ಬಿಗ್ ಬಾಸ್ ಟ್ರೋಫಿ ಹಿಡಿದ ಖುಷಿ ಇಳಿಯುವ ಮೊದಲೇ ಪಲ್ಲವಿ ಪ್ರಶಾಂತ್ ಮೇಲೆ ಪ್ರಕರಣಗಳ ಸುರಿಮಳೆ!
ಈ ಬಾರಿಯ ಬಿಗ್ ಬಾಸ್ ತೆಲುಗು ಸೀಸನ್ 7 ರ ಗ್ರ್ಯಾಂಡ್ ಫಿನಾಲೆ ಒಳ್ಳೆ ವಿಷಯಕ್ಕೆ ಸದ್ದು ಮಾಡಲೇ ಇಲ್ಲ. ಆಫ್ ಸ್ಕ್ರೀನ್ ವಿಷಯಗಳಿಂದ ಹೆಚ್ಚು ಸುದ್ದಿ ಮಾಡಿತು. ಈ ಸೀಸನ್‌ನಲ್ಲಿ ರೈತರ ಮಗ ಪಲ್ಲವಿ ಪ್ರಶಾಂತ್ ಗೆದ್ದು ಬೀಗಿದ್ದಾರೆ. ಅಮರ್‌ದೀಪ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಆದರೆ, ಇದೇ ಹೆಚ್ಚು ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿತ್ತು.
ಸೋಷಿಯಲ್ ಮೀಡಿಯಾ ಸ್ಟಾರ್, ರೈತ ಬಿಡ್ಡಾ ಎಂದು ಕರೆಸಿಕೊಳ್ಳುವ ಪಲ್ಲವಿ ಪ್ರಶಾಂತ್ ತಮ್ಮ ಗೆಲುವನ್ನು ಸಂಭ್ರಮಿಸುವ ಮೊದಲೇ ಭಾನುವಾರ ಅನ್ನಪೂರ್ಣ ಸ್ಟುಡಿಯೋದಲ್ಲಿ ಗದ್ದಲ ಏರ್ಪಟ್ಟಿತ್ತು. ವಿನ್ನರ್ ಮತ್ತು ರನ್ನರ್ ಅಪ್ ಫ್ಯಾನ್ಸ್‌ಗಳ ನಡುವೆ ಭಾರಿ ಮಾರಾಮಾರಿ ಶುರುವಾಗಿತ್ತು. ದೊಡ್ಡ ಮಟ್ಟದ ಗಲಾಟೆ ನಡೆದ ಕಾರಣ ವಿಜೇತ ಮತ್ತು ಅವರ ಅಭಿಮಾನಿಗಳ ವಿರುದ್ಧ ಈಗ ಸುಮೋಟೊ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಟಿವಿ9 ವರದಿ ಮಾಡಿದೆ.

