Sundari Serial: 'ಸುಂದರಿ' ಧಾರಾವಾಹಿ ಅಂತ್ಯ: ಭಾವನಾತ್ಮಕ ಪತ್ರ ಬರೆದ ಸಮೀಪ್ ಆಚಾರ್ಯ
ಉದಯ ವಾಹಿನಿಯಲ್ಲಿ ನಟ ರಮೇಶ್ ಅರವಿಂದ್ ನಿರ್ಮಾಣದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಸುಂದರಿ' ಶೀಘ್ರದಲ್ಲಿ ಮುಕ್ತಾಯಗೊಳ್ಳಲಿದೆ. ಹೌದು, ಮೂರು ವರ್ಷಗಳಿಂದ ವೀಕ್ಷಕರನ್ನು ರಂಜಿಸುತ್ತಿದ್ದ 'ಸುಂದರಿ' ಧಾರಾವಾಹಿಯು ಇದೀಗ ತನ್ನ ಪಯಣವನ್ನು ನಿಲ್ಲಿಸಲಿದೆ. ಈಗಾಗಲೇ ಕ್ಲೈಮ್ಯಾಕ್ಸ್ ಎಪಿಸೋಡ್‌ಗಳ ಚಿತ್ರೀಕರಣವೂ ಕೂಡಾ ನಡೆದಿದೆ.
ಕ್ಲೈಮ್ಯಾಕ್ಸ್ ಎಪಿಸೋಡ್‌ಗಳ ಪ್ರಸಾರ ಕೆಲವೇ ದಿನಗಳಲ್ಲಿ ತೆರೆ ಮೇಲೆ ಆಗಲಿದೆ. ಇದರ ಜೊತೆಗೆ ಶೂಟಿಂಗ್‌ನ ಕೊನೆಯ ದಿನ ತೆಗೆದಿರುವಂತಹ ಗ್ರೂಪ್ ಫೋಟೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ನಟ, ನಿರ್ಮಾಪಕ ರಮೇಶ್ ಅರವಿಂದ್ ಅವರನ್ನು ಕೂಡಾ ಕಾಣಬಹುದು.

ಭಾವನಾತ್ಮಕ ಪತ್ರ ಬರೆದ ಸಮೀಪ್ ಆಚಾರ್ಯ
'ಸುಂದರಿ' ಧಾರಾವಾಹಿಯಲ್ಲಿ ನಾಯಕ ಕರಣ್ ಆಗಿ ಅಭಿನಯಿಸಿ ವೀಕ್ಷಕರ ಮನ ಸೆಳೆದಿದ್ದ ಸಮೀಪ್ ಆಚಾರ್ಯ ಇನ್‌ಸ್ಟಾಗ್ರಾಂನಲ್ಲಿ ಫೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ "ಮೂರು ವರ್ಷಗಳ ಸುಂದರಿ, ಒಟ್ಟು 796 ಸಂಚಿಕೆಗಳು. ಸಮಯವು ಸರಿದು ಹೋದುದು ತಿಳಿಯಲೇ ಇಲ್ಲ. ಮೂರು ವರ್ಷಗಳ ಒಂದು ಅದ್ಭುತ ಪಯಣ ಮುಕ್ತಾಯಗೊಳ್ಳುತ್ತಿದೆ. ಜೊತೆಗೆ ಮೂರು ವರ್ಷ ಕಳೆದಿದ್ದು ಕೂಡಾ ಗೊತ್ತೇ ಆಗಲಿಲ್ಲ" ಎಂದು ಬರೆದುಕೊಂಡಿದ್ದಾರೆ.
ಧನ್ಯವಾದ ತಿಳಿಸಿದ ಸಮೀಪ್ ಆಚಾರ್ಯ
"ಇಷ್ಟು ದಿನಗಳ ಕಾಲ ವೀಕ್ಷಕರನ್ನು ರಂಜಿಸುತ್ತಿದ್ದ ಕರಣ್ ಪಾತ್ರ ಇದೀಗ ಕೊನೆಯಾಗುತ್ತಿದೆ. ಇಂತಹ ಸುಂದರ ಅವಕಾಶ ಕಲ್ಪಿಸಿಕೊಟ್ಟ ರಮೇಶ್ ಅರವಿಂದ್ ಸರ್ ಹಾಗೂ ರವಿ ಜೋಶಿ ಸರ್ ಅವರಿಗೆ ನನ್ನ ಕಡೆಯಿಂದ ಧನ್ಯವಾದಗಳು. ನನ್ನ ಪಾಲಿಗೆ ಇದೊಂದು ಅದ್ಭುತ ಪಯಣ. ಈ ಧಾರಾವಾಹಿಯ ಭಾಗವಾಗಿರುವುದು ನನಗೆ ಖುಷಿ ನೀಡಿದೆ" ಎಂದು ಬರೆದುಕೊಂಡಿದ್ದಾರೆ ಸಮೀಪ್ ಆಚಾರ್ಯ.
ಮುನ್ನುಡಿ ಬರೆದಿದ್ದು 'ಗುಂಡ್ಯಾನ ಹೆಂಡ್ತಿ'
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಉತ್ತರ ಕನ್ನಡ ಭಾಷೆಯ ಸೊಬಗಿನ 'ಗುಂಡ್ಯಾನ ಹೆಂಡ್ತಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಸಮೀಪ್ ಆಚಾರ್ಯ ಮುಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗಂಗಾ' ಧಾರಾವಾಹಿಯಲ್ಲಿ ನಾಯಕ ಸಾಗರ್ ಆಗಿ ಮೋಡಿ ಮಾಡಿದರು. ಅವರ ಎರಡನೇ ಧಾರಾವಾಹಿಯು ಕೂಡಾ ಉತ್ತರ ಕನ್ನಡ ಭಾಷೆಯ ಸೊಬಗಿನದ್ದಾಗಿತ್ತು ಎಂಬುದು ವಿಶೇಷ.

ವಿರಾಟ್ ಆಗಿ ಮನ ಸೆಳೆದ ಸಮೀಪ್
ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ರಕ್ಷಾಬಂಧನ" ಧಾರಾವಾಹಿಯಲ್ಲಿ ನಾಯಕಿಯ ತಮ್ಮ ವಿರಾಟ್ ಆಗಿ ಸಮೀಪ್ ಕಾಣಿಸಿಕೊಂಡಿದ್ದರೂ ಪಾತ್ರಕ್ಕೆ ಅದರದೇ ಆದ ಪ್ರಾಮುಖ್ಯತೆ ಇತ್ತು. ಮುಂದೆ 'ಸುಂದರಿ'ಯ ಕರಣ್ ಆಗಿ ಬದಲಾದ ಸಮೀಪ್ ಮನೋಜ್ಞ ನಟನೆಯ ಮೂಲಕ ಕಿರುತೆರೆ ಲೋಕದಲ್ಲಿ ಮನೆ ಮಾತಾಗಿದ್ದರು. ಸದ್ಯ 'ಸುಂದರಿ' ಧಾರಾವಾಹಿಯು ಮುಕ್ತಾಯಗೊಂಡಿದ್ದು ಮತ್ತೆ ಕಿರುತೆರೆಗೆ ಬರುತ್ತಾರಾ ಕಾದು ನೋಡಬೇಕಾಗಿದೆ.


Click it and Unblock the Notifications











