ಹಿಂದೂ ಭಕ್ತಿ ಗೀತೆಗಳನ್ನು ಹಾಡಿದ್ಮೇಲೆ ಭಾರೀ ಭದ್ರತೆ ಕೊಟ್ಟಿದ್ರು; ಆ ದಿನಗಳನ್ನು ನೆನೆದ ಸುಹಾನಾ ಸಯ್ಯದ್
ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ಹಾಡು ಹಾಡುತ್ತಾ ಕನ್ನಡಿಗರ ಮನಗೆದ್ದ ಗಾಯಕಿ ಸುಹಾನಾ ಸಯ್ಯದ್. 4 ತಿಂಗಳ ಹಿಂದೆ ನಿತಿನ್ ಶಿವಾಂಶ್ ಎಂಬುವವರ ಜೊತೆ ಸುಹಾನಾ ಮದುವೆ ನಡೀತು. 15 ವರ್ಷಗಳ ಕಾಲ ಪ್ರೀತಿಸಿದ್ದ ಜೋಡಿ ಪೋಷಕರ ಒಪ್ಪಿಗೆ ಪಡೆದು ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆ ಆಗಿದ್ದರು.
ಸುಹಾನಾ ಗಾಯಕಿಯಾಗಿ ಗುರ್ತಿಸಿಕೊಂಡಿದ್ದಾರೆ. ನಿತಿನ್ ರಂಗಭೂಮಿ ಹಿನ್ನೆಲೆಯವರು. Keerthi ENT Clinic ಯೂಟ್ಯೂಬ್ ಚಾನಲ್ ಪಾಡ್‌ಕಾಸ್ಟ್‌ನಲ್ಲಿ ಸುಹಾನಾ ಹಾಗೂ ನಿತಿನ್ ದಂಪತಿ ಭಾಗವಹಿಸಿದ್ದಾರೆ. ತಮ್ಮ ಜೀವನದ ಸಾಕಷ್ಟು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಸರಿಗಮಪ ವೇದಿಕೆಯಲ್ಲಿ ಹಿಂದೂ ದೇವರ ಹಾಡುಗಳನ್ನು ಹಾಡಿದ್ದಕ್ಕೆ ಸುಹಾನಾ ಭಾರೀ ಆಕ್ರೋಶ ಎದುರಿಸುವಂತಾಗಿತ್ತು. ರಾಷ್ಟ್ರೀಯಮಟ್ಟದಲ್ಲಿ ಈ ವಿಚಾರ ಸುದ್ದಿ ಆಗಿತ್ತು. 'ಶ್ರೀಕಾರನೇ' ಹಾಗೂ 'ನೀನೆ ರಾಮ ನೀನೆ ಶ್ಯಾಮ' ಹಾಡುಗಳನ್ನು ಹಾಡಿದ ಬಳಿಕ ಏನೆಲ್ಲಾ ಆಯ್ತು ಎನ್ನುವುದನ್ನು ಸುಹಾನಾ ನೆನಪಿಸಿಕೊಂಡಿದ್ದಾರೆ.

ಸರಿಗಮಪ ಕಾರ್ಯಕ್ರಮದಿಂದ ಸುಹಾನಾ ಜನಪ್ರಿಯರಾಗಿದ್ದರು. ಈ ವಿಚಾರವನ್ನು ಸುಹಾನಾ ಒಪ್ಪಿಕೊಂಡಿದ್ದಾರೆ. "ಆಡಿಷನ್ ವೇಳೆ 'ಶ್ರೀಕಾರನೆ ಶ್ರೀನಿವಾಸನೇ' ಹಾಡು ಹಾಡಿದ್ದೆ.. ಬಳಿಕ ಮೊದಲ ಸುತ್ತಿನಲ್ಲಿ 'ನೀನೆ ರಾಮ ನೀನೇ ಶ್ಯಾಮ ನೀನೆ ಅಲ್ಲಾ' ಹಾಡು ಹಾಡಿದ್ದೆ.. ಅದರಿಂದ ಬಹಳ ಜನಪ್ರಿಯತೆ ಸಿಕ್ಕಿತ್ತು.. ಆದರೆ Z+ ಮಟ್ಟದ ಪೊಲೀಸ್ ಭದ್ರತೆ ಒದಗಿಸಿದ್ರು. ಭಾವನಾತ್ಮಕವಾಗಿ ನಾನು ತಪ್ಪು ಮಾಡದೇ ಕೆಟ್ಟದು ಬಯಸುತ್ತಾರೆ ಎಂದಾಗ ಬೇಸರವಾಗಿತ್ತು. ಆಗ ನನಗೆ 20 ವರ್ಷ ವಯಸ್ಸು.. ಇಷ್ಟೆಲ್ಲಾ ಸಮಸ್ಯೆ ನಡುವೆ ನನಗೆ ಒಳ್ಳೆ ಜನಪ್ರಿಯತೆ ಸಿಕ್ಕಿತ್ತು. ಸಚಿವರು ಕೂಡ ಭದ್ರತೆ ಕೊಡುವ ಭರವಸೆ ಕೊಟ್ಟಿದ್ರು" ಎಂದಿದ್ದಾರೆ.
