ನಾನು ಹೈಸ್ಕೂಲ್, ಇವ್ನು ಪಿಯುಸಿ ಓದ್ತಿದ್ದಾಗ ಮೊದಲ ಭೇಟಿ.. ಮನೆಯಲ್ಲಿ ಮೊದ್ಲು ಮದುವೆಗೆ ಒಪ್ಪಿರಲಿಲ್ಲ- ಸುಹಾನಾ
ಸರಿಗಮಪ ಖ್ಯಾತಿಯ ಗಾಯಕಿ ಸುಹಾನಾ ಸಯ್ಯದ್ ಹಾಗೂ ರಂಗೂಭೂಮಿ ಕಲಾವಿದ ನಿತಿನ್ ಶಿವಾಂಶ್ ಕಳೆದ ವರ್ಷ ಮದುವೆ ಆಗಿದ್ದರು. ಪರಸ್ಪರ ಪ್ರೀತಿಸಿ ಜೋಡಿ ಪೋಷಕರ ಒಪ್ಪಿಗೆ ಪಡೆದು ಮಂತ್ರ ಮಾಂಗಲ್ಯ ಪದ್ಧತಿಯಂತೆ ಹೊಸ ಬಾಳಿಗೆ ಕಾಲಿಟ್ಟಿದ್ದರು. ಆದರೆ ಇವರ ಅಂತರ್-ಧರ್ಮಿಯ ಮದುವೆ ಅಷ್ಟು ಸುಲಭವಾಗಿರಲಿಲ್ಲ.
ನಿತಿನ್ ಪ್ರೀತಿಯನ್ನು ಒಪ್ಪಿಕೊಳ್ಳಲು ಸುಹಾನಾ ಬಹಳ ಸಮಯ ತೆಗೆದುಕೊಂಡಿದ್ದರು. ಒಂದು ವೇಳೆ ನಾನು ಒಪ್ಪಿದ್ರು ನಾವಿಬ್ರು ಒಂದಾಗುವುದು ಸಾಧ್ಯನಾ ಎಂದು ಬಹಳ ತಲೆ ಕೆಡಿಸಿಕೊಂಡಿದ್ದರಂತೆ. ಪೋಷಕರಿಗೆ ವಿಷಯ ತಿಳಿಸಿದಾಗ ಒಪ್ಪಿರಲಿಲ್ಲ. ಸುಹಾನಾಗೆ ಬೇರೆ ಹುಡುಗನ ಜೊತೆ ಮದುವೆ ಮಾಡಿಸಲು ಪ್ರಯತ್ನಗಳು ನಡೆದಿತ್ತು. ನಿತಿನ್ ಜೊತೆ ಸುಹಾನಾ ಮದುವೆಗೆ ಕುಟುಂಬ ಹಾಗೂ ನೆಂಟರಲ್ಲಿ ನಾಲ್ಕೈದು ಜನ ಬಿಟ್ಟು ಯಾರು ಬಂದಿರಲಿಲ್ಲ. ಈ ಎಲ್ಲಾ ವಿಚಾರಗಳನ್ನು Keerthi ENT Clinic ಸಂದರ್ಶನದಲ್ಲಿ ಜೋಡಿ ಹೇಳಿಕೊಂಡಿದೆ.

