ನಗುವಿನಲ್ಲೇ ಅರಮನೆ ಕಟ್ಟಿದ್ದ ನಡುಕೋಟೆ ಮನೆಯಲ್ಲಿ ಈಗ ನಗಿಸುವವರು ಯಾರು?
ಏನಿದು..? ಸಮಸ್ಯೆ ಆದರೂ ಏನಾಯ್ತು. ಜೇನುಗೂಡಿನಂತಿದ್ದ ನಡುಕೋಟೆಯಲ್ಲಿ ಯಾವಾಗಲೂ ನಗು ತುಂಬಿರುತ್ತಿತ್ತು, ಹಾಗೆಯೇ ನಗು ತುಂಬಿರುತ್ತೆ ಅನ್ನೋದು ಆಗಾಗ 'ಜೇನುಗೂಡು' ನೋಡುವವರ ವಾದ. ಆದರೆ ಈ ಧಾರಾವಾಹಿಯನ್ನು ಬಿಡದೆ ನೋಡಿದವರಿಗೆ ಈ ಪ್ರಶ್ನೆ ಖಂಡಿತ ಅರ್ಥವಾಗಿರುತ್ತೆ. ಯಾಕೆಂದರೆ ಇವತ್ತಿನ ಎಪಿಸೋಡಿನಲ್ಲಿ ನಗುಗಿಂತ ಹೆಚ್ಚಾಗಿ ಗಾಬರಿ, ಗೊಂದಲ, ಭಯವೇ ಕಾಣುವ ಸಾಧ್ಯತೆ ಹೆಚ್ಚಾಗಿದೆ.
'ಜೇನುಗೂಡು' ಧಾರಾವಾಹಿ ಇಷ್ಟು ದಿನ ಪ್ರೇಕ್ಷಕರಿಗೂ ಸಿಕ್ಕಾಪಟ್ಟೆ ಮನರಂಜನೆ ನೀಡಿದೆ. ದಿಯಾಳಿಗೆ ನಡುಕೋಟೆ ಮನೆ ಎಂದರೆ ಹೇಗೆ ಇಷ್ಟವೋ ಅದೇ ರೀತಿ ನೋಡುಗರಿಗೂ ನಡುಕೋಟೆ ಮನೆಯವರ ಮೇಲೆ ವಿಶೇಷ ಪ್ರೀತಿ. ಆ ಕುಟುಂವೊಂದಿದ್ದರೆ ಸಾಕು. ನಗುವುದಕ್ಕೆ ಬೇರೆನೂ ಬೇಕಿಲ್ಲ. ದಾದಾ, ಮಾಯಿ, ಪಾಚಿ, ಕುಕ್ಕಿ ಅಬ್ಬಬ್ಬಾ ಇಬ್ಬರೇ ಜೇನುಗೂಡಿನ ಸರ್ವ ಸದಸ್ಯರು.

