'ಭಾರ್ಗವಿ ಎಲ್‌ಎಲ್‌ಬಿ' ಮೂಲಕ ಕಿರುತೆರೆಗೆ ಮರಳಿದ ಸುಜಾತಾ ಅಕ್ಷಯ: ಹೊಸ ಲುಕ್ ಹೇಗಿದೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿಯ ಹೆಸರು 'ಭಾರ್ಗವಿ ಎಲ್.ಎಲ್.ಬಿ'. ಸ್ವಪ್ನ ಕೃಷ್ಣ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಧಾರಾವಾಹಿಯು ಸ್ತ್ರೀ ಪ್ರಧಾನ ಧಾರಾವಾಹಿ ಎಂಬುದು ಟೈಟಲ್ ನೋಡಿದ ಕೂಡಲೇ ವೀಕ್ಷಕರಿಗೆ ತಿಳಿಯುತ್ತದೆ. ಈ ಹಿಂದೆ 'ಸತ್ಯ' ಧಾರಾವಾಹಿ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಸ್ವಪ್ನ ಕೃಷ್ಣ ಅವರು ಇದೀಗ 'ಭಾರ್ಗವಿ ಎಲ್.ಎಲ್.ಬಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿದ್ದು ಧಾರಾವಾಹಿ ಶುರುವಾದ ಕೆಲವೇ ದಿನಗಳಲ್ಲಿ ವೀಕ್ಷಕರ ಮನ ಸೆಳೆದು ಬಿಟ್ಟಿದ್ದಾರೆ.
ನಾಯಕ ಅರ್ಜುನ್ ಪಾಟೀಲ್ ಆಗಿ ಹೊಸ ಪ್ರತಿಭೆ ಮನೋಜ್ ಕುಮಾರ್ ಕಾಣಿಸಿಕೊಂಡಿದ್ದರೆ. ನಾಯಕಿ ಭಾರ್ಗವಿಯಾಗಿ ರಾಧಾ ಭಗವತಿ ಅವರು ಅಭಿನಯಿಸುತ್ತಿದ್ದಾರೆ. ಇನ್ನು ಈ ಧಾರಾವಾಹಿಯಲ್ಲಿ ವೀಕ್ಷಕರ ಮನ ಸೆಳೆಯುವ ಮಗದೊಂದು ಪಾತ್ರವೆಂದರೆ ಅದು ನಿರ್ಮಲಾ ಪಾಟೀಲ್ ಪಾತ್ರ.

ಹೌದು, ನಾಯಕ ಅರ್ಜುನ್ ಪಾಟೀಲ್ ಅಮ್ಮ ನಿರ್ಮಲಾ ಪಾಟೀಲ್ ಆಗಿ ನಟಿಸುತ್ತಿದ್ದಾರೆ ಸುಜಾತಾ ಅಕ್ಷಯ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ಪುಷ್ಪಾ ಪಂಡಿತ್ ಆಗಿ ಅಭಿನಯಿಸಿದ್ದರು ಸುಜಾತಾ ಅಕ್ಷಯ. ತದ ನಂತರ ಸಹಜವಾಗಿ ಸೀರಿಯಲ್ ನಿಂದ ದೂರವಿದ್ದ ಈಕೆ ಇದೀಗ ನಿರ್ಮಲಾ ಪಾಟೀಲ್ ಪಾತ್ರದ ಮೂಲಕ ಕಿರುತೆರೆಗೆ ಮರಳಿದ್ದಾರೆ.
ಸಣ್ಣ ಗ್ಯಾಪ್‌ನ ನಂತರ ಕಿರುತೆರೆಗೆ ಮರಳಿರುವ ಸುಜಾತಾ ಅಕ್ಷಯಾ ತಮ್ಮ ಕಂ ಬ್ಯಾಕ್ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ. "ಭಾರ್ಗವಿ ಎಲ್ ಎಲ್ ಬಿ ಧಾರಾವಾಹಿಯಲ್ಲಿ ನಾನು ನಾಯಕನ ತಾಯಿಯ ಪಾತ್ರ ನಿರ್ವಹಿಸುತ್ತೇನೆ. ಇಡೀ ನಗರದಲ್ಲಿ ತುಂಬಾ ದೊಡ್ಡ ವಕೀಲರಾಗಿರುವ ಜೆ.ಪಿ ಪಾಟೀಲ್ ಅವರ ಪತ್ನಿಯ ಪಾತ್ರವದು. ಗಂಡ ಹೇಳುವುದನ್ನು ಚಾಚು ತಪ್ಪದೇ ಪಾಲಿಸುತ್ತಿರುತ್ತೇನೆ. ಜೊತೆಗೆ ಮಕ್ಕಳನ್ನು ಚೆನ್ನಾಗಿ ಬೆಳೆಸಿದ ಒಳ್ಳೆಯ ತಾಯಿಯಾಗಿಯೂ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದೇನೆ. ಒಟ್ಟಿನಲ್ಲಿ ಸಾಕಷ್ಟು ಕಟ್ಟುನಿಟ್ಟಾಗಿರುವ ಹೆಣ್ಣು ಮಗಳ ಪಾತ್ರವದು" ಎಂದು ಸುಜಾತಾ ಅಕ್ಷಯ ಹೇಳಿಕೊಂಡಿದ್ದಾರೆ.
