ಸ್ಟಾರ್ ಸುವರ್ಣಾಗೆ ಬರುತ್ತಿದ್ದಾಳೆ 'ರಾಣಿ': ಆಕೆಯ ಕಥೆ ಏನು?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈಗಾಗಲೇ ಕೆಲ ಧಾರಾವಾಹಿಗಳು ಮುಕ್ತಾಯಗೊಂಡಿದ್ದು, ಆ ಜಾಗಗಳಲ್ಲಿ ಹೊಸ ಹೊಸ ಧಾರಾವಾಹಿಗಳು ಶುರುವಾಗುತ್ತಿವೆ. ಈ ವಾಹಿನಿಯಲ್ಲಿ ಬಹಳ ಬೇಗ ಹೊಸ ಧಾರಾವಾಹಿ ಶುರುವಾಗಲಿದೆ. ವಾಹಿನಿಯಲ್ಲಿ ಹೊಸ ಧಾರಾವಾಹಿಗಳು ಪ್ರಸಾರವಾಗಲು ಸಾಲು ಸಾಲಾಗಿ ಕಾಯುತ್ತಿವೆ. ಇತ್ತೀಚೆಗಷ್ಟೇ ನಮ್ಮ ಲಚ್ಚಿ ಶುರುವಾಗಿದ್ದು, ಇದರ ಬೆನ್ನಲ್ಲೇ ಈಗ ಮತ್ತೊಂದು ಧಾರಾವಾಹಿ ಪ್ರಸಾರಕ್ಕೆ ಸಿದ್ಧವಾಗಿದೆ.
ಹೊಸ ಧಾರಾವಾಹಿಯ ಪ್ರೋಮೋ ವಾಹಿನಿಯಲ್ಲಿ ಹರಿದಾಡುತ್ತಿದೆ. ಯಾವುದು ಆ ಹೊಸ ಧಾರಾವಾಹಿ, ಯಾವಾಗ ಶುರುವಾಗುತ್ತದೆ ಎಂಬ ಕುತೂಹಲ ನಿಮಗೂ ಇದೆ ಅಲ್ವಾ..? ಹಾಗಾದರೆ. ಇದರ ಬಗ್ಗೆ ಕಂಪ್ಲೀಟ್ ಆಗಿ ತಿಳಿಯೋಣ ಬನ್ನಿ. ಪ್ರೇಕ್ಷಕರಿಗೆ ಮನರಂಜನೆ ನೀಡಲು ಮನರಂಜನಾ ವಾಹಿನಿಗಳಲ್ಲಿ ಧಾರಾವಾಹಿಗಳಿಗೇನು ಬರವಿಲ್ಲ. ವಾಹಿನಿಗಳಲ್ಲಿ ಒಂದಾದ ಮೇಲೆ ಒಂದು ಧಾರಾವಾಹಿಗಳು ಶುರುವಾಗುತ್ತಲೇ ಇರುತ್ತವೆ. ವಿಭಿನ್ನವಾದ ಕತೆಗಳ ಜೊತೆಗೆ ಹೊಸ ನಟ-ನಟಿಯರು ಕೂಡ ಬರುತ್ತಾರೆ.

ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತನ್ನದೇ ಹೊಸ ಕಥೆಯನ್ನು ಹೊತ್ತು ರಾಣಿ ಬರುತ್ತಿದ್ದಾರೆ. ಹಳ್ಳಿ ಹುಡುಗಿ ರಾಣಿ ಬಾಳಲ್ಲಿ ಬರುವ ರಾಜ, ಇವರಿಬ್ಬರ ಜೊತೆಗೆ ಶತ್ರುಗಳು ಹಾಗೂ ಹಿತೈಷಿಗಳು ಕೂಡ ಇರಲಿದ್ದಾರೆ. ತಾಯಿಯನ್ನು ಕಣ್ಣ ಎದುರಿಗೇ ಕಳೆದುಕೊಂಡ ರಾಣಿ, ತಪ್ಪಿತಸ್ಥರ ಹುಡುಕಾಟದಲ್ಲಿದ್ದಾಳೆ. ಇದೆಲ್ಲಾ ಸರಿ ಧಾರಾವಾಹಿಯ ಹೆಸರೇನು ಎಂದು ಕೇಳುತ್ತಿದ್ದೀರಾ..? ಧಾರಾವಾಹಿಯ ಹೆಸರೇ 'ರಾಣಿ'.
'ರಾಣಿ' ಧಾರಾವಾಹಿಯಲ್ಲಿ ಹಳ್ಳಿ ಹುಡುಗಿ ರಾಣಿಗೆ ಕುರಿ ಮರಿ ಚೆರ್ರಿ ಅಂದ್ರೆ, ಪಂಚಪ್ರಾಣ. ಸದಾ ಕುರಿ ಮರಿಯ ಜೊತೆಗಿರುವ ರಾಣಿಗೆ ಕಿವಿ ಕೇಳುವುದಿಲ್ಲ. ಚಿಕ್ಕವಯಸ್ಸಿನಲ್ಲಾದ ಅಪಘಾತದಲ್ಲಿ ಶ್ರವಣ ದೋಷ ಶಾಪವಾಗಿ ಬಂದಿರುತ್ತದೆ. ಅಪಘಾತ ಒಂದರಲ್ಲಿ ತಾಯಿ ಮತ್ತು ಅಣ್ಣನನ್ನು ಕಳೆದುಕೊಂಡ ರಾಣಿ, ಇದೇ ಸಂದರ್ಭದಲ್ಲಿ ಆಘಾತದಿಂದ ಕಿವಿ ಕೂಡ ಕೇಳಿಸುತ್ತಿರುವುದಿಲ್ಲ. ನೇರವಾಗಿ ಮಾತನಾಡುವ ರಾಣಿ, ತನ್ನವರನ್ನು ಕಳೆದುಕೊಂಡವರನ್ನು ಹುಡುಕುತ್ತಿರುತ್ತಾಳೆ.
ಇನ್ನು ತಂದೆ ನೆರಳಲ್ಲಿ ಬೆಳದ ರಾಣಿಯನ್ನು ಮನದಲ್ಲೇ ಮೆಚ್ಚಿಕೊಂಡಿರುವ ನಾಯಕನೂ ಇದ್ದಾನೆ. ಅವನೇ ಅರ್ಜುನ್. ಸೌದಾಮಿನಿಯ ಮಗ. ವಿದೇಶದಲ್ಲಿ ಓದಿರುವ ಅರ್ಜುನ್‌ಗೆ ರಾಣಿ ಹಳ್ಳಿ ಹುಡುಗಿಯಾದರೂ ತುಂಬಾ ಇಷ್ಟ. ಅವಳನ್ನೇ ಮದುವೆಯಾಗಬೇಕು ಎಂದು ಕನಸು ಕಾಣುತ್ತಿರುತ್ತಾನೆ. ಆದರೆ, ರಾಣಿ ಎಂದರೆ ಸೌದಾಮಿನಿಗೆ ದ್ವೇಷ. ಯಾವಾಗಲೂ ರಾಣಿ ವಿರುದ್ಧ ಕಿಡಿ ಕಾರುತ್ತಲೇ ಇರುತ್ತಾಳೆ. ಹೀಗಿರುವಾಗ ಅರ್ಜುನ್ ಹೇಗೆ ರಾಣಿಯನ್ನು ವರಿಸುತ್ತಾನೆ..? ಅವಳಿಗೆ ಕಿವಿ ಕೇಳಿಸೊಲ್ಲ ಎಂಬ ಸತ್ಯ ಗೊತ್ತಾದರೆ ಏನು ಮಾಡುತ್ತಾನೆ ಎಂಬುದು ಈ ಹೊಸ ಧಾರಾವಾಹಿಯ ಕಥೆ.

ಅರ್ಜುನ್ - ರಾಣಿ ಮದುವೆ ಆಗಲು ಸೌದಾಮಿನಿ ಬಿಡ್ತಾಳಾ ಎಂದು ಕಾದು ನೋಡಬೇಕಿದೆ. ಒಟ್ನಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಏಪ್ರಿಲ್ 3 ರಿಂದ ಸಂಜೆ 6.30 ಕ್ಕೆ ಈ ಹೊಸ ಧಾರಾವಾಹಿ ಮೂಡಿ ಬರಲಿದೆ. ಪ್ರೇಕ್ಷಕರಿಗೆ ರಾಣಿ ಮನರಂಜನೆ ಕೊಡುವುದಂತೂ ಸತ್ಯ. ಇನ್ನು ಈ ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ಪ್ರವೀಣ್ ಅಥರ್ವ್ ಅವರು ಅರ್ಜುನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ವಿಲನ್ ಪಾತ್ರವನ್ನು ನಟಿ ಸ್ವಾತಿ ನಿರ್ವಹಿಸುತ್ತಿದ್ದು, ಸ್ವಾತಿಯೇ ಸೌದಾಮಿನಿ ಆಗಿದ್ದಾರೆ.
ನಾಯಕಿ ರಾಣಿ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟಿಯೇ ಚಂದನಾ ಎಮ್ ರಾವ್. ನಿರ್ದೇಶಕ ಹಾಗೂ ನಿರ್ಮಾಪಕರಾದ ರಾಮ್ ಜೀ ಅವರ ಸಾರಥ್ಯದಲ್ಲಿ ಬಾನಿಜೆ ಏಷಿಯಾ ಸಂಸ್ಥೆ ಈ ಧಾರಾವಾಹಿ ನಿರ್ಮಾಣ ಮಾಡುತ್ತಿದೆ. ಸಹನಿರ್ಮಾಣದ ಜವಾಬ್ದಾರಿಯನ್ನು ಗಗನ ಎಂಟರ್ ಪ್ರೈಸಸ್ ಸಂಸ್ಥೆ ಹೊತ್ತುಕೊಂಡಿದೆ. ಸೋಮವಾರದಿಂದಲೇ ರಾಣಿ ರಾಜ್ಯಭಾರ ಶುರುವಾಗಲಿದೆ.


Click it and Unblock the Notifications











