BBK12: ಅಂದು ಚಪ್ಪಾಳೆ ಈಗ ಎಚ್ಚರಿಕೆ; ಗಿಲ್ಲಿಗೆ ಕ್ಲಾಸ್ ತಗೊಂಡ ಕಿಚ್ಚ
ಯಾವುದು ಕೂಡ ಅತಿಯಾಗಬಾರದು. ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ವೀಕ್ಷಕರ ಮನಗೆದ್ದಿದ್ದಾರೆ. ತಮ್ಮ ಕಾಮಿಡಿ, ಇತರೆ ಸ್ಪರ್ಧಿಗಳನ್ನು ಕಾಲೆಳೆಯುವ ಕಾರಣಕ್ಕೆ ಹೆಚ್ಚು ಇಷ್ಟವಾಗುತ್ತಿದ್ದಾರೆ. ಅಶ್ವಿನಿ ಗೌಡ, ಜಾಹ್ನವಿ ಜೋಡಿಗೂ ತಿರುಗೇಟು ಕೊಡುತ್ತಿದ್ದರು.
ಗಿಲ್ಲಿ ಕಾಮಿಡಿ ಓಕೆ ಆದರೆ ಅದು ಅತಿಯಾಗಬಾರದು. ಎಲ್ಲಾ ಸಮಯದಲ್ಲಿ ಅದೇ ರೀತಿ ವರ್ತಿಸುವುದು ಸರಿಯಲ್ಲ ಎಂದು ಕೆಲ ವೀಕ್ಷಕರು ಹೇಳುತ್ತಿದ್ದರು. ಇದೇ ಪಂಚಾಯ್ತಿಯಲ್ಲಿ ಕಿಚ್ಚ ಕ್ಲಾಸ್ ತಗೊಂಡಿದ್ದಾರೆ. ಒಂದಲ್ಲ ಎರಡೆರಡು ಬಾರಿ ಮಾತಿನ ಚಾಟಿ ಬೀಸಿದ್ದಾರೆ. ಟಾಸ್ಕ್ ವೇಳೆ ಕೂಡ ನಿಯಮ ಮೀರಿ ಫನ್ ಕ್ರಿಯೇಟ್ ಮಾಡುವ ಪ್ರಯತ್ನ ಮಾಡಿದ್ದರು. ಇದೇ ಕಾರಣಕ್ಕೆ ಸುದೀಪ್ ಎಚ್ಚರಿಕೆ ನೀಡಿದ್ದಾರೆ. ಇದು ಮುಂದುವರೆದರೆ ಆದಷ್ಟು ಬೇಗ ಈ ವೇದಿಕೆಗೆ ಬರ್ತೀರಾ ಎಂದಿದ್ದಾರೆ.

ಈ ವಾರ ಗಿಲ್ಲಿ ಮೇಲೆ ಹಲ್ಲೆ ಮಾಡಿದ್ದು ಗೊತ್ತೇಯಿದೆ. ಇದೇ ಕಾರಣಕ್ಕೆ ಆಕೆಯನ್ನು ಮನೆಯಿಂದ ಹೊರ ಹಾಕಬೇಕು ಎಂದು ಕೆಲವರು ಆಗ್ರಹಿಸಿದ್ದರು. ಆದರೆ ಸ್ಪರ್ಧಿಗಳಿಗೆ ಅದನ್ನು ನಿರ್ಧರಿಸುವ ಅವಕಾಶ ಸುದೀಪ್ ಕೊಟ್ಟಿದ್ದರು. ಬಹುತೇಕ ಎಲ್ಲರೂ ಎಚ್ಚರಿಕೆ ಕೊಟ್ಟು ಆಕೆಯನ್ನು ಉಳಿಸಿಕೊಂಡಿದ್ದಾರೆ. ಆದರೆ ಆ ಜಗಳಕ್ಕೆ ಗಿಲ್ಲಿ ಕೂಡ ಕಾರಣವಾಗಿದ್ದರು. ಹೆಣ್ಣು ಮಕ್ಕಳ ಬಟ್ಟೆ ತಂದು ಹಾಕಿದ್ದು ಸರಿಯಲ್ಲ ಎಂದು ಗಿಲ್ಲಿಗೆ ಸುದೀಪ್ ಬಿಸಿ ಮುಟ್ಟಿಸಿದ್ದಾರೆ.
ನನ್ನ ಮನೆಯಲ್ಲಿ ನನ್ನ ಅಕ್ಕ ಪಕ್ಕ ಇರುವವರೆಲ್ಲಾ ಹೆಂಗಸರೇ. ಒಟ್ಟಿಗೆ ಹುಟ್ಟಿ ಬೆಳೆದ್ರು, ಒಟ್ಟಿಗೆ ಇದ್ರು ಅವ್ರ ಬಟ್ಟೆಗಳಿಗೆ ಕೈಹಾಕಲು, ಅವರ ಪರ್ಸ್ ನೋಡಲು ಮುಜುಗರಪಡುತ್ತೇವೆ. ಅದು ನಾವು ಅವರಿಗೆ ಕೊಡುವ ಗೌರವ. ಆದರೆ ಅವರ ಬಟ್ಟೆ ತಂದು ಬಾತ್‌ರೂಮ್ ಏರಿಯಾದಲ್ಲಿ ಹಾಕುವುದು, ಅದ್ರಲ್ಲೂ ಬೇರೆ ಮನೆ ಹುಡುಗಿ ಬಟ್ಟೆ. ಅದನ್ನು ಅಲ್ಲಿ ಹಾಕುವುದು ಸರಿಯಲ್ಲ, ಹೆಣ್ಣು ಮಕ್ಕಳಿಗೆ ಕೊಡುವ ಗೌರವ ಅಲ್ಲ ಎಂದು ಗಿಲ್ಲಿಗೆ ಸುದೀಪ್ ಬುದ್ಧಿ ಹೇಳಿದ್ದಾರೆ.
