ಸೂರಜ್ ಹೊಳಲು 'ಜಾನಕಿ ಸಂಸಾರ' ಒಪ್ಪಿಕೊಳ್ಳಲು ಕಾರಣ ರಮೇಶ್ ಅರವಿಂದ್: ಅದು ಹೇಗೆ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಜಾನಕಿ ಸಂಸಾರ' ಕೂಡಾ ಒಂದು. ವಿಭಿನ್ನ ಕಥಾಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ 'ಜಾನಕಿ ಸಂಸಾರ' ಧಾರಾವಾಹಿಯು ಪಾತ್ರ ವರ್ಗದ ಮೂಲಕವೂ ಮೋಡಿ ಮಾಡುತ್ತಿದೆ. 'ಜಾನಕಿ ಸಂಸಾರ' ಧಾರಾವಾಹಿಯಲ್ಲಿ ನಾಯಕ ರಾಘವ ಆಗಿ ಅಭಿನಯಿಸುತ್ತಿರುವ ನಟ ಸೂರಜ್ ಹೊಳಲು ಸಹಜ ನಟನೆಯ ಮೂಲಕ ಮೋಡಿ ಮಾಡುತ್ತಿದ್ದಾರೆ.
ಪಕ್ಕಾ ಫ್ಯಾಮಿಲಿಮ್ಯಾನ್ ಆಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಸೂರಜ್ ಹೊಳಲು ಸಂತೋಷ ವ್ಯಕ್ತಪಡಿಸಿದ್ದಾರೆ. 'ಗೃಹಪ್ರವೇಶ' ಧಾರಾವಾಹಿ ಮುಕ್ತಾಯಗೊಂಡು ನಾಲ್ಕು ತಿಂಗಳಿನಲ್ಲಿ ನನಗೆ 'ಜಾನಕಿ ಸಂಸಾರ' ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ದೊರಕಿತ್ತು. ಒಂದು ಒಳ್ಳೆಯ ಪಾತ್ರ ಸಿಕ್ಕಿದ ಕಾರಣ ನಾನು ಒಪ್ಪಿಕೊಂಡೆ" ಎಂದು ಫಿಲ್ಮಿಬೀಟ್ ಕನ್ನಡದ ಜೊತೆಗೆ ಹಂಚಿಕೊಂಡಿದ್ದಾರೆ.

"ಘರ್ ಘರ್ ಕೀ ಕಹಾನಿ ಧಾರಾವಾಹಿಯ ರಿಮೇಕ್ ಇದು. ಧಾರಾವಾಹಿಯ ಕಥೆ ಮತ್ತು ಪಾತ್ರ ನೋಡಿ ನಾನು ನಟಿಸಲು ಅಸ್ತು ಎಂದೆ. ಅದಕ್ಕಿಂತಲೂ ಜಾಸ್ತಿ ನಾನು ರಾಘವನಾಗಿ ಅಭಿನಯಿಸಲು ಪ್ರೊಡಕ್ಷನ್ ಹೌಸ್ ಕಾರಣ. ರಮೇಶ್ ಅರವಿಂದ್ ಅವರ ಪ್ರೊಡಕ್ಷನ್ ಹೌಸ್‌ನಿಂದ ಈ ಧಾರಾವಾಹಿ ನಿರ್ಮಾಣವಾಗುತ್ತಿದೆ ಎಂದೇ ನಾನು ನಟಿಸುವ ನಿರ್ಧಾರ ಮಾಡಿದೆ" ಎಂದು ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದ ವೇಳೆ ಮಾತನಾಡುವಾಗ ಸೂರಜ್ ಹೊಳಲು ಹೇಳಿಕೊಂಡಿದ್ದಾರೆ.
'ಕುಲವಧು' ಧಾರಾವಾಹಿಯ ಗೌರವ್ ಪಾತ್ರದಲ್ಲಿ ಕಿರುತೆರೆಗೆ ಕಾಲಿಟ್ಟ ಸೂರಜ್ ಹೊಳಲು ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದ ಹುಡುಗ. ನಂತರ ಸೂಪರ್ ನ್ಯಾಚುರಲ್ ಧಾರಾವಾಹಿ 'ಯಾರೇ ನೀ ಮೋಹಿನಿ' ಧಾರಾವಾಹಿಯಲ್ಲಿ ಮುತ್ತು ಮಾವನಾಗಿ ಇವರು ನಟಿಸಿದ್ದು, ನಂತರ ಹಾರಿದ್ದು ಪರಭಾಷೆಯ ಕಿರುತೆರೆಗೆ.

ತೆಲುಗಿನ 'ಚಿಟ್ಟಿತಲ್ಲಿ'ಯಲ್ಲಿ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿದ್ದ ಸೂರಜ್ ಹೊಳಲು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಅತಿಥಿ ಪಾತ್ರದ ಮೂಲಕ ಗಮನ ಸೆಳೆದಿದ್ದರು. ತದ ನಂತರ 'ಗೃಹಪ್ರವೇಶ' ಧಾರಾವಾಹಿಯಲ್ಲಿ ನಾಯಕ ಮಿಥುನ್ ಪಾತ್ರದಲ್ಲಿ ಮೋಡಿ ಮಾಡಿದ್ದರು.
"ಮಿಥುನ್ ಪಾತ್ರ ಒಂದು ರೀತಿಯ ಲವ್ಲಿಯದ್ದು ಹೌದು. ನನ್ನ ಹತ್ತು ವರ್ಷದ ಕಿರುತೆರೆ ಜರ್ನಿಯಲ್ಲಿ ನಾನು ಇದೇ ಮೊದಲ ಬಾರಿಗೆ ಇಂತಹ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದೇನೆ. ಲವರ್ ಬಾಯ್ ಆಗಿ ಮೋಡಿ ಮಾಡಿದ್ದೇನೆ. ಮಾತ್ರವಲ್ಲ ಕಿರುತೆರೆ ವೀಕ್ಷಕರು ಕೂಡಾ ಮಿಥುನ್ ಪಾತ್ರವನ್ನು ಮೆಚ್ಚಿಕೊಂಡಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ" ಎಂದು ಈ ಹಿಂದೆ ಫಿಲ್ಮಿಬೀಟ್‌ಗೆ ನೀಡಿದ ಸಂದರ್ಶನದಲ್ಲಿ ಸೂರಜ್ ಹೊಳಲು ಹೇಳಿಕೊಂಡಿದ್ದರು.
ಒಟ್ಟಿನಲ್ಲಿ ಲವರ್ ಬಾಯ್ ಆಗಿ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿರುವ ಸೂರಜ್ ಹೊಳಲು ಅವರು ಇದೀಗ ಪಕ್ಕಾ ಫ್ಯಾಮಿಲಿಮ್ಯಾನ್ ಆಗಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ.


Click it and Unblock the Notifications