ನಡುಕೋಟೆ ಮನೆಯಲ್ಲಿ ಶಶಾಂಕ್ ಮದುವೆ ಸಂಭ್ರಮ
ದಿಯಾ ತುಂಬಾ ಮುಗ್ಧತೆ ಇರುವ ಹುಡುಗಿ. ಸಂಬಂಧಗಳ ಜೊತೆ ಬೆರೆತು ಗೊತ್ತಿಲ್ಲವಾದರೂ ಸಂಬಂಧಗಳಿಗೆ ಬೆಲೆ ಕೊಡುವ ಹುಡುಗಿ. ಇದೇ ಕಾರಣಕ್ಕೆ ನಡುಕೋಟೆ ಮನೆಯವರೆಲ್ಲಾ ಆಕೆಯನ್ನು ಇಷ್ಟಪಡುತ್ತಾರೆ. ಯಾವಾಗಲೂ ಕೋಳಿ ಜಗಳವಾಡುವ ದಿಯಾ ಹಾಗೂ ಶಶಾಂಕ್ ಮನಸ್ಸು ಕೂಡ ಈಗೀಗ ಪ್ರೀತಿ-ಪ್ರೇಮ-ಪ್ರಣಯ ಅಂತ ವಾಲುತ್ತಿದೆ. ಇರುವುದು ಒಬ್ಬಳೆ ಮಗಳು ಎಂಬ ಕಾರಣಕ್ಕೆ ಮದುವೆಯನ್ನು ಡಾಕ್ಟರ್ ಸಿಕ್ಕಾಪಟ್ಟೆ ಗ್ರ್ಯಾಂಡ್ ಆಗಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ನಡುಕೋಟೆಯಲ್ಲೂ ಇದೇ ಸಂಭ್ರಮ ಮನೆ ಮಾಡಿದೆ. ಯಾರನ್ನೆಲ್ಲಾ ಕರೆಯಬೇಕು ಎಂಬ ಚಿಂತನೆಯಲ್ಲಿದ್ದಾರೆ. ಎಷ್ಟು ಕಾರ್ಡ್‌ಗಳು ಬೇಕು ಎಂಬ ಕಿತ್ತಾಟದಲ್ಲಿದ್ದಾರೆ. ಅತ್ತ ದಾದಾ ನೋಡಿದರೆ ಒಬ್ಬರು ಒಬ್ಬರನ್ನಷ್ಟೆ ಕರೆಯಬೇಕು ಎನ್ನುತ್ತಾರೆ. ಆದರೆ ನಡುಕೋಟೆ ಮನೆಯ ಮದುವೆ ಇದು. ಅದೆಲ್ಲಾ ಆಗುತ್ತಾ ನೋ ವೇ ಚಾನ್ಸೇ ಇಲ್ಲ.

ದಿಯಾ-ಶಶಾಂಗ್ ಜೋಡಿಗೆ ಕುಕ್ಕಿಯೇ ಸೇತುವೆ
ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದರು ಸಹ ಆ ಇಬ್ಬರ ಜಗಳವೇ 'ಜೇನುಗೂಡು' ಧಾರಾವಾಹಿಯಲ್ಲಿ ಎಲ್ಲರಿಗೂ ಮನರಂಜನೆ ನೀಡುತ್ತಿತ್ತು. ಆದರೆ ಈ ಇಬ್ಬರ ನಡುವೆ ಜಗಳಕ್ಕಿಂತ ಹೇಗಾದರೂ ಮಾಡಿ ಪ್ರೀತಿ ಬೆಳೆಸಬೇಕೆಂಬುದು ಕುಕ್ಕಿ ಧ್ಯೇಯ. ಅದಕ್ಕಾಗಿಯೇ ಆಗಾಗ ಕುಕ್ಕಿ, ನಯನಾ ಸೇರಿ ಏನೇನೋ ಫ್ಲ್ಯಾನ್ ಮಾಡುತ್ತಿರುತ್ತಾರೆ. ಅದು ಆಗಾಗ ಸಕ್ಸಸ್ ಕೂಡ ಆಗುತ್ತೆ. ಆಗಾಗ ಬೈಗುಳಗಳು ತಿನ್ನುತ್ತಾರೆ. ಆದರೆ ಕುಕ್ಕಿ ಮಾಸ್ಟರ್ ಬ್ಲಾಸ್ಟರ್ ಫ್ಲ್ಯಾನ್‌ನಿಂದಾಗಿ ದಿಯಾ-ಶಶಾಂಕ್ ನಡುವೆ ಕೊಂಚ ಪ್ರೀತಿ ಹುಟ್ಟಿದೆ. ಅದಕ್ಕೆ ಸಾಕ್ಷಿ ಎಂಬಂತೆ ಆಗಾಗ ಕಣ್ಣು ಕಣ್ಣು ಕಲೆತಿರುತ್ತದೆ.

