ಕಾವೇರಿ ಕನ್ನಡ ಮೀಡಿಯಂನಲ್ಲೂ ಕರಿಮಣಿ ಮಾಲೀಕನ ಚಿಂತೆ; ನೆಟ್ಟಿಗರು ಏನಂದ್ರು..?
ಕಾವೇರಿಯನ್ನು ಮದುವೆಯಾಗಿರುವ ಅಗಸ್ತ್ಯ ಈ ವಿಚಾರವನ್ನು ಮನೆಯವರೆಲ್ಲರಿಂದ ಮುಚ್ಚಿಟ್ಟಿದ್ದ. ಅದರಲ್ಲೂ ಅಮ್ಮನಿಗೆ ಮಗನ ಮದುವೆ ಬಗ್ಗೆ ಅಪಾರವಾದ ಕನಸಿದ್ದರಿಂದ ಅಮ್ಮನಿಗೆ ಹೇಳುವುದು ಬೇಡ ಎಂದೇ ತೀರ್ಮಾನಿಸಿದ್ದ. ಆದರೆ ಈಗ ಗುಟ್ಟಾಗಿಟ್ಟಿದ್ದ ವಿಚಾರ ಬಯಲಾಗಿ ಆಗಿದೆ.
ಅಗಸ್ತ್ಯ ಮತ್ತು ಕಾವೇರಿ ಮದುವೆಯಾಗಿದೆ ಎಂಬುದು ತಿಳಿದಿದ್ದೇ ತಡ, ಅಗಸ್ತ್ಯನ ತಾಯಿ ಕಾವೇರಿಯನ್ನು ಟಾರ್ಗೆಟ್ ಮಾಡಿದ್ದಾಳೆ. ವೃಂದಾಳನ್ನು ಮದುವೆ ಮಾಡಲು ಹೊರಟಿದ್ದಾಳೆ. ಅದಕ್ಕೆ ಪ್ಲ್ಯಾನ್ ನಡೆಯುತ್ತಿದೆ. ಸತ್ಯ ಒಪ್ಪಿಕೊಳ್ಳದ ಅಗಸ್ತ್ಯ ಅಡ್ಡಕತ್ತರಿಯಲ್ಲಿ ಸಿಲುಕಿದ್ದಾನೆ.

ಕಾವೇರಿಯನ್ನು ಕಾಪಾಡುವ ಅಗಸ್ತ್ಯ
ಮೊದಲಿಗೆ ಕಾವೇರಿಯನ್ನು ಅಗಸ್ತ್ಯ ಒಪ್ಪಿರಲಿಲ್ಲ. ಆದರೆ ದಿನಕಳೆದಂತೆ ಕಾವೇರಿಯನ್ನು ಹೆಂಡತಿಯಾಗಿ ಮನಸ್ಸಲ್ಲಿ ಒಪ್ಪಿದ್ದಾನೆ. ಆದರೆ ಅದನ್ನು ಹೇಳಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಆದರೂ ತನ್ನ ಹೆಂಡತಿ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಅಗಸ್ತ್ಯನೇ ಸಹಾಯಕ್ಕೆ ಬರುವುದು. ಮನೆಯವರು ಎಲ್ಲರೂ ಇದ್ದರೂ ಕೂಡ ತಲೆ ಕೆಡಿಸಿಕೊಳ್ಳದೆ ಹೆಂಡತಿಯನ್ನು ಕಾಪಾಡುವುದಕ್ಕೆ ಹೊರಡುತ್ತಾನೆ. ದೇವಸ್ಥಾನದಲ್ಲೂ ಅಷ್ಟೇ ಕಾವೇರಿ ಒಬ್ಬಳೆ ಸೌದೆ ತರುವಾಗ ಸಹಾಯಕ್ಕೆ ನಿಂತ. ಈಗ ಕಾವೇರಿ ಒಬ್ಬಳೆ ನಡೆದುಕೊಂಡು ಹೋಗುತ್ತಿದ್ದರೆ, ಡ್ರಾಪ್ ಮಾಡುವುದಕ್ಕೆ ಹೋಗಿದ್ದಾನೆ. ವೃಂದಾಳ ಜೊತೆಗೆ ಅವರ ತಾಯಿ ಮದುವೆ ಫಿಕ್ಸ್ ಮಾಡಿದ್ದರು, ಆ ಮದುವೆ ಮುರಿದು ಕಾವೇರಿಯನ್ನು ಮನೆ ಸೊಸೆ ಮಾಡುವುದು ಹೇಗೆ ಎಂಬುದರ ಕಡೆಗೆ ಚಿಂತೆ ನಡೆಸಿದ್ದಾನೆ.
ಹೆಂಡತಿ ಅಲ್ಲವೆಂದ ಕಾವೇರಿ
ಕಾವೇರಿ ಕೋಪದಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಕಾರು ನಿಲ್ಲಿಸಿದ ಅಗಸ್ತ್ಯ, ಕಾರು ಹತ್ತಲು ಹೇಳಿದ್ದಾನೆ. ಅದಕ್ಕೆ ಒಪ್ಪದ ಕಾವೇರಿ 'ನಂಗೆ ಕೊರಗಜ್ಜ ಕಾಲುಗಳನ್ನು ಗಟ್ಟಿಯಾಗಿಯೇ ಕೊಟ್ಟಿದ್ದಾನೆ' ಎಂದಿದ್ದಾಳೆ. ಅಷ್ಟರಲ್ಲಿ ಜನ ಸೇರಿದ್ದು, ಅಗಸ್ತ್ಯ ಏನೋ ಹೆಣ್ಣು ಮಗಳನ್ನು ಚುಡಾಯಿಸುತ್ತಿದ್ದಾನೆ ಎಂದುಕೊಂಡಿದ್ದಾರೆ. ಎಲ್ಲರೂ ಹೊಡೆಯುವುದಕ್ಕೆ ಹೋದಾಗ ಕಾವೇರಿ ನಿಲ್ಲಿಸಿದ್ದಾಳೆ. ನಾನವಳ ಗಂಡ, ಅವಳ ಕುತ್ತಿಗೆಯಲ್ಲಿರುವ ಕರಿಮಣಿ ಮಾಲೀಕ ನಾನೇ ಎಂದಿದ್ದಾನೆ. ಕಾವೇರಿಯೂ ಅದನ್ನು ಒಪ್ಪಿಕೊಂಡಿದ್ದು, ಕರಿಮಣಿ ಮಾಲೀಕ ಇವರೇ ಆದರೆ ನಾನು ಅವರ ಹೆಂಡತಿ ಅಲ್ಲ ಎಂದಿದ್ದಾಳೆ.

