"ನನಗೆ ನಟನಾಗಲು ಇಷ್ಟವಿರಲಿಲ್ಲ.. ಆಕಸ್ಮಿಕವಾಗಿ ನಟನೆಗೆ ಬಂದೆ" ಅನ್ನೋ ಈ ನಟನ ಹಿನ್ನೆಲೆಯೇನು?
ನಟನಾಗಬೇಕು, ಬಣ್ಣದ ಜಗತ್ತಿನಲ್ಲಿ ಗುರುತಿಸಿಕೊಳ್ಳಬೇಕು ಎಂಬ ಕನಸು ಹಲವರಿಗಿದೆ. ಆದರೆ, ನಟನೆ ಎಂದರೆ ಕಿಂಚಿತ್ತೂ ಇಷ್ಟವಿಲ್ಲದ ಈ ಹುಡುಗ ಇಂದು ಬದುಕು ರೂಪಿಸಿಕೊಂಡಿದ್ದು ನಟನಾ ಲೋಕದಲ್ಲಿ ಎಂದರೆ ನಿಜಕ್ಕೂ ಆಶ್ಚರ್ಯ ಎಂದೆನಿಸುತ್ತದೆ.
ಆ ನಟನ ಹೆಸರೇ ಸುಜಯ್ ಹೆಗಡೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ನಾಯಕ ಯುವರಾಜ್ ಬಹದ್ದೂರ್ ಅವರ ತಮ್ಮ ಯತಿರಾಜ್ ಬಹಾದ್ದೂರ್ ಆಗಿ ಸುಜಯ್ ಹೆಗಡೆ ನಟಿಸುತ್ತಿದ್ದಾರೆ.

"ನನಗೆ ನಟನೆ ಎಂದರೆ ಇಷ್ಟವಿರಲಿಲ್ಲ. ಸತ್ಯ ಹೇಳ್ಬೇಕು ಎಂದರೆ ನನಗೆ ತುಂಬಾನೇ ಸ್ಟೇಜ್ ಫಿಯರ್ ಇತ್ತು. ಯಾರೋ ಒಬ್ಬರು ರೆಫರ್ ಮಾಡಿದ್ರು ಎಂಬ ಕಾರಣದಿಂದ ನಾನು ಸುಮ್ಮನೆ ಟ್ರೈ ಮಾಡಿದೆ. ಮನಸ್ಸಿಲ್ಲದೇ ಹೋದರೂ ನಾನು ಟ್ರೈ ಮಾಡಿದೆ. ಅದು ಕೂಡಾ ನನ್ನ ಫಸ್ಟ್ ಆಡಿಶನ್. ಮತ್ತೆ ನನ್ನ ತಂದೆಯ ಸ್ನೇಹಿತ ನಾಗರಾಜ್ ಉಪ್ಪುಂದ ಅವರು ಆಕಾಶದೀಪ ಧಾರಾವಾಹಿ ಡೈರೆಕ್ಟರ್ ಸಕ್ರೆಬೈಲು ಶ್ರೀನಿವಾಸ್ ಫ್ರೆಂಡ್. ನಾಗರಾಜ್ ಅವರು ಶ್ರೀನಿವಾಸ್ ಅವರಿಗೆ ನನ್ನ ಹೆಸರು ಹೇಳಿದರು. ಹಾಗೇ ನಟನಾ ಪಯಣ ಶುರುವಾಯಿತು" ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುತ್ತಾ ಹೇಳುತ್ತಾರೆ ಸುಜಯ್ ಹೆಗಡೆ.
ಸ್ಟಾರ್ ಸುವರ್ಣ ವಾಹಿನಿಯ 'ಆಕಾಶ ದೀಪ', 'ಗೋಕುಲದಲ್ಲಿ ಸೀತೆ', 'ಈ ಬಂಧನ', 'ಶನಿ' ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸುಜಯ್ ಹೆಗಡೆ ಮೊದಲ ಬಾರಿ ನಾಯಕರಾಗಿ ನಟಿಸಿದ್ದು 'ಮನಸಾರೆ' ಧಾರಾವಾಹಿಯಲ್ಲಿ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನಸಾರೆ' ಧಾರಾವಾಹಿಯಲ್ಲಿ ನಾಯಕ ಯುವರಾಜ್ ಆಗಿ ನಟಿಸಿ ಸೈ ಎನಿಸಿಕೊಂಡರು ಸುಜಯ್ ಹೆಗಡೆ.
ತದ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನಸ್ಸೆಲ್ಲಾ ನೀನೆ' ಧಾರಾವಾಹಿಯಲ್ಲಿಯೂ ನಾಯಕನಾಗಿ ಮೋಡಿ ಮಾಡಿದರು ಸುಜಯ್ ಹೆಗಡೆ. ಈಗ ಯತಿರಾಜ್ ಬಹದ್ದೂರ್ ಪಾತ್ರದಲ್ಲಿ ಬ್ಯುಸಿಯಾಗಿರುವ ಸುಜಯ್ ಹೆಗಡೆ "ನನ್ನ ನಟನಾ ಬದುಕು ಈಗ ಚೆನ್ನಾಗಿದೆ. ನಟನಾ ಕ್ಷೇತ್ರಕ್ಕೆ ಕಾಲಿಟ್ಟಿರುವುದು ಖುಷಿ ತಂದಿದೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆ ಹಂಚಿಕೊಂಡಿದ್ದಾರೆ.

