31 ಜಿಲ್ಲೆಯಲ್ಲಿ ವಿಭಿನ್ನವಾದ ಸಂಪ್ರದಾಯಗಳಿವೆ. ಒಂದು ಜಿಲ್ಲೆಯ ಸಂಸ್ಕೃತಿ, ಸಂಪ್ರದಾಯ ನೋಡಿದರೆ ಮತ್ತೊಂದು ಜಿಲ್ಲೆಯ ಜನರಿಗೆ ವಿಭಿನ್ನ ಎನಿಸದೇ ಇರದು. ಅದರಲ್ಲೂ ಉತ್ತರ ಕರ್ನಾಟಕ ಜನತೆಯ ಜೀವನ ಶೈಲಿ. ಅವರು ಪಾಲಿಸುವ ಆಚಾರ ವಿಚಾರಗಳು ವಿಭಿನ್ನವಾಗಿರುತ್ತವೆ. ಅದರೊಳಗಿದ್ದು, ಅದನ್ನು ಅನುಭವಿಸಿದರೆ ಸಿಗುವ ಮಜವೇ ಬೇರೆ. ಅವರೊಡನೆ ಬೆರೆತಾಗ ನಗುವೊಂದೆ ತುಂಬಿರುತ್ತದೆ. ಇದೀಗ ಉತ್ತರ ಕರ್ನಾಟಕ ಶೈಲಿಯ ಮದುವೆಯನ್ನು ನೋಡುವ ಅವಕಾಶ ಸಿಕ್ಕಿದೆ. 'ಜೇನುಗೂಡು' ಧಾರಾವಾಹಿಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ.
ಸಾಮಾನ್ಯವಾಗಿ ಮದುವೆ ಕಾರ್ಯಕ್ರಮದಲ್ಲಿ ಏನೆಲ್ಲಾ ಇರಲಿದೆ ಎಂಬುದು ಗೊತ್ತಿದೆ. ಈಗಂತೂ ತಮ್ಮ ಊರಿನ ಸಂಪ್ರದಾಯ ಎನ್ನುವುದಕ್ಕಿಂತ ಒಂದೇ ರೀತಿಯಾಗಿ ಎರಡು ದಿನದಲ್ಲಿ ಮದುವೆ ಮಾಡುತ್ತಾರೆ. ಅದು ಚಪ್ಪರದ ಶಾಸ್ತ್ರ, ಮೆಹಂದಿ ಶಾಸ್ತ್ರ, ಹಳದಿ ಶಾಸ್ತ್ರ ಮಾಡಿ ಮುಹೂರ್ತದಲ್ಲಿ ತಾಳಿ ಕಟ್ಟಿಸಿಬಿಡುತ್ತಾರೆ. ಆದರೆ 'ಜೇನುಗೂಡಿ'ನಲ್ಲಿ ಒಂದೊಂದು ಶಾಸ್ತ್ರಕ್ಕೂ ಸಾಕಷ್ಟು ಅರ್ಥವಿದೆ.

