BBK10: ಬಳೆ ಬಗ್ಗೆ ಕಿಚ್ಚನ ನೀತಿಪಾಠ: ಜೈ ಎಂದ ಪತ್ನಿ.. ಹಳೇ ಟ್ವೀಟ್ ತೋರಿಸಿ ಸುದೀಪ್ ಕಾಲೆಳೆದ ನೆಟ್ಟಿಗರು
ಕಳೆದೊಂದು ವಾರದಿಂದ ಕರ್ನಾಟಕದಲ್ಲಿ ಬಳೆಗಳ ಸದ್ದು ಜೋರಾಗಿದೆ. ಅರ್ಥಾತ್ ಬಿಗ್‌ಬಾಸ್ ಮನೆಯಲ್ಲಿ ವಿನಯ್ ಗೌಡ ಮಾತು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಟಾಸ್ಕ್ ವೇಳೆ ಎದುರಾಳಿ ತಂಡದಲ್ಲಿದ್ದ ಕಾರ್ತಿಕ್ ಕುರಿತು ಮಾತನಾಡುತ್ತಾ "ಬಳೆ ಹಾಕ್ಕೊಂಡು ಆಡು, ಬಳೆಗಳ ರಾಜ" ಎಂದು ಅವಮಾನಿಸುವಂತೆ ಮಾತನಾಡಿದ್ದರು. ಈ ಬಗ್ಗೆ ವೀಕೆಂಡ್‌ನಲ್ಲಿ ವಿನಯ್‌ಗೆ ಸುದೀಪ್ ಸರಿಯಾಗಿ ಕ್ಲಾಸ್ ತಗೊಂಡಿದ್ದಾರೆ.
ಬಳೆ ಹಾಕಿಕೊಂಡವರು ಅಸಮರ್ಥರು, ಬಲಹೀನರು ಎನ್ನುವ ಅರ್ಥದಲ್ಲಿ ವಿನಯ್ ಈ ಪದಗಳನ್ನು ಬಳಸಿದ್ದರು. ಆದರೆ ಬಿಗ್‌ಬಾಸ್ ಮನೆಯಲ್ಲಿ ಸಂಗೀತಾ ಬಿಟ್ಟರೆ ಯಾರೂ ಇದನ್ನು ಪ್ರಶ್ನಿಸಲಿಲ್ಲ. ಇದೇ ವಿಚಾರ ಮೂರ್ನಾಲ್ಕು ದಿನಗಳಿಂದ ಭಾರೀ ಸದ್ದು ಮಾಡ್ತಿತ್ತು. ಈ ವಿಚಾರದ ಬಗ್ಗೆ ವೀಕೆಂಡ್ ಪಂಚಾಯ್ತಿಯಲ್ಲಿ ಸುದೀಪ್ ಏನ್ ಹೇಳುತ್ತಾರೆ? ಎನ್ನುವ ಕುತೂಹಲ ಹಲವರಲ್ಲಿತ್ತು. ನಿರೀಕ್ಷೆಗೆ ತಕ್ಕಂತೆ ಸುದೀಪ್ ಬಳೆ ವಿಚಾರದ ಬಗ್ಗೆಯೇ 'ವಾರದ ಕತೆ ಕಿಚ್ಚನ ಜೊತೆ' ಎಪಿಸೋಡ್‌ನಲ್ಲಿ ಮಾತನಾಡಿದ್ದರು.

ಮಹಿಳೆಯರ ಬಗ್ಗೆ ಅವಮಾನಿಸುವಂತೆ ಮಾತನಾಡಿದ ವಿನಯ್ ಗೌಡಗೆ ಖಡಕ್ ಕ್ಲಾಸ್ ತಗೊಂಡಿದ್ದರು. ವಿನಯ್ ಎಲ್ಲರ ಮುಂದೆ ತಲೆ ತಗ್ಗಿಸುವಂತೆ ಮಾಡಿದರು. ಜೊತೆಗೆ ಬಳೆಗೆ ಒಂದು ವಿಶೇಷ ಗೌರವವನ್ನು ತಂದುಕೊಟ್ಟರು. ಕಿಚ್ಚನ ಮಾತು ಕೇಳಿ ವೀಕ್ಷಕರು ಬಹುಪರಾಕ್ ಎಂದರು. ಈ ಬಗ್ಗೆ ಸುದೀಪ್ ಪತ್ನಿ ಪ್ರಿಯಾ ಟ್ವೀಟ್ ಮಾಡಿ"ಈ ಬಳೆಗೆ ನೀವು ಕೊಟ್ಟ ಚಪ್ಪಾಳೆಗೆ ನನ್ನ ಚಪ್ಪಾಳೆ ಕೂಡ ಇದೆ" ಎಂದಿದ್ದಾರೆ. ಅದೆಲ್ಲವೂ ಸರಿ. ಆದರೆ ಸ್ವತಃ ಕಿಚ್ಚ ಸುದೀಪ್ 4 ವರ್ಷಗಳ ಹಿಂದೆ ಬಳೆ ತೊಟ್ಟವರು ಬಲಹೀನರು ಎನ್ನುವ ಅರ್ಥ ಬರುವಂತೆ ಮಾಡಿದ್ದ ಟ್ವೀಟ್ ಈಗ ವೈರಲ್ ಆಗ್ತಿದೆ.