ಸುಹಾನಾ ಹೈಸ್ಕೂಲ್‌ನಲ್ಲಿ ಇದ್ದಾಗ ಮೊದಲ ಬಾರಿ ನಿತಿನ್ ನೋಡಿದ್ದರಂತೆ. ಮೊದಲ ನೋಟದಲ್ಲೇ ಇಷ್ಟವಾಗಿದ್ದರು. ಜೋಡಿ ಮೊದಲ ಬಾರಿಗೆ ತಮ್ಮ ಲವ್ ಸ್ಟೋರಿಯನ್ನು ಬಿಚ್ಚಿಟ್ಟಿದೆ. "ಹೆಗ್ಗೋಡಿನಲ್ಲಿ ಇಬ್ಬರೂ ಒಂದಿದ್ದು. ಗುಡ್ಡದ ಮೇಲೆ ಹೈಸ್ಕೂಲ್.. ಕೊಂಚ ಕೆಳಗೆ ಕಾಲೇಜ್.. ಅದಕ್ಕಿಂತ ಕೆಳಗೆ ನೀನಾಸಂ ಇದೆ.. ನಾನು ಸೆಕೆಂಡ್ ಪಿಯುಸಿಯಲ್ಲಿ ಓದುತ್ತಿದ್ದೆ.. ಸುಹಾನಾ ಹೈಸ್ಕೂಲ್‌ನಲ್ಲಿ ಇದ್ಲು.. ನೀನಾಸಂ ಕ್ಯಾಂಟೀನ್‌ಗೆ ಊಟಕ್ಕೆ ಬಂದಿದ್ಲು, ನಾನು ಅಲ್ಲೇ ಎದುರಲ್ಲಿ ನಿಂತಿದ್ದೆ.. ತಲೆ ಮೇಲೆ ಶಾಲು ಹಾಕಿಕೊಂಡು ನನ್ನ ಮುಂದೆ ಪಾಸ್ ಆಗಿದ್ಲು.. ಅಂದೇ ಮೊದಲ ಬಾರಿ ನೋಡಿದ್ದು" ಎಂದು ನಿತಿನ್ ನೆನಪಿಸಿಕೊಂಡಿದ್ದಾರೆ.
ಮೊದಲ ನೋಟದಲ್ಲಿ ಸುಹಾನಾ ಇಷ್ಟವಾಗಿದ್ದಳು ಎಂದು ನಿತಿನ್ ಹೇಳಿದ್ದಾರೆ. ಆದರೆ ಆಗ ಇವನು ಯಾರು ಎನ್ನುವುದು ನನಗೆ ಗೊತ್ತಿರಲಿಲ್ಲ. ಹೇಗೋ ಫೋನ್ ನಂಬರ್ ಕಲೆಕ್ಟ್ ಮಾಡಿ ಮೆಸೇಜ್ ಮಾಡಿದ್ದ ಎಂದು ಸುಹಾನಾ ಆ ದಿನಗಳಿಗೆ ಜಾರಿದ್ದಾರೆ. "ಮೊದಲಿಗೆ ಸ್ನೇಹಿತನ ರೀತಿ ನಾರ್ಮಲ್ ಮೆಸೇಜ್ ಮಾಡಿದ್ದ. ಸಿಟ್ಟು ತರಿಸುವಂತೆ ಏನೂ ಇರಲಿಲ್ಲ. ಮುಂದೆ ಇಬ್ಬರು ಸ್ನೇಹಿತರಾಗಿದ್ದೆವು. ಇವನ ತಂಗಿ ಶಾಲೆಯಲ್ಲಿ ನನ್ನ ಸೀನಿಯರ್.. ಹಾಗಾಗಿ ಎಲ್ಲರೂ ಸ್ನೇಹಿತರಾಗಿದ್ದೆವು. ಇವನು ಮನಸ್ಸಿನಲ್ಲಿ ದೊಡ್ಡ ಆಸೆ ಇಟ್ಕೊಡಿದ್ದಾನೆ ಎಂದು ಗೊತ್ತಿರಲಿಲ್ಲ" ಎಂದಿದ್ದಾರೆ.
