ಟಾಪ್-2ಗೆ ಪ್ರತಾಪ್ ಅರ್ಹ ಅಲ್ಲ, ಶೋ ಹೇಗೆ ನಿಭಾಯಿಸಿದ್ರಿ? ಅಭಿಮಾನಿ ಪ್ರಶ್ನೆಗೆ ಕಿಚ್ಚ ಏನಂದ್ರು?
ನಟ ಕಾರ್ತಿಕ್ ಮಹೇಶ್ ಹೊಸ ಬಿಗ್‌ಬಾಸ್ ಆಗಿ ಹೊರ ಹೊಮ್ಮಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 10 ಶೋ ಇತ್ತೀಚೆಗೆ ಮುಕ್ತಾಯವಾಗಿತ್ತು. ಕಾರ್ತಿಕ್ ವಿನ್ನರ್ ಆದ್ರೆ ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿದ್ದರು. ಈ ಫಲಿತಾಂಶದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಇನ್ನು ಚರ್ಚೆ ನಿಂತಿಲ್ಲ. ಇವರು ಗೆಲ್ಲಬೇಕಿತ್ತು, ಅವರು ಗೆಲ್ಲಬೇಕಿತ್ತು ಎನ್ನುವ ಮಾತುಗಳು ಕೇಳಿಬರುತ್ತಲೇ ಇದೆ.
ಡ್ರೋನ್ ಪ್ರತಾಪ್ ಟಾಪ್-2ಗೆ ಏರಿದ್ದರ ಬಗ್ಗೆಯೂ ಕೆಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಖುದ್ದು ಪ್ರತಾಪ್ ಕೂಡ ಇದನ್ನು ತಾವು ನಿರೀಕ್ಷಿಸಿರಲಿಲ್ಲ ಎಂದು ವೇದಿಕೆ ಮೇಲೆಯೇ ಹೇಳಿದ್ದರು. ಸಂಗೀತಾ 3ನೇ ಸ್ಥಾನಕ್ಕೆ ತೃಪ್ತಿಪಟ್ಟು ಹೊರ ಬರುತ್ತಿದ್ದಂತೆ ಪ್ರತಾಪ್ ಶಾಕ್ ಆಗಿದ್ದರು. ನೆಗೆಟಿವ್ ಇಮೇಜ್‌ನಿಂದಲೇ ಪ್ರತಾಪ್ ಶೋಗೆ ಎಂಟ್ರಿ ಕೊಟ್ಟಿದ್ದರು. ಒಂದೆರಡು ವಾರ ಮನೆಯೊಳಗೆ ಇದ್ದರೆ ಹೆಚ್ಚು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅಚ್ಚರಿ ಎನ್ನುವಂತೆ ಫಿನಾಲೆ ತಲುಪಿದ್ದರು.

ಪ್ರತಾಪ್ ಟಾಪ್-2 ಹಂತಕ್ಕೇರಿದ್ದರ ಬಗ್ಗೆ ಕೆಲವರು ವ್ಯಂಗ್ಯವಾಡುತ್ತಿದ್ದಾರೆ. ಇಡೀ ರಾಜ್ಯವನ್ನು ಯಾಮಾರಿಸಿದ ವ್ಯಕ್ತಿ ಇಷ್ಟು ದೊಡ್ಡ ಶೋನಲ್ಲಿ ರನ್ನಪ್ ಆಗಿದ್ದಾರೆ. ಇದಕ್ಕೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ವಿನಯ್ ಗೌಡ, ಸಂಗೀತಾಗಿಂತಲೂ ಪ್ರತಾಪ್ ಚೆನ್ನಾಗಿ ಆಡಿದ್ರಾ? ಎಂದು ಹುಬ್ಬೇರಿಸುತ್ತಿದ್ದಾರೆ. ಇಂತಹ ಪ್ರಶ್ನೆಯನ್ನೇ ಅಭಿಮಾನಿಯೊಬ್ಬರು ನಟ ಸುದೀಪ್ ಮುಂದೆ ಇಟ್ಟಿದ್ದಾರೆ.
ಇತ್ತೀಚೆಗೆ ನಟ ಸುದೀಪ್ ಟ್ವಿಟ್ಟರ್‌ನಲ್ಲಿ Ask kichcha ಸೆಷನ್ ನಡೆಸಿದ್ದರು. ಈ ವೇಳೆ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. ನಟ ದರ್ಶನ್ ಜೊತೆಗಿನ ವೈಮನಸ್ಸಿನ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಅಭಿಮಾನಿ ಪ್ರಶ್ನೆಗೆ "ದರ್ಶನ್‌ಗೆ ಒಳ್ಳೆಯದಾಗಲಿ" ಎಂದು ಹಾರೈಸಿದ್ದಾರೆ. 'ಮ್ಯಾಕ್ಸ್' ಸೇರಿದಂತೆ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಡ್ರೋನ್ ಪ್ರತಾಪ್ ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ 2ನೇ ಸ್ಥಾನಕ್ಕೇರಿದ್ದರ ಬಗ್ಗೆ ಅಭಿಮಾನಿಯೊಬ್ಬರು ಸುದೀಪ್ ಬಳಿ ಪ್ರಶ್ನೆ ಮಾಡಿದ್ದಾರೆ. "ನಿಮಗೆ ಗೊತ್ತು ಪ್ರತಾಪ್ ಟಾಪ್-2 ಸ್ಥಾನಕ್ಕೇರಲು ಅರ್ಹ ಅಲ್ಲ ಎಂದು. ಫಿನಾಲೆ ವೇದಿಕೆಯಲ್ಲಿ ಫೇಕ್‌ನೆಸ್ ನೀವು ಡಿಕೋಡ್ ಮಾಡಿದ್ದಿರಿ ಕೂಡ. ಆದರೂ ನೀವು ನಿರೂಪಕನಾಗಿ ಅದನ್ನೆಲ್ಲಾ ಹೇಗೆ ನಿಭಾಯಿಸಿದಿರಿ, ಅದು ಹೇಗೆ ಅಷ್ಟು ಕೂಲ್ ಆಗಿ ಇದ್ರಿ?" ಎಂದು ಕೇಳಿದ್ದಾರೆ.