ಅದು 'ಪೈಲ್ವಾನ್' ಸಿನಿಮಾ ರಿಲೀಸ್ ಆಗಿದ್ದ ಸಂದರ್ಭ. ಸಿನಿಮಾ ಬಿಡುಗಡೆಯಾಗಿದ್ದ ಕೆಲವೇ ದಿನಗಳಲ್ಲಿ ಪೈರಸಿ ಆಗಿತ್ತು. ನಿರ್ಮಾಪಕರು ಸೈಬರ್ ಕ್ರೈಂಗೆ ದೂರು ನೀಡಿದ್ದರು. ಪೈರಸಿ ಲಿಂಕ್‌ಗಳನ್ನು ಶೇರ್ ಮಾಡಿದವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ನಾನು ದರ್ಶನ್ ಅಭಿಮಾನಿ ಎಂದು ಪೈರಸಿ ಮಾಡಿದ್ದ ವ್ಯಕ್ತಿ ಹೇಳಿಕೊಂಡಿದ್ದಾಗಿ ಸುದ್ದಿಯಾಗಿತ್ತು. ಈ ಸಮಯದಲ್ಲೇ ಸುದೀಪ್ ಟ್ವೀಟ್ ಮಾಡಿ "ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ.
ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ,ಇನ್ನು ಕೆಲವು ದಿನಗಳು ಮಾತ್ರ" ಎಂದು ಬರೆದುಕೊಂಡಿದ್ದರು.
ಸದ್ಯ ಸುದೀಪ್ ಬಿಗ್‌ಬಾಸ್ ಮನೆಯಲ್ಲಿ ಬಳೆ ತೊಟ್ಟವರ ಬಗ್ಗೆ ಮಾತನಾಡುತ್ತಿದ್ದಂತೆ ಈ ಟ್ವೀಟ್ ವೈರಲ್ ಆಗುತ್ತಿದೆ. ಅರೇ, ಅಂದು ಬಳೆ ತೊಟ್ಟವರು ಅಸಮರ್ಥರು ಎನ್ನುವ ಅರ್ಥದಲ್ಲಿ ನೀವೇ ಟ್ವೀಟ್ ಮಾಡಿದ್ದಿರಿ. ಈಗ ನೋಡಿದರೆ ಇಷ್ಟೆಲ್ಲಾ ಲೆಕ್ಚರ್ ಕೊಡ್ತಿದ್ದೀರಾ? ಎಂದು ಕೆಲವರು ಕಾಳೆಯುತ್ತಿದ್ದಾರೆ.
ಸುದೀಪ್ ಅಂದು ಟ್ವೀಟ್ ಮಾಡಿದ್ದೇನೋ ನಿಜ. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಬಳಿಕ ಸಂದರ್ಶನವೊಂದರಲ್ಲಿ ಈ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ್ದರು. 'ಪೈಲ್ವಾನ್' ಪೈರಸಿ ವಿಚಾರದಲ್ಲಿ "ನಮ್ಮ ಹೇಳಿಕೆಯನ್ನು ಬೇರೆ ಕಡೆಗೆ ಡೈವರ್ಟ್ ಮಾಡುವ ಸಲುವಾಗಿ 'ಬಳೆ' ವಿಚಾರವನ್ನು ತರುತ್ತಿದ್ದಾರೆ. ಸುದೀಪ್ ಹಿಂಗ್ ಅಂದುಬಿಟ್ರು, ಹಂಗ್ ಅಂದುಬಿಟ್ರು ಎಂದು ಡೈವರ್ಟ್ ಮಾಡಲು ಹೋಗುತ್ತಿದ್ದಾರೆ" ಎಂದು ಸುದೀಪ್ ಹೇಳಿದ್ದರು.