ಧಾರಾವಾಹಿಯಲ್ಲೆಲ್ಲಾ ಅದೇ ಗುಂಗು
ಸದ್ಯ ರೀಲ್ಸ್ ಟ್ರೆಂಡಿಂಗ್‌ನಲ್ಲಿ ಕರಿಮಣಿ ಮಾಲೀಕ ಇನ್ನು ಟ್ರೆಂಡಿಂಗ್‌ನಲ್ಲಿಯೇ ಇದೆ. ಪದೇ ಪದೆ ಕರಿಮಣಿ ಮಾಲೀಕನ ಧ್ಯಾನ ಮಾಡುತ್ತಿದ್ದಾರೆ. ಈಗ ಸ್ಟಾರ್ ಸುವರ್ಣ ಕೂಡ ಟ್ರೆಂಡಿಂಗ್‌ನಲ್ಲಿ ಹಿಂದೆ ಬಿದ್ದಿಲ್ಲ. ಕಾವೇರಿ ಕನ್ನಡ ಮೀಡಿಯಂ ಮೂಲಕ ಆ ಟ್ರೆಂಡಿಂಗ್ ಎಳೆ ತಂದಿದೆ. ಅಗಸ್ತ್ಯ ಮತ್ತು ಕಾವೇರಿ ನಡುವೆ ಕರಿಮಣಿ ಮಾಲೀಕನ ಸಬ್ಜೆಕ್ಟ್ ತಂದಿದ್ದಾರೆ. ಧಾರಾವಾಹಿಗಳಲ್ಲಿ ಕರಿಮಣಿ ಮಾಲೀಕನ ಗುಂಗು ಹಾಗೇ ತೇಲುತ್ತಾ ಇದೆ.
ಕೇಳಿ ಕೇಳಿ ಸುಸ್ತಾದ ಜನ
ಈ ಟ್ರೆಂಡಿಂಗ್ ಶುರುವಾಗಿ ಬಹಳ ದಿನಗಳೇ ಆಯಿತು. ಯಾವುದೇ ಹೊಸತನ ಆರಂಭದಲ್ಲಿ ಆದಾಗ ತುಂಬಾ ಆಸಕ್ತಿ ಇಂದ ಕೇಳುತ್ತಾರೆ. ಪ್ರತಿದಿನ ಅದೇ ಆಗಿ ಹೋದರೆ ಕೇಳುಗರಿಗೂ ಬೇಸರವಾಗಿ ಹೋಗುತ್ತದೆ. ಅತಿಯಾದಾಗ ಅಮೃತ ಕೂಡ ವಿಷ ಆಗುತ್ತೆ ಅಂತಾರಲ್ಲ ಹಾಗೆ. ಈ ಹಾಡನ್ನು ಕೇಳಿ ಕೇಳಿ ಸುಸ್ತಾದ ಜನತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಕೆಲವೊಬ್ಬರು 'ಕಡೆಗೂ ಸಿಕ್ಕಿದರಲ್ಲ ಕರಿಮಣಿ ಮಾಲೀಕ ಎಂದರೆ, ಈ ಹಾಡು ಕೇಳಿ ಕೇಳಿ ಸಾಕಾಯ್ತು. ಸಾಕ್ ಮಾಡಿಪಾ' ಎನ್ನುತ್ತಿದ್ದಾರೆ. 'ಉಪೇಂದ್ರ' ಚಿತ್ರದ ಈ ಹಾಡು ಎವರ್ ಗ್ರೀನ್ ಆದರೆ ಸ್ಟಾರ್ ಸುವರ್ಣ ಈ ಸಾಂಗ್ ಸಾಲನ್ನು ತೆಗೆದುಕೊಂಡಿದ್ದು ಬಹಳ ತಡವಾಯಿತು ಎನ್ನುತ್ತಿದ್ದಾರೆ.


Click it and Unblock the Notifications