"ನಮ್ಮದು ಅವಿಭಕ್ತ ಕುಟುಂಬ. ನನ್ನ ಗಂಡನ ಸಹೋದರರು, ಅವರ ಹೆಂಡತಿಯರು ಮತ್ತು ಅವರ ಮಕ್ಕಳಿರುವ ಕುಟುಂಬ. ನಮ್ಮದು ಸುಂದರವಾದ ದೊಡ್ಡ ಮನೆ. ತುಂಬು ಕುಟುಂಬದಲ್ಲಿರುವ ನಾವು ಪರಸ್ಪರ ಗೌರವಿಸುತ್ತೇವೆ. ಶ್ರೀಮಂತ ವರ್ಗಕ್ಕೆ ಸೇರಿರುವ ನಾವು ಬಹಳಷ್ಟು ಆಚರಣೆಗಳಲ್ಲಿ ಭಾಗವಹಿಸುತ್ತೇವೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡುವಾಗ ಸುಜಾತಾ ಅಕ್ಷಯ ಹೇಳಿಕೊಂಡಿದ್ದಾರೆ.
"ನನ್ನ ಪತಿ ಜೆ.ಪಿ. ಪಾಟೀಲ್ ಇಡೀ ನಗರದಲ್ಲಿ ದೊಡ್ಡ ವಕೀಲರಾಗಿರುತ್ತಾರೆ. ಅವರು ತುಂಬಾ ಬಲಶಾಲಿಯೂ ಹೌದು. ಜೆ.ಪಿ. ಪಾಟೀಲ ಅವರು ತಮ್ಮ ಕೆಲಸಕ್ಕೆ ಬದ್ಧರಾಗಿರುತ್ತಾರೆ. ಜೊತೆಗೆ ಅವರು ತುಂಬಾ ಪವರ್ ಫುಲ್ ಆಗಿರುವುದರಿಂದ ಅವರು ತೆಗೆದುಕೊಳ್ಳುವ ಯಾವುದೇ ಪ್ರಕರಣವನ್ನು ಯಾರೂ ಗೆಲ್ಲಲು ಸಾಧ್ಯವಿಲ್ಲ" ಎಂದು ಸುಜಾತಾ ಅಕ್ಷಯ ಹೇಳುತ್ತಾರೆ.
"ಕಥೆ ಮುಂದುವರಿದಂತೆ ನಿಧಾನವಾಗಿ ನನ್ನ ಪಾತ್ರ ತೆರೆದುಕೊಳ್ಳುತ್ತದೆ" ಎಂದು ಖುಷಿಯಿಂದ ಹೇಳುವ ಸುಜಾತಾ ಅಕ್ಷಯ "ನಿರ್ಮಲಾ ಪಾಟೀಲ್ ಪಾತ್ರಕ್ಕಾಗಿ ನಾನು ಹೊಸ ಹೇರ್ ಕಟ್ ಮಾಡಿಸಿಕೊಂಡಿದ್ದೇನೆ. ನಗರದ ಶ್ರೀಮಂತ ಕ್ಲಾಸಿ ಅಮ್ಮನ ಲುಕ್‌ನಲ್ಲಿ ತೆರೆಯ ಮೇಲೆ ಮೋಡಿ ಮಾಡುತ್ತಿದ್ದೇನೆ. ಬ್ರೊಕೇಡ್‌ಗಳು, ವಿಕ್ಟೋರಿಯನ್ ಆಭರಣಗಳು ಕೂಡಾ ನಾನು ನಿರ್ವಹಿಸುವ ಪಾತ್ರಕ್ಕೆ ಕ್ಲಾಸಿನೆಸ್ ಅನ್ನು ಸೇರಿಸುತ್ತದೆ. ಕಿರುತೆರೆ ವೀಕ್ಷಕರು ನನ್ನ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಮಾತ್ರವಲ್ಲ ನನ್ನ ಹೊಸ ಲುಕ್ ಕಂಡು ಫಿದಾ ಆಗಿದ್ದಾರೆ" ಎಂದು ಸುಜಾತಾ ಅಕ್ಷಯ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.
"ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದು ನನ್ನ ನಾಲ್ಕನೇ ಧಾರಾವಾಹಿ. ರಾಧಾ ರಮಣ ಧಾರಾವಾಹಿಯಲ್ಲಿ ಸಿತಾರಾ ಆಗಿ ನಟಿಸಿದ್ದೆ. ಕಂಪ್ಲೀಟ್ ನೆಗೆಟಿವ್ ಪಾತ್ರ ಅದಾಗಿತ್ತು. ಜೊತೆಗೆ ಆ ಪಾತ್ರ ಜನಪ್ರಿಯತೆಯನ್ನು ನೀಡಿತ್ತು. ನಂತರ ಹೂಮಳೆ ಧಾರಾವಾಹಿಯಲ್ಲಿ ಕಾರ್ಪೋರೇಟರ್ ಕಾವೇರಿಯಾಗಿ ಬಣ್ಣ ಹಚ್ಚಿದೆ. ಮುಂದೆ ಅಂತರಪಟ ಧಾರಾವಾಹಿಯಲ್ಲಿ ನಟಿಸಿದ್ದೇನೆ. ಸೀರಿಯಲ್ ಮಾತ್ರವಲ್ಲದೇ ಬಿಗ್ ಬಾಸ್ ರಿಯಾಲಿಟಿ ಶೋ ಜೊತೆಗೆ , ರಾಜಾ ರಾಣಿ ಶೋವಿನಲ್ಲೂ ನಾನು ಭಾಗವಹಿಸಿದ್ದೆ. ಇದೀಗ ನಿರ್ಮಲಾ ಪಾಟೀಲ್ ಆಗಿ ಮರಳುತ್ತಿರವುದು ಖುಷಿ ನೀಡಿದೆ" ಎಂದು ಹೇಳಿದ್ದಾರೆ ಸುಜಾತಾ ಅಕ್ಷಯ.


Click it and Unblock the Notifications