ನೀನಾಸಂನಲ್ಲಿ ನಾಟಕ ನೋಡಲು ಸುಹಾನ ಬರ್ತಿದ್ಲು..ಅಕ್ಕ ಪಕ್ಕ ಇರುವವರೆಗೆಲ್ಲಾ ನಮ್ಮ ಲವ್ ಗೊತ್ತಿತ್ತು. ಆದ್ರೆ ನಾವಿಬ್ಬರು ಹೇಳಿಕೊಂಡಿರಲಿಲ್ಲ. ಕೆಲ ದಿನಗಳ ಬಳಿಕ ನಿತಿನ್ ಹೇಳ್ದ.. "ನೀನು ಅಂದ್ರೆ ನನಗೆ ಇಷ್ಟ.. ಹಾಗಂತ ನೀನು ನನ್ನ ಇಷ್ಟಪಡಬೇಕು ಅಂತೇನು ಇಲ್ಲ.. ನನಗಿಷ್ಟ ಅನ್ನುವುದನ್ನು ಹೇಳಬೇಕು ಅನ್ನಿಸ್ತು ಹೇಳ್ದೆ.. ನನಗೆ ಇಂಟ್ರೆಸ್ಟಿಂಗ್ ಅನ್ನಿಸ್ತು.. ಪದೇ ಪದೇ ಭೇಟಿ, ಫೋನ್ ಕರೆ ಮಾಡುತ್ತಿರಲಿಲ್ಲ. ಬಳಿಕ ನಾನು ಎಂಬಿಎ ಮಾಡಲು ಬೆಂಗಳೂರಿಗೆ ಬಂದೆ. ಆಗ ನಾಟಕಗಳನ್ನು ಮಾಡಲು ಬೆಂಗಳೂರಿನಲ್ಲಿ ನಾನು ಇದ್ದೆ" ಎಂದು ಇಬ್ಬರೂ ಮೆಲುಕು ಹಾಕಿದ್ದಾರೆ.
ಪ್ರೀತಿ ಮಾಡ್ತಿದ್ದೀನಿ ಎಂದು ಹೇಳಿಬಿಡುವುದು ಕಷ್ಟ ಅಲ್ಲ. ಆ ಮಾತನ್ನು ಉಳಿಸಿಕೊಳ್ಳುವುದು ಕಷ್ಟ.. ಹಾಗಾಗಿ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೆವು. ಪೋಷಕರನ್ನು ಒಪ್ಪಿಸಿ ಮದುವೆ ಆಗಬೇಕು ಎನ್ನುವುದು ಇಬ್ಬರ ಬಯಕೆ ಆಗಿತ್ತು. ನಮ್ಮ ಮದುವೆಗಿಂತ 2 ತಿಂಗಳು ಮುನ್ನ ಕೂಡ ಸುಹಾನಾ ಮನೆಯಲ್ಲಿ ಒಪ್ಪಿರಲಿಲ್ಲ ಎಂದು ನಿತಿನ್ ಹೇಳಿದ್ದಾರೆ. "ಮನೇಲಿ ನನಗೆ ಮದುವೆ ಮಾಡಲು ಬೇರೆ ಹುಡುಗನನ್ನು ಹುಡುಕುತ್ತಿದ್ರು.. ನನಗೆ ಇಷ್ಟವಿರಲಿಲ್ಲ.. ಹಾಗಾಗಿ ಯಾರನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಒಂದು ದಿನ ಅಂತೂ ಇಂತೂ ಧೈರ್ಯ ಮಾಡಿ ಮನೆಯಲ್ಲಿ ನಮ್ಮ ಪ್ರೀತಿ ವಿಷಯ ಹೇಳಿಬಿಟ್ಟೆ. ಹೇಳಿದ ಮೇಲೆ 'ಶಂಭೋ ಶಿವ ಶಂಭೋ' ಹಾಡಿನ ರೀತಿಯೇ ಪರಿಸ್ಥಿತಿ ಕೊಂಚ ನಿರ್ಮಾಣವಾಗಿತ್ತು" ಎಂದು ಸುಹಾನಾ ತಿಳಿಸಿದ್ದಾರೆ.
