ಟಿ ಎನ್ ಸೀತಾರಾಮ್ ನಿರ್ದೇಶನದ 'ಮುಕ್ತ ಮುಕ್ತ' ಧಾರಾವಾಹಿ ಮರು ಪ್ರಸಾರ: ಎಲ್ಲಿ? ಯಾವಾಗ?
ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ, ಬೇವ ಅಗಿವ ಸವಿ ಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ.. ಹೌದು, ಟಿ.ಎನ್. ಸೀತಾರಾಮ್ ಅವರ ನಿರ್ದೇಶನಡಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಕಿರುತೆರೆಗ ಇತಿಹಾಸದಲ್ಲಿ ಹೊಸ ಛಾಪು ಮೂಡಿಸಿದ್ದು ವೀಕ್ಷಕರಿಗೆ ತಿಳಿದೇ ಇದೆ.
ಬರೋಬ್ಬರಿ 1204 ಸಂಚಿಕೆ ಪೂರೈಸಿದ್ದ 'ಮುಕ್ತ ಮುಕ್ತ' ಧಾರಾವಾಹಿಯು 2013 ರಲ್ಲಿ ಮುಕ್ತಾಯಗೊಂಡಿತ್ತು. ಐದು ವರ್ಷಗಳ ಕಾಲ ಪ್ರಸಾರಗೊಂಡ ಈ ಧಾರಾವಾಹಿಯು ಇಂದಿಗೂ ಕಿರುತೆರೆ ವೀಕ್ಷಕರ ಮನದಲ್ಲಿ ಇನ್ನೂ ಹಚ್ಚ ಹಸುರಾಗಿಯೇ ಉಳಿದಿದೆ.

'ಮುಕ್ತ ಮುಕ್ತ' ಧಾರಾವಾಹಿಯು ಅದಕ್ಕಿಂತಲೂ ಮುಂಚೆ ಪ್ರಸಾರವಾಗುತ್ತಿದ್ದ 'ಮುಕ್ತ' ಧಾರಾವಾಹಿಯ ಮುಂದುವರಿದ ಭಾಗವಾಗಿದ್ದು, ಆ ಕಾಲದ ಪ್ರಸ್ತುತ ವಿಷಯಗಳನ್ನು ಸಾಮಾಜಕ್ಕೆ ತೋರಿಸಿತ್ತು. ಅಕ್ರಮ ಭೂ ಒತ್ತುವರಿ, ಜಾಗತೀಕರಣದ ಪರಿಣಾಮಗಳು, ರೈತರ ಸಮಸ್ಯೆ ಮುಂತಾದ ಸಮಸ್ಯೆಗಳನ್ನು ಈ ಧಾರಾವಾಹಿಯಲ್ಲಿ ಎಳೆಎಳೆಯಾಗಿ ತೋರಿಸುತ್ತಿದ್ದರು.
ಸಿ.ಎಸ್.ಪಿ ಪಾತ್ರದ ಜೊತೆಗೆ ಶಾಂಭವಿ ಟೀಚರ್, ಕಲ್ಯಾಣಿ, ಶಶಿ, ಶಂಕರಮೂರ್ತಿ, ನಿರ್ಮಲಾ ಕೊಂಡಹಳ್ಳಿ, ಮಂಗಳತ್ತೆ, ಮಿಶ್ರ, ದೇಶಪಾಂಡೆ ಪಾತ್ರಗಳು ಕಿರುತೆರೆ ವೀಕ್ಷಕರನ್ನು ರಂಜಿಸಿದ್ದರು. ಅಂದು ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ 'ಮುಕ್ತ ಮುಕ್ತ' ಧಾರಾವಾಹಿಯನ್ನು ಇದೀಗ ಮತ್ತೊಮ್ಮೆ ನೋಡುವ ಸುವರ್ಣಾವಕಾಶ ವೀಕ್ಷಕರಿಗೆ ದೊರಕಿದೆ.
ಅರೇ! 'ಮುಕ್ತ ಮುಕ್ತ' ಧಾರಾವಾಹಿಯು ಮತ್ತೊಮ್ಮೆ ಟಿವಿಯಲ್ಲಿ ಪ್ರಸಾರವಾಗುತ್ತಿದ್ದೆಯಾ ಎಂದು ಆಲೋಚಿಸುತ್ತಿದ್ದೀರಾ? ಮುಕ್ತ ಮುಕ್ತ ಧಾರಾವಾಹಿಯು ಮರುಪ್ರಸಾರ ಕಾಣಿಸುತ್ತಿದೆ. ಆದರೆ ಟಿವಿಯಲ್ಲಿ ಅಲ್ಲ, ಬದಲಿಗೆ ಯೂಟ್ಯೂಬ್ ಚಾನೆಲ್‌ನಲ್ಲಿ. ಟಿ.ಎನ್. ಸೀತಾರಾಮ್ ಅವರ ಭೂಮಿಕಾ ಟಾಕೀಸ್ ಯೂಟ್ಯೂಬ್ ಚಾನೆಲ್‌ನಲ್ಲಿ 'ಮುಕ್ತ ಮುಕ್ತ' ಧಾರಾವಾಹಿಯು ಮರು ಪ್ರಸಾರಗೊಳ್ಳಲಿದೆ.
ಇದೇ ಆಗಸ್ಟ್ 29ರಿಂದ ಗುರುವಾರ, ಶುಕ್ರವಾರ ವಾರದ ಎರಡು ದಿನ ಎರಡು ಕಂತುಗಳಲ್ಲಿ ಧಾರಾವಾಹಿಯನ್ನು ನೋಡುವ ಅವಕಾಶ ಕಿರುತೆರೆ ವೀಕ್ಷಕರಿಗೆ ಕಲ್ಪಿಸಲಾಗಿದೆ. "ತಮ್ಮ ತಂಡದ ಮೇಲೆ ನಿಮ್ಮ ಆಶೀರ್ವಾದ ಸದಾ ಇರಲಿ" ಎಂದು ಹೇಳಿಕೊಂಡಿರುವ ಟಿ.ಎನ್.ಸೀತಾರಾಮ್ ಅವರು ಯೂಟ್ಯೂಬ್‌ನಲ್ಲಿ ಧಾರಾವಾಹಿಯನ್ನು ನೋಡಲು ತಿಳಿಸಿದ್ದಾರೆ. ಆ ಮೂಲಕ 'ಮುಕ್ತ ಮುಕ್ತ' ಧಾರಾವಾಹಿಯನ್ನು ಮಗದೊಮ್ಮೆ ನೋಡಬೇಕು ಎನ್ನುವ ವೀಕ್ಷಕರ ಆಸೆ ಈಡೇರಿದೆ.


Click it and Unblock the Notifications