ಬಿಗ್ ಬಾಸ್ ವಿನ್ನರ್ ಪ್ರಶಾಂತ್ ಪಲ್ಲವಿ ವಿರುದ್ಧ ಪ್ರಕರಣ
ಬಿಗ್ ಬಾಸ್ ತೆಲುಗು ಸೀಸನ್ 7 ರ ಗ್ರ್ಯಾಂಡ್ ಫಿನಾಲೆ ನಡೆದ ಭಾನುವಾರ ಮಧ್ಯಾಹ್ನ ಪಲ್ಲವಿ ಪ್ರಶಾಂತ್ ಈ ಸೀಸನ್ ಬಿಗ್ ಬಾಸ್ ಗೆದ್ದಿದ್ದಾರೆ ಮತ್ತು ಅಮರ್ ದೀಪ್ ರನ್ನರ್ ಅಪ್ ಆಗಿದ್ದಾರೆ ಎಂಬ ವಿಷಯ ಸೋರಿಕೆಯಾಗಿತ್ತು. ಹೀಗಾಗಿಯೇ ಇಬ್ಬರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅನ್ನಪೂರ್ಣ ಸ್ಟುಡಿಯೋಸ್‌ಗೆ ಆಗಮಿಸಿ, ಘೋಷಣೆಗಾಗಿ ಅನ್ನಪೂರ್ಣ ಸ್ಟುಡಿಯೋಸ್ ಹೊರಗೆ ಕಾಯುತ್ತಿದ್ದರು.
ಈ ಬಗ್ಗೆ ಅಧಿಕೃತ ಘೋಷಣೆಯಾದ ನಂತರ ಅನ್ನಪೂರ್ಣ ಸ್ಟುಡಿಯೋಸ್ ಹೊರಗೆ ಭಾರಿ ಗದ್ದಲ ಉಂಟಾಯಿತು. ಪಲ್ಲವಿ ಪ್ರಶಾಂತ್ ಅಭಿಮಾನಿಗಳು ಎಂದು ಹೇಳಿಕೊಂಡ ವ್ಯಕ್ತಿಗಳು ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳನ್ನು ಧ್ವಂಸಗೊಳಿಸಿದ್ದರು. ರನ್ನರ್ ಅಪ್ ಆಗಿದ್ದ ಅಮರ್‌ದೀಪ್, ಮಾಜಿ ಬಿಗ್ ಬಾಸ್ ಸ್ಪರ್ಧಿಗಳಾದ ಅಶ್ವಿನಿ ಮತ್ತು ಗೀತು ರಾಯಲ್ ಅವರ ಕಾರುಗಳು ಮತ್ತು ಕೆಲವು ಆರ್‌ಟಿಸಿ ಬಸ್‌ಗಳನ್ನು ಧ್ವಂಸಗೊಳಿಸಿ, ಗಾಜುಗಳನ್ನು ಒಡೆಯಲಾಗಿದೆ. ಈ ಬಗ್ಗೆ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಅಶ್ವಿನಿ ಮತ್ತು ಗೀತು ದೂರು ದಾಖಲಿಸಿದ್ದಾರೆ.

ಸುಮೋಟೋ ಪ್ರಕರಣ ದಾಖಲು
ಟಿವಿ9 ವರದಿಯ ಪ್ರಕಾರ, ಈ ದಾಳಿಯಲ್ಲಿ 6 ಬಸ್‌ಗಳಿಗೆ ಹಾನಿಯಾಗಿದೆ ಎಂದು ಟಿಎಸ್‌ಆರ್‌ಟಿಸಿ ಎಂಡಿ ವಿಸಿ ಸಜ್ಜನರ್ ಅವರ ದೂರಿನ ಆಧಾರದ ಮೇಲೆ ತೆಲಂಗಾಣ ಪೊಲೀಸರು ಪಲ್ಲವಿ ಪ್ರಶಾಂತ್ ಮತ್ತು ಅವರ ಅಭಿಮಾನಿಗಳ ಮೇಲೆ ಐಪಿಸಿ ಸೆಕ್ಷನ್ 147, 148, 290, 353, 427 ಮತ್ತು 149 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಪಲ್ಲವಿ ಪ್ರಶಾಂತ್ ಮತ್ತು ಅಮರ್‌ದೀಪ್ ಅವರ ಅಭಿಮಾನಿಗಳು ಅನ್ನಪೂರ್ಣ ಸ್ಟುಡಿಯೋಸ್ ಹೊರಗೆ ಹೊಡೆದಾಡಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಇನ್ನು ಪೊಲೀಸರ ಅನುಮತಿಯಿಲ್ಲದೆ ಪಲ್ಲವಿ ಪ್ರಶಾಂತ್ ರ‍್ಯಾಲಿ ನಡೆಸಿದ್ದಕ್ಕಾಗಿ ದೂರು ದಾಖಲಿಸಲಾಗಿದೆ.


Click it and Unblock the Notifications











