ಈ ಕಿರುತೆರೆ ನಟನಿಗೆ ಖಳನಾಯಕನ ಪಾತ್ರವೇ ಇಷ್ಟ; ಸುಷ್ಮಿತ್ ಜೈನ್ ಕೊಡೊ ಕಾರಣ ಹೀಗಿದೆ?
ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಪದವಿ ಪಡೆದಿರುವ ಈ ನಟ ಬದುಕು ರೂಪಿಸಿಕೊಳ್ಳಲು ಆಯ್ದುಕೊಂಡಿದ್ದು ನಟನೆಯನ್ನು. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕನ್ಯಾದಾನ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ ಸುಷ್ಮಿತ್ ಜೈನ್.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ಸುಂದರ ಆಗಿ ನಟಿಸಿದ್ದಾರೆ ಸುಷ್ಮಿತ್ ಜೈನ್. ನಂತರ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಭೂಮಿ ತಾಯಾಣೆ" ಧಾರಾವಾಹಿಯಲ್ಲಿ ನಾಯಕ ಆಕಾಶ್ ಪಾತ್ರಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾದರು ಸುಷ್ಮಿತ್ ಜೈನ್.

"ನಾನು ಸತ್ಯಂ ಶಿವಂ ಸುಂದರಂ ಧಾರಾವಾಹಿಯ ಸುಂದರ ಆಲಿಯಾಸ್ ಸ್ಯಾಂಡಿ ಪಾತ್ರದ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟೆ. ಅದು ನನ್ನ ಫೇವರಿಟ್ ಪಾತ್ರ. ನಾನಿಂದು ನಟನೆಯಲ್ಲಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಸ್ಯಾಂಡಿ ಪಾತ್ರವೇ ಕಾರಣ" ಎಂದು ಫಿಲ್ಮಿಬೀಟ್‌ಗೆ ಸುಷ್ಮಿತ್ ಜೈನ್ ತಿಳಿಸಿದ್ದಾರೆ. ಮೊದಲ ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದ ಸುಷ್ಮಿತ್ 'ಭೂಮಿ ತಾಯಾಣೆ' ಧಾರಾವಾಹಿಯ ಮೂಲಕ ನಟನಾಗಿ ನಟ ಪಡೆದರು.
"ನಂತರ ಮನಸ್ಸೆಲ್ಲಾ ನೀನೆ ಧಾರಾವಾಹಿಯಲ್ಲಿ ನಾನು ಖಳನಾಯಕನಾಗಿ ನಟಿಸಿದೆ. ಅದು ಮೊದಲ ಬಾರಿ ನಾನು ವಿಲನ್ ಆಗಿ ಕಾಣಿಸಿಕೊಂಡಿದ್ದು. ನನಗೆ ವಿಲನ್ ಪಾತ್ರದಲ್ಲಿ ನಟಿಸಲು ತುಂಬಾ ಇಷ್ಟ. ಹೀರೋಗೆ ವಿರುದ್ಧವಾದ ಪಾತ್ರವದು. ಖಡಕ್ ಆಗಿ ಅಬ್ಬರಿಸುವ ಖಳನಾಯಕನಿದ್ದರೆ ನಾಯಕನ ಪಾತ್ರಕ್ಕೆ ಒಂದು ಬೆಲೆ. ಹಾಗಾಗಿ ನಾನು ಖಳನಾಯಕನ ಪಾತ್ರ ಸಿಕ್ಕಾಗ ಸಂತಸದಿಂದಲೇ ಒಪ್ಪಿಕೊಂಡೆ" ಎಂದು ಫಿಲ್ಮಿಬೀಟ್ ಜೊತೆಗೆ ಹೇಳಿಕೊಂಡಿದ್ದಾರೆ ಸುಷ್ಮಿತ್ ಜೈನ್.
"ಇನ್ನು ದೊರೆಸಾನಿ ಧಾರಾವಾಹಿಯಲ್ಲಿ ನಾನು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಚಿನ್ಮಯ್ ಆಗಿ ನಟಿಸಿದ್ದ ನನಗೆ ಆ ಪಾತ್ರವೂ ನನಗೆ ಜನಪ್ರಿಯತೆ ತಂದುಕೊಟ್ಟಿತು. ಸದ್ಯ ಕನ್ಯಾದಾನ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ನಾನು ನಟನಾಗುವ ಮೊದಲು ಅದಕ್ಕೆ ಬೇಕಾಗುವಂತಹ ತರಬೇತಿಯನ್ನು ಪಡೆದಿದ್ದೇನೆ. ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಆ್ಯಕ್ಟಿಂಗ್ ನಲ್ಲಿ ಡಿಪ್ಲೋಮಾ ಕೋರ್ಸ್ ಮಾಡಿದ್ದೇನೆ" ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ ಸುಷ್ಮಿತ್ ಜೈನ್.

ಸದ್ಯ ಒಂದಾದ ಮೇಲೆ ಒಂದರಂತೆ ಧಾರಾವಾಹಿಗಳಲ್ಲಿ ನಟಿಸುತ್ತಿರುವ ಸುಷ್ಮಿತ್ ಜೈನ್ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ರಘುಚರಣ್ ನಿರ್ದೇಶನದ 'ವರ್ಜಿನ್' ಎನ್ನುವ ಕಿರುಚಿತ್ರದಲ್ಲಿಯೂ ಸುಷ್ಮಿತ್ ಜೈನ್ ನಟಿಸಿದ್ದಾರೆ. ತಮ್ಮ ನಟನೆಯ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಈ ಹ್ಯಾಂಡ್ ಸಮ್ ಹುಡುಗ ಮುಂದೊಂದು ದಿನ ಹಿರಿತೆರೆಯಲ್ಲಿ ಕಾಣಿಸಿಕೊಂಡರೆ ಆಶ್ಚರ್ಯವೇನೂ ಇಲ್ಲ.


Click it and Unblock the Notifications