"ಇದ್ದಕ್ಕಿದಂರೆ ಸಾಕಷ್ಟು ಟ್ವಿಟ್ಟರ್ ಗ್ರೂಪ್‌ಗಳು ಓಪನ್ ಆಗಿವೆ. ಅದಕ್ಕೆಲ್ಲಾ ಎರಡು, ಐದು ಫಾಲೋವರ್ಸ್ ಇದ್ದಾರೆ. ಏನೇನೋ ಹೆಸರು ಇಟ್ಟುಕೊಂಡಿದ್ದಾರೆ. ನಾನು ಏನು ಟ್ವೀಟ್ ಮಾಡುತ್ತೀನೋ ಅದಕ್ಕೆ ಟ್ರೋಲ್ ಮಾಡಿಕೊಂಡು, ಕೆಟ್ಟದಾಗಿ ಬರೆಯುವುದೇ ಇವರ ಕೆಲಸ"
"ಇದರ ಹಿಂದೆ ಇರುವವರು ಯಾರು, ಆ ಖಾತೆಗಳನ್ನು ತೆರೆದಿರುವವರು ಯಾರು ಎಂಬ ವಿಚಾರವನ್ನು ತೆಗೆಸುತ್ತೇನೆ. ಅಷ್ಟು ಚೆನ್ನಾಗಿ ಮಾಡ್ತಿದ್ದಾರೆ ಎಂದರೆ ನಾವು ಅಖಾಡಕ್ಕೆ ಇಳೀಲೇ ಬೇಕು. ಈಗ ಬಳೆ ಟಾಪಿಕ್ ಯಾಕೆ ಬಂತು ಗೊತ್ತಾ? ಇದು ಬಂದಿದ್ದು ಯಾಕೆಂದರೆ ಒಬ್ಬರು ನನ್ನ ಬಗ್ಗೆ ಪತ್ರ ಬರೀತಾರೆ, ಅಳುಮುಂಜಿ ಅಂತ ಬರೀತಾರೆ. ಅದಕ್ಕೆ ಅಟ್ಯಾಚ್ ಮಾಡಿಕೊಂಡು ಇನ್ನೂ ಕೆಲವರು ಪೋಸ್ಟ್ ಮಾಡಿಕೊಳ್ಳುತ್ತಾ ಹೋಗುತ್ತಾರೆ. ನಿಮ್ಮ ಹೀರೋ ತರಹ ನೀವು ಸಹ ಅಳುಮುಂಜಿ ತರಹ ಬಳೆ ಹಾಕ್ಕೊಂಡು ಕೂಳಿತುಕೊಳ್ಳಿ ಅಂತ ಬರೀತಿದ್ದಾರೆ. ನಾನು ಇದಕ್ಕೆ ಉತ್ತರ ಕೊಟ್ಟಿದ್ದು "
"ಅದು ಬಳೆಯಲ್ಲಪ್ಪ ಕಡಗ. ನಾವು ಬಳೆ ಹಾಕ್ಕೊಂಡು ಕೂತಿಲ್ಲ. ನಮ್ಮ ತಾಯಿನೂ ಬಳೆನೇ ಹಾಕೋದು ಸ್ವಾಮಿ, ನನ್ನ ಹೆಂಡ್ತೀನೂ ಬಳೆನೇ ಹಾಕೋದು, ನನ್ನ ಅಕ್ಕಂದಿರು ಅದನ್ನೇ ಹಾಕೋದು. ಅದನ್ಯಾಕೆ ನಾವು ಡೌನ್ ಮಾಡೋಣ. ಏನಾದರೂ ಒಂದು ಹುಡುಕಿ ಜನರನ್ನು ಡೈವರ್ಟ್ ಮಾಡಬೇಕಲ್ವಾ? ಇನ್ನೂ ಏನೇನ್ ಮಾಡ್ತೀರೋ ಮಾಡಿ, ಅದನ್ನೆಲ್ಲಾ ನಾನು ಫೇಸ್ ಮಾಡ್ತೇನೆ. ಐ ವಿಶ್ ಯೂ ಆಲ್ ದ ಬೆಸ್ಟ್" ಎಂದು ಸುದೀಪ್ ಸ್ಪಷ್ಟನೆ ಕೊಟ್ಟಿದ್ದರು.


Click it and Unblock the Notifications