ಅಭಿಮಾನಿಯಾಗಿ ಈ ಪ್ರಶ್ನೆಗೆ ಸುದೀಪ್, "ಪ್ರತಾಪ್ ಟಾಪ್ 2ಗೆ ಬಂದಿದ್ದಾರೆ, ಅವರನ್ನು ಪ್ರಶಂಸಿಸದಿರುವುದು ತಪ್ಪಾಗುತ್ತದೆ" ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರೆ. ಬಿಗ್‌ಬಾಸ್ ಶೋನಲ್ಲಿ ಮೊದಲಿನಿಂದಲೂ ಪ್ರತಾಪ್‌ಗೆ ಸುದೀಪ್ ಬೆಂಬಲ ಸೂಚಿಸುತ್ತಾ ಬಂದಿದ್ದರು. ಆತ ಬೇಸರದಿಂದ ಮನೆ ಬಿಟ್ಟು ಹೊರ ಬರುವುದಾಗಿ ಹೇಳಿದಾಗಲೂ ಕಿಚ್ಚ ತಿಳಿ ಹೇಳಿದ್ದರು. ಧೈರ್ಯ ತುಂಬಿದರು. ವೀಕೆಂಡ್ ಎಪಿಸೋಡ್‌ಗಳನ್ನು ಪ್ರತಾಪ್ ತಪ್ಪು ಮಾಡಿದಾಗ ಬುದ್ಧಿ ಹೇಳಿ, ಸರಿ ಮಾಡಿದಾಗ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಎಲ್ಲಾ ಸ್ಪರ್ಧಿಗಳನ್ನು ಸುದೀಪ್ ಇದೇ ರೀತಿ ಟ್ರೀಟ್ ಮಾಡಿದ್ದರು. ತಪ್ಪು ಮಾಡಿದಾಗ ತಪ್ಪು ಎಂದು ಬೊಟ್ಟು ಮಾಡಿ ತೋರಿಸಿದ್ದರು. ಸರಿ ಎನಿಸಿದಾಗ ಚಪ್ಪಾಳೆ ತಟ್ಟಿದ್ದರು. ಕೆಲವೊಮ್ಮೆ ವೇದಿಕೆಯಲ್ಲೇ ಗರಂ ಆಗಿದ್ದು ಇದೆ. ಎರರು ವಾರದ ಹಿಂದೆ ಎಲಿಮಿನೇಟ್ ಆಗಿ ಹೊರ ಬಂದಿದ್ದವರು ಮತ್ತೆ ಮನೆಯೊಳಗೆ ಹೋಗಿದ್ದರು. ಈ ವೇಳೆ ಅವರು ಆಡಿದ ಮಾತುಗಳ ಬಗ್ಗೆ ವೀಕೆಂಡ್‌ನಲ್ಲಿ ಸುದೀಪ್ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಾಪ್ ಬಗ್ಗೆ ಇಶಾನಿ ಮಾತುಗಳಿಗೆ ಸುದೀಪ್ ಗರಂ ಆಗಿದ್ದರು. ಆ ಕ್ಷಣದಲ್ಲಿ ನೀವು ನೀವು ಯಾಕೆ ಅದನ್ನು ವಿರೋಧಿಸಲಿಲ್ಲ ಎಂದು ಪ್ರತಾಪ್‌ಗೂ ಕೇಳಿದ್ದರು.


Click it and Unblock the Notifications











