ಜೇನುಗೂಡು: ನಡುಕೋಟೆ ಮನೆಯಲ್ಲಿ ಭಾಸ್ಕರ್: ಡಾಕ್ಟರ್ ಮನೆಯಲ್ಲಿ ಶುಭಾಗ್ನಿ ಕಾಟ!
'ಜೇನುಗೂಡು' ಧಾರಾವಾಹಿಯಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಮುನಿಸು, ಸಂಕಟ, ಒಳಜಗಳಗಳನ್ನು ನೋಡಿದಾಗ ಯಾರ ಮನೆಯಲ್ಲಿ ಸಮಸ್ಯೆ ಇಲ್ಲ ಹೇಳು ಎನಿಸದೆ ಇರುವುದಿಲ್ಲ. ಅದೆಷ್ಟೋ ಸಲ ಮನುಷ್ಯರಿಗೆ ಸಮಸ್ಯೆ ಬಂದಾಗ ಗೋಳಿಡುತ್ತಾ ಕೂರುತ್ತೇವೆ. ಛೇ ಅದ್ಯಾಕೆ ಇಷ್ಟೊಂದು ಸಮಸ್ಯೆ ಬರುತ್ತೋ ಎಂದು ಬೇಸರ ಮಾಡಿಕೊಳ್ಳುತ್ತೇವೆ. ಆದರೆ ಒಂದು ಸತ್ಯವನ್ನು ಆ ಕ್ಷಣ ಮರೆಯುತ್ತೇವೆ. ಪ್ರಪಂಚದಲ್ಲಿ ವಾಸಿಸುತ್ತಿರುವ ಎಲ್ಲರಿಗೂ ಸಮಸ್ಯೆಗಳಿವೆ. ಆದರೆ ಆ ಸಮಸ್ಯೆಗಳು ಕೊಂಚ ಬೇರೆ ಬೇರೆ ಎಂಬುದನ್ನು ಮರೆತು ಬಿಡುತ್ತೇವೆ.
ಧಾರಾವಾಹಿಯಾಗಲಿ, ಸಿನಿಮಾವಾಗಲಿ ಒಂದಷ್ಟು ಮನರಂಜನೆಯ ಜೊತೆಗೆ ಸಂದೇಶವನ್ನು ನೀಡುತ್ತವೆ. ಅದನ್ನು ನೋಡುಗರು ಹೇಗೆ ಸ್ವೀಕರಿಸಿ, ಹೇಗೆ ರೂಢಿಸಿಕೊಳ್ಳುತ್ತೇವೆ ಎಂಬುದರ ಮೇಲೆ ಬಿಟ್ಟಿದೆ. 'ಜೇನುಗೂಡು' ಧಾರಾವಾಹಿಯಲ್ಲೂ ಅಷ್ಟೇ ಮನುಷ್ಯನ ಬಾಂಧವ್ಯ, ಕಷ್ಟ ಬಂದಾಗ ನಿಲ್ಲಬೇಕಾದ ರೀತಿ, ನಮ್ಮವರನ್ನು ಸಂತೈಸುವ ಪರಿ ಹೀಗೆ ಅನೇಕ ಸಂದೇಶಗಳ ಸಾರಾಂಶವನ್ನೇ ನೀಡುತ್ತಾ ಬರುತ್ತಿದೆ.