ಕುಕ್ಕಿ ಇಲ್ಲದಿದ್ದರೆ ನಡುಕೋಟೆಯಲ್ಲಿ ನಗುವಿಲ್ಲ
ನಡುಕೋಟೆ ಮನೆ ಕೂಡು ಕುಟುಂಬ. ಎಲ್ಲರೂ ಒಟ್ಟಿಗೆ ಬಾಳುತ್ತಿದ್ದಾರೆ. ಆದರೆ ಎಲ್ಲರನ್ನೂ ಒಟ್ಟಾಗಿ ನಗಿಸಲು, ಉತ್ಸಾಹ ತುಂಬಲು ಅಲ್ಲಿ ಕುಕ್ಕಿ ಇರಲೇಬೇಕು. ಕುಕ್ಕಿ ಆಕ್ಟೀವ್ ಆಗಿದ್ದ ಎಂದರೆ ಮನೆ ಗಲಗಲ ಎಂದು ನಗುತ್ತಿರುತ್ತೆ. ಆದರೆ ಅದ್ಯಾಕೋ ಆ ನಗುವಿಗೆ ಕೊರತೆ ಬರುವ ಸೂಚನೆಗಳು ಎದ್ದು ಕಾಣುತ್ತಿವೆ. ಯಾಕೆಂದರೆ ಕುಕ್ಕಿ ಅಲಿಯಾಸ್ ವಿಕಾಸ್ ಆಫೀಸಿನಲ್ಲಿ ಒಂದಷ್ಟು ಕಿತಾಪತಿ ಮನಸ್ಸುಗಳು ಇವೆ. ಆ ಮನಸ್ಸುಗಳಿಂದಲೇ ಇಂತದ್ದೊಂದು ನಗು ಮಾಯವಾಗುವ ಸಾಧ್ಯತೆ ಇದೆ. ಎಲ್ಲರ ಸಂಭ್ರಮ ಕಿತ್ತುಕೊಳ್ಳುವ ಹುನ್ನಾರ ಕುಕ್ಕಿ ಆಫೀಸ್‌ನಲ್ಲಿ ನಡೆಯುತ್ತಿದೆ.

ಕುಕ್ಕಿ ಮೇಲಿನ ಕೋಪಕ್ಕೆ ಬ್ಯಾಂಕ್ ಹಣ ಕದ್ದ ಖದೀಮರು
ಇಷ್ಟು ದಿನ ಕುಕ್ಕಿಯನ್ನು ನೋಡಿದ್ದು ಬರೀ ಮನೆಯಲ್ಲಿಯೇ. ಇದು ಆಗಾಗ ವೀಕ್ಷಕರಿಗೂ ಅನುಮಾನ ಮೂಡಿತ್ತು. ಕುಕ್ಕಿ ಕೆಲಸಕ್ಕೆ ಹೋಗುವುದಿಲ್ವಾ? ಎಂದು ಪ್ರಶ್ನೆ ಮಾಡಿದ್ದರು. ದೊಡ್ಮನೆ ಅಲ್ವಾ ಜಮೀನು, ಬ್ಯುಸಿನೆಸ್ ಏನೋ ಇರುತ್ತೆ ಬಿಡಿ ಅಂತ ಅವರೇ ಸಮಾಧಾನ ಮಾಡಿಕೊಂಡಿದ್ದರು. ಇದೀಗ ಕುಕ್ಕಿ ಏನು ಕೆಲಸ ಮಾಡುತ್ತಾನೆ ಎಂಬುದು ಗೊತ್ತಾಗಿದೆ. ಕುಕ್ಕಿ ವಿಕಾಸ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಜೇನುಗೂಡಿನಲ್ಲಿ ಕುಕ್ಕಿ ನಗುಮುಖದ ರಾಜಕುಮಾರ. ಎಲ್ಲರನ್ನೂ ನಗಿಸುತ್ತಾ, ಎಲ್ಲರೊಟ್ಟಿಗೆ ಸಾಮರಸ್ಯ ಉಳಿಸಿಕೊಂಡು ಬಂದಿದ್ದಾರೆ. ಇಂತಹ ಗುಣ ಕೆಲವೊಬ್ಬರಿಗೆ ಕೋಪ ತರಿಸುವುದು ನಿಜ. ಹಾಗೆ ದ್ವೇಷವನ್ನು ಹೆಚ್ಚಿಸುತ್ತೆ. ಅದೇ ರೀತಿ ಎರಡು ಹುಳಗಳು ಕುಕ್ಕಿಯ ಆಫೀಸಲ್ಲೂ ಇದ್ದಾರೆ. ಕುಕ್ಕಿಗೋ ಮದುವೆಯ ಸಂಭ್ರಮ. ಇದಕ್ಕಾಗಿಯೇ ಬ್ಯಾಂಕ್‌ನ ಕಬೋಡ್ ನಲ್ಲಿ ಇಟ್ಟಿದ್ದ ಹಣದ ಲಾಕರ್ ಹಾಗೆ ಬಿಟ್ಟು ನಡೆದಿದ್ದಾನೆ. ಇತ್ತ ಬ್ಯಾಂಕ್‌ನಲ್ಲಿ ಸೇಫಾಗಿದೆ ಎಂದುಕೊಂಡ ಹಣ ನಾಪತ್ತೆಯಾಗಿದೆ.
