"ಯಶಸ್ವಿ ನಟನಾಗಲು ತಾಳ್ಮೆ ಮುಖ್ಯ" ಎಂದ ಈ ನಟ ಯಾರು ಗೊತ್ತಾ?
ಕಲಾವಿದ, ಬರಹಗಾರ, ಯುವ ನಿರ್ದೇಶಕ, ಉದ್ಯಮಿ ಇದು ನಟ ಸೂಚನ್ ಶೆಟ್ಟಿ ಅವರ ಸಂಕ್ಷಿಪ್ತ ಪರಿಚಯ. ಅಂದ ಹಾಗೇ ಸೂಚನ್ ಶೆಟ್ಟಿ ಯಾರು ಎಂದು ನೀವು ಆಲೋಚಿಸುತ್ತಿದ್ದೀರಾ? ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ನೋಡಿದವರಿಗೆ ಸೂಚನ್ ಶೆಟ್ಟಿ ಪರಿಚಯ ಇದ್ದೇ ಇರುತ್ತದೆ. 'ಕಾಂತಾರ' ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ ರವಿ ಪಾತ್ರದಲ್ಲಿ ನಟಿಸಿದ್ದ ಸೂಚನ್ ಶೆಟ್ಟಿ ಪೋಷಕ ಪಾತ್ರದಲ್ಲಿ ನಟಿಸಿದ್ದರೂ, ತಮ್ಮ ನಟನೆಯ ಮೂಲಕ ಸಿನಿ ಪ್ರಿಯರ ಮನ ಸೆಳೆದ ಹ್ಯಾಂಡ್‌ಸಮ್ ಹುಡುಗ.
ಮುಂದೆ ರವಿ ಬಸ್ರೂರು ನಿರ್ದೇಶನದ 'ಕಡಲ್' ಸಿನಿಮಾದಲ್ಲಿ ಬಣ್ಣ ಹಚ್ಚಿದ ಸೂಚನ್ ಶೆಟ್ಟಿ ಮೊದಲ ಬಾರಿಗೆ ಖಳನಾಯಕನಾಗಿ ನಟಿಸಿ ಸಿನಿ ಪ್ರಿಯರನ್ನು ರಂಜಿಸಿದರು. 'ಕಡಲ್' ಸಿನಿಮಾದ ನಿರ್ದೇಶಕ ರವಿ ಬಸ್ರೂರು ಅವರು ಸ್ವತಃ ಸೂಚನ್ ಶೆಟ್ಟಿ ಅವರ ನಟನೆ ಕಂಡು ಫಿದಾ ಆಗಿದ್ದು ತಮ್ಮ ಮುಂದಿನ ಚಿತ್ರಕ್ಕೆ ಸೂಚನ್ ಶೆಟ್ಟಿ ಅವರನ್ನು ನಾಯಕನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

