ಈ ವೀಕೆಂಡ್ ಮಸ್ತ್ ಮನರಂಜನೆ: ಬೆಳಕಿನ ಹಬ್ಬಕ್ಕೆ 'ದೀಪಾವಳಿ ನಗೆ ಉತ್ಸವ'.. ಎಲ್ಲಿ? ಯಾವಾಗ?
ದೀಪಾವಳಿ ಹಬ್ಬ ಒಂದು ವಾರ ಇದೆ ಅನ್ನುವಾಗಲೇ ಸಂಭ್ರಮ ಮನೆ ಮಾಡಿದೆ. ಸಿನಿಮಾರಂಗ ಹಾಗೂ ಕಿರುತೆರೆ ಭರ್ಜರಿ ತಯಾರಿಯನ್ನೇ ನಡೆಸುತ್ತವೆ. ಈ ಬಾರಿ ಕೂಡ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿ ನಿಂತಿವೆ. ಅದೇ ಇನ್ನೊಂದು ಕಡೆ ಕಿರುತೆರೆಯಲ್ಲಿ ಅದ್ಧೂರಿ ಕಾರ್ಯಕ್ರಮಗಳು ಪ್ರಸಾರಕ್ಕೆ ವೇದಿಕೆ ಸಜ್ಜಾಗಿದೆ.
ಕನ್ನಡ ಮನರಂಜನಾ ಚಾನೆಲ್ ಸ್ಟಾರ್ ಸುವರ್ಣ ಬೆಳಕಿನ ಹಬ್ಬದ ಪ್ರಯುಕ್ತ ಮಸ್ತ್ ಮನರಂಜನೆ ನೀಡುವುದಕ್ಕೆ ಸಜ್ಜಾಗಿದೆ. ತನ್ನ ವೀಕ್ಷಕರನ್ನು ನಗುವಿನ ನಗೆಗಡಲಲ್ಲಿ ತೇಲಿಸುವುದಕ್ಕೆ ಸಜ್ಜಾಗಿದೆ. ಅದುವೇ 'ದೀಪಾವಳಿ ನಗೆ ಉತ್ಸವ'. ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುವ ಎಲ್ಲಾ ಕಾರ್ಯಕ್ರಮಗಳು, ಧಾರಾವಾಹಿಗಳನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ.

ಇದೇ ಯಶಸ್ಸಿನ ಖುಷಿಯಲ್ಲಿ ಸ್ಟಾರ್ ಸುವರ್ಣ ಭರ್ಜರಿಯಾಗಿ ದೀಪಾವಳಿಯನ್ನು ಆಚರಿಸುವುದಕ್ಕೆ ಸಜ್ಜಾಗಿದೆ. ಮನೆ ಮಂದಿಯೆಲ್ಲ ಸೇರಿ ಒಟ್ಟಿಗಾಗಿ ಬೆಳಕಿನ ಹಬ್ಬವನ್ನು ಆಚರಣೆ ಮಾಡುವುದಕ್ಕೆ ಮುಂದಾಗಿದೆ. ದೀಪಾವಳಿ ನಗೆ ಹಬ್ಬದ ಮೂಲಕ ವೀಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವುದಕ್ಕೆ ಮುಂದಾಗಿದೆ.
ಅಂದ್ಹಾಗೆ ಈಗ ದೀಪಾವಳಿ ನಗೆ ಹಬ್ಬದಲ್ಲಿ ಕನ್ನಡ ಚಿತ್ರರಂಗದ ಹಾಸ್ಯ ದಿಗ್ಗಜರು ಮಸ್ತ್ ಮನರಂಜನೆ ನೀಡಿದ್ದಾರೆ. ಹಾಸ್ಯ ಕಲಾವಿದರಾದ ಮಿತ್ರ ಹಾಗೂ ತಬಲಾ ನಾಣಿ ಜಂಟಿಯಾಗಿ ಕಾರ್ಯಕ್ರಮವೊಂದನ್ನು ನೀಡಿದ್ದಾರೆ. ಈ ಮೂಲಕ ಈ ವೀಕೆಂಡ್‌ನಲ್ಲಿ ಹಾಸ್ಯ ಚಟಾಕಿಯನ್ನೇ ಹಾರಿಸಿದ್ದಾರೆ. ಮಿತ್ರಾ ಹಾಗೂ ನಾಣಿಯ ಕಾಮಿಡಿ ಪಂಚ್‌ಗೆ ವೀಕ್ಷಕರು ನಕ್ಕು ನಕ್ಕು ಸುಸ್ತಾಗೋದು ಗ್ಯಾರಂಟಿ ಎನ್ನಲಾಗಿದೆ.
ತಬಲ ನಾಣಿ ಹಾಗೂ ಮಿತ್ರ ಒಂದು ಕಡೆಯಾದರೆ, ಇನ್ನೊಂದು ಕಡೆ ಕಾಮಿಡಿ ಗ್ಯಾಂಗ್ಸ್ ಕೂಡ ಅಷ್ಟೇ ಮನರಂಜನೆಯನ್ನು ನೀಡಲಿದೆ. ಕಾಮಿಡಿ ಸ್ಕಿಟ್ ಮೂಲಕ ವೀಕ್ಷಕರನ್ನು ರಂಜಿಸಲಿದೆ. ಈ ಸ್ಕಿಟ್ ಕೂಡ ಕಾರ್ಯಕ್ರಮದ ಹೈಲೈಟ್‌ಗಳಲ್ಲೊಂದು.