ಭಾಸ್ಕರನಿಂದ ವೀಣಾ ವೈನಿಯ ಕಣ್ಣೀರು
ನಡುಕೋಟೆ ಕುಟುಂಬ ಎಂದರೆ ಅದು ಕೂಡು ಕುಟುಂಬ. ಇಷ್ಟು ದಿನ ಎಲ್ಲರನ್ನು ಜೊತೆಯಾಗಿದ್ದುದ್ದನ್ನೇ ನೋಡಿದ್ದೇವೆ. ಆಗ ವೀಣಾ ಯಾಕೆ ಒಬ್ಬರೆ ಇರುತ್ತಾರೆ ಎಂಬ ಪ್ರಶ್ನೆ ಬಂದಿತ್ತು. ಅದಕ್ಕೆ ಉತ್ತರ ಈಗ ಸಿಕ್ಕಿದೆ. ಎಲ್ಲವೂ ಸರಿಯಾಗಿದ್ದರೆ ವೀಣಾ ಕೂಡ ಮದುವೆಯಾಗಿ, ವಿದೇಶದಲ್ಲಿ ಇರುತ್ತಿದ್ದರು. ಆದರೆ ಭಾಸ್ಕರ ಮಾಡಿದ ನಂಬಿಕೆ ದ್ರೋಹ, ಇನ್ನುವೀಣಾ ವೈನಿಯನ್ನು ಕಾಡುತ್ತಿದೆ. ಮನಸ್ಸಾರೆ ಪ್ರೀತಿಸಿದ್ದ ಭಾಸ್ಕರ, ವೀಣಾರ ಬಳಿ ಹಣದ ಸಹಾಯ ಪಡೆದು ಓದಿ, ಡಾಕ್ಟರ್ ಕೂಡ ಆದ. ಆದರೆ ಆಮೇಲೆ ಪ್ರೀತಿಸಿದ ವೀಣಾರನ್ನೇ ಮರೆತುಬಿಟ್ಟರು. ಬೇರೆ ಮದುವೆ ಕೂಡ ಆಗಿದ್ದಾನೆ. ಶಶಾಂಕನ ಮದುವೆಗೆ ವೀರೂ ದಾದಾ ಭಾಸ್ಕರನನ್ನು ಕರೆದಿದ್ದಾನೆ. ಇದೇ ಮನೆಯಲ್ಲಿ ಮೌನ, ಕಣ್ಣೀರು, ದುಃಖ ಆವರಿಸಲು ಕಾರಣವಾಗಿರುವ ವಿಚಾರ. ಎಷ್ಟೇ ಸಮಾಧಾನ ಮಾಡಿದರು ವೀಣಾ ಮಾತ್ರ ಸಮಾಧಾನವಾಗುತ್ತಿಲ್ಲ. ಕುಟುಂಬಸ್ಥರೆಲ್ಲ ಸೇರಿ, ಮಕ್ಕಳಿಂದ ಮುಚ್ಚಿಟ್ಟ ಭಾಸ್ಕರ ಇಂದು ಹೊರ ಬಂದಿದ್ದಾನೆ.

ದಿಯಾಗೂ ಇಷ್ಟವಿಲ್ಲ ಹೆತ್ತಮ್ಮ ಬರುವುದು
ಅತ್ತ ತಾನೂ ಹೆಚ್ಚು ಓದಿದ್ದೇನೆ, ತನ್ನ ಜೀವನವನ್ನು ನಾನೇ ರೂಪಿಸಿಕೊಳ್ಳಬೇಕು ಎಂದುಕೊಂಡ ಶುಭಾಗ್ನಿ, ಮಗಳು ಇನ್ನು ಚಿಕ್ಕವಳು ಎಂದು ನೋಡದೆ ಡಾಕ್ಟರ್ ಶ್ರೀಧರ್‌ನನ್ನು ಬಿಟ್ಟು ಅಮೆರಿಕಗೆ ಹೋಗಿದ್ದಳು. ಮಗಳ ಮದುವೆ ಕರೆಯಬೇಕಾಗಿರುವುದು ಅನಿವಾರ್ಯವಾದ ಕಾರಣ ಡಾಕ್ಟರ್ ಶ್ರೀಧರ್ ಲಗ್ನಪತ್ರಿಕೆಯಲ್ಲಿ ಹೆಂಡತಿಯ ಹೆಸರನ್ನು ಹಾಕಿಸಿ, ಲಗ್ನಪತ್ರಿಕೆಯನ್ನು ಕಳುಹಿಸಿದ್ದಾನೆ. ಈಗ ಶುಭಾಗ್ನಿ ಮದುವೆಗೆ ಬಂದವಳು ಹೋಗುವ ಮಾತನ್ನು ಆಡಿಲ್ಲ. ಇದು ಸಾರಿಕಾಳಿಗೆ ಸಹಜವಾಗಿಯೇ ಟೆನ್ಶನ್ ತಂದೊಡ್ಡಿದೆ.