ಅವಕಾಶ ಸಿಕ್ಕಾಗ ಅಳಿಯನ ಡಿಮ್ಯಾಂಡ್ ಶುರು
ಮಗಳನ್ನು ಕೊಟ್ಟ ಮೇಲೆ ಅಳಿಯನ ಮೇಲೆ ಒಂದಷ್ಟು ಗೌರವ ತಾನಾಗಿಯೇ ಹೆಣ್ಣು ಮಗಳ ಮನೆಯವರಿಗೆ ಹೆಚ್ಚಾಗಿ ಬಿಡುತ್ತದೆ. ಅಳಿಯ ದೇವರು ಕೂಡ ತಮ್ಮ ವರಸೆಯನ್ನು ಯಾವಾಗ ತೋರಿಸಬೇಕೋ ಆಗ ತೋರಿಸಲು ಆರಂಭಿಸುತ್ತಾನೆ. ಸದ್ಯ 'ಜೇನುಗೂಡಿ'ನಲ್ಲೂ ಅದೇ ಆಗುತ್ತಿರುವುದು. ಅಳಿಯನಿಂದಲೇ ಮಾಡಿಸುವ ಹಲವು ಕೆಲಸಗಳಿರುತ್ತವೆ. ಆ ಕೆಲಸಗಳನ್ನು ಮಾಡಬೇಕೆಂದರೆ ಡಿಮ್ಯಾಂಡ್ ಮಾಡಿದ್ದು ಆ ಕ್ಷಣ ಸಿಕ್ಕೆ ಸಿಗುತ್ತದೆ. ಬೇರೆ ದಿನದಲ್ಲಿ ತಮ್ಮ ಡಿಮ್ಯಾಂಡ್ ಇಟ್ಟರೆ ಅದು ಅಷ್ಟಾಗಿ ಸಿಗುವುದು ಕಷ್ಟ. ಆದರೆ ಸುಮಿ ಗಂಡ ನಿಖಿಲ್ ಸರಿಯಾದ ಸಮಯವನ್ನೇ ಲಾಕ್ ಮಾಡಿಕೊಂಡಿದ್ದಾನೆ. ಚತ್ ಬಡಿಯಬೇಕೆಂದರೆ ಒಂದು ತೊಲೆ ಬಂಗಾರದ ಕೈಚೈನು ಬೇಕೆಂದು ಕೂತಿದ್ದಾನೆ. ಒಂದೊಂದುವ ರೂಪಾಯಿಯ ಲೆಕ್ಕವನ್ನು ಕೇಳುವ ವಿನಾಯಕ್ ದಾದಾ ಅಳಿಯನಿಗೆ ಒಂದು ತೊಲೆ ಬಂಗಾರ ಕೊಡಲು ಒಪ್ಪಿಗೆ ಸೂಚಿಸಿದ್ದಾರೆ. ಅಂದರೆ ಈ ಚತ್ ಬಡಿಯೋ ಶಾಸ್ತ್ರಕ್ಕೆ ಅದೆಷ್ಟು ಅರ್ಥವಿದೆ ಎಂಬುದನ್ನು ತಿಳಿಯಲೇಬೇಕು.

ಚತ್ ಬಡಿದ ಸುಮಿ-ನಿಖಿಲ್
ಒಂದೊಂದು ಶಾಸ್ತ್ರದ ಹಿಂದೆ ಒಂದೊಂದು ಕಾರಣವಿರುತ್ತದೆ. ಒಂದೊಂದು ಯಶಸ್ಸಿನ ಮಂತ್ರವಿರುತ್ತದೆ. ಮದುವೆ ಎಂಬುದು ಹೊಸ ಜೀವನಕ್ಕೆ ಕಾಲಿಟ್ಟಂತೆ. ಆ ಜೀವನದಲ್ಲಿ ಸಾಕಷ್ಟು ಅಡ ತಡೆಗಳು ಬಂದೇ ಬರುತ್ತವೆ. ಸಾಕಷ್ಟುಮನಸ್ತಾಪಗಳು ಉಂಟಾಗುತ್ತವೆ. ಮದುವೆಯಲ್ಲಿ ಹೇಳಿಕೊಡುವ ಒಂದೊಂದು ಮಂತ್ರದ ಅರ್ಥವನ್ನು ತಿಳಿದು, ಅದರಂತೆ ನಡೆದರೆ ಬಾಳು ಬಂಗಾರವಾಗುವುದಂತು ಸತ್ಯ. ಅದರ ಜೊತೆಗೆ ಮನೆಯವರೆಲ್ಲರ ಆಶೀರ್ವಾದ ಮಕ್ಕಳ ಮೇಲೆ ಇರಲೆಂದೆ ಈ ರೀತಿಯ ಶಾಸ್ತ್ರಗಳನ್ನು ಮಾಡಿಸುತ್ತಾರೆ. ಶಶಾಂಕ್ ತಂಗಿಯಾಗಿ ಸುಮಿ ಮತ್ತು ಆಕೆಯ ಗಂಡ ಚತ್ ಬಡಿದಿದ್ದಾರೆ. ಮನೆಯ ಗೋಡೆ ಮೇಲೆ ಅವರ ಕೈಗಳಿಗೆ ಒಂದು ಗಂಧದ ಲೇಪನ ಹಚ್ಚಿಕೊಂಡು ಸುಮಿ ತನ್ನ ಎರಡು ಕೈಗಳಿಂದ ಸಾಕಷ್ಟು ಬಾರಿ ಗುರುತು ಹಚ್ಚಿದ್ದಾರೆ.