ನಮ್ಮ ಮನೆಯಲ್ಲಿ ನಮ್ಮಿಬ್ಬರ ಮದುವೆಗೆ ಯಾವುದೇ ಸಮಸ್ಯೆ ಆಗಲಿಲ್ಲ ಎಂದು ನಿತಿನ್ ಶಿವಾಂಶ್ ಹೇಳಿದ್ದಾರೆ. ನಾನು ಚೆನ್ನಾಗಿದ್ದರೆ ಸಾಕು ಎನ್ನುವುದು ಪೋಷಕರ ಬಯಕೆ ಎಂದು ತಿಳಿಸಿದ್ದಾರೆ. ಸುಹಾನಾ ಮಾತನಾಡಿ ನಮ್ಮ ಮನೇಲಿ ಒಂದು ವರ್ಷ ಸಮಯ ತಗೊಂಡ್ರು ಎಂದಿದ್ದಾರೆ.. "ನಮ್ಮ ಮನೆಯಲ್ಲಿ ಬೇಡವೇ ಬೇಡ ಎಂದು ಅಪ್ಪ, ಅಮ್ಮ ಪಟ್ಟು ಹಿಡಿದಿದ್ರು.. ಎಷ್ಟೇ ದಿನ ಆದ್ರು ಸರಿ ನಾನು ಕಾಯ್ತಿನಿ ಎಂದು ಪಟ್ಟು ಹಿಡಿದೆ.. ಆದ್ರೆ ನಿತಿನ್‌ನ ಮದುವೆ ಆಗ್ತೀನಿ, ಇಲ್ಲದಿದ್ದರೆ ಮದುವೆ ಆಗದೇ ಉಳಿದುಬಿಡ್ತೀನಿ ಎಂದೆ.. ಅಪ್ಪ, ಅಮ್ಮನಿಗೂ ಬಹಳ ಒತ್ತಡ ಇತ್ತು.. ಸುತ್ತಾಮುತ್ತಾ ಇರುವವರು ಒಳ್ಳೆ ಮಾತನಾಡುತ್ತಿರಲಿಲ್ಲ.. ಹೆದರಿಸುತ್ತಿದ್ರು" ಎಂದು ವಿವರಿಸಿದ್ದಾರೆ.
ಕೊನೆಗೂ ಸಂದಿಗ್ಧ ಪರಿಸ್ಥಿತಿಯಲ್ಲಿದ್ದುಕೊಂಡು ಪೋಷಕರು ಬಂದು ನಮ್ಮ ಮದುವೆಗೆ ಹರಸಿದ್ರು.. ಎಲ್ಲರೂ ಒಪ್ಪಿಕೊಳ್ಳಬೇಕಿತ್ತು, ಎಲ್ಲರೂ ಜೊತೆಗೆ ನಿಂತಿದ್ರೆ, ಎನ್ನುವ ಬೇಸರ ಇವತ್ತಿಗೂ ನಮ್ಮ ಅಪ್ಪ, ಅಮ್ಮನಿಗೆ ಇದೆ. ನನ್ನ ನಿರ್ಧಾರದಿಂದ ಕೆಲ ಆಪ್ತರು ಕುಟುಂಬದ ಜೊತೆ ಅಂತರ ಕಾಯ್ದುಕೊಂಡಿದ್ದಾರೆ ಎಂದು ಸುಹಾನಾ ಹೇಳಿದ್ದಾರೆ. "ಸಮಾಜದಲ್ಲಿ ಜನ ಹೇಗೆ ಯೋಚಿಸ್ತಾರೆ ಅಂದ್ರೆ, ಒಬ್ಬ ಹುಡುಗ, ಅಥವಾ ಹುಡುಗಿ 10-15 ಜನಕ್ಕೆ ಮೋಸ ಮಾಡಿ, ಫ್ಯಾಮಿಲಿ ನೋಡಿರುವ 16ನೇಯವರನ್ನು, ಅದೇ ಸಮುದಾಯದವರನ್ನು ಮದುವೆ ಆದ್ರೆ, ಹಳೇ ಪಾಪಗಳನ್ನು ಮರೆತು, ಆಶೀರ್ವಾದ ಮಾಡಿ ಹೋಗ್ತಾರೆ.. ನಾವು ಒಬ್ಬರನ್ನೇ ಪ್ರೀತಿಸಿ ಮದುವೆ ಆಗಿದ್ದೀನಿ.. ಆದರೆ ಬರೋಕೆ ಯೋಚಿಸುತ್ತಾರೆ" ಎಂದಿದ್ದಾರೆ.


Click it and Unblock the Notifications