ಗಿಲ್ಲಿ ಜೊತೆ ಸದಾ ನಿಲ್ಲುವ ಕಾವ್ಯ ಯಾಕೆ ಈ ವಿಚಾರದ ಬಗ್ಗೆ ಮಾತನಾಡಿಲ್ಲ ಎಂದು ಕಿವಿ ಹಿಂಡಿದ್ರು. ಒಬ್ಬರ ಮೇಲೆ ಕೈ ಮಾಡುವುದು ತಪ್ಪು ಎಂದು ರಿಷಾಗೂ ಸುದೀಪ್ ಕ್ಲಾಸ್ ತಗೊಂಡ್ರು. ಮನೆಯ ಎಲ್ಲಾ ಸದಸ್ಯರು ನಿಮಗೆ ಎಚ್ಚರಿಕೆ ಮಾತ್ರ ಕೊಟ್ಟು ಉಳಿಸಿಕೊಂಡಿದ್ದಾರೆ ಎಂದು ಹೇಳಿ ರಿಷಾ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.
ಗಿಲ್ಲಿ ತಮ್ಮ ಲವಲವಿಕೆಯ ಆಟದಿಂದ ಗಮನ ಸೆಳೆಯುತ್ತಿದ್ದಾರೆ. ಸುದೀಪ್ ಕೂಡ ಬೆಂಬಲಿಸುತ್ತಾ ಬಂದಿದ್ದಾರೆ. ಒಮ್ಮೆ ಚಪ್ಪಾಳೆ ಕೂಡ ಕೊಟ್ಟಿದ್ದಾರೆ. ಆದರೆ ಯಾವುದೂ ಅತಿಯಾಗಬಾರದು ಅಲ್ಲವೇ? ಅದಕ್ಕೆ ಹೀಗೆ ಎಚ್ಚರಿಕೆ ಸಿಕ್ಕಿದೆ. ಫಿನಾಲೆ ಬಹಳ ದೂರ ಇದೆ. ಅಲ್ಲಿಯವರೆಗೆ ಉತ್ತಮ ಆಟ ಆಡಬೇಕಿದೆ. ಯಾವಾಗ ಯಾರು ಮನೆಯಿಂದ ಹೊರ ಬರಬೇಕಾಗುತ್ತದೆ ಎನ್ನುವುದು ಗೊತ್ತಿಲ್ಲ.
ಕಳೆದ ವಾರ ಮಲ್ಲಮ್ಮ ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದರು. ಆದರೆ ಈ ವಾರ ಚಂದ್ರಪ್ರಭ ತನ್ನ ಬಿಗ್‌ಬಾಸ್ ಜರ್ನಿ ಮುಗಿಸಿದ್ದಾರೆ. ಸ್ಪರ್ಧಿಗಳೆಲ್ಲಾ ಬಿಗ್‌ಬಾಸ್ ಮನೆಯಲ್ಲೇ ಉಳಿದುಕೊಳ್ಳಲು ಬಯಸಿದ್ದರೆ ಕೆಲವರು ಮಾತ್ರ ಸಾಕಪ್ಪಾ ಸಾಕು ಸಹವಾಸ. ಮನೆಗೆ ವಾಪಸ್ ಹೋಗುತ್ತೇವೆ ಎನ್ನುತ್ತಾರೆ. ಚಂದ್ರಪ್ರಭ ಕೂಡ ಅದೇ ಮನಸ್ಥಿತಿಗೆ ಬಂದುಬಿಟ್ಟಿದ್ದರು. ತಾವಾಗಿಯೇ ಮನೆಯಿಂದ ಹೊರಬರಲು ಬಯಸಿದ್ದರು.
ಚಂದ್ರಪ್ರಭ ಇನ್ನು ಕೆಲ ದಿನ ಬಿಗ್‌ಬಾಸ್ ಮನೆಯಲ್ಲಿ ಇರಬೇಕು. ತಮ್ಮ ಕಾಮಿಡಿಯಿಂದ ಎಲ್ಲರನ್ನು ರಂಜಿಸಬೇಕು ಎಂದು ಅಭಿಮಾನಿಗಳು ಬಯಸಿದ್ದರು. ಆದರೆ ಅದು ಯಾಕೋ ಸಾಧ್ಯವಾಗಲಿಲ್ಲ. ತಾವಾಗಿಯೇ ಆಟ ಬಿಟ್ಟು ಬಂದಂತೆ ಇದೆ.


Click it and Unblock the Notifications