ತರ್ಲೆ ತುಂಟಾಟದ ಜೊತೆ ಜೊತೆಗೆ ಮಸ್ತ್ ಹೆಜ್ಜೆ ಹಾಕಿ ರಂಜಿಸಿರೋದು ನಟಿ ಶುಭ ಪೂಂಜಾ. ಇವರೊಂದಿಗೆ ಇನ್ನು ಸ್ಟಾರ್ ಸುವರ್ಣದ ಮೋಸ್ಟ್ ಪಾಪ್ಯುಲರ್ ಜೋಡಿ 'ನೀನಾದೆ ನಾ' ಧಾರಾವಾಹಿಯ ವಿಕ್ರಮ್ ಮತ್ತು ವೇದಾ ಕೂಡ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಡ್ಯಾನ್ಸ್ ಯುವ ಪ್ರೇಮಿಗಳ ಫೇವರಿಟ್ ಆಗುತ್ತೆ ಎನ್ನುತ್ತಿವೆ ಮೂಲಗಳು.
ಇನ್ನು 'ಟೋಬಿ' ಸಿನಿಮಾದ ನಟಿ ಚೈತ್ರಾ ಜೆ ಆಚಾರ್ ಇದೇ ಮೊದಲ ಬಾರಿಗೆ ಕಿರುತೆರೆಯ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ. 'ದೀಪಾವಳಿ ನಗೆ ಉತ್ಸವ' ಕಾರ್ಯಕ್ರಮದ ವೇದಿಕೆ ಮೇಲೆ ಅದ್ಭುತವಾದ ಡ್ಯಾನ್ಸ್ ಪರ್ಫಾಮೆನ್ಸ್ ನೀಡಿದ್ದಾರೆ.
ಸ್ಟಾರ್ ಸುವರ್ಣದ ಇದೇ ವೇದಿಕೆ ಮೇಲೆ ನಟ ಸತೀಶ್ ನೀನಾಸಂ, ಅದಿತಿ ಪ್ರಭುದೇವ್ ಕೂಡ ರೊಮ್ಯಾಂಟಿಕ್ ಮೂಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ದಿವ್ಯಾ ಉರುಡುಗ, ಅರವಿಂದ್ ಕೆ ಪಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೀಕ್ಷಕರಿಗೆ ಮತ್ತಷ್ಟು ಮನರಂಜನೆ ನೀಡಿದ್ದಾರೆ. ಹಾಗೇ ಈ ದೀಪಾವಳಿ ಹಬ್ಬಕ್ಕೆ ಮಸ್ತ್ ಮನರಂಜನೆ ನೀಡುವ 'ದೀಪಾವಳಿ ನಗೆ ಉತ್ಸವ' ಇದೇ ಭಾನುವಾರ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗಲಿದೆ.


Click it and Unblock the Notifications