'ಒಂದು ತಾತ್ಕಾಲಿಕ ಪಯಣ' ಎನ್ನುವ ಸಿನಿಮಾದಲ್ಲಿ ಸೂಚನ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಬಣ್ಣದ ಲೋಕದಲ್ಲಿ ಏನಾದರೂ ಸಾಧಿಸಬೇಕು ಎಂಬ ಕನಸು ಹೊತ್ತ ಜೀವಗಳ ನೋವು, ನಿರಾಸೆಗಳ ಕಥೆಯನ್ನು ಒಳಗೊಂಡಿರುವ ಸಿನಿಮಾವೇ 'ಒಂದು ತಾತ್ಕಾಲಿಕ ಪಯಣ'. ಈಗಾಗಲೇ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಸಿನಿ ಪ್ರಿಯರ ಮನ ಸೆಳೆದಿದೆ.
ಅಂದಹಾಗೇ ಸೂಚನ್ ಶೆಟ್ಟಿ ಅವರಿಗೆ ಸಣ್ಣ ವಯಸ್ಸಿನಿಂದಲೂ ಸಿನಿಮಾ, ನಾಟಕಗಳಲ್ಲಿ ವಿಶೇಷ ಒಲವು ಇತ್ತು. ಮಾತ್ರವಲ್ಲ ತಾನು ಕೂಡಾ ನಟನಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಬೇಕು ಎಂಬ ಕನಸನ್ನು ಇವರು ಕಂಡಿದ್ದರು. ತಮ್ಮ ಬಾಲ್ಯದ ಕನಸು ನನಸು ಮಾಡಿರುವ ಸೂಚನ್ ಶೆಟ್ಟಿ ತನ್ನ ನಟನೆಯ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡುತ್ತಿದ್ದಾರೆ.
'ಗಾಡ್ ಪ್ರಾಮಿಸ್' ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿರುವ ಸೂಚನ್ ಶೆಟ್ಟಿ ಆ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಲಿದ್ದಾರೆ. ಚಿತ್ರೀಕರಣ ಶೀಘ್ರದಲ್ಲಿ ನಡೆಯಲಿದ್ದು ನೈಜ ಘಟನೆಯಿಂದ ಸ್ಫೂರ್ತಿ ಪಡೆದಿರುವಂತಹ ಸಿನಿಮಾ ಇದು ಎಂದು ಹೇಳಿದರೆ ತಪ್ಪಾಗಲಾರದು. ಪಕ್ಕಾ ಫ್ಯಾಮಿಲಿಯ ಜೊತೆಗೆ ಒಂದಷ್ಟು ಕಾಮಿಡಿ ಕಥಾ ಹಂದರವನ್ನು ಈ ಸಿನಿಮಾ ಒಳಗೊಂಡಿದೆ.

"ಯಶಸ್ವಿ ನಟನಾಗಿ ಬಣ್ಣದ ಜಗತ್ತಿನಲ್ಲಿ ಗುರುತಿಸಿಕೊಳ್ಳಬೇಕು ಎಂದರೆ ತಾಳ್ಮೆ ತುಂಬಾ ಮುಖ್ಯ. ಇದರ ಜೊತೆಗೆ ನಾವು ಮಾಡುವ ಕೆಲಸಕ್ಕೆ ಇದೇ ಕೊನೆ ಎಂಬುದು ಇರಬಾರದು. ನಿರಂತರವಾಗಿ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದರೆ, ಅದಕ್ಕೆ ತಕ್ಕುದಾದ ಪ್ರತಿಫಲ ಸಿಕ್ಕೇ ಸಿಗುತ್ತದೆ" ಎಂದು ಫಿಲ್ಮಿಬೀಟ್ ಕನ್ನಡದ ಜೊತೆಗೆ ಸೂಚನ್ ಶೆಟ್ಟಿ ಹಂಚಿಕೊಂಡಿದ್ದಾರೆ.
ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಸೂಚನ್ ಶೆಟ್ಟಿ ಬರಹಗಾರರೂ ಹೌದು. ಕಾಲೇಜು ದಿನಗಳಿಂದಲೇ ಬರವಣಿಗೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇದರ ಜೊತೆಗೆ ಸಿನಿಮಾ ಹಾಡುಗಳನ್ನು ಕುಂದಾಪುರ ಕನ್ನಡದಲ್ಲಿ ಬರೆಯುವ ಹವ್ಯಾಸವೂ ಇವರಿಗಿತ್ತು. ಮುಂದೆ ರವಿ ಬಸ್ರೂರು ಅವರ ತಂಡ ಸೇರಿದ ಸೂಚನ್ ಶೆಟ್ಟಿ 'ಗಿರ್ಮಿಟ್', 'ಕಡಲ್' ಸಿನಿಮಾಗಳಿಗೆ ಸಂಭಾಷಣೆ ಬರೆದು ಸೈ ಎನಿಸಿಕೊಂಡಿದ್ದಾರೆ.


Click it and Unblock the Notifications