ತಂಗಿಯಿಂದಲೇ ನಡೆಯುತ್ತವೆ ಹಲವು ಶಾಸ್ತ್ರ
ಒಂದು ಮನೆಯಲ್ಲಿ ಗಂಡು ಮಗುವಿನ ಹಿಂದೆ ಮುಂದೆ ಹೆಣ್ಣು ಮಗು ಇರಲೇಬೇಕು ಎಂಬುದು ಇಂಥ ಸಮಯದಲ್ಲಿ ಅರ್ಥವಾಗುತ್ತದೆ. ಮನೆಯ ಮಗನ ಮದುವೆಯಲ್ಲಿ ಮಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಅವಳಿಲ್ಲದೆ ಹಲವು ಶಾಸ್ತ್ರ ಪರಿಪೂರ್ಣವಾಗುವುದೇ ಇಲ್ಲ. ಈಗ ಶಶಾಂಕ್ ಮದುವೆಯಲ್ಲೂ ಸುಮಿಯದ್ದೇ ಮೇಲುಗೈ. ಎಲ್ಲಾ ಶಾಸ್ತ್ರದಲ್ಲೂ ಮೊದಲು ಸುಮಿಯೇ ಆರಂಭಿಸಬೇಕು. ಅದರಲ್ಲೂ ಕಳಸ ಹಿಡಿಯುವ ಶಾಸ್ತ್ರ ತುಂಬಾ ಮುಖ್ಯವಾದ್ದು. ತಂಗಿ ಅಥವಾ ಅಕ್ಕನಾದವಳು ಕಳಸ ಹಿಡಿದು ಅಣ್ಣ/ತಮ್ಮನನ್ನು ಮಂಟಪಕ್ಕೆ ಕರೆದು ತರಬೇಕು. ಹೀಗಾಗಿ ಅಣ್ಣನ ಮದುವೆಯಲ್ಲಿ ಸಹೋದರಿಯದ್ದೇ ಕಾರುಬಾರಾಗಿರುತ್ತದೆ. 'ಜೇನುಗೂಡು' ಧಾರಾವಾಹಿ ಈ ಎಲ್ಲಾ ಪ್ರಾಮುಖ್ಯತೆಯನ್ನು ಅರ್ಥೈಸುತ್ತಿದೆ.
'ಜೇನುಗೂಡಿ'ನಲ್ಲಿ ಮದುವೆ ಬಗ್ಗೆ ನಿರೀಕ್ಷೆ
ಕಳೆದ ಒಂದು ವಾರದಿಂದಲೂ 'ಜೇನುಗೂಡು' ಧಾರಾವಾಹಿಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ. ಗೊತ್ತಿಲ್ಲದೆ ಇರುವಂತ ಅದೆಷ್ಟೋ ಶಾಸ್ತ್ರಗಳ ಬಗ್ಗೆ ತಿಳಿಸಿಕೊಡುತ್ತಿದ್ದಾರೆ. ಅಷ್ಟೇ ಅಲ್ಲ ಆ ಶಾಸ್ತ್ರಗಳ ಜೊತೆಗೆ ಎಷ್ಟೆಲ್ಲಾ ಮನರಂಜನೆ ಇದೆ ಎಂಬುದು ಮತ್ತಷ್ಟು ಖುಷಿ ಕೊಟ್ಟಿದೆ. ಶಾಸ್ತ್ರಗಳೇ ಇಷ್ಟು ಮಜಭೂತವಾಗಿರುವಾಗ ಇನ್ನು ಮದುವೆ ಇನ್ನೆಷ್ಟು ಅದ್ಭುತವಾಗಿರಬೇಡ ಎಂಬ ಕುತೂಹಲ ಮೂಡಿದೆ.


Click it and Unblock the Notifications