"ಏನೂ ಗೊತ್ತಿಲ್ಲದೇ ನಾನು ನಟನಾ ಕ್ಷೇತ್ರಕ್ಕೆ ಕಾಲಿಟ್ಟೆ. ಯಾವುದೇ ರೀತಿಯ ಬ್ಯಾಕ್ ಗ್ರೌಂಡ್ ಇಲ್ಲದೇ ನಟನೆಗೆ ಪಾದಾರ್ಪಣೆ ಮಾಡಿದ ನಾನು ಇಂದು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದೇನೆ. ಮಾತ್ರವಲ್ಲದೇ ಒಳ್ಳೊಳ್ಳೆಯ ಅವಕಾಶಗಳನ್ನು ಪಡೆಯುತ್ತಿದ್ದೇನೆ. ನಟನೆಯನ್ನು ಆಯ್ದುಕೊಂಡದ್ದು ಖುಷಿಯಿದೆ. ಇನ್ನು ಆರಂಭದ ದಿನಗಳಲ್ಲಿ ಮನೆಯವರ ಪ್ರೋತ್ಸಾಹ ಅಷ್ಟೊಂದು ಇರಲಿಲ್ಲ. ಆದರೆ, ಇದೀಗ ನಟನೆಯನ್ನೇ ಕೆರಿಯರ್ ಆಗಿ ಮಾಡಿಕೊಂಡಿರುವ ಕಾರಣ ಮನೆಯವರು ಬೆಂಬಲಿಸುತ್ತಾರೆ" ಎಂದು ಫಿಲ್ಮಿಬೀಟ್ ಕನ್ನಡಕ್ಕೆ ಸುಜಯ್ ಹೆಗಡೆ ಹೇಳುತ್ತಾರೆ.
ಇನ್ನು ಕೊನೆಯಲ್ಲಿ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಸುಜಯ್ ಹೆಗಡೆ "ಯತಿರಾಜ್ ಪಾತ್ರಕ್ಕೂ ನನಗೂ ಸಿಕ್ಕಾಪಟ್ಟೆ ವ್ಯತ್ಯಾಸವಿದೆ. ನಾನು ತುಂಬಾ ಮಾತಾಡುತ್ತಿರುತ್ತೇನೆ. ಎಲ್ಲರನ್ನು ಕಾಲು ಎಳೆಯುತ್ತಾ, ರೇಗಿಸುತ್ತಾ ಮಜಾ ಮಾಡುತ್ತಿರುತ್ತೇನೆ. ಆದರೆ, ಯತಿರಾಜ್ ಪಾತ್ರ ಸಂಪೂರ್ಣ ತದ್ವಿರುದ್ಧ. ಹಾಗಾಗಿ ಇದು ನನ್ನ ಪಾಲಿಗೆ ಚಾಲೆಂಜಿಗ್ ಆಗಿರುವಂತಹ ಪಾತ್ರ" ಎನ್ನುತ್ತಾರೆ ಸುಜಯ್ ಹೆಗಡೆ.
ಸುಜಯ್ ಹೆಗಡೆ ಕೇವಲ ಕಿರುತೆರೆಯಲ್ಲಷ್ಟೇ ಅಲ್ಲ. ಸಿನಿಮಾದಲ್ಲಿಯೂ ನಟಿಸಿದ್ದಾರೆ. 'ಮಾಣಿಕ್ಯ', 'ವಜ್ರಕಾಯ', 'ಮಿಸ್ಟರ್ ಎಲ್ಎಲ್ಬಿ', 'ಪ್ರೀತಿಯಲ್ಲಿ ಸಹಜ' ಸಿನಿಮಾಗಳಲ್ಲಿ ನಟಿಸುವ ಮೂಲಕ ಹಿರಿತೆರೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ ಸುಜಯ್ ಹೆಗಡೆ. ಒಟ್ಟಿನಲ್ಲಿ ಆಕಸ್ಮಿಕವಾಗಿ ನಟನೆಗೆ ಕಾಲಿಟ್ಟು ಇಂದು ಅದರ ಮೂಲಕವೇ ಗುರುತಿಸಿಕೊಂಡಿರುವ ಸುಜಯ್‌ಗೆ ಕಿಚ್ಚ ಸುದೀಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಎಂದರೆ ತುಂಬಾ ಇಷ್ಟ.


Click it and Unblock the Notifications