ಮನೆಯವರಿಗೆ ಮತ್ತೆ ಇಷ್ಟವಾಗುತ್ತಾಳಾ ದಿಯಾ?
ದಿಯಾಗೆ ನಡುಕೋಟೆ ಮನೆಯವರ ಜೊತೆ ಇರುವುದು ಎಂದರೆ ಬಹಳ ಖುಷಿ. ಅದರಿಂದಾನೆ ಸಮಯ ಸಿಕ್ಕಾಗೆಲ್ಲಾ ಅವರ ಮನೆಗೆ ಬರುತ್ತಾಳೆ. ಸದ್ಯ ಇಬ್ಬರ ಮನೆಯಲ್ಲೂ ಸಮಸ್ಯೆ ಇದೆ. ಅಲ್ಲಿ ಅತ್ತೆ ಯೋಚನೆಯಲ್ಲಿ ಮುಳುಗಿದ್ದಾರೆ. ಆದರೆ ಇಲ್ಲಿಯೂ ಸಮಸ್ಯೆ ಇದೆ ಎಂದು ತಿಳಿಯದ ದಿಯಾ, ನಡುಕೋಟೆ ಮನೆಗೆ ಬಂದಿದ್ದಾಳೆ. ಸಮಸ್ಯೆ ಕೇಳಿ ಗಾಬರಿಯಲ್ಲಿ ವೀಣಾ ಇರುವ ಕೋಣೆಯ ಬಾಗಿಲು ತಟ್ಟುತ್ತಿದ್ದಾಳೆ. ಒಂದು ವೇಳೆ ವೀಣಾ ಅತ್ತೆ ಜೊತೆ ಮಾತನಾಡಿ, "ಅಮ್ಮ ಮನೆಯಲ್ಲೂ ಇಂಥದ್ದೆ ಸಮಸ್ಯೆ ಇದೆ. ನಂಗೂ ಆಕೆ ಬರುವುದು ಕಂಡರೆ ಆಗುವುದಿಲ್ಲ. ಆದರೂ ಸಹಿಸಿಕೊಳ್ಳುತ್ತಿದ್ದೇನೆ" ಎಂದು ಹೇಳುವ ಮೂಲಕ, ಸಮಾಧಾನ ಮಾಡಿದರೆ, ವೀಣಾ ಖುಷಿಯಾಗುತ್ತಾರಾ ಎನ್ನಿಸುತ್ತಿದೆ. ಹೀಗಾಂದರೆ ದಿಯಾ ಮತ್ತೊಮ್ಮೆ ಮುದ್ದಿನ ಮಗಳಾಗಿ ಬಿಡುತ್ತಾಳೆ.

ಮುರಿದ ಮನಸ್ಸುಗಳು ಒಂದಾಗುತ್ತವಾ?
ಸಮಸ್ಯೆ ಎಲ್ಲಿ ಇರುವುದಿಲ್ಲ ಹೇಳಿ? ಅದರಂತೆ ನಡುಕೋಟೆ ಹಾಗೂ ಡಾಕ್ಟರ್ ಮನೆಯಲ್ಲಿಯೂ ಸಮಸ್ಯೆ ಇದೆ. ಆದರೆ ಎಲ್ಲವೂ ಸರಿಯಾಗುವ ಮುನ್ಸೂಚನೆ ಸಿಕ್ಕಿದೆ. ದಿಯಾ ಮನೆಗೆ ತಾಯಿ ಬರುವ ಸೂಚನೆ ಸಿಕ್ಕಿದೆ. ಆ ಕಡೆ ವೀಣಾಗೆ ಭಾಸ್ಕರ ಮೇಲಿನ ಮುನಿಸು, ಆ ಕಹಿ ನೆನಪುಗಳು ಮಾಸಿ ಮತ್ತೆ ತನ್ನ ಜೀವನವನ್ನು ಸರಿ ಮಾಡಿಕೊಳ್ಳುವ ಅವಕಾಶ ಒಲಿಯಬಹುದು. ಎಲ್ಲಾ ಒಡೆದ ಮನಸ್ಸುಗಳನ್ನು ಸರಿ ಮಾಡುವುದಕ್ಕೆ ದಿಯಾ- ಶಶಾಂಕ್ ಮದುವೆ ಮುನ್ನುಡಿಯಾಗುವ ಸಾಧ್ಯತೆ ಇದೆ.


Click it and Unblock the Notifications











