ದಾಂಪತ್ಯ ವ್ರತ ಸ್ವೀಕರಿಸಿದ್ದೇವೆ; ಮದುವೆಯ ಸುಂದರ ಕ್ಷಣಗಳನ್ನು ಹಂಚಿಕೊಂಡು ಸುಹಾನ ಸಯ್ಯದ್ ಮಾತು
ಎರಡು ದಿನಗಳ ಹಿಂದೆ ಸರಿಗಮಪ ಖ್ಯಾತಿಯ ಗಾಯಕಿ ಸುಹಾನಾ ಸೈಯದ್, ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಜೊತೆ ಹೊಸ ಜೀವನಕ್ಕೆ ಕಾಲಿಟಿದ್ದರು. ಜೋಡಿ ರಾಷ್ಟ್ರಕವಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಅಂತರ್‌ಧರ್ಮೀಯ ವಿವಾಹವಾಗಿದ್ದರು. ಆಪ್ತರು, ಸ್ನೇಹಿತರು ಜೋಡಿಗೆ ಶುಭ ಹಾರೈಸಿದ್ದರು. ಸುಹಾನಾ ತಮ್ಮ ಮದುವೆ ವೀಡಿಯೋ ಹಂಚಿಕೊಂಡಿದ್ದಾರೆ.
ಗೋಲ್ಡನ್ ಬಾರ್ಡರ್ ಸೀರೆಯಲ್ಲಿ ಮಧುಮಗಳಾಗಿ ಸುಹಾನಾ ಮಿಂಚಿದ್ದರು. ಇನ್ನು ಬಿಳಿ ಬಣ್ಣದ ಶೇರ್ವಾನಿಯಲ್ಲಿ ನಿತಿನ್ ಶಿವಾಂಶ್ ಕಾಣಿಸಿಕೊಂಡಿದ್ದರು. ಇಬ್ಬರ ಮದುವೆ ಫೋಟೊ, ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕೆಲ ವರ್ಷಗಳ ಹಿಂದೆ ಸರಿಗಮಪ ವೇದಿಕೆಯಲ್ಲಿ ಸುಹಾನಾ ಹಿಂದೂ ದೇವರ ಗೀತೆಗಳನ್ನು ಹಾಡಿದ್ದಕ್ಕೆ ವಿರೋಧ ಎದುರಿಸುವಂತಾಗಿತ್ತು. ಆದರೆ ಅದಕ್ಕೆ ಆಕೆ ಜಗ್ಗಲಿಲ್ಲ. ಮೊದಲ ಬಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎರಡನೇ ಬಾರಿ 'ನೀನೆ ರಾಮ ನೀನೇ ಶ್ಯಾಮ ನೀನೇ ಅಲ್ಲಾ' ಹಾಡು ಹಾಡಿ ತಿರುಗೇಟು ನೀಡಿದ್ದರು.

16 ವರ್ಷಗಳಿಂದ ಅಂತರ್ ಧರ್ಮೀಯ ಹುಡುಗ ನಿತಿನ್ ಅವರನ್ನು ಸುಹಾನಾ ಪ್ರೀತಿಸುತ್ತಿದ್ದರು. ಇತ್ತೀಚೆಗೆ ತಮ್ಮ ಪ್ರೀತಿಯ ವಿಚಾರವನ್ನು ಆಕೆ ಹಂಚಿಕೊಂಡಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಹಾಕಿ ಪೋಸ್ಟ್ ಮಾಡಿದ್ದರು. 3 ದಿನಗಳ ಹಿಂದೆ ಇಬ್ಬರ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗಿತ್ತು. ಇದೀಗ ತಮ್ಮ ಮದುವೆಯ ಸುಂದರಕ್ಷಣಗಳ ವೀಡಿಯೋವನ್ನು ಹಂಚಿಕೊಂಡಿದ್ದಾರೆ. "ವಿವಾಹ ಪರ್ವ.. ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಪತಿ ಪತ್ನಿಯರಾಗಿ ದಾಂಪತ್ಯ ವ್ರತ ಸ್ವೀಕರಿಸಿದ್ದೇವೆ.." ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
"ನನಗೆ ಯಾವತ್ತು ಅನ್ನಿಸಿರಲಿಲ್ಲ. ಈ ದಿನವನ್ನು ಇಷ್ಟು ಜನರೊಟ್ಟಿಗೆ ಇಷ್ಟು ಬ್ಯೂಟಿಫುಲ್ ಸೆಲೆಬ್ರೇಟ್ ಮಾಡ್ತೀನಿ ಅಂತ. ಇನ್ನು ಡ್ರೀಮ್ ಅಂತ್ಲೇ ಅನ್ನಿಸ್ತಿದೆ. ನನ್ನ ಪೋಷಕರು, ಸ್ನೇಹಿತರು ಹಾಗೂ ನಿತಿನ್ ಫ್ಯಾಮಿಲಿ ಜೊತೆಗೆ" ಎಂದು ಸುಹಾನಾ ವೀಡಿಯೋ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ. ನಿತಿನ್ ಮಾತನಾಡಿ "ನಮ್ಮಿಬ್ಬರದ್ದು 16-17 ವರ್ಷಗಳ ಪರಿಚಯ. ಯಾವಾಗ ಪ್ರೀತಿ ಆಯ್ತೋ ನನಗೂ ಗೊತ್ತಿಲ್ಲ. ಬಟ್ ಒಂದಂತೂ ಸತ್ಯ. ನಾನು ನಂಬಿರುವುದು ಇಷ್ಟೆ. ಪ್ರೀತಿ ಅಂದ್ರೇನೆ ದೇವ್ರು.. ಹಾಗೆ ನನ್ನ ಜೀವನದಲ್ಲಿ ಇವಳು ಪ್ರೀತಿ ಮೂಲಕ ದೇವರಾಗಿ ಬಂದಿದ್ದಾಳೆ" ಎಂದಿದ್ದಾರೆ.