ಆಗ ಜೀ ಕನ್ನಡದ ಕಡೆಯಿಂದ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ರು.. ನನ್ನ ರೂಮ್ ಅಕ್ಕ ಪಕ್ಕದ ರೂಮ್‌ನಲ್ಲಿ ಪೊಲೀಸರು ಇರುತ್ತಿದ್ದರು ಎಂದು ಸುಹಾನಾ ಸಯ್ಯದ್ ನೆನಪು ಮಾಡಿಕೊಂಡಿದ್ದಾರೆ. "ಯಾರಾದರೂ ಬಂದು ನನ್ನ ರೂಮ್ ಬಾಗಿಲು ತಟ್ಟಿದ್ರೆ, ಮೊದಲು ರಿಸೆಪ್ಷನ್‌ಗೆ ಫೋನ್ ಮಾಡಿ ಸಿಸಿಟಿವಿ ನೋಡಿ ಯಾರು ಬಂದಿದ್ದಾರೆ ಎಂದು ಚೆಕ್ ಮಾಡಿ ಹೇಳ್ತಿದ್ರು.. ಆಗ ನಾನು ಬಾಗಿಲು ತೆಗೆಯುತ್ತಿದ್ದೆ. ಹೋಟೆಲ್‌ನಿಂದ ಸ್ಟುಡಿಯೋಗೆ ಹೋಗುವಾಗ ನಮ್ಮ ವಾಹನದ ಹಿಂದೆ ಮುಂದೆ ಪೊಲೀಸ್ ವಾಹನಗಳು ಇರ್ತಿತ್ತು. ನಾನು ವಾಶ್‌ರೂಮ್‌ಗೆ ಹೋಗುವಾಗಲೂ ಬಬ್ಬರು ಬಂದು ಬಾಗಿಲ ಬಳಿ ನಿಲ್ಲುತ್ತಿದ್ರು" ಎಂದು ಸುಹಾನಾ ವಿವರಿಸಿದ್ದಾರೆ.
ನಾನು ಹೀಗೆ ಜನಪ್ರಿಯತೆ ಪಡೆಯುವ ಮುನ್ನವೇ ನಿತಿನ್ ಜೊತೆ ಪ್ರೀತಿಲಿ ಬಿದ್ದಿದ್ದೆ ಎಂದು ಸುಹಾನಾ ಸಯ್ಯದ್ ತಿಳಿಸಿದ್ದಾರೆ. 'ನೀನೆ ರಾಮ ನೀನೆ ಶ್ಯಾಮ' ನನ್ನ ಮನಸ್ಸಿಗೆ ಬಹಳ ಹತ್ತಿರವಾದ ಹಾಡು. ನನಗೆ ಜನಪ್ರಿಯತೆ ಕೊಡ್ತು ಅಂತ ಅಲ್ಲ. ಈ ಹಾಡಿನ ಪ್ರತಿ ಸಾಲು ಪ್ರತಿ ಪದ ನನ್ನ ಮನಸ್ಸಿಗೆ ಹತ್ತಿರ ಎಂದಿದ್ದಾರೆ. 'ಮುಕುಂದ ಮುರಾರಿ' ಚಿತ್ರದ ಸೊಗಸಾದ ಹಾಡನ್ನು ಹಾಡಿದ್ದಾರೆ. ಆ ಘಟನೆ ಸಮಯದಲ್ಲಿ ನನ್ನ ಪೋಷಕರಿಗೆ ಖುಷಿಗಿಂತ ಭಯ ಬಹಳ ಇತ್ತು ಎಂದು ಸುಹಾನಾ ಹೇಳಿದ್ದಾರೆ.
ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರ ಆಗಿತ್ತು. ಕೊಂಚ ಬೇಸರ ಆಗಿತ್ತು. ಸಾಕಷ್ಟು ನೆಗೆಟಿವ್ ಕಾಮೆಂಟ್ಸ್ ಬಂದಿತ್ತು. 90ರಷ್ಟು ಜನ ಒಳ್ಳೆಯದು ಮಾತಾಡಿದ್ರೆ, 10 ರಷ್ಟು ಜನ ನೆಗೆಟಿವ್ ಮಾತನಾಡ್ತಿದ್ರು.. ಆ 10ರಷ್ಟು ಜನರ ಮಾತಲ್ಲಿ ಹೆಚ್ಚು ದ್ವೇಷ ಇತ್ತು ಎಂದು ಸುಹಾನಾ ಹೇಳಿದ್ದಾರೆ. ಆ ಸಮಯದಲ್ಲಿ ಪೋಷಕರು ಕಾರ್ಯಕ್ರಮ ಬೇಡ ಬಿಟ್ಟು ಬಿಡು ಅಂದ್ರು.. ಆದರೆ ಆಗ ನಿತಿನ್ ನನ್ನ ಬೆಂಬಲಕ್ಕೆ ನಿಂತಿದ್ದ.. ನನ್ನ ಯಶಸ್ಸಿನಲ್ಲಿ ನಿತಿನ್ ಪಾಲು ದೊಡ್ಡದಿದೆ ಎಂದು ವಿವರಿಸಿದ್ದಾರೆ. ಸರಿಗಮಪ ಶೋಗೆ ನಾನು ಚಿರಋಣಿ ಎಂದಿದ್ದಾರೆ.


Click it and Unblock the Notifications