ಕುಕ್ಕಿ ಬ್ಯಾಂಕ್‌ನಲ್ಲಿ ಹಣ ಲೂಟಿ, ಕುಕ್ಕಿ ಟೆನ್ಷನ್
ಕುಕ್ಕಿ ಈಗ ಧರ್ಮ ಸಂಕಟದಲ್ಲಿ ಸಿಕ್ಕಿಕೊಂಡಿದ್ದಾನೆ. ಮನೆಯವರೆಲ್ಲಾ ಸಂಭ್ರಮದಿಂದ ಮಾಡುತ್ತಿರುವ ಮದುವೆಯದು. ಕುಕ್ಕಿ ಮಂಕಾಗಿ ಹೋದರೆ ಅಲ್ಲಿ ನಗುವಿನ ಕಳೆ ಖಂಡಿತ ಮಾಯವಾಗುತ್ತದೆ. ಇತ್ತ ಕುಕ್ಕಿಗೆ ಅಷ್ಟೆಲ್ಲಾ ಹಣ ಕಳೆದುಕೊಂಡಿರುವುದು ಖಂಡಿತಾ ತಲೆ ಮೇಲೆ ಬರುತ್ತದೆ. ಇನ್ನು ಈ ವಿಚಾರ ಮನೆಯಲ್ಲಿ ಹೇಳುವುದು ಕೊಂಚ ಕಷ್ಟ ಸಾಧ್ಯವೆ. ಯಾಕೆಂದರೆ ದಾದಾ ಹಣದ ವಿಚಾರಕ್ಕೆ ತುಂಬಾ ಬೆಲೆ ಕೊಡುತ್ತಾರೆ. ಒಂದೊಂದು ರೂಪಾಯಿ ಖರ್ಚು ಮಾಡುವಾಗಲೂ ತುಂಬಾ ಯೋಚಿಸುತ್ತಾರೆ. ಹೀಗಿರುವಾಗ ಕುಕ್ಕಿ ಮನೆಯಲ್ಲಿ ಈ ವಿಚಾರ ಹೇಳುವುದಾದರೂ ಹೇಗೆ..? ಹೇಳದೆ ಮದುವೆ ಸಂಭ್ರಮದಲ್ಲಿ ಭಾಗವಹಿಸುವುದಾದರೂ ಹೇಗೆ? ಒಟ್ಟಾರೆ ಪ್ರತಿದಿನ ನಗುವಿನ ಡೋಸ್ ಕೊಡುತ್ತಿದ್ದ ಕುಕ್ಕಿ ಇವತ್ತು ಸೀರಿಯಸ್ ಆಗುವುದನ್ನು ಪ್ರೋಮೊದಲ್ಲಿ ನೋಡಲು ಆಗುತ್ತಿಲ್ಲ. ಇನ್ಮುಂದೆ ಇಡೀ ಎಪಿಸೋಡ್ ಸಂಕಟ ಪಡಬೇಕಾಗುತ್ತೆ.


Click it and Unblock the Notifications