"ನಾ ನಿನಗೆ ನೀನೆನಗೆ ಜೇನಾಗುವಾ.. ರಸ ದೇವಗಂಗೆಯಲಿ ಮಿನಾಗುವಾ.. ಹೂವಾಗುವಾ ಹಣ್ಣಾಗುವಾ.. ರತಿರೂಪಿ ಭಗವತಿಗೆ ಮುಡಿಪಾಗುವಾ.." ಎಂದು ಕುವೆಂಪು ಅವರ ಸಾಲುಗಳನ್ನು ಹೇಳಿದ್ದಾರೆ. ಇಬ್ಬರು ಕೂತು ಯಾರು ಮೊದಲು ಪ್ರಪೋಸ್ ಮಾಡಿದ್ದು ಎಂದು ಮಾತನಾಡಿದ್ದಾರೆ. ಮೊದಲು ಪ್ರಪೋಸ್ ಮಾಡಿದ್ದು ಅವ್ನು ಎಂದು ಸುಹಾನಾ ಹೇಳಿದ್ದಕ್ಕೆ ನಾನಲ್ಲ ನೀನು ಎಂದು ನಿತಿನ್ ಹೇಳಿದ್ದಾರೆ. ಹೋಗೊ ನಾನು ನಿನಗೆ ಪ್ರಪೋಸ್ ಮಾಡೇಯಿಲ್ಲ ಎಂದಿದ್ದಾರೆ. ಊಹೆಗೆ ನಿಲುಕದ್ದು ಎಂದು ನಿತಿನ್" ಹೇಳಿದ್ದಾರೆ.
ಕರವೇ ಅಧ್ಯಕ್ಷ ನಾರಾಯಣ ಗೌಡ್ರು ಸೇರಿದಂತೆ ಹಲವರು ಸುಹಾನಾ ಹಾಗೂ ನಿತಿನ್ ಮದುವೆಗೆ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಸದ್ಯ ಸುಹಾನ ಹಂಚಿಕೊಂಡಿರುವ ವೀಡಿಯೋ ವೈರಲ್ ಆಗ್ತಿದೆ. ಸಾಕಷ್ಟು ಮಂದಿ ಲೈಕ್ಸ್, ಕಾಮೆಂಟ್ಸ್ ಮಾಡಿ ನವಜೋಡಿಗೆ ಶುಭ ಕೋರುತ್ತಿದ್ದಾರೆ. ಸುಹಾನಾ ಮೂಲತಃ ಶಿವಮೊಗ್ಗದ ಸಾಗರ ಮೂಲದವರು. ನಿತಿನ್ ರಂಗಭೂಮಿ ಕಲಾವಿದ. ಆಕೆಗೂ ರಂಗಭೂಮಿ ಆಸಕ್ತಿ ಇತ್ತು. ಅಲ್ಲಿಂದ ಶುರುವಾದ ಪರಿಚಯ, ಸ್ನೇಹಕ್ಕೆ ತಿರುಗಿ ಬಳಿಕ ಪ್ರೀತಿಯಾಗಿತ್ತು.
ಧರ್ಮಗಳ ಎಲ್ಲೆ ಮೀರಿ ಇಬ್ಬರೂ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಹೊಸಜೀವನಕ್ಕೆ ಕಾಲಿಟ್ಟಿದ್ದಾರೆ. ಕುವೆಂಪು ಅವರ ಮಂತ್ರ ಮಾಂಗಲ್ಯ ಆಶಯದಂತೆ ಮದುವೆ ಆಗಬೇಕು ಎಂದು ಕನಸು ಕಂಡಿದ್ದರು. ಅದು ಈಡೇರಿದೆ. ತಮ್ಮ ಪ್ರೀತಿ ಬಗ್ಗೆ 3 ವಾರಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಸುಹಾನಾ ಬರೆದುಕೊಂಡಿದ್ದರು.
"ಪ್ರತಿ ಜೀವಿಯ ಅನ್ವೇಷಣೆ ಪ್ರೇಮಕ್ಕಾಗಿಯೇ.. ಪ್ರತಿ ಜೀವಿಯ ನಿರೀಕ್ಷೆ ಪ್ರೇಮಕ್ಕಾಗಿಯೇ, ಪ್ರೇಮಕ್ಕೆ ಕಾರಣ ಇಲ್ಲ. ಈ ಪ್ರೇಮ ಅನಂತ ದೂರದ ಸುಧೀರ್ಘ ಪ್ರಯಾಣ...ಪ್ರೇಮಕ್ಕೆ ಯಾವ ಮಿತಿ ಇಲ್ಲ, ಎಂಬುದಕ್ಕೆ ನಾವೇ ಸಾಕ್ಷಿ. ಹೃದಯಗಳ ಭಾಷೆ ಎಲ್ಲವನ್ನೂ ಮೀರಿದ್ದು.." ಎಂದಿದ್ದರು.


Click it and Unblock the Notifications











